Skip to content
Opens in a new window
Listen to this chapter • 2:29

[1] ಯೆಹೋವನೇ, ನಮಗಾದ ದುರ್ಗತಿಯನ್ನು ನೆನಪಿಗೆ ತಂದುಕೋ; ನಾವು ಗುರಿಯಾಗಿರುವ ಅವಮಾನವನ್ನು ದೃಷ್ಟಿಸಿ ನೋಡು.

[2] ನಮ್ಮ ಸ್ವತ್ತು ಪರರ ಪಾಲಾಗಿದೆ, ನಮ್ಮ ಮನೆಗಳು ಪರರ ಕೈವಶವಾಗಿವೆ.

[3] ನಾವು ತಂದೆಯಿಲ್ಲದ ಅನಾಥರು, ನಮ್ಮ ತಾಯಂದಿರು ವಿಧವೆಯರಾಗಿದ್ದಾರೆ.

[4] ನೀರು ನಮ್ಮದಾದರೂ ಕೊಂಡುಕೊಂಡು ಕುಡಿಯುತ್ತೇವೆ; ಸೌದೆ ಸ್ವಂತವಾದರೂ ಕ್ರಯಕ್ಕೆ ತೆಗೆದುಕೊಳ್ಳುತ್ತೇವೆ.

[5] ನಮ್ಮನ್ನು ಹಿಂದಟ್ಟುವವರು ನಮ್ಮ ಕುತ್ತಿಗೆಯನ್ನು ಹಿಡಿದಿದ್ದಾರೆ, ಬಳಲಿಹೋಗಿದ್ದೇವೆ, ಯಾವ ವಿಶ್ರಾಂತಿಯೂ ಇಲ್ಲ.

[6] ಹೇಗಾದರೂ ಹೊಟ್ಟೆ ತುಂಬಾ ಅನ್ನ ತಿನ್ನೋಣ ಎಂದು ಐಗುಪ್ತ್ಯರಿಗೂ ಮತ್ತು ಅಶ್ಶೂರ್ಯರಿಗೂ ಅಧೀನರಾದೆವು.

[7] ನಮ್ಮ ಪೂರ್ವಿಕರು ಪಾಪಮಾಡಿ ಇಲ್ಲದೆ ಹೋದರು; ಅವರ ದೋಷಫಲವನ್ನು ನಾವು ಅನುಭವಿಸಬೇಕಾಯಿತು.

[8] ಗುಲಾಮರಾಗಿದ್ದವರು ನಮಗೆ ದಣಿಗಳಾದರು, ಅವರ ಕೈಯಿಂದ ನಮ್ಮನ್ನು ಬಿಡಿಸುವವರೇ ಇಲ್ಲ.

[9] ಆಹಾರಕ್ಕೋಸ್ಕರ ಬೆಳೆಯನ್ನು ಕೊಯ್ಯುತ್ತಿರುವಾಗ ಅರಣ್ಯದವರ ಕತ್ತಿಯಿಂದ ಪ್ರಾಣಾಪಾಯಕ್ಕೆ ಗುರಿಯಾಗಿದ್ದೇವೆ.

[10] ಕ್ಷಾಮಕಾಲದ ಭೀಕರ ಜ್ವರದಿಂದ ನಮ್ಮ ಚರ್ಮವು ಒಲೆಯಂತೆ ಸುಡುತ್ತದೆ.

[11] ಚೀಯೋನಿನ ಸತಿಯರ ಮತ್ತು ಯೆಹೂದದ ಊರುಗಳ ಕನ್ಯೆಯರ ಅತ್ಯಾಚಾರವಾಗುತ್ತಿದೆ.

[12] ರಾಜಪುತ್ರರ ಕೈಗಳನ್ನು ಗಲ್ಲಿಗೆ ನೇತುಹಾಕಿದ್ದಾರೆ; ವೃದ್ಧರು ಮಾನಭಂಗಪಟ್ಟರು.

[13] ಯುವಭಟರಿಗೆ ಬೀಸುವ ಕಲ್ಲನ್ನು ಹೊರುವ ಗತಿ ಬಂತು; ಮಕ್ಕಳು ಸೌದೆಹೊರೆ ಹೊತ್ತು ಮುಗ್ಗರಿಸಬೇಕಾಯಿತು.

[14] ವೃದ್ಧರು ಇನ್ನು ಚಾವಡಿಯಲ್ಲಿ ಸೇರರು, ಯುವಕರು ಇನ್ನು ವಾದ್ಯಬಾರಿಸರು.

[15] ನಮ್ಮ ಹೃದಯಾನಂದವು ತೀರಿತು, ನಮ್ಮ ನಾಟ್ಯ ನಲಿವುಗಳು ದುಃಖವಾಗಿ ಮಾರ್ಪಟ್ಟಿವೆ.

[16] ಕಿರೀಟವು ನಮ್ಮ ತಲೆಯ ಮೇಲಿಂದ ಬಿದ್ದು ಹೋಗಿದೆ, ಅಯ್ಯೋ, ನಮ್ಮ ಗತಿಯನ್ನು ಏನು ಹೇಳೋಣ! ನಾವು ಪಾಪಮಾಡಿದವರೇ ಸರಿ!

[17] ನಮ್ಮ ಹೃದಯವು ಕುಂದಿದೆ ಮತ್ತು ನಮ್ಮ ಕಣ್ಣುಗಳು ಮೊಬ್ಬಾಗಿವೆ.

[18] ಯಾಕೆಂದರೆ ನರಿಗಳು ಹಾಳಾಗಿರುವ ಚೀಯೋನ್ ಪರ್ವತದ ಬಳಿ ಸಂಚರಿಸುತ್ತವೆ.

[19] ಆದರೆ ಯೆಹೋವನೇ, ನೀನು ಶಾಶ್ವತವಾಗಿ ನೆಲೆಗೊಂಡಿದ್ದೀ, ತಲತಲಾಂತರಕ್ಕೂ ನಿನ್ನ ಸಿಂಹಾಸನವು ಸ್ಥಿರವಾಗಿರುವುದು.

[20] ನೀನು ನಮ್ಮನ್ನು ಸಂಪೂರ್ಣವಾಗಿ ಮರೆತಿರುವುದೇಕೆ? ಏಕೆ ನಮ್ಮನ್ನು ಇಷ್ಟುಕಾಲ ಕೈಬಿಟ್ಟಿದ್ದೀ?

[21] ಯೆಹೋವನೇ, ನೀನು ನಮ್ಮ ಮೇಲೆ ಬಲು ಸಿಟ್ಟುಗೊಂಡು ನಮ್ಮನ್ನು ಸಂಪೂರ್ಣವಾಗಿ ತ್ಯಜಿಸಿಬಿಟ್ಟಿದ್ದೀಯೋ?

[22] ಪೂರ್ವಕಾಲದ ಸುಸ್ಥಿತಿಯನ್ನು ನಮಗೆ ಮತ್ತೆ ದಯಪಾಲಿಸು. ನಮ್ಮನ್ನು ನಿನ್ನ ಕಡೆಗೆ ತಿರುಗಿಸು; ನೀನು ತಿರುಗಿಸಿದ ಹಾಗೆ ತಿರುಗುವೆವು;

ಪ್ರಲಾಪಗಳು — Chapters