[1] ದಾರ್ಯಾವೆಷನ ಆಳ್ವಿಕೆಯ ಏಳನೆಯ ತಿಂಗಳಿನ ಇಪ್ಪತ್ತೊಂದನೆಯ ದಿನದಲ್ಲಿ ಯೆಹೋವನು ಪ್ರವಾದಿಯಾದ ಹಗ್ಗಾಯನ ಮೂಲಕ ಮತ್ತೊಮ್ಮೆ ಈ ವಾಕ್ಯವನ್ನು ಕೊಟ್ಟು,
[2] “ಶೆಯಲ್ತೀಯೇಲನಿಗೆ ಹುಟ್ಟಿದ ಯೆಹೂದ ದೇಶಾಧಿಪತಿಯಾದ ಜೆರುಬ್ಬಾಬೆಲ್, ಯೆಹೋಚಾದಾಕನಿಗೆ ಹುಟ್ಟಿದ ಮಹಾಯಾಜಕನಾದ ಯೆಹೋಶುವ, ನೆರೆದಿದ್ದ ಜನರನ್ನು ಕೂಡಿಸಿ,
[3] ‘ಈ ಆಲಯದ ಪೂರ್ವ ವೈಭವವನ್ನು ನೋಡಿದವರು, ನಿಮ್ಮಲ್ಲಿ ಎಷ್ಟು ಮಂದಿ ಉಳಿದಿದ್ದೀರಿ? ಇದರ ಈಗಿನ ಸ್ಥಿತಿಯು ನಿಮಗೆ ಹೇಗೆ ತೋರುತ್ತದೆ? ನಿಮ್ಮ ದೃಷ್ಟಿಗೆ ಏನೂ ಇಲ್ಲವಾಗಿ ತೋರುತ್ತಿದೆಯಲ್ಲವೇ?’
[4] ಯೆಹೋವನು ಇಂತೆನ್ನುತ್ತಾನೆ, ‘ಜೆರುಬ್ಬಾಬೆಲನೇ ಈಗ ಧೈರ್ಯವಾಗಿರು; ಯೆಹೋಚಾದಾಕನಿಗೆ ಹುಟ್ಟಿದ ಮಹಾಯಾಜಕನಾದ ಯೆಹೋಶುವನೇ, ಧೈರ್ಯವಾಗಿರು; ದೇಶೀಯರೇ, ನೀವೆಲ್ಲರೂ ಧೈರ್ಯಗೊಂಡು ಕೆಲಸ ನಡಿಸಿರಿ’ ಇದು ಯೆಹೋವನ ನುಡಿ; ‘ನಾನು ನಿಮ್ಮೊಂದಿಗೆ ಇದ್ದೇನೆ’ ಎಂದು ಸೇನಾಧೀಶ್ವರ ಯೆಹೋವನು ನುಡಿಯುತ್ತಾನೆ.
[5] ‘ನೀವು ಐಗುಪ್ತದಿಂದ ಪಾರಾಗಿ ಬಂದಾಗ, ನಾನು ನಿಮಗೆ ವಾಗ್ದಾನವಾಗಿ ಕೊಟ್ಟ ಮಾತನ್ನು ನೆರವೇರಿಸುವೆನು; ನನ್ನ ಆತ್ಮನು ನಿಮ್ಮ ಮಧ್ಯದಲ್ಲಿ ನೆಲೆಗೊಂಡಿರುವನು; ಹೆದರಬೇಡಿರಿ.’
[6] ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, ‘ಸ್ವಲ್ಪ ಕಾಲದ ಮೇಲೆ, ನಾನು ಇನ್ನೊಂದೇ ಸಾರಿ ಆಕಾಶವನ್ನೂ, ಭೂಮಿಯನ್ನೂ, ಸಮುದ್ರವನ್ನೂ, ಒಣನೆಲವನ್ನೂ ಅದುರಿಸಿ ಸಕಲಜನಾಂಗಗಳನ್ನು ನಡುಗಿಸುವೆನು;
[7] ಆಗ ಸಮಸ್ತ ಜನಾಂಗಗಳ ಇಷ್ಟವಸ್ತುಗಳು ಬಂದು ಒದಗಲು, ಈ ಆಲಯವನ್ನು ವೈಭವದಿಂದ ತುಂಬಿಸುವೆನು’ ಇದು ಸೇನಾಧೀಶ್ವರನಾದ ಯೆಹೋವನ ನುಡಿ.
[8] ‘ಬೆಳ್ಳಿಯೆಲ್ಲಾ ನನ್ನದು, ಬಂಗಾರವೆಲ್ಲಾ ನನ್ನದು’ ಇದು ಸೇನಾಧೀಶ್ವರನಾದ ಯೆಹೋವನ ನುಡಿ.
[9] ‘ಈ ಆಲಯದ ಮುಂದಿನ ವೈಭವವು ಹಿಂದಿನ ವೈಭವಕ್ಕಿಂತ ವಿಶೇಷವಾಗಿರುವುದು’ ಇದು ಸೇನಾಧೀಶ್ವರನಾದ ಯೆಹೋವನ ನುಡಿ. ‘ಈ ಸ್ಥಳದಲ್ಲಿ ಸಮಾಧಾನವನ್ನು ಅನುಗ್ರಹಿಸುವೆನು’” ಇದು ಸೇನಾಧೀಶ್ವರನಾದ ಯೆಹೋವನ ನುಡಿ.
[10] ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರ್ಷದ ಒಂಭತ್ತನೆಯ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ಯೆಹೋವನು ಪ್ರವಾದಿಯಾದ ಹಗ್ಗಾಯನ ಮೂಲಕ ಈ ವಾಕ್ಯವನ್ನು ದಯಪಾಲಿಸಿದನು.
[11] ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ನೀನು ಯಾಜಕರ ಹತ್ತಿರ ಹೋಗಿ,
[12] ಒಬ್ಬನು ತನ್ನ ವಸ್ತ್ರದ ಸೆರಗಿನಲ್ಲಿ ಮೀಸಲಿನ ಮಾಂಸವನ್ನು ಇಟ್ಟುಕೊಂಡು ಬರುತ್ತಿರುವಾಗ ಆ ಸೆರಗು ರೊಟ್ಟಿಯನ್ನಾಗಲಿ ಇಲ್ಲವೆ ಗುಗ್ಗರಿಯನ್ನಾಗಲಿ ಅಥವಾ ದ್ರಾಕ್ಷಾರಸವನ್ನಾಗಲಿ ಇಲ್ಲವೆ ಎಣ್ಣೆಯನ್ನು ಅಥವಾ ಯಾವ ಆಹಾರ ಪದಾರ್ಥವನ್ನಾಗಲಿ ಸೋಕಿದರೆ ಅವು ಪರಿಶುದ್ಧವಾಗುವುದೋ? ಎಂದು ಧರ್ಮವಿಧಿಯನ್ನು ವಿಚಾರಿಸು” ಪ್ರವಾದಿಯು ಹಾಗೆ ವಿಚಾರಿಸಲು ಯಾಜಕರು “ಇಲ್ಲ” ಎಂದು ಉತ್ತರಕೊಟ್ಟರು.
[13] ಆ ಮೇಲೆ ಹಗ್ಗಾಯನು, “ಹೆಣವನ್ನು ಮುಟ್ಟಿ ಅಶುದ್ಧನಾದವನು ಇವುಗಳಲ್ಲಿ ಯಾವುದನ್ನಾದರು ಸೋಕಿದರೆ ಅದು ಅಶುದ್ಧವಾಗುವುದೋ?” ಎಂದು ಕೇಳಿದ್ದಕ್ಕೆ ಯಾಜಕರು, “ಅಶುದ್ಧವೇ ಆಗುವುದು” ಎಂದು ಉತ್ತರಕೊಟ್ಟರು.
[14] ಆಗ ಹಗ್ಗಾಯನು ಮುಂದುವರಿಸುತ್ತಾ, ಜನರಿಗೆ ಹೀಗೆಂದನು, “ಯೆಹೋವನು ಇಂತೆನ್ನುತ್ತಾನೆ: ಇದರಂತೆಯೇ ಈ ಪ್ರಜೆ, ಈ ಜನಾಂಗ ಕೈಹಾಕುವ ಪ್ರತಿಯೊಂದು ಕೆಲಸ, ಇಲ್ಲಿಗೆ ತರುವ ಕಾಣಿಕೆ, ನೈವೇದ್ಯ, ಎಲ್ಲವೂ ನನಗೆ ಅಶುದ್ಧವಾಗಿಯೇ ಕಾಣುತ್ತಿದ್ದೆ.
[15] “ಯೆಹೋವನ ಆಲಯದ ನಿವೇಶನದಲ್ಲಿ ಕಲ್ಲಿನ ಮೇಲೆ ಕಲ್ಲಿಡುವ ಈ ಮೊದಲ ದಿನದ ಹಿಂದಿನ ಕಾಲವನ್ನು ನೆನಪಿಗೆ ತಂದುಕೊಳ್ಳಿರಿ;
[16] ಆ ಕಾಲದಲ್ಲೆಲ್ಲಾ ಒಬ್ಬನು ಇಪ್ಪತ್ತು ಸೇರಿನ ರಾಶಿಗೆ ಬಂದಾಗ ಹತ್ತು ಸೇರು ಧಾನ್ಯ ಮಾತ್ರ ಸಿಕ್ಕುತ್ತಿತ್ತಲ್ಲವೇ; ಐವತ್ತು ಸೇರು ದ್ರಾಕ್ಷಾರಸವನ್ನು ಮೊಗೆಯಬೇಕೆಂದು ತೊಟ್ಟಿಗೆ ಬಂದಾಗ ಇಪ್ಪತ್ತು ಮಾತ್ರ ದೊರೆಯುತ್ತಿತ್ತು.
[17] ನಾನು ನಿಮ್ಮ ದುಡಿತದ ಫಲವನ್ನೆಲ್ಲಾ ಆನೆಕಲ್ಲು ಮಳೆಯಿಂದಲೂ, ಬಿಸಿಗಾಳಿಗೂ ಹಾಳುಮಾಡಿ ನಿಮ್ಮನ್ನು ಬಾಧಿಸಿದರೂ, ನೀವು ನನ್ನ ಕಡೆಗೆ ತಿರುಗಿಕೊಳ್ಳಲಿಲ್ಲ” ಇದು ಯೆಹೋವನ ನುಡಿ.
[18] “ಜ್ಞಾಪಕಮಾಡಿಕೊಳ್ಳಿರಿ, ಯೆಹೋವನ ಆಲಯಕ್ಕೆ ಅಸ್ತಿವಾರ ಹಾಕಿದ ಈ ದಿನದ ಹಿಂದಿನ ಕಾಲವನ್ನು, ಅಂದರೆ ಒಂಭತ್ತನೆಯ ತಿಂಗಳಿನ ಇಪ್ಪತ್ತನಾಲ್ಕನೆಯ ಈ ದಿನದ ಹಿಂದಿನ ಕಾಲವನ್ನು ನೆನಪಿಗೆ ತಂದುಕೊಳ್ಳಿರಿ.
[19] ಕಣಜದಲ್ಲಿ ಕಾಳು ಇನ್ನು ಇದೆಯೋ? ದ್ರಾಕ್ಷಿ, ಅಂಜೂರ, ದಾಳಿಂಬೆ, ಒಲೀವ್ ಈ ಗಿಡಗಳು ಫಲಿಸಲಿಲ್ಲವಲ್ಲಾ. ಇದೇ ದಿನ ಮೊದಲುಗೊಂಡು ನಿಮ್ಮನ್ನು ಆಶೀರ್ವದಿಸುವೆನು.”
[20] ಒಂಭತ್ತನೆಯ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ಯೆಹೋವನು ಹಗ್ಗಾಯನಿಗೆ ಈ ಎರಡನೆಯ ವಾಕ್ಯವನ್ನು ದಯಪಾಲಿಸಿ,
[21] “ಯೆಹೂದ ದೇಶಾಧಿಪತಿಯಾದ ಜೆರುಬ್ಬಾಬೆಲನಿಗೆ ಹೀಗೆ ನುಡಿ, ನಾನು ಭೂಮ್ಯಾಕಾಶಗಳನ್ನು ಅದುರಿಸಿ,
[22] ರಾಜ್ಯಗಳ ಸಿಂಹಾಸನವನ್ನು ಕೆಡವಿ, ಜನಾಂಗಗಳ ಸಂಸ್ಥಾನ ಬಲವನ್ನು ಧ್ವಂಸಮಾಡಿ ರಥಗಳನ್ನೂ ಮತ್ತು ಅದರ ಸವಾರರನ್ನು ದೊಬ್ಬಿಬಿಡುವೆನು; ಕುದುರೆಗಳೂ ಹಾಗೂ ರಾಹುತರೂ ಬಿದ್ದುಹೋಗುವರು, ಪ್ರತಿಯೊಬ್ಬನೂ ತನ್ನ ಕಡೆಯವನ ಕತ್ತಿಯಿಂದ ಹತನಾಗುವನು.”
[23] ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಶೆಯಲ್ತೀಯೇಲನ ಮಗನೂ, ನನ್ನ ಸೇವಕನಾದ ಜೆರುಬ್ಬಾಬೆಲನೇ, ಆ ದಿನದಲ್ಲಿ ನಾನು ನಿನ್ನನ್ನು ತೆಗೆದುಕೊಂಡು ಮುದ್ರೆಯುಂಗುರವನ್ನಾಗಿ ಮಾಡಿಕೊಳ್ಳುವೆನು, ಇದಕ್ಕೇ ನಿನ್ನನ್ನು ಆರಿಸಿಕೊಂಡಿದ್ದೇನೆ” ಇದು ಸೇನಾಧೀಶ್ವರ ಯೆಹೋವನ ನುಡಿ.