Skip to content
Opens in a new window
Listen to this chapter • 6:29

[1] ಯೆಹೋವನ ರೌದ್ರದಂಡದ ಪೆಟ್ಟನ್ನು ತಿಂದವನು ನಾನೇ.

[2] ಆತನೇ ನನ್ನನ್ನು ಕರೆದುಕೊಂಡು ಹೋಗಿ ಬೆಳಕಿನಲ್ಲಿ ಅಲ್ಲ, ಕತ್ತಲಲ್ಲೇ ನಡೆಯಮಾಡಿದ್ದಾನೆ.

[3] ನಿಶ್ಚಯವಾಗಿ ಆತನು ನನಗೆ ವಿರುದ್ಧವಾಗಿದ್ದಾನೆ. ದಿನವೆಲ್ಲಾ ನನ್ನ ಮೇಲೆ ಕೈಮಾಡುತ್ತಾ ಬಂದಿದ್ದಾನೆ.

[4] ನನ್ನ ಮಾಂಸಚರ್ಮಗಳನ್ನು ಕ್ಷೀಣಿಸುವಂತೆ ಮಾಡಿ, ನನ್ನ ಎಲುಬುಗಳನ್ನು ಮುರಿದಿದ್ದಾನೆ;

[5] ನನ್ನ ಸುತ್ತಲು ಶ್ರಮಸಂಕಟಗಳ ದಿಬ್ಬಗಳನ್ನು ಹಾಕಿದ್ದಾನೆ.

[6] ಕಾರ್ಗತ್ತಲಲ್ಲಿ ನನ್ನನ್ನು ಇರಿಸಿದ್ದಾನೆ; ಬಹುಕಾಲದ ಹಿಂದೆ ಸತ್ತವರ ಹಾಗೆ ನಾನು ಇದ್ದೇನೆ.

[7] ನಾನು ತಪ್ಪಿಸಿಕೊಂಡು ಹೋಗದಂತೆ ನನ್ನ ಸುತ್ತಲು ಗೋಡೆಯನ್ನು ಕಟ್ಟಿ, ನನಗೆ ಭಾರವಾದ ಬೇಡಿಯನ್ನು ಹಾಕಿದ್ದಾನೆ.

[8] ಇದಲ್ಲದೆ ನಾನು ಮೊರೆಯಿಟ್ಟು ಕೂಗಿಕೊಂಡರೂ ನನ್ನ ಬಿನ್ನಹಕ್ಕೆ ಕಿವಿಗೊಡುತ್ತಿಲ್ಲ.

[9] ನನ್ನ ದಾರಿಗಳಿಗೆ ಅಡ್ಡವಾಗಿ ಕೆತ್ತನೆಯ ಕಲ್ಲಿನ ಗೋಡೆಗಳನ್ನು ಹಾಕಿ, ಹಾದಿಗಳನ್ನು ಸುತ್ತುವರಿಯುವಂತೆ ಮಾಡಿದ್ದಾನೆ.

[10] ಆತನು ನನಗೆ ಹೊಂಚುಹಾಕುತ್ತಿರುವ ಕರಡಿಯಂತಿದ್ದಾನೆ, ಗುಪ್ತಸ್ಥಳಗಳಲ್ಲಿ ಅಡಗಿಕೊಂಡಿರುವ ಸಿಂಹದ ಹಾಗಿದ್ದಾನೆ.

[11] ನಾನು ನಡೆದ ದಾರಿಗಳಿಂದ ನನ್ನನ್ನು ತಪ್ಪಿಸಿದ್ದಾನೆ. ಆತನು ನನ್ನನ್ನು ದಿಕ್ಕಿಲ್ಲದವನಂತೆ ಮಾಡಿದ್ದಾನೆ.

[12] ತನ್ನ ಬಿಲ್ಲನ್ನು ಬೊಗ್ಗಿಸಿ ಬಾಣಕ್ಕೆ ನನ್ನನ್ನು ಗುರಿಮಾಡಿಕೊಂಡಿದ್ದಾನೆ.

[13] ತನ್ನ ಬತ್ತಳಿಕೆಯ ಅಂಬುಗಳಿಂದ ನನ್ನ ಅಂತರಂಗಗಳನ್ನು ಇರಿದಿದ್ದಾನೆ.

[14] ನಾನು ಸ್ವಜನರೆಲ್ಲರಿಗೂ ಹಾಸ್ಯಾಸ್ಪದನಾಗಿ, ಹಗಲೆಲ್ಲಾ ಅವರ ಗೇಲಿಯ ಮಾತು ಮತ್ತು ಹಾಡುಗಳಿಗೆ ಗುರಿಯಾಗಿದ್ದೇನೆ.

[15] ಆತನು ನನಗೆ ಕಹಿಯಾದ ಆಹಾರವನ್ನು ಕೊಟ್ಟು, ವಿಷ ಪಾನವನ್ನು ಕುಡಿಯಮಾಡಿದ್ದಾನೆ.

[16] ನಾನು ಗರಸು ಕಲ್ಲುಚೂರುಗಳನ್ನು ಅಗೆಯುವಂತೆ ಮಾಡಿ ನನ್ನ ಹಲ್ಲುಗಳನ್ನು ಮುರಿದುಬಿಟ್ಟು, ನನ್ನನ್ನು ಬೂದಿಯಲ್ಲಿ ತಳ್ಳಿದ್ದಾನೆ.

[17] ನನ್ನನ್ನು ತಳ್ಳಿಹಾಕಿ ಸಮಾಧಾನಕ್ಕೆ ದೂರಮಾಡಿದ್ದಾನೆ; ನಾನು ಸಂತೋಷವನ್ನು ಮರೆಯುವಂತೆ ಮಾಡಿದ್ದಾನೆ.

[18] “ಅಯ್ಯೋ, ನನ್ನ ಶಕ್ತಿಯೆಲ್ಲಾ ಹಾಳಾಯಿತು, ಯೆಹೋವನು ನನಗೆ ದಯಪಾಲಿಸಿದ ನಿರೀಕ್ಷೆಯೂ ವ್ಯರ್ಥವಾಯಿತು” ಅಂದುಕೊಂಡೆನು.

[19] ನಾನು ಅಲೆದು ಕಷ್ಟಪಟ್ಟದ್ದನ್ನು ನೆನಪಿಗೆ ತಂದುಕೋ, ಕಹಿಯಾದ ನನ್ನ ಆಹಾರಪಾನಗಳನ್ನು ಜ್ಞಾಪಕಮಾಡಿಕೋ.

[20] ನನ್ನ ಆತ್ಮವು ಇವುಗಳನ್ನು ನಿತ್ಯವೂ ಜ್ಞಾಪಿಸಿಕೊಳ್ಳುತ್ತಾ ನನ್ನೊಳಗೆ ಕುಗ್ಗಿದೆ.

[21] ಹೀಗಿರಲು ನಾನು ನಿನ್ನ ಕರುಣೆಯನ್ನು ನೆನಪಿಗೆ ತಂದುಕೊಳ್ಳುತ್ತೇನೆ, ಅದರಿಂದ ನನಗೆ ನಿರೀಕ್ಷೆಯುಂಟಾಗುತ್ತದೆ!

[22] ನಾನು ಉಳಿದಿರುವುದು ಒಡಂಬಡಿಕೆಗೆ ಬದ್ಧವಾಗಿರುವ ಆತನ ನಂಬಿಗಸ್ತಿಕೆಯಿಂದಲೇ; ಯೆಹೋವನ ಕೃಪಾವರಗಳ ಕಾರ್ಯಗಳು ನಿಂತುಹೋಗವು.

[23] ದಿನದಿನವು ಹೊಸಹೊಸದಾಗಿ ಒದಗುತ್ತವೆ; ನಿನ್ನ ನಂಬಿಗಸ್ತಿಕೆಯು ದೊಡ್ಡದು!

[24] “ಯೆಹೋವನೇ ನನ್ನ ಪಾಲು, ಆದಕಾರಣ ಆತನನ್ನು ನಿರೀಕ್ಷಿಸುವೆನು” ಎಂದು ನನ್ನ ಅಂತರಾತ್ಮವು ಅಂದುಕೊಳ್ಳುತ್ತದೆ.

[25] ಯೆಹೋವನು ತನ್ನನ್ನು ನಿರೀಕ್ಷಿಸುವವರಿಗೂ ಮತ್ತು ಹುಡುಕುವವರಿಗೂ ಮಹೋಪಕಾರಿಯಾಗಿದ್ದಾನೆ.

[26] ಯೆಹೋವನ ರಕ್ಷಣಕಾರ್ಯವನ್ನು ಎದುರುನೋಡುತ್ತಾ ಶಾಂತವಾಗಿ ಕಾದುಕೊಂಡಿರುವುದು ಒಳ್ಳೇಯದು.

[27] ಯೌವನದಲ್ಲಿ ನೊಗಹೊರುವುದು ಮನುಷ್ಯನಿಗೆ ಹಿತಕರ.

[28] ನನ್ನ ಮೇಲೆ ಇದನ್ನು ಹೊರಿಸಿದವನು ಯೆಹೋವನೇ ಎಂದು ಅವನು ಒಂಟಿಗನಾಗಿ ಕುಳಿತು ಮೌನವಾಗಿರಲಿ.

[29] ಒಂದು ವೇಳೆ ಯೆಹೋವನಿಂದ ಸುಗತಿಯಾದೀತೆಂಬ ನಿರೀಕ್ಷೆಯಿಂದ ತನ್ನ ಮುಖವನ್ನು ಕೊಳಕಿನ ಮೇಲೆ ಹಾಕಲಿ.

[30] ಹೊಡೆಯುವವನಿಗೆ ತನ್ನ ಕೆನ್ನೆಯನ್ನು ಕೊಟ್ಟು ಅವಮಾನವನ್ನು ಹೊಟ್ಟೆತುಂಬಾ ತಿನ್ನಲಿ.

[31] ಕರ್ತನು ನಿರಂತರಕ್ಕೂ ಕೈ ಬಿಡುವವನಲ್ಲ.

[32] ಆತನು ವ್ಯಥೆಗೊಳಿಸಿದರೇನು, ತನ್ನ ಕೃಪಾತಿಶಯದಿಂದ ಕನಿಕರಿಸುವನು.

[33] ನರಜನ್ಮದವರನ್ನು ಬಾಧಿಸಿ, ವ್ಯಥೆಗೊಳಿಸುವುದು ಆತನಿಗೆ ಇಷ್ಟವಿಲ್ಲ.

[34] ಲೋಕದ ಸೆರೆಯವರನ್ನೆಲ್ಲಾ ತನ್ನ ಕಾಲುಗಳ ಕೆಳಗೆ ತುಳಿದುಬಿಡುವುದೂ,

[35] ಪರಾತ್ಪರನಾದ ದೇವರ ಸನ್ನಿಧಿಯಲ್ಲಿ ನ್ಯಾಯವನ್ನು ತಪ್ಪಿಸುವುದೂ,

[36] ವ್ಯಾಜ್ಯವನ್ನು ಅನ್ಯಾಯವಾಗಿ ತೀರಿಸುವುದೂ, ಇವುಗಳನ್ನು ಕರ್ತನು ಲಕ್ಷ್ಯಕ್ಕೆ ತಾರನೇ?

[37] ಕರ್ತನ ಅಪ್ಪಣೆಯಿಲ್ಲದೆ ಯಾರ ಮಾತು ಸಾರ್ಥಕವಾದೀತು?

[38] ಪರಾತ್ಪರನಾದ ದೇವರ ಬಾಯಿಯ ಮಾತಿನಿಂದಲೇ ಮೇಲು ಮತ್ತು ಕೇಡುಗಳು ಸಂಭವಿಸುತ್ತವಲ್ಲಾ.

[39] ಮನುಷ್ಯನಿಗೆ ಜೀವ ವರವಿರಲು ತನ್ನ ಪಾಪದ ಶಿಕ್ಷೆಗಾಗಿ ಗುಣುಗುಟ್ಟುವುದೇಕೆ?

[40] ನಮ್ಮ ನಡತೆಯನ್ನು ಶೋಧಿಸಿ, ಪರೀಕ್ಷಿಸಿಕೊಂಡು ಯೆಹೋವನ ಕಡೆಗೆ ತಿರುಗಿಕೊಳ್ಳೋಣ.

[41] ಪರಲೋಕದಲ್ಲಿರುವ ದೇವರ ಕಡೆಗೆ ನಮ್ಮ ಕೈಗಳೊಡನೆ ಮನಸ್ಸನ್ನೂ ತಿರುಗಿಸಿ ಸ್ತುತಿಸೋಣ.

[42] “ನಾವು ಅವಿಧೇಯರಾಗಿ ದ್ರೋಹಮಾಡಿದ್ದೇವೆ; ನೀನು ಕ್ಷಮಿಸಲಿಲ್ಲ.

[43] ನೀನು ರೋಷವನ್ನು ಹೊದ್ದುಕೊಂಡು ನಮ್ಮನ್ನು ಹಿಂದಟ್ಟಿದ್ದೀ; ಕನಿಕರಿಸದೆ ಕೊಂದು ಹಾಕಿದ್ದೀ.

[44] ನಮ್ಮ ಪ್ರಾರ್ಥನೆಯು ನಿನಗೆ ಮುಟ್ಟಬಾರದೆಂದು ಮೋಡವನ್ನು ಮರೆಮಾಡಿಕೊಂಡಿದ್ದೀ.

[45] ನಮ್ಮನ್ನು ಜನಾಂಗಗಳ ಮಧ್ಯದಲ್ಲಿ ಕಸವನ್ನಾಗಿಯೂ ಮತ್ತು ಹೊಲಸನ್ನಾಗಿಯೂ ಹಾಕಿಬಿಟ್ಟಿದ್ದೀ.

[46] ನಮ್ಮ ಶತ್ರುಗಳೆಲ್ಲಾ ನಮ್ಮನ್ನು ನೋಡಿ ಹಾಸ್ಯಮಾಡುತ್ತಾರೆ.

[47] ಭಯವೂ, ಗುಂಡಿಯೂ, ಸಂಹಾರವೂ ಮತ್ತು ಭಂಗವೂ ನಮಗೆ ಕಾದಿವೆ.”

[48] ಸ್ವಜನರು ನಾಶವಾದ ಕಾರಣ ನನ್ನ ಕಣ್ಣೀರು ಹೊಳೆಹೊಳೆಯಾಗಿ ಹರಿಯುವುದು.

[49] ಯೆಹೋವನು ಆಕಾಶದಿಂದ ಕಟಾಕ್ಷಿಸಿ ನೋಡುವ ತನಕ

[50] ನನ್ನ ಕಣ್ಣುಗಳು ನಿರಂತರವಾಗಿ ಅಶ್ರುಧಾರೆ ಸುರಿಸುವುದನ್ನು, ಎಂದಿಗೂ ಬಿಡದು.

[51] ನನ್ನ ಪಟ್ಟಣದ ಕನ್ಯೆಯರಿಗಾಗಿ ಅಳುತ್ತಿರುವ ನಾನು ಕಣ್ಣುರಿಯಿಂದ ಪೀಡಿತನಾಗಿದ್ದೇನೆ.

[52] ನಿಷ್ಕಾರಣವಾಗಿ ನನ್ನ ವೈರಿಗಳು ಪಕ್ಷಿಯನ್ನೋ ಎಂಬಂತೆ ನನ್ನನ್ನು ಆತುರದಿಂದ ಹಿಂದಟ್ಟಿದರು.

[53] ನನ್ನನ್ನು ನೆಲಮಾಳಿಗೆಯಲ್ಲಿ ಇಳಿಸಿ ಕಲ್ಲುಮುಚ್ಚಿ ನನ್ನ ಪ್ರಾಣವನ್ನು ತೆಗೆದುಬಿಟ್ಟರು

[54] ಪ್ರವಾಹವು ನನ್ನನ್ನು ಮುಣುಗಿಸಿತು; ಆಗ ಸತ್ತೆನು ಅಂದುಕೊಂಡೆನು.

[55] ಯೆಹೋವನೇ, ಅಗಾಧವಾದ ನೆಲಮಾಳಿಗೆಯಲ್ಲಿ ನಿನ್ನ ಹೆಸರೆತ್ತಿ ಪ್ರಾರ್ಥಿಸಿದೆನು.

[56] ನೀನು ನನ್ನ ಧ್ವನಿಯನ್ನು ಕೇಳಿದಿ; ನನ್ನ ನಿಟ್ಟುಸಿರಿಗೂ ಮತ್ತು ಮೊರೆಗೂ ಕಿವಿಯನ್ನು ಮರೆಮಾಡಿಕೊಳ್ಳಬೇಡ!

[57] ನಾನು ನಿನ್ನನ್ನು ಕೂಗಿಕೊಂಡಾಗ ನನ್ನ ಸಮೀಪಕ್ಕೆ ಬಂದು “ಭಯಪಡಬೇಡ” ಎಂದು ಅಭಯವಚನ ನೀಡಿದೆ.

[58] ಕರ್ತನೇ, ನೀನು ನನ್ನ ವ್ಯಾಜ್ಯಗಳನ್ನು ನಡಿಸಿ, ನನ್ನ ಪ್ರಾಣವನ್ನು ಉಳಿಸಿದ್ದೀ.

[59] ಯೆಹೋವನೇ, ನನಗಾದ ಅನ್ಯಾಯವನ್ನು ನೋಡಿದ್ದೀ, ನನಗೆ ನ್ಯಾಯತೀರಿಸು.

[60] ನನ್ನ ವೈರಿಗಳು ನನ್ನ ಮೇಲೆ ತೀರಿಸಿದ ಹಗೆಯನ್ನೂ ಮತ್ತು ಕಲ್ಪಿಸಿಕೊಂಡ ಯುಕ್ತಿಗಳನ್ನೂ ನೋಡಿದ್ದೀಯಲ್ಲಾ.

[61] ಯೆಹೋವನೇ, ಅವರು ನನಗೆ ವಿರುದ್ಧವಾಗಿ ಮಾಡಿದ ದೂಷಣೆಯೂ, ನನ್ನ ಹಾನಿಗಾಗಿ ಕಲ್ಪಿಸಿದ ಕುಯುಕ್ತಿಗಳೂ,

[62] ನಿತ್ಯ ನಡಿಸುತ್ತಿರುವ ತಂತ್ರೋಪಾಯವೂ ಮತ್ತು ನನ್ನ ಎದುರಾಳಿಗಳ ನಿಂದೆಯೂ ನಿನ್ನ ಕಿವಿಗೆ ಬಿದ್ದಿವೆಯಷ್ಟೆ.

[63] ಅವರು ಕುಳಿತುಕೊಳ್ಳಲಿ, ಏಳಲಿ ನೋಡುತ್ತಲೇ ಇರು; ನಾನು ಅವರ ಗೇಲಿಯ ಹಾಡಿಗೆ ಗುರಿಯಾಗಿದ್ದೇನೆ.

[64] ಯೆಹೋವನೇ, ಅವರ ದುಷ್ಕೃತ್ಯಗಳಿಗೆ ಸರಿಯಾದ ಪ್ರತಿಫಲವನ್ನು ನೀನು ಅವರಿಗೆ ಕೊಡುವಿ;

[65] ಅವರ ಮನಸ್ಸಿನಲ್ಲಿ ಭಯಹುಟ್ಟಿಸುವಿ, ನಿನ್ನ ಶಾಪವು ಅವರ ಮೇಲಿರಲಿ!

[66] ನೀನು ಕೋಪಗೊಂಡು ಅವರನ್ನು ಹಿಂದಟ್ಟಿ ಅವರು ನಿನ್ನ ಕೈಕೆಲಸವಾಗಿರುವ ಆಕಾಶದ ಕೆಳಗೆ ಉಳಿಯದಂತೆ ಅಳಿಸಿಬಿಡುವಿ.

ಪ್ರಲಾಪಗಳು — Chapters