Skip to content
Opens in a new window
Listen to this chapter • 4:14

[1] ಅಯ್ಯೋ, ಬಂಗಾರವು ಎಷ್ಟೋ ಮಸುಕಾಯಿತು! ಚೊಕ್ಕ ಚಿನ್ನವು ಕಾಂತಿಹೀನವಾಗಿದೆಯಲ್ಲಾ! ಪವಿತ್ರಾಲಯದ ಕಲ್ಲುಗಳು ಪ್ರತಿ ಬೀದಿಯ ಕೊನೆಯಲ್ಲಿ ರಾಶಿರಾಶಿಯಾಗಿ ಬಿದ್ದುಬಿಟ್ಟಿವೆ.

[2] ಅಯ್ಯೋ, ಅಪರಂಜಿಯಷ್ಟು ಅಮೂಲ್ಯರಾಗಿದ ಚೀಯೋನಿನ ಪ್ರಜೆಗಳು, ಆದರೆ ಈಗ ಅವರು ಕುಂಬಾರನ ಕೈಕೆಲಸದ ಮಣ್ಣಿನ ಮಡಿಕೆಗಳೋ ಎಂಬಂತೆ ತಿರಸ್ಕರಿಸಲ್ಪಟ್ಟಿದ್ದಾರೆ.

[3] ನರಿಗಳು ಕೂಡಾ ಮರಿಗಳಿಗೆ ಮೊಲೆಗೊಟ್ಟು ಸಾಕುತ್ತವೆ; ಆದರೆ ನನ್ನ ಜನವೆಂಬಾಕೆಯೋ ಕಾಡಿನ ಉಷ್ಟ್ರಪಕ್ಷಿಯಷ್ಟು ಕ್ರೂರಳಾಗಿದ್ದಾಳೆ.

[4] ಮೊಲೆಕೂಸಿನ ನಾಲಿಗೆಯು ದಾಹದಿಂದ ಸೇದಿಹೋಗಿದೆ. ಅನ್ನ ಬೇಕೆನ್ನುವ ಎಳೆಯ ಮಕ್ಕಳಿಗೆ ಅನ್ನಕೊಡುವವರು ಯಾರೂ ಇಲ್ಲ.

[5] ಮೃಷ್ಟಾನ್ನವನ್ನು ಉಣ್ಣುತ್ತಿದ್ದವರು ಬೀದಿಗಳಲ್ಲಿ ದಿಕ್ಕುಗೆಟ್ಟು ಅಲೆಯುತ್ತಾರೆ; ಚಿಕ್ಕಂದಿನಿಂದಲೂ ಶ್ರೇಷ್ಠ ವಸ್ತ್ರವನ್ನು ಹೊದ್ದುಕೊಳ್ಳುತ್ತಿದ್ದವರಿಗೆ ತಿಪ್ಪೆಗಳನ್ನು ಅಪ್ಪಿಕೊಳ್ಳುವ ಗತಿ ಬಂತು.

[6] ಯಾರ ಕೈಯೂ ಸೋಕದೆ ಕ್ಷಣಮಾತ್ರದಲ್ಲಿ ಹಾಳಾದ ಸೊದೋಮಿನ ಪಾಪಕ್ಕಿಂತಲೂ, ನನ್ನ ಪ್ರಜೆಯ ಅಧರ್ಮವು ಹೆಚ್ಚಾಯಿತಲ್ಲಾ.

[7] ಆ ಪ್ರಜೆಯಲ್ಲಿನ ಮಹನೀಯರು ಹಿಮಕ್ಕಿಂತ ಶುಭ್ರವಾಗಿಯೂ, ಹಾಲಿಗಿಂತ ಬಿಳುಪಾಗಿಯೂ ಇದ್ದರು. ಅವರ ದೇಹದ ಬಣ್ಣವು ಹವಳವನ್ನು ಮೀರಿತ್ತು, ಅವರ ರೂಪವು ಇಂದ್ರನೀಲಮಣಿಯಷ್ಟು ಅಂದವಾಗಿತ್ತು.

[8] ಈಗ ಅವರ ಮುಖವು ಕಾರ್ಮೋಡದಂತೆ ಕಡುಕಪ್ಪಾಗಿದೆ, ಬೀದಿಗಳಲ್ಲಿ ಅವರ ಗುರುತು ಯಾರಿಗೂ ಸಿಕ್ಕದು. ಅವರ ಚರ್ಮವು ಎಲುಬುಗಳಿಗೆ ಅಂಟಿಕೊಂಡಿದೆ ಅದಕ್ಕೆ ಸುಕ್ಕು ಹಿಡಿದಿದೆ, ಒಣಗಿದ ಕಟ್ಟಿಗೆಯಂತಾಗಿದೆ.

[9] ಹಸಿವೆಯಿಂದ ಹತರಾದವರ ಗತಿಗಿಂತಲೂ ಖಡ್ಗದಿಂದ ಹತರಾದವರ ಗತಿಯೇ ಲೇಸು. ಭೂಮಿಯ ಫಲಗಳಿಲ್ಲದೆ ಕ್ಷಾಮದ ಪೆಟ್ಟನ್ನು ತಿಂದವರು ಕ್ಷಯಿಸುತ್ತಾ ಬರುತ್ತಾರಲ್ಲಾ.

[10] ದಯೆತೋರುವ ಹೆಂಗಸರು ತಮ್ಮ ಕೂಸುಗಳನ್ನು ಸ್ವಂತ ಕೈಯಿಂದ ಬೇಯಿಸಿಕೊಂಡು ತಿಂದಿದ್ದಾರೆ; ಯಾಕೆಂದರೆ ನನ್ನ ಜನರ ನಾಶನಕಾಲದಲ್ಲಿ ಮಕ್ಕಳು ತಾಯಂದಿರಿಗೆ ತಿಂಡಿಯಾದವು.

[11] ಯೆಹೋವನು ತನ್ನ ರೋಷಾಗ್ನಿಯನ್ನು ಸುರಿಸಿ ತನ್ನ ಸಿಟ್ಟನ್ನು ತೀರಿಸಿದ್ದಾನೆ; ಚೀಯೋನಿನ ಅಸ್ತಿವಾರಗಳನ್ನು ನುಂಗಿಬಿಟ್ಟ ಬೆಂಕಿಯನ್ನು ಅಲ್ಲಿ ಹೊತ್ತಿಸಿದ್ದಾನೆ.

[12] ವೈರಿಗಳೂ ಮತ್ತು ಎದುರಾಳಿಗಳೂ ಯೆರೂಸಲೇಮಿನ ಬಾಗಿಲುಗಳಲ್ಲಿ ಹೆಜ್ಜೆಯಿಡುವರೆಂದು ಅರಸರು ಅಥವಾ ಭೂನಿವಾಸಿಗಳಲ್ಲಿ ಯಾರೂ ನಂಬಿರಲಿಲ್ಲ.

[13] ಚೀಯೋನಿನ ಮಧ್ಯದಲ್ಲಿ ಶಿಷ್ಟರ ರಕ್ತವನ್ನು ಸುರಿಸಿದ ಯಾಜಕರ ಪಾಪ ಮತ್ತು ಪ್ರವಾದಿಗಳ ದೋಷಗಳಿಂದಲೇ ಈ ಗತಿ ಬಂತು.

[14] ಆಹಾ, ಆ ಯಾಜಕ ಮತ್ತು ಪ್ರವಾದಿಗಳು ಕುರುಡರಂತೆ ಬೀದಿಗಳಲ್ಲಿ ಅಲೆಯುತ್ತಾರೆ; ರಕ್ತದಿಂದ ಹೊಲಸಾಗಿ ಹೋಗಿದ್ದಾರೆ, ಅವರ ಬಟ್ಟೆಯನ್ನು ಯಾರೂ ಮುಟ್ಟರು.

[15] ಅವರನ್ನು ನೋಡುವವರು, “ತೊಲಗಿರಿ, ಅಶುದ್ಧರು ನೀವು, ತೊಲಗಿರಿ, ತೊಲಗಿರಿ, ಮುಟ್ಟಬೇಡಿರಿ” ಎಂದು ಕೂಗುತ್ತಾರೆ. ಅವರು ಓಡಿಹೋಗಿ ಅನ್ಯದೇಶಗಳಲ್ಲಿ ಅಲೆಯುತ್ತಿರಲು, “ಇವರು ಇನ್ನು ಇಲ್ಲಿ ವಾಸಿಸಬಾರದು” ಎಂದು ಆಯಾ ದೇಶಗಳವರು ಅಂದುಕೊಳ್ಳುತ್ತಾರೆ.

[16] ಯೆಹೋವನ ಉಗ್ರದೃಷ್ಟಿಯು ಅವರನ್ನು ಚದುರಿಸಿದೆ; ಆತನು ಇನ್ನು ಅವರ ಮೇಲೆ ಒಲವು ತೋರಿಸುವುದಿಲ್ಲ. ಅವರು ಯಾಜಕರಾದರೇನು, ಅವರಿಗೆ ಮರ್ಯಾದೆ ತಪ್ಪಿದೆ; ವೃದ್ಧರಾದರೇನು, ಯಾರೂ ಅವರನ್ನು ಕರುಣಿಸರು.

[17] ನಮಗೆ ಬರತಕ್ಕ ಸಹಾಯವನ್ನು ವ್ಯರ್ಥವಾಗಿ ಎದುರುನೋಡಿ ಕಣ್ಣು ಮೊಬ್ಬಾಯಿತು. ನಮ್ಮನ್ನು ಉದ್ಧರಿಸಲಾರದ ಜನಾಂಗದ ಆಗಮನವನ್ನು ನಮ್ಮ ಬುರುಜುಗಳಲ್ಲಿ ಕಾದುಕೊಂಡಿದ್ದೇವಲ್ಲಾ.

[18] ಶತ್ರುಗಳು ನಮ್ಮ ಹೆಜ್ಜೆಯನ್ನು ಗುರಿಮಾಡಿಕೊಂಡಿರುವುದರಿಂದ ನಮ್ಮ ಬೀದಿಗಳಲ್ಲೇ ನಾವು ಸಂಚಾರ ಮಾಡದ ಹಾಗಾಯಿತು; ನಮಗೆ ಅಂತ್ಯವು ಸಮೀಪಿಸಿತು, ನಮ್ಮ ಕಾಲವು ತೀರಿತು; ಹೌದು, ನಮಗೆ ಅಂತ್ಯವು ಬಂದೇ ಬಂತು.

[19] ನಮ್ಮನ್ನು ಹಿಂದಟ್ಟಿದವರು ಆಕಾಶದ ಹದ್ದುಗಳಿಗಿಂತ ವೇಗಿಗಳಾಗಿದ್ದರು. ಬೆಟ್ಟಗಳ ಮೇಲೆ ನಮ್ಮನ್ನು ಬೆನ್ನು ಹತ್ತಿ ಅರಣ್ಯದಲ್ಲಿ ಹೊಂಚುಹಾಕಿದರು.

[20] ಯಾವನು ನಮಗೆ ಜೀವಶ್ವಾಸವೋ, ಯಾವನು ಯೆಹೋವನ ಅಭಿಷಿಕ್ತನೋ, ಯಾವನನ್ನು ಆಶ್ರಯಿಸಿ ಜನಾಂಗಗಳ ಮಧ್ಯದಲ್ಲಿ ಉಳಿಯುವೆವು ಎಂದು ನಾವು ನಂಬಿಕೊಂಡಿದ್ದೆವೋ ಅವನು ಅವರ ಗುಂಡಿಗಳಲ್ಲಿ ಸಿಕ್ಕಿಬಿದ್ದನು.

[21] ಊಚ್ ದೇಶದಲ್ಲಿ ವಾಸಿಸುವ ಎದೋಮೆಂಬ ಕನ್ಯೆಯೇ, ಹರ್ಷಿಸು, ಉಲ್ಲಾಸಗೊಳ್ಳು; ಆದರೆ ರೋಷಪಾನದ ಪಾತ್ರೆಯು ನಿನ್ನ ಪಾಲಿಗೂ ಬರುವುದು; ಅಮಲೇರಿದವಳಾಗಿ ನಿನ್ನನ್ನು ನೀನೇ ಬೆತ್ತಲೆಮಾಡಿಕೊಳ್ಳುವಿ.

[22] ಚೀಯೋನೆಂಬ ಕನ್ಯೆಯೇ, ನಿನ್ನ ದೋಷಫಲವೆಲ್ಲಾ ತೀರಿತು, ಯೆಹೋವನು ನಿನ್ನನ್ನು ಇನ್ನು ಸೆರೆಗೆ ಒಯ್ಯನು. ಎದೋಮೆಂಬ ಕನ್ಯೆಯೇ, ನಿನ್ನ ದೋಷದ ನಿಮಿತ್ತ ಯೆಹೋವನು ನಿನ್ನನ್ನು ದಂಡಿಸಿ ನಿನ್ನ ಪಾಪಗಳನ್ನು ಬೈಲಿಗೆ ತರುವನು.

ಪ್ರಲಾಪಗಳು — Chapters