Skip to content
Opens in a new window
Listen to this chapter • 3:18

[1] ಅರಸನಾದ ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರ್ಷದ ಆರನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಯೆಹೋವನು ಈ ವಾಕ್ಯವನ್ನು ಶೆಯಲ್ತೀಯೇಲನಿಗೆ ಹುಟ್ಟಿದ ಯೆಹೂದ ದೇಶಾಧಿಪತಿಯಾದ ಜೆರುಬ್ಬಾಬೆಲನಿಗೂ, ಯೆಹೋಚಾದಾಕನಿಗೆ ಜನಿಸಿದ ಮಹಾಯಾಜಕನಾದ ಯೆಹೋಶುವನಿಗೂ ಪ್ರವಾದಿಯಾದ ಹಗ್ಗಾಯನ ಮೂಲಕ ಹೇಳಿಕಳುಹಿಸಿದನು.

[2] ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಯೆಹೋವನ ಆಲಯವನ್ನು ಕಟ್ಟುವುದಕ್ಕೆ ಸಮಯವು ಇನ್ನು ಬಂದಿಲ್ಲ” ಎಂದು ಜನರು ಅಂದುಕೊಳ್ಳುತ್ತಾರಲ್ಲಾ.

[3] ಯೆಹೋವನು ಪ್ರವಾದಿಯಾದ ಹಗ್ಗಾಯನ ಮೂಲಕ ಈ ವಾಕ್ಯವನ್ನು ಹೇಳಿದನು,

[4] “ಈ ನನ್ನ ಆಲಯವು ಹಾಳು ಬಿದ್ದಿರುವಾಗ, ನೀವು ನಿಮ್ಮ ಒಳಗೋಡೆಗೆಲ್ಲಾ ಸುಂದರ ಹಲಿಗೆ ಹೊದಿಸಿಕೊಂಡ ಸ್ವಂತ ಮನೆಗಳಲ್ಲಿ ವಾಸಿಸುವುದಕ್ಕೆ ಈ ಸಮುಯವು ತಕ್ಕದ್ದೋ?”

[5] ಈ ಸಮಯದಲ್ಲಿ ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ, “ನಿಮ್ಮ ಗತಿ ಏನಾಗಿದೆಯೆಂದು ಮನಸ್ಸಿಗೆ ತಂದುಕೊಳ್ಳಿರಿ.

[6] ನೀವು ಬಿತ್ತಿದ ಬೀಜವು ಬಹಳ, ತಂದ ಫಲವು ಸ್ವಲ್ಪ; ಅದನ್ನು ಸೇವಿಸುವಿರಿ ತೃಪ್ತಿಯಾಗದು, ಕುಡಿಯುತ್ತೀರಿ ಆನಂದವಾಗದು; ಹೊದ್ದುಕೊಳ್ಳುವಿರಿ ಬೆಚ್ಚಗಾಗದು; ಸಂಬಳಗಾರನು ಸಂಬಳಹಾಕುವ ಚೀಲವು ತೂತಾಗಿದೆ.”

[7] ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ; “ನಿಮ್ಮ ಗತಿ ಏನಾಗಿದೆಯೆಂದು ಮನಸ್ಸಿಗೆ ತಂದುಕೊಳ್ಳಿರಿ.

[8] ಮಲೆನಾಡಿಗೆ ಹೋಗಿ ಮರವನ್ನು ತಂದು ನನ್ನ ಆಲಯವನ್ನು ಕಟ್ಟಿರಿ; ನಾನು ಅದಕ್ಕೆ ಮೆಚ್ಚಿ ನನ್ನ ಪ್ರಭಾವವನ್ನು ಅಲ್ಲಿ ಪ್ರಕಾಶಗೊಳಿಸುವೆನು” ಇದು ಯೆಹೋವನ ನುಡಿ.

[9] ನೀವು ಬಹು ಬೆಳೆಯನ್ನು ನಿರೀಕ್ಷಿಸಿದಿರಿ, ಆದರೆ, ಸ್ವಲ್ಪ ಮಾತ್ರ ಮನೆಗೆ ಸಾಗಿಸಲು ಸಾಧ್ಯವಾಯಿತು; ಯಾಕೆಂದರೆ ನಾನು ಅದನ್ನು ಫಲಿಸಲು ಬಿಡಲಿಲ್ಲ. ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಇದಕ್ಕೆಲ್ಲಾ ಕಾರಣವೇನು? ನನ್ನ ಆಲಯವು ಪಾಳು ಬಿದ್ದಿದೆ. ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಮನೆಯ ಕೆಲಸಕ್ಕೆ ತವಕಪಡುತ್ತಿದ್ದಾನೆ, ಇದೇ ಕಾರಣ.”

[10] ನಿಮ್ಮ ನಿಮಿತ್ತವೇ ಆಕಾಶವು ಇಬ್ಬನಿಯನ್ನು ತಡೆದುಬಿಟ್ಟಿದೆ, ಭೂಮಿಯು ತನ್ನ ಫಲವನ್ನು ನಿಲ್ಲಿಸಿಬಿಟ್ಟಿದೆ;

[11] ಇದಲ್ಲದೆ ನಾನು ದೇಶ, ಬೆಟ್ಟ, ಧಾನ್ಯ, ದ್ರಾಕ್ಷಾರಸ, ಎಣ್ಣೆ, ಭೂಮಿಯ ಉತ್ಪತ್ತಿ, ಮನುಷ್ಯ, ಪಶು, ನಾನಾ ಕೈದುಡಿತ ಇವುಗಳಿಗೆಲ್ಲಾ ಕ್ಷಾಮವನ್ನು ತಂದಿದ್ದೇನೆ.

[12] ಆಗ ಶೆಯಲ್ತೀಯೇಲನ ಮಗನಾದ ಜೆರುಬ್ಬಾಬೆಲ್, ಯೆಹೋಚಾದಾಕನಿಗೆ ಹುಟ್ಟಿದ ಮಹಾಯಾಜಕನಾದ ಯೆಹೋಶುವ, ಸಮಸ್ತ ಇಸ್ರಾಯೇಲ್ ಜನಶೇಷ, ಇವರೆಲ್ಲಾ ಯೆಹೋವನೆಂಬ ತಮ್ಮ ದೇವರ ನುಡಿಗೂ, ಯೆಹೋವನೆಂಬ ತಮ್ಮ ದೇವರ ಅಪ್ಪಣೆಯ ಪ್ರಕಾರ ಪ್ರವಾದಿಯಾದ ಹಗ್ಗಾಯನು ಹೇಳಿದ ಮಾತುಗಳಿಗೂ ಕಿವಿಗೊಟ್ಟು ಯೆಹೋವನಲ್ಲಿ ಭಯಭಕ್ತಿಯುಳ್ಳವರಾದರು.

[13] ಯೆಹೋವನ ದೂತನಾದ ಹಗ್ಗಾಯನು ಯೆಹೋವನ ಸಂದೇಶವನ್ನು ಜನರಿಗೆ ಈ ರೀತಿಯಾಗಿ ನುಡಿದನು, “ನಿಮ್ಮೊಂದಿಗೆ ಇದ್ದೇನೆ ಎಂದು ಯೆಹೋವನು ನುಡಿಯುತ್ತಿದ್ದಾನೆ.”

[14] ಕೂಡಲೇ ಶೆಯಲ್ತೀಯೇಲನು ಮಗನೂ, ಯೆಹೂದ ದೇಶಾಧಿಪತಿಯಾದ ಜೆರುಬ್ಬಾಬೆಲ್, ಯೆಹೋಚಾದಾಕನಿಗೆ ಹುಟ್ಟಿದ ಮಹಾಯಾಜಕನಾದ ಯೆಹೋಶುವ, ಮತ್ತು ಸಮಸ್ತ ಜನರೆಲ್ಲರ ಮನಸ್ಸುಗಳನ್ನು ಸೇನಾಧೀಶ್ವರನಾದ ಯೆಹೋವನು ಪ್ರೇರೇಪಿಸಲು,

[15] ಅವರು ಅರಸನಾದ ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರ್ಷದ ಆರನೆಯ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ಬಂದು ತಮ್ಮ ದೇವರಾದ ಯೆಹೋವನ ಆಲಯದ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿದರು.

ಹಗ್ಗಾಯನು — Chapters