[1] ಅರಸನು ಹಾಮಾನನೊಡನೆ ಎಸ್ತೇರಳ ಮನೆಗೆ ಔತಣಕ್ಕಾಗಿ ಬಂದನು.
[2] ಅವನು ಈ ಎರಡನೆಯ ದಿನದಲ್ಲಿಯೂ ದ್ರಾಕ್ಷಾರಸ ಪಾನಮಾಡುತ್ತಿರುವಾಗ ಅರಸನು ಎಸ್ತೇರಳಿಗೆ, “ಎಸ್ತೇರ್ ರಾಣಿಯೇ, ನಿನ್ನ ವಿಜ್ಞಾಪನೆ ಯಾವುದು ಹೇಳು; ಅದನ್ನು ನೆರವೇರಿಸುವೆನು. ನೀನು ನನ್ನ ಅರ್ಧರಾಜ್ಯವನ್ನು ಕೇಳಿಕೊಂಡರೂ ಸರಿಯೇ, ಅದನ್ನು ನಿನಗೆ ಕೊಡುವೆನು” ಎಂದು ಹೇಳಿದನು.
[3] ಆಗ ಎಸ್ತೇರ್ ರಾಣಿಯು, “ಅರಸನು ನನ್ನ ಮೇಲೆ ಕಟಾಕ್ಷವಿಟ್ಟು ಸಮ್ಮತಿಸುವುದಾದರೆ ನನ್ನ ವಿಜ್ಞಾಪನೆಯನ್ನೂ, ಪ್ರಾರ್ಥನೆಯನ್ನೂ ಲಾಲಿಸಿ ನನ್ನ ಜೀವವನ್ನೂ ಮತ್ತು ನನ್ನ ಜನಾಂಗವನ್ನೂ ಉಳಿಸಬೇಕು.
[4] ಜನರು ನಮ್ಮನ್ನು ಕೊಂದು ಸಂಹರಿಸಿ, ನಮ್ಮನ್ನು ನಿರ್ನಾಮಗೊಳಿಸುವ ಹಾಗೆ ನಾವು ಮಾರಲ್ಪಟ್ಟೆವು. ನಾವು ಸೇವಕ ಸೇವಕಿಯರಾಗುವುದಕ್ಕೆ ಗುಲಾಮರಂತೆ ಮಾರಲ್ಪಟ್ಟಿದ್ದರೆ ಆ ಕಷ್ಟದ ವಿಷಯದಲ್ಲಿ ರಾಜನನ್ನು ತೊಂದರೆಪಡಿಸುವುದು ಯೋಗ್ಯವಲ್ಲವೆಂದು ಸುಮ್ಮನಿರುತ್ತಿದ್ದೆನು” ಎಂದು ಉತ್ತರಕೊಟ್ಟಳು.
[5] ಅಹಷ್ವೇರೋಷ್ ರಾಜನು ಎಸ್ತೇರ್ ರಾಣಿಯನ್ನು, “ಇಂಥ ದುಷ್ಕೃತ್ಯದ ಮೇಲೆ ಮನಸ್ಸಿಟ್ಟವನು ಯಾವನು? ಅವನೆಲ್ಲಿ?” ಎಂದು ಕೇಳಿದನು.
[6] ಆಗ ಆಕೆಯು, “ನಮ್ಮನ್ನು ಬಾಧಿಸಬೇಕೆಂದಿರುವ ಹಗೆಗಾರನು ಮತ್ತು ಶತ್ರುವು ಈ ದುಷ್ಟ ಹಾಮಾನನೇ” ಎಂದಳು. ಇದನ್ನು ಕೇಳಿ ಹಾಮಾನನು ರಾಣಿಯ ಮುಂದೆ ಭಯಭೀತನಾದನು.
[7] ಅರಸನು ರೌದ್ರಾವೇಶನಾಗಿ ದ್ರಾಕ್ಷಾರಸ ಪಾನಮಾಡುವುದನ್ನು ಬಿಟ್ಟೆದ್ದು ಅರಮನೆಯ ತೋಟಕ್ಕೆ ಹೋದನು. ಹಾಮಾನನಾದರೋ ಅರಸನಿಂದ ತನಗೆ ಕೇಡು ಸಿದ್ಧವಾಯಿತೆಂದು ತಿಳಿದು ಎಸ್ತೇರಳ ಹತ್ತಿರ ತನ್ನ ಪ್ರಾಣರಕ್ಷಣೆಯ ನಿಮಿತ್ತವಾಗಿ ಬಿನ್ನಹಮಾಡಿಕೊಳ್ಳಲು ನಿಂತುಕೊಂಡಿದ್ದನು.
[8] ಅರಸನು ಅರಮನೆಯ ತೋಟದಿಂದ ತಾನು ದ್ರಾಕ್ಷಾರಸ ಪಾನಮಾಡಿದ ಗೃಹಕ್ಕೆ ಹಿಂತಿರುಗಿ ಬಂದು ಎಸ್ತೇರಳು ಒರಗಿಕೊಳ್ಳುವ ಸುಖಾಸನದ ಮೇಲೆ ಹಾಮಾನನು ಬಿದ್ದುಕೊಂಡಿರುವುದನ್ನು ಕಂಡು, “ಇವನು ರಾಣಿಯನ್ನು ನನ್ನ ಮುಂದೆಯೇ ಅರಮನೆಯಲ್ಲಿ ಭಂಗಪಡಿಸಬೇಕೆಂದಿರುತ್ತಾನೋ?” ಅಂದನು. ಅರಸನ ಬಾಯಿಂದ ಈ ಮಾತು ಹೊರಬಂದ ಕೂಡಲೆ ಸೇವಕರು ಹಾಮಾನನ ಮುಖಕ್ಕೆ ಮುಸುಕು ಹಾಕಿ ಎಳೆದುಕೊಂಡು ಹೋದರು.
[9] ಆಗ ಅರಸನ ಸೇವೆಮಾಡುತ್ತಿದ್ದ ಕಂಚುಕಿಗಳಲ್ಲಿ ಒಬ್ಬನಾದ ಹರ್ಬೋನನು, “ಅರಸನ ಪ್ರಾಣರಕ್ಷಣೆಗಾಗಿ ಸಮಾಚಾರವನ್ನು ತಿಳಿಸಿದ ಮೊರ್ದೆಕೈಯನ್ನು ನೇತುಹಾಕಿಸುವುದಕ್ಕೆ ಇವನು ಐವತ್ತು ಮೊಳ ಎತ್ತರವಾದ ಗಲ್ಲು ಕಂಬವನ್ನು ಸಿದ್ಧಮಾಡಿಸಿದ್ದಾನೆ” ಎಂದನು. ಅದಕ್ಕೆ ಅರಸನು, “ಹಾಗಾದರೆ ಹಾಮಾನನ್ನು ಅದಕ್ಕೇ ನೇತುಹಾಕಿರಿ” ಎಂದು ಆಜ್ಞಾಪಿಸಿದನು.
[10] ಹಾಮಾನನನ್ನು ಮೊರ್ದೆಕೈಗಾಗಿ ಸಿದ್ಧಮಾಡಿಸಿದ್ದ ಗಲ್ಲುಗಂಬಕ್ಕೆ ಏರಿಸಿದರು. ಹೀಗೆ ಅರಸನ ಕೋಪವೂ ಶಮನವಾಯಿತು.