[1] ಅಯ್ಯೋ, ಅವಿಧೇಯತೆ ಮಲಿನವೂ ಆದ ದಬ್ಬಾಳಿಕೆ ನಡೆಸುವ ನಗರದ ಗತಿಯನ್ನು ಏನು ಹೇಳಲಿ!
[2] ಅದು ದೇವರ ವಾಕ್ಯಕ್ಕಾಗಲೀ ಆತನ ತಿದ್ದುಪಾಟಿಗಾಗಲಿ ಕಿವಿಗೊಡಲಿಲ್ಲ, ಶಿಕ್ಷಣಕ್ಕೆ ಒಳಪಡಲೇ ಇಲ್ಲ, ಯೆಹೋವನಲ್ಲಿ ಭರವಸವಿಡಲಿಲ್ಲ, ತನ್ನ ದೇವರ ಸನ್ನಿಧಿಗೆ ಸಮೀಪಿಸಲಿಲ್ಲ.
[3] ಅವರೊಳಗಿನ ಮುಖ್ಯಾಧಿಕಾರಿಗಳು ಗರ್ಜಿಸುವ ಸಿಂಹಗಳು; ಅದರ ನ್ಯಾಯಾಧಿಪತಿಗಳು ಸಂಜೆಯ ತೋಳಗಳು; ಮರುದಿನ ಬೆಳಗ್ಗೆ ಕಡಿಯುವುದಕ್ಕೆ ಎಲುಬು ಸಹಾ ಬಿಡದ ಕ್ರೂರರು.
[4] ಅಲ್ಲಿರುವ ಪ್ರವಾದಿಗಳು ಬಡಾಯಿ ಕೊಚ್ಚಿಕೊಳ್ಳುವವರು, ವಿಶ್ವಾಸ ದ್ರೋಹಿಗಳು; ಅದರ ಯಾಜಕರು ಪವಿತ್ರಾಲಯವನ್ನು ಹೊಲೆಗೆಡಿಸಿದ್ದಾರೆ, ಧರ್ಮವಿಧಿಗಳನ್ನು ಭಂಗಮಾಡಿದ್ದಾರೆ.
[5] ಅದರ ಮಧ್ಯ ನೆಲೆಗೊಂಡಿರುವ ಯೆಹೋವನು ನೀತಿಸ್ವರೂಪನು; ಎಂದಿಗೂ ಅನ್ಯಾಯವನ್ನು ಮಾಡನು; ಪ್ರತಿ ಬೆಳಿಗ್ಗೆ ತನ್ನ ನ್ಯಾಯವನ್ನು ತಪ್ಪದೆ ಪ್ರಕಾಶಗೊಳಿಸುವನು; ಅನ್ಯಾಯಗಾರನೋ ನಾಚಿಕೆಪಡುವುದಿಲ್ಲ.
[6] ಯೆಹೋವನು ಇಂತೆನ್ನುತ್ತಾನೆ, “ನಾನು ಜನಾಂಗಗಳನ್ನು ಧ್ವಂಸಪಡಿಸಿದ್ದೇನೆ, ಅವುಗಳ ಕೋಟೆ ಕೊತ್ತಲುಗಳು ಪಾಳು ಬಿದ್ದವು; ಅವುಗಳ ಬೀದಿಗಳನ್ನು ಹಾಳುಮಾಡಿದ್ದೇನೆ; ಯಾರೂ ಹಾದುಹೋಗರು; ಅವುಗಳ ಪಟ್ಟಣಗಳು ನಾಶವಾದವು, ಜನರೇ ಇಲ್ಲ, ನಿರ್ನಾಮವಾಗಿವೆ.
[7] ಇದರಿಂದ ಯೆರೂಸಲೇಮೇ, ನೀನು ನನಗೆ ನಿಶ್ಚಯವಾಗಿ ಭಯಪಡುವಿ, ಶಿಕ್ಷಣಕ್ಕೆ ಒಳಪಡುವಿ, ನಿನ್ನ ನಿವಾಸವು ನಾಶವಾಗದು, ನಾನು ನಿನಗೆ ವಿಧಿಸಿದ್ದೊಂದೂ ತಗಲದು” ಎಂದು ಅಂದುಕೊಂಡೆನು; ಅವರಾದರೋ ಆತುರಗೊಂಡು ತಮ್ಮ ನಡತೆಯನ್ನೆಲ್ಲಾ ಕೆಡಿಸಿಕೊಂಡರು.
[8] ಯೆಹೋವನು ಇಂತೆನ್ನುತ್ತಾನೆ, “ಹೀಗಿರಲು ನನಗಾಗಿ ಕಾದುಕೊಂಡಿರಿ, ನಾನು ಬೇಟೆಹಿಡಿಯಲಿಕ್ಕೆ ಏಳುವ ದಿನವನ್ನು ಎದುರುನೋಡಿರಿ; ಜನಾಂಗರಾಜ್ಯಗಳ ಮೇಲೆ ನನ್ನ ರೌದ್ರವನ್ನು, ಹೌದು, ನನ್ನ ಉಗ್ರಕೋಪವನ್ನೆಲ್ಲಾ ಹೊಯ್ದು ಬಿಡುವುದಕ್ಕಾಗಿ ಆ ಜನಾಂಗಗಳನ್ನು ಸೇರಿಸಿ ಆ ರಾಜ್ಯಗಳನ್ನು ಕೂಡಿಸಬೇಕೆಂದು ತೀರ್ಮಾನಿಸಿಕೊಂಡಿದ್ದೇನೆ, ಲೋಕವೆಲ್ಲಾ ನನ್ನ ರೋಷಾಗ್ನಿಗೆ ತುತ್ತಾಗುವುದಷ್ಟೇ.
[9] “ಆಗ ಎಲ್ಲರೂ ಒಂದೇ ಮನಸ್ಸಿನಿಂದ ಯೆಹೋವನನ್ನು ಸೇವಿಸಿ ಆತನ ಹೆಸರನ್ನೆತ್ತಿ ಪ್ರಾರ್ಥಿಸುವಂತೆ ಜನಾಂಗಗಳವರ ತುಟಿಗಳನ್ನು ಮಾರ್ಪಡಿಸಿ ಶುದ್ಧಿಮಾಡುವೆನು.
[10] ಚದರಿಹೋಗಿರುವ ನನ್ನ ಜನರು, ನನ್ನ ಭಕ್ತರು, ಕೂಷಿನ ನದಿಗಳ ಆಚೆಯಿಂದಲೂ ನನಗೆ ಕಾಣಿಕೆಯನ್ನು ತಂದು ಸಮರ್ಪಿಸುವರು.
[11] “ನೀನು ನನಗೆ ಮಾಡಿದ ನಾನಾ ದುಷ್ಕೃತ್ಯಗಳು ಮುಂದಿನ ಆ ಕಾಲದಲ್ಲಿ ನಿನಗೆ ನಾಚಿಕೆಗೆ ಈಡಾಗುವವು; ಆಗ ತಮ್ಮ ಅತಿಗರ್ವದಿಂದ ಮೆರೆಯುವವರನ್ನು ನಿನ್ನೊಳಗಿಂದ ತೊಲಗಿಸಿಬಿಡುವೆನು; ಅಂದಿನಿಂದ ನನ್ನ ಪವಿತ್ರಪರ್ವತದಲ್ಲಿ ಗರ್ವಪಡದೆ ಇರುವಿ.
[12] ದೀನದರಿದ್ರ ಜನರನ್ನು ನಿನ್ನಲ್ಲಿ ಉಳಿಸುವೆನು; ಅವರು ಯೆಹೋವನ ನಾಮವನ್ನು ಆಶ್ರಯಿಸಿಕೊಳ್ಳುವರು,
[13] ಇಸ್ರಾಯೇಲಿನಲ್ಲಿ ಉಳಿದವರು ಅನ್ಯಾಯವನ್ನು ಮಾಡರು, ಸುಳ್ಳಾಡರು; ಅವರ ಬಾಯಲ್ಲಿ ಮೋಸದ ನಾಲಿಗೆಯು ಇರದು; ಕುರಿ ಮಂದೆಯಂತೆ ಮೇದು ಮಲಗಿಕೊಳ್ಳುವರು, ಅವರನ್ನು ಯಾರೂ ಹೆದರಿಸರು.”
[14] ಚೀಯೋನ್ ಕುವರಿಯೇ, ಹರ್ಷಧ್ವನಿಗೈ! ಇಸ್ರಾಯೇಲೇ, ಜಯಘೋಷಮಾಡು! ಯೆರೂಸಲೇಮ್ ಕುವರಿಯೇ, ಹೃದಯಪೂರ್ವಕವಾಗಿ ಆನಂದಿಸು, ಉಲ್ಲಾಸಿಸು!
[15] ನಿನಗೆ ವಿಧಿಸಿದ ದಂಡನೆಯನ್ನು ಯೆಹೋವನು ತಪ್ಪಿಸಿದ್ದಾನೆ, ನಿನ್ನ ಶತ್ರುವನ್ನು ತಳ್ಳಿಬಿಟ್ಟಿದ್ದಾನೆ; ಇಸ್ರಾಯೇಲಿನ ಅರಸನಾದ ಯೆಹೋವನು ನಿನ್ನ ಮಧ್ಯದಲ್ಲಿದ್ದಾನೆ; ಇನ್ನು ಕೇಡಿಗೆ ಅಂಜದಿರುವಿ.
[16] ಆ ದಿನದಲ್ಲಿ ಯೆರೂಸಲೇಮಿಗೆ, “ಚೀಯೋನೇ, ಭಯಪಡಬೇಡ, ನಿನ್ನ ಕೈಗಳು ಜೋಲುಬೀಳದಿರಲಿ;
[17] ನಿನ್ನ ದೇವರಾದ ಯೆಹೋವನು ನಿನ್ನ ಮಧ್ಯದಲ್ಲಿ ಶೂರನಾಗಿದ್ದಾನೆ, ನಿನ್ನನ್ನು ರಕ್ಷಿಸುವನು; ನಿನ್ನಲ್ಲಿ ಉಲ್ಲಾಸಿಸೇ ಉಲ್ಲಾಸಿಸುವನು; ತನ್ನ ಪ್ರೀತಿಯಲ್ಲಿ ನಿನ್ನ ಜೀವನವನ್ನು ನೂತನಗೊಳಿಸುವನು; ನಿನ್ನಲ್ಲಿ ಆನಂದಿಸಿ ಹರ್ಷಧ್ವನಿಗೈಯುವನು.
[18] ಅವಮಾನವು ನಮ್ಮ ಪಟ್ಟಣದ ಮೇಲೆ ಹೊರೆಯಾಗಿ ಕಾಡುತ್ತಿದೆ ಎಂದು ತಿಳಿದು ಹಬ್ಬ ಉತ್ಸವಗಳಿಗೆ ದೂರವಾಗಿ ಶೋಕಿಸುತ್ತಿರುವ ನಿನ್ನವರನ್ನು ಒಟ್ಟಿಗೆ ಬರಮಾಡುವೆನು.
[19] ಆಹಾ, ಆ ಕಾಲದಲ್ಲಿ ನಿನ್ನನ್ನು ಬಾಧಿಸುವವರಿಗೆ ತಕ್ಕದ್ದನ್ನು ಮಾಡುವೆನು; ನಿನ್ನಲ್ಲಿ ಕುಂಟುವವರನ್ನು ರಕ್ಷಿಸುವೆನು, ಚದರಿ ಹೋದವರನ್ನು ಕೂಡಿಸುವೆನು; ಅಂತು ಲೋಕದಲ್ಲೆಲ್ಲಾ ಅವಮಾನಪಟ್ಟವರಿಗೆ ಸ್ತೋತ್ರ ಕೀರ್ತನೆಗಳನ್ನು ಉಂಟುಮಾಡುವೆನು.
[20] ಆ ಕಾಲದಲ್ಲಿ ನಿಮ್ಮನ್ನು ಕರೆದು ತರುವೆನು, ಹೌದು, ಆ ಕಾಲದಲ್ಲಿ ನಿಮ್ಮನ್ನು ಒಟ್ಟುಗೂಡಿಸುವೆನು. ನಾನು ನಿಮ್ಮ ದುರವಸ್ಥೆಯನ್ನು ನಿಮ್ಮ ಕಣ್ಣೆದುರಿಗೇ ತಪ್ಪಿಸುವಾಗ ನಿಮ್ಮನ್ನು ಲೋಕದ ಸಕಲ ಜನಾಂಗಗಳಲ್ಲಿ ಕೀರ್ತಿ ಸ್ತೋತ್ರಗಳಿಗೆ ಗುರಿಮಾಡುವೆನು” ಇದು ಯೆಹೋವನ ನುಡಿ.