Skip to content
Opens in a new window
Listen to this chapter • 6:37

[1] ಅರ್ತಷಸ್ತ ರಾಜನ ಆಳ್ವಿಕೆಯಲ್ಲಿ ನನ್ನೊಂದಿಗೆ ಬಾಬಿಲೋನಿನಿಂದ ಹೊರಟ ಗೋತ್ರಪ್ರಧಾನರ ಮತ್ತು ಅವರ ಸಂತಾನದವರ ವಿವರಣೆ.

[2] ಫೀನೆಹಾಸನ ಸಂತಾನದವರಲ್ಲಿ ಗೇರ್ಷೋಮ್; ಈತಾಮಾರನ ಸಂತಾನದವರಲ್ಲಿ ದಾನಿಯೇಲ್; ದಾವೀದನ ಸಂತಾನದವರಲ್ಲಿ ಶೆಕನ್ಯನ ಮೊಮ್ಮಗನಾದ ಹಟ್ಟೂಷ್.

[3] ಪರೋಷಿನವರಲ್ಲಿ ಜೆಕರ್ಯನೂ ಅವನೊಡನೆ ಶೆಕನ್ಯನ ವಂಶಕ್ಕೆ ಸೇರುವ 150 ಗಂಡಸರು.

[4] ಪಹತ್ ಮೋವಾಬಿನವರಲ್ಲಿ ಜೆರಹ್ಯನ ಮಗನಾದ ಎಲ್ಯೆಹೋವೇನೈಯೂ ಮತ್ತು ಅವನೊಡನೆ 200 ಗಂಡಸರು.

[5] ಜತ್ತೂವಿನವರಲ್ಲಿ ಯಹಜೀಯೇಲನ ಮಗನಾದ ಶೆಕನ್ಯನೂ ಹಾಗೂ ಅವನೊಡನೆ 300 ಗಂಡಸರು.

[6] ಆದೀನನವರಲ್ಲಿ ಯೋನಾತಾನನ ಮಗನಾದ ಎಬೆದನೂ ಅವನೊಡನೆ 50 ಗಂಡಸರು.

[7] ಏಲಾಮಿನವರಲ್ಲಿ ಅತಲ್ಯನ ಮಗನಾದ ಯೆಶಾಯನೂ ಅವನೊಡನೆ 70 ಗಂಡಸರು.

[8] ಶೆಫಟ್ಯನವರಲ್ಲಿ ಮಿಕಾಯೇಲನ ಮಗನಾದ ಜೆಬದ್ಯನೂ ಅವನೊಡನೆ 80 ಗಂಡಸರು.

[9] ಯೋವಾಬನವರಲ್ಲಿ ಯೆಹೀಯೇಲನ ಮಗನಾದ ಓಬದ್ಯನೂ ಅವನೊಡನೆ 218 ಗಂಡಸರು.

[10] ಬಾನೀಯವರಲ್ಲಿ ಯೋಸಿಫ್ಯನ ಮಗನಾದ ಶಿಲೋಮೀತನೂ ಅವನೊಡನೆ 160 ಗಂಡಸರು.

[11] ಬೇಬೈಯವರಲ್ಲಿ ಬೇಬೈಯ ಮಗನಾದ ಜೆಕರ್ಯನೂ ಅವನೊಡನೆ 28 ಗಂಡಸರು.

[12] ಅಜ್ಗಾದನವರಲ್ಲಿ ಹಕ್ಕಾಟಾನನ ಮಗನಾದ ಯೋಹಾನಾನನೂ ಅವನೊಡನೆ 110 ಗಂಡಸರು.

[13] ಅದೋನೀಕಾಮಿನವರಲ್ಲಿ ಕಡೆಯವರಾದ ಎಲೀಫೆಲೆಟ್, ಎಮೀಯೇಲ್, ಶೆಮಾಯ ಎಂಬ ಹೆಸರುಳ್ಳವರೂ ಅವರೊಡನೆ 60 ಗಂಡಸರು.

[14] ಬಿಗ್ವೈಯವರಲ್ಲಿ ಜಕ್ಕೂರನ ಮಗನಾದ ಊತೈಯೂ ಅವನೊಡನೆ 70 ಗಂಡಸರು.

[15] ಅಹವಾ ಪ್ರಾಂತ್ಯದ ಕಡೆಗೆ ಹರಿಯುವ ನದಿಯ ಬಳಿಯಲ್ಲಿ ನಾನು ಇವರನ್ನು ಕೂಡಿಸಿದೆನು. ಅಲ್ಲಿ ಮೂರು ದಿನ ಪಾಳೆಯಮಾಡಿಕೂಂಡ ಮೇಲೆ ಸಾಧಾರಣ ಜನರೂ, ಯಾಜಕರೂ ಬಂದಿದ್ದಾರೆ, ಲೇವಿಯರಲ್ಲಿ ಯಾರೂ ಬರಲಿಲ್ಲ ಎಂದು ಕಂಡುಬಂತು.

[16] ಆದುದರಿಂದ ನಾನು ಪ್ರಧಾನರಾದ ಎಲೀಯೆಜೆರ್, ಅರೀಯೇಲ್, ಶೆಮಾಯ, ಎಲ್ನಾತಾನ್, ಯಾರೀಬ್, ಎಲ್ನಾತಾನ್, ನಾತಾನ್, ಜೆಕರ್ಯ, ಮೆಷುಲ್ಲಾಮ್ ಇವರನ್ನೂ, ಪಂಡಿತರಾದ ಯೋಯಾರೀಬ್ ಎಲ್ನಾತಾನ್ ಇವರನ್ನೂ ಕರೆಯಿಸಿದೆನು.

[17] ಅವರ ತರುವಾಯ ನಾನು ಕಾಸಿಫ್ಯ ಊರಿನ ಮುಖ್ಯಸ್ಥನಾದ ಇದ್ದೋವಿನ ಬಳಿಗೆ ಹೋಗಬೇಕೆಂದು ಅಪ್ಪಣೆಮಾಡಿ, ನಮ್ಮ ಬಳಿಗೆ ದೇವಾಲಯ ಸೇವಕರನ್ನು ಕಳುಹಿಸುವ ಹಾಗೆ, ಅವರು ಇದ್ದೋವಿಗೂ ಕಾಸಿಫ್ಯ ಊರಿನಲ್ಲಿ ವಾಸಿಸುತ್ತಿದ್ದ ಅವನ ಸಹೋದರರಾದ ದೇವಸ್ಥಾನದ ಪರಿಚಾರಕರಿಗೂ ಹೇಳತಕ್ಕ ಮಾತುಗಳನ್ನು ಹೇಳಿಕೊಟ್ಟೆನು. ಆ ಊರಿನವರು ದೇವದಾಸವರ್ಗದವರಷ್ಟೆ.

[18] ನಮ್ಮ ದೇವರ ಕೃಪಾಶೀರ್ವಾದ ನಮಗೆ ದೊರೆಕ್ಕಿದ್ದರಿಂದ ಅವರು ಇಸ್ರಾಯೇಲನ ಮಗನಾದ ಲೇವಿಯ ಕುಲದ ಮಹ್ಲೀ ಸಂತಾನದವರಲ್ಲಿ ಈಸ್ಸೆಕೆಲನನ್ನೂ, ಶೇರೇಬ್ಯನನ್ನೂ ಅವನ ಪುತ್ರಭ್ರಾತೃಗಳಲ್ಲಿ ಹದಿನೆಂಟು ಜನರನ್ನೂ,

[19] ಮೆರಾರೀಯರಲ್ಲಿ ಹಷಬ್ಯನನ್ನೂ ಅವನೊಡನೆ ಯೆಶಾಯನನ್ನೂ, ಅವರ ಪುತ್ರ ಸಹೋದರರಲ್ಲಿ ಇಪ್ಪತ್ತು ಜನರು,

[20] ದಾವೀದನೂ ಅವನ ಮುಖ್ಯಸ್ಥರನ್ನು ಲೇವಿಯರೊಂದಿಗೆ ಸೇವೆಗಾಗಿ ಕೊಟ್ಟು ದೇವಸ್ಥಾನ ಪರಿಚಾರಕರಲ್ಲಿ ಇನ್ನೂರಿಪ್ಪತ್ತು ಜನರನ್ನೂ ನಮ್ಮ ಬಳಿಗೆ ಕರೆದುಕೊಂಡು ಬಂದರು. ಇವರೆಲ್ಲರ ಹೆಸರುಗಳು ಪಟ್ಟಿಯಲ್ಲಿದ್ದವು.

[21] ಆ ಮೇಲೆ ಆ ಅಹವಾ ನದಿಯ ಬಳಿಯಲ್ಲಿ ನಾವು ಉಪವಾಸದಿಂದಿದ್ದು, ನಮ್ಮ ದೇವರ ಮುಂದೆ ನಮ್ಮನ್ನು ತಗ್ಗಿಸಿಕೊಂಡು, ನಮಗೂ ನಮ್ಮ ಮನೆಯವರಿಗೂ ನಮ್ಮ ಎಲ್ಲಾ ಆಸ್ತಿಗೂ ಪ್ರಯಾಣದಲ್ಲಿ ಶುಭವನ್ನು ಬೇಡಿಕೊಳ್ಳಬೇಕೆಂದು ಉಪವಾಸವನ್ನು ಪ್ರಕಟಿಸಿದನು.

[22] ನಮ್ಮ ದೇವರ ಹಸ್ತವು ಆತನ ಎಲ್ಲಾ ಶರಣಾರ್ಥಿಗಳನ್ನೂ ಪಾಲಿಸುವುದು; ಆತನನ್ನು ತೊರೆದುಬಿಟ್ಟವರೆಲ್ಲರೂ ಆತನ ಉಗ್ರವಾದ ಕೋಪಕ್ಕೆ ಗುರಿಯಾಗುವರು. ದಾರಿಯಲ್ಲಿ ನಮ್ಮನ್ನು ಶತ್ರುಗಳಿಂದ ರಕ್ಷಿಸುವುದಕ್ಕೋಸ್ಕರ ಸೈನ್ಯವನ್ನೂ, ಅಶ್ವಬಲವನ್ನೂ ಕೊಡಲು ಅರಸನಿಂದ ಸಹಾಯ ಕೇಳಲು ನಾಚಿಕೊಂಡಿದ್ದೆನು.

[23] ಆದುದರಿಂದ ನಾವು ಉಪವಾಸಮಾಡಿ ದೇವರನ್ನು ಪ್ರಾರ್ಥಿಸಲು ಆತನು ನಮಗೆ ಪ್ರಸನ್ನನಾದನು.

[24] ಅನಂತರ ನಾನು ಯಾಜಕರ ಮುಖ್ಯಸ್ಥರಲ್ಲಿ ಶೇರೇಬ್ಯ, ಹಷಬ್ಯ ಇವರ ಸಹೋದರರಲ್ಲಿ ಹತ್ತು ಜನರನ್ನೂ ಆರಿಸಿಕೊಂಡು ಅರಸನಿಂದಲೂ, ಅವನ ಮಂತ್ರಿಗಳಿಂದಲೂ, ಸರದಾರರಿಂದಲೂ ಮತ್ತು

[25] ಇಸ್ರಾಯೇಲರಿಂದಲೂ ನಮ್ಮ ದೇವರ ಆಲಯಕ್ಕೋಸ್ಕರ ಕಾಣಿಕೆಯಾಗಿ ಕೊಡಲ್ಪಟ್ಟ ಬೆಳ್ಳಿ ಬಂಗಾರವನ್ನೂ, ಸಾಮಾನುಗಳನ್ನೂ ತೂಕಮಾಡಿ ಅವರಿಗೆ ಒಪ್ಪಿಸಿದೆನು.

[26] ಅವರ ಕೈಯಲ್ಲಿ ಕೊಟ್ಟ ಬೆಲೆಬಾಳುವ ಸಾಮಾನುಗಳ ತೂಕ: ಬೆಳ್ಳಿಯು ಆರುನೂರೈವತ್ತು ತಲಾಂತು, ಬಂಗಾರವು ನೂರು ತಲಾಂತು,

[27] ಬಂಗಾರದ ಇಪ್ಪತ್ತು ಬಟ್ಟಲುಗಳು ಪ್ರತಿಯೊಂದೂ ಸಾವಿರ ಪವನು; ಇವುಗಳಲ್ಲದೆ ಶ್ರೇಷ್ಠವಾದ ಶುಭ್ರತಾಮ್ರದ ಎರಡು ಪಾತ್ರೆಗಳಿದ್ದವು. ಅವು ಬಂಗಾರದಷ್ಟು ಬೆಲೆಯುಳ್ಳವುಗಳು.

[28] ನಾನು ಅವರಿಗೆ, “ನೀವು ಯೆಹೋವನ ಸ್ವಕೀಯರು; ಆ ಪಾತ್ರೆಗಳೂ, ದೇವರ ವಸ್ತುಗಳು; ಆ ಬೆಳ್ಳಿಬಂಗಾರವೂ ನಿಮ್ಮ ಪೂರ್ವಿಕರ ದೇವರಾದ ಯೆಹೋವನಿಗೋಸ್ಕರ ಸಮರ್ಪಿತವಾದ ಕಾಣಿಕೆಯು.

[29] ಆದುದರಿಂದ ನೀವು ಜಾಗರೂಕರಾಗಿದ್ದು ಯೆರೂಸಲೇಮಿನಲ್ಲಿರುವ ಯಾಜಕರ ಮತ್ತು ಲೇವಿಯರ ಪ್ರಧಾನರ ಮುಂದೆಯೂ ಇವುಗಳನ್ನು ತೂಕಮಾಡಿ ಯೆಹೋವನ ಆಲಯದ ಕೊಠಡಿಗಳಲ್ಲಿ ಇಡುವವರೆಗೂ ಕಾಯಿರಿ” ಎಂದು ಹೇಳಿದನು.

[30] ಆ ಯಾಜಕರೂ ಮತ್ತು ಲೇವಿಯರೂ, ಯೆರೂಸಲೇಮಿನ ದೇವಾಲಯಕ್ಕೆ ತಲುಪಿಸುವುದಕ್ಕೋಸ್ಕರ ಬೆಳ್ಳಿಬಂಗಾರವನ್ನೂ, ಉಪಕರಣಗಳನ್ನೂ ತೂಕಮಾಡಿಸಿ ತಮ್ಮ ವಶದಲ್ಲಿಟ್ಟುಕೊಂಡರು.

[31] ನಾವು ಮೊದಲನೆಯ ತಿಂಗಳಿನ ಹನ್ನೆರಡನೆಯ ದಿನದಲ್ಲಿ ಅಹವಾ ನದಿಯನ್ನು ಬಿಟ್ಟು ಯೆರೂಸಲೇಮಿಗೆ ಹೊರಟೆವು. ನಮ್ಮ ದೇವರ ಹಸ್ತವು ನಮ್ಮನ್ನು ಪಾಲಿಸುತ್ತಾ ಇತ್ತು. ಆತನು ಶತ್ರುಗಳ ಮತ್ತು ದಾರಿಯಲ್ಲಿ ಹೊಂಚುಹಾಕುವವರ ಕೈಗೆ ಸಿಕ್ಕದಂತೆ ನಮ್ಮನ್ನು ತಪ್ಪಿಸಿದನು.

[32] ನಾವು ಯೆರೂಸಲೇಮನ್ನು ಸೇರಿ ಮೂರು ದಿನ ವಿಶ್ರಮಿಸಿಕೊಂಡೆವು.

[33] ನಾಲ್ಕನೆಯ ದಿನ ನಮ್ಮ ದೇವರ ಆಲಯದಲ್ಲಿ ಊರೀಯನ ಮಗನಾದ ಮೆರೇಮೋತ್ ಎಂಬ ಯಾಜಕನಿಗೆ ಬೆಳ್ಳಿಬಂಗಾರವನ್ನೂ ಉಪಕರಣಗಳನ್ನೂ ತೂಕಮಾಡಿ ಒಂದೊಂದಾಗಿ ಎಣಿಸಿಕೊಟ್ಟೆವು. ಫೀನೆಹಾಸನ ವಂಶದವನಾದ ಎಲ್ಲಾಜಾರ್, ಯೇಷೂವನ ಮಗನಾದ ಯೋಜಾಬಾದ್, ಬಿನ್ನೂಯನ ಮಗನಾದ ನೋವದ್ಯ ಎಂಬ ಲೇವಿಯರು ಅವನ ಜೊತೆಯಲ್ಲಿದ್ದರು.

[34] ಆಗಲೇ ಎಲ್ಲವುಗಳ ತೂಕವು ಲಿಖಿತವಾಯಿತು.

[35] ದೇಶಾಂತರದ ಸೆರೆಯಿಂದ ಹಿಂತಿರುಗಿ ಬಂದವರು ಇಸ್ರಾಯೇಲರ ದೇವರಿಗೆ ತೊಂಭತ್ತಾರು ಟಗರುಗಳನ್ನೂ, ಎಪ್ಪತ್ತೇಳು ಕುರಿಮರಿಗಳನ್ನೂ, ಸಮಸ್ತ ಇಸ್ರಾಯೇಲರ ನಿಮಿತ್ತವಾಗಿ ಹನ್ನೆರಡು ಹೋತಗಳನ್ನೂ ಸರ್ವಾಂಗಹೋಮವಾಗಿ ಸಮರ್ಪಿಸಿದರು. ಇವೆಲ್ಲಾ ಯೆಹೋವನಿಗೆ ಸರ್ವಾಂಗಹೋಮವೇ.

[36] ಆ ಮೇಲೆ ಅವರು ರಾಜಶಾಸನವನ್ನು ರಾಜೋದ್ಯೋಗಸ್ಥರಿಗೂ, ಹೊಳೆಯಾಚೆಯ ಪ್ರದೇಶಾಧಿಪತಿಗಳಿಗೂ ಒಪ್ಪಿಸಿದರು. ಇವರು ಜನರಿಗೂ ಮತ್ತು ದೇವಾಲಯಕ್ಕೂ ಸಹಾಯಮಾಡಿದರು.

ಎಜ್ರನು — Chapters