[1] ಇದಾದ ಮೇಲೆ ಪರ್ಷಿಯ ರಾಜನಾದ ಅರ್ತಷಸ್ತನ ಆಳ್ವಿಕೆಯಲ್ಲಿ ಎಜ್ರನು ಬಾಬಿಲೋನಿನಿಂದ ಬಂದನು. ಇವನು ಸೆರಾಯನ ಮಗ; ಸೆರೆಯನು ಅಜರ್ಯನ ಮಗ; ಇವನು ಹಿಲ್ಕೀಯನ ಮಗ.
[2] ಹಿಲ್ಕೀಯನು ಶಲ್ಲೂಮನ ಮಗ; ಇವನು ಚಾದೋಕನ ಮಗ; ಇವನು ಅಹೀಟೂಬನ ಮಗ; ಇವನು ಅಮರ್ಯನ ಮಗ.
[3] ಅಮರ್ಯನು ಅಜರ್ಯನ ಮಗ; ಇವನು ಮೆರಾಯೋತನ ಮಗ.
[4] ಮೆರಾಯೋತನು ಜೆರಹ್ಯನ ಮಗ; ಇವನು ಉಜ್ಜೀಯ ಮಗ; ಇವನು ಬುಕ್ಕೀಯ ಮಗ.
[5] ಬುಕ್ಕೀಯನು ಅಬೀಷೂವನ ಮಗ; ಇವನು ಫೀನೆಹಾಸನ ಮಗ; ಇವನು ಎಲ್ಲಾಜಾರನ ಮಗ; ಇವನು ಪ್ರಧಾನಯಾಜಕನಾದ ಆರೋನನ ಮಗ.
[6] ಎಜ್ರನು ಇಸ್ರಾಯೇಲ್ ದೇವರಾದ ಯೆಹೋವನಿಂದ ದೊರಕಿದ ಮೋಶೆಯ ಧರ್ಮೋಪದೇಶದಲ್ಲಿ ಪಾರಂಗತನಾದ ಶಾಸ್ತ್ರಿಯಾಗಿದ್ದನು. ಅವನ ದೇವರಾದ ಯೆಹೋವನ ಹಸ್ತಪಾಲನೆಯಿಂದ ಅರಸನು ಅವನಿಗೆ ಇಷ್ಟವಾದದ್ದನ್ನೆಲ್ಲಾ ಅನುಗ್ರಹಿಸಿದನು.
[7] ಅವನೊಡನೆ ಕೆಲವು ಜನರು ಇಸ್ರಾಯೇಲರೂ, ಯಾಜಕರೂ, ಲೇವಿಯರೂ, ಗಾಯಕರೂ, ದ್ವಾರಪಾಲಕರೂ ಮತ್ತು ದೇವಸ್ಥಾನದಾಸರೂ ಅರ್ತಷಸ್ತ ಅರಸನ ಆಳ್ವಿಕೆಯ ಏಳನೆಯ ವರ್ಷದಲ್ಲಿ ಯೆರೂಸಲೇಮಿಗೆ ಬಂದರು.
[8] ಎಜ್ರನು ಆ ಅರಸನ ಆಳ್ವಿಕೆಯ ಏಳನೆಯ ವರ್ಷದ ಐದನೆಯ ತಿಂಗಳಲ್ಲಿ ಯೆರೂಸಲೇಮನ್ನು ತಲುಪಿದನು.
[9] ಅವನು ಮೊದಲನೆಯ ತಿಂಗಳಿನ ಮೊದಲ ದಿನದಲ್ಲಿ ಬಾಬಿಲೋನಿನಿಂದ ಹೊರಟನು; ತನ್ನ ದೇವರ ಕೃಪಾ ಹಸ್ತಪಾಲನೆಯಿಂದ ಐದನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಯೆರೂಸಲೇಮಿಗೆ ಬಂದು ಸೇರಿದನು.
[10] ಎಜ್ರನು ಯೆಹೋವನ ಧರ್ಮಶಾಸ್ತ್ರವನ್ನು ಅಭ್ಯಾಸಿಸಿ ಅನುಸರಿಸಲಿಕ್ಕೂ, ಇಸ್ರಾಯೇಲರಿಗೆ ಅದರ ವಿಧಿನ್ಯಾಯಗಳನ್ನು ಕಲಿಸಬೇಕೆಂದು ದೃಢಮಾಡಿಕೊಂಡಿದ್ದನು.
[11] ಯಾಜಕನು ಮತ್ತು ಶಾಸ್ತ್ರಿಯೂ, ಇಸ್ರಾಯೇಲರಿಗಾಗಿ ಕೊಡಲ್ಪಟ್ಟ ಯೆಹೋವನ ಆಜ್ಞಾವಿಧಿಸೂತ್ರಗಳಲ್ಲಿ ವಿದ್ವಾಂಸನೂ ಆಗಿದ್ದ ಎಜ್ರನಿಗೆ ಅರಸನಾದ ಅರ್ತಷಸ್ತನು ಕೊಟ್ಟ ಪತ್ರ.
[12] “ರಾಜಾಧಿರಾಜನಾದ ಅರ್ತಷಸ್ತನು, ಯಾಜಕನೂ ಪರಲೋಕದೇವರ ಧರ್ಮಶಾಸ್ತ್ರದಲ್ಲಿ ಪ್ರವೀಣನೂ ಆದ ಎಜ್ರನಿಗೆ ತಿಳಿಸುವುದೇನೆಂದರೆ,
[13] ನನ್ನ ರಾಜ್ಯದಲ್ಲಿರುವ ಇಸ್ರಾಯೇಲರು ತಮ್ಮ ಯಾಜಕರು ಮತ್ತು ಲೇವಿಯರು ಹಾಗು ಯೆರೂಸಲೇಮಿಗೆ ಹೋಗಬೇಕೆಂದು ಮನಸ್ಸುಳ್ಳವರೆಲ್ಲರೂ ನಿನ್ನ ಸಂಗಡ ಹೋಗಬಹುದೆಂದು ಅಪ್ಪಣೆ ಕೊಡುತ್ತಿದ್ದೇನೆ.
[14] ನೀನು ಹೋಗಿ ಯೆಹೂದದವರ ಮತ್ತು ಯೆರೂಸಲೇಮಿನವರ ಆಚರಣೆಯು ನಿನ್ನ ಕೈಯಲ್ಲಿರುವ ನಿನ್ನ ದೇವರ ಧರ್ಮೋಪದೇಶಗ್ರಂಥಕ್ಕೆ ಅನುಸಾರವಾಗಿದೆಯೋ ಇಲ್ಲವೋ ಎಂದು ಪರಿಶೀಲಿಸಬೇಕು.
[15] ಮತ್ತು ಅರಸನೂ ಅವನ ಮಂತ್ರಿಗಳೂ ಯೆರೂಸಲೇಮಿನಲ್ಲಿ ವಾಸಿಸುತ್ತಿರುವ ಇಸ್ರಾಯೇಲ್ ದೇವರಿಗೊಸ್ಕರ ಕಾಣಿಕೆಯಾಗಿ ಸಮರ್ಪಿಸಿದ ಬೆಳ್ಳಿಬಂಗಾರ,
[16] ಬಾಬೆಲ್ ಸಂಸ್ಥಾನದಲ್ಲಿ ನಿನಗೆ ಸಿಕ್ಕುವ ಬೆಳ್ಳಿಬಂಗಾರ, ಇಸ್ರಾಯೇಲ್ ಸಾಧಾರಣಜನರೂ, ಯಾಜಕರೂ, ಯೆರೂಸಲೇಮಿನಲ್ಲಿರುವ ತಮ್ಮ ದೇವರ ಆಲಯಕ್ಕಾಗಿ ಸ್ವ ಇಚ್ಛೆಯಿಂದ ಕೊಡುವ ಕಾಣಿಕೆ ಇವುಗಳನ್ನು ಅಲ್ಲಿಗೆ ಒಪ್ಪಿಸಬೇಕು; ಹೀಗೆಂದು ನಾನೂ ಮತ್ತು ನನ್ನ ಏಳು ಜನ ಮಂತ್ರಿಗಳೂ ನಿನ್ನನ್ನು ಕಳುಹಿಸುತ್ತೇವೆ.
[17] ನೀನು ಈ ಹಣದಿಂದ ಹೋರಿ, ಟಗರು, ಕುರಿ ಇವುಗಳನ್ನೂ ಮತ್ತು ಇವುಗಳೊಡನೆ ಸಮರ್ಪಣೆಯಾಗತಕ್ಕ ಧಾನ್ಯದ್ರವ್ಯ, ಪಾನದ್ರವ್ಯಗಳನ್ನೂ ಕೊಂಡುಕೊಂಡು ಅವುಗಳನ್ನು ಯೆರೂಸಲೇಮಿನಲ್ಲಿರುವ ನಿಮ್ಮ ದೇವರ ಆಲಯದ ಯಜ್ಞವೇದಿಯ ಮೇಲೆ ಸಮರ್ಪಿಸಬೇಕು.
[18] ಉಳಿದ ಬೆಳ್ಳಿಬಂಗಾರವನ್ನು, ನಿಮ್ಮ ದೇವರ ಆಜ್ಞೆಯನ್ನು ಅನುಸರಿಸಿ, ನಿನಗೂ ನಿನ್ನ ಸಹೋದರರಿಗೂ ಸರಿತೋರುವಂತೆ ವೆಚ್ಚಮಾಡಿರಿ.
[19] ನಿನ್ನ ದೇವರ ಆಲಯದ ಆರಾಧನೆಗಾಗಿ ನಿನ್ನ ವಶಕ್ಕೆ ಕೊಡುವ ಸಾಮಾನುಗಳನ್ನು ಯೆರೂಸಲೇಮಿನ ದೇವರ ಸನ್ನಿಧಿಗೆ ತೆಗೆದುಕೊಂಡು ಹೋಗು.
[20] ನಿನ್ನ ದೇವರ ಆಲಯಕ್ಕೋಸ್ಕರ ನೀನು ಬೇರೆ ಯಾವುದನ್ನಾದರೂ ವೆಚ್ಚಮಾಡಬೇಕಾದರೆ ಅದನ್ನು ರಾಜಭಂಡಾರದಿಂದ ತೆಗೆದುಕೊಂಡು ವೆಚ್ಚಮಾಡು.
[21] “ಅರ್ತಷಸ್ತ ರಾಜನಾದ ನಾನು ಹೊಳೆಯಾಚೆಯ ಪ್ರಾಂತ್ಯಗಳ ಭಂಡಾರಗಳ ಮುಖ್ಯಸ್ಥರಿಗೆ ಆಜ್ಞಾಪಿಸುವುದು ಏನೆಂದರೆ, ‘ಯಾಜಕರೂ ಪರಲೋಕದೇವರ ಧರ್ಮಾಚಾರ್ಯನೂ ಆದ ಎಜ್ರನು ಕೇಳಿಕೊಳ್ಳುವುದನ್ನೆಲ್ಲಾ ನೀವು ತಪ್ಪದೆ ಕೊಡಬೇಕು.
[22] ನೂರು ತಲಾಂತು ಬೆಳ್ಳಿ, ನೂರು ಕೋರ್ ಗೋದಿ ನೂರು ಬತ್ ದ್ರಾಕ್ಷಾರಸ, ಎಣ್ಣೆ ನೂರು ಬತ್ ಇಷ್ಟರ ಮಟ್ಟಿಗೂ ಕೊಡಬಹುದು; ಉಪ್ಪನ್ನು ಎಷ್ಟು ಬೇಕಾದರೂ ಕೊಡಬಹುದು.
[23] ಅರಸನ ಮತ್ತು ಅವನ ಸಂತಾನದವರ ರಾಜ್ಯದ ಮೇಲೆ ದೈವಕೋಪ ಉಂಟಾಗದ ಹಾಗೆ ನೀವು ಪರಲೋಕದೇವರ ಆಜ್ಞಾನುಸಾರ ಬೇಕಾದದ್ದನ್ನೆಲ್ಲಾ ಯಾವ ಕೊರತೆಯೂ ಇಲ್ಲದೆ ಒದಗಿಸಿ ಕೊಡಬೇಕು.
[24] ಇದಲ್ಲದೆ ಆ ದೇವಾಲಯದ ಸೇವೆಯಲ್ಲಿರುವ ಯಾಜಕರು, ಲೇವಿಯರು, ಗಾಯಕರು, ದ್ವಾರಪಾಲಕರು, ದಾಸರು ಮುಂತಾದ ಸೇವಕರಲ್ಲಿ ಯಾರಿಂದಲೂ ಕಪ್ಪ, ತೆರಿಗೆ, ಸುಂಕ ಇವುಗಳನ್ನು ವಸೂಲಿಮಾಡುವುದಕ್ಕೆ ನಿಮಗೆ ಅಧಿಕಾರವಿಲ್ಲ ಎಂಬುದು ತಿಳಿದಿರಲಿ.’
[25] “ಎಜ್ರನೇ, ನಿನ್ನ ಕೈಯಲ್ಲಿರುವ ನಿನ್ನ ದೇವರ ಜ್ಞಾನೋಪದೇಶಗ್ರಂಥಕ್ಕೆ ಅನುಸಾರವಾಗಿ ನ್ಯಾಯಾಧೀಶರನ್ನೂ ಮತ್ತು ಪಂಚಾಯತರನ್ನೂ ನೇಮಿಸು. ಅವರು ಹೊಳೆಯಾಚೆಯ ಇಸ್ರಾಯೇಲರಲ್ಲಿ ನಿನ್ನ ದೇವರ ಧರ್ಮವನ್ನು ಅರಿತಿರುವವರೆಲ್ಲರ ವ್ಯಾಜ್ಯಗಳನ್ನು ತೀರಿಸಲಿ. ಅರಿಯದವರಿಗೆ ನೀವು ಅದನ್ನು ಕಲಿಸಬೇಕು.
[26] ನಿನ್ನ ದೇವರ ಧರ್ಮಶಾಸ್ತ್ರವನ್ನೂ ಮತ್ತು ರಾಜಾಜ್ಞೆಯನ್ನೂ ಕೈಕೊಳ್ಳದವರಿಗೆಲ್ಲಾ ಮರಣದಂಡನೆ, ಬೇಡಿಹಾಕುವುದು ಈ ವಿಧವಾದ ಶಿಕ್ಷೆಯನ್ನು ತಪ್ಪದೆ ವಿಧಿಸಬೇಕು” ಎಂಬುದು ನಿಮಗೆ ತಿಳಿದಿರಲಿ.
[27] ಎಜ್ರನು ನೀಡಿದ ಪ್ರತಿಕ್ರಿಯೆ, “ನಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. ಅರಸನು ಯೆರೂಸಲೇಮಿನಲ್ಲಿರುವ ಯೆಹೋವನ ಆಲಯವನ್ನು ಶೋಭಾಯಮಾನದ ಸ್ಥಿತಿಗೆ ತರುವುದಕ್ಕೆ ಆತನ ಪ್ರೇರಣೆಯಿಂದಲೇ ಮನಸ್ಸುಮಾಡಿದ್ದಾನೆ. ಅರಸನು ಅವನ ಮಂತ್ರಿಗಳ ಮತ್ತು ಅವನ ಎಲ್ಲಾ ಶ್ರೇಷ್ಠರಾದ ಸರದಾರರ ಮುಂದೆ ನನಗೆ ದಯೆತೋರಿಸಿದ್ದಾನೆ.
[28] ನನ್ನ ದೇವರಾದ ಯೆಹೋವನ ಹಸ್ತಪಾಲನೆಯು ನನ್ನೊಂದಿಗೆ ಇರುವುದರಿಂದ ಅರಸನ ಮುಂದೆ ನನಗೆ ದೊರಕ್ಕಿದ್ದರಿಂದ ನಾನು ಧೈರ್ಯವಾಗಿ ನನ್ನೊಂದಿಗೆ ಪ್ರಯಾಣ ಮಾಡುವುದಕ್ಕೆ ಕೆಲವು ಜನ ಇಸ್ರಾಯೇಲ್ ಪ್ರಧಾನರನ್ನು ಕೂಡಿಸಿಕೊಂಡೆನು” ಎಂದು ಹೇಳಿದನು.