Skip to content
Opens in a new window
Listen to this chapter • 5:20

[1] ಇದಾದನಂತರ ಅರಸನಾದ ಅಹಷ್ವೇರೋಷನು ಕೋಪವನ್ನು ಬಿಟ್ಟು ವಷ್ಟಿಯನ್ನೂ, ಆಕೆ ಮಾಡಿದ್ದನ್ನೂ ಮತ್ತು ಆಕೆಯ ವಿಷಯದಲ್ಲಿ ಮಾಡಿದ ತೀರ್ಪನ್ನೂ ನೆನಪುಮಾಡಿಕೊಳ್ಳುತ್ತಿದ್ದನು.

[2] ಆಗ ಅವನ ಸೇವೆಮಾಡುತ್ತಿದ್ದ ರಾಜಪರಿವಾರದವರು ಅರಸನಿಗೆ, “ಅರಸನಿಗೋಸ್ಕರ ಸುಂದರಿಯರಾದ ಕನ್ಯೆಯರನ್ನು ಹುಡುಕುವುದಕ್ಕೆ ಅಪ್ಪಣೆಮಾಡಬೇಕು.

[3] ಅರಸನು ತನ್ನ ರಾಜ್ಯದ ಎಲ್ಲಾ ಸಂಸ್ಥಾನಗಳಿಗೆ ಕಾರ್ಯನಿರ್ವಾಹಕರನ್ನು ಕಳುಹಿಸಬೇಕು; ಅವರು ಸುಂದರಿಯರಾದ ಎಲ್ಲಾ ಕನ್ಯೆಯರನ್ನು ಶೂಷನ್ ಕೋಟೆಯ ಅಂತಃಪುರದಲ್ಲಿ ಕೂಡಿಸಿ, ಅಂತಃಪುರದ ಪಾಲಕನೂ ರಾಜಕಂಚುಕಿಯೂ ಆದ ಹೇಗೈಯ ವಶಕ್ಕೆ ಕೊಡಲಿ. ಅವನು ಅವರಿಗೆ ಕಾಂತಿಯನ್ನು ಹೆಚ್ಚಿಸುವ ಲೇಪನ ದ್ರವ್ಯಗಳನ್ನು ಹಂಚಲಿ.

[4] ಅರಸನು ಯಾವ ಕನ್ಯೆಯನ್ನು ಇಷ್ಟಪಡುವನೋ ಆ ಕನ್ಯೆಯು ವಷ್ಟಿಗೆ ಬದಲಾಗಿ ರಾಣಿಯಾಗಲಿ” ಎಂದು ಹೇಳಿದರು. ಅರಸನು ಅವರ ಅಭಿಪ್ರಾಯಕ್ಕೆ ಸಮ್ಮತಿಸಿ ಅದರಂತೆಯೇ ಮಾಡಿದನು.

[5] ಶೂಷನ್ ಕೋಟೆಯಲ್ಲಿ ಮೊರ್ದೆಕೈ ಎಂಬ ಒಬ್ಬ ಯೆಹೂದ್ಯ ಮನುಷ್ಯನು ವಾಸಮಾಡುತ್ತಿದ್ದನು. ಇವನು ಬೆನ್ಯಾಮೀನ್ ಕುಲದ ಕೀಷನ ಮರಿಮಗನೂ, ಶಿಮ್ಗೀಯ ಮೊಮ್ಮಗನೂ, ಯಾಯೀರನ ಮಗನೂ ಆಗಿದ್ದನು.

[6] ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ ಯೆಹೂದರಾಜನಾದ ಯೆಹೋಯಾಕೀನನೊಡನೆ ಸೆರೆಯಾಗಿ ಒಯ್ಯಲ್ಪಟ್ಟವರಲ್ಲಿ ಇವನೂ ಒಬ್ಬನು.

[7] ಇವನು ಎಸ್ತೇರ್ ಎಂಬ ಹೆಸರಿನ ಹದೆಸ್ಸಾ ಎಂಬ ತನ್ನ ಚಿಕ್ಕಪ್ಪನ ಅನಾಥಳಾದ ಮಗಳನ್ನು ತಂದೆತಾಯಿಗಳು ಸತ್ತಂದಿನಿಂದ ಪುತ್ರಿಯನ್ನಾಗಿ ಸ್ವೀಕರಿಸಿ ಸಾಕುತ್ತಿದ್ದನು. ಆಕೆಯು ರೂಪವತಿಯೂ ಲಾವಣ್ಯವತಿಯೂ ಆಗಿದ್ದಳು.

[8] ಅರಸನ ನಿರ್ಣಯವೂ, ಆಜ್ಞೆಯೂ ಪ್ರಕಟಿಸಲ್ಪಟ್ಟ ತರುವಾಯ ಕಾರ್ಯನಿರ್ವಾಹಕರು ಅನೇಕಾನೇಕ ಕನ್ಯೆಯರನ್ನು ಕೂಡಿಸಿ ಶೂಷನ್ ಕೋಟೆಯಲ್ಲಿ ಹೇಗೈಯ ವಶಕ್ಕೆ ಒಪ್ಪಿಸಿದಾಗ ಎಸ್ತೇರಳೂ ಅರಮನೆಗೆ ಬಂದು ಅಂತಃಪುರ ಪಾಲಕನಾದ ಹೇಗೈಯ ಪರಾಂಬರಿಕೆಯಲ್ಲಿದ್ದಳು.

[9] ಹೇಗೈಯು ಆಕೆಯನ್ನು ಮೆಚ್ಚಿ, ತನ್ನ ದಯೆಗೆ ಪಾತ್ರಳಾದ ಆಕೆಗೋಸ್ಕರ ತಕ್ಕ ಲೇಪನದ್ರವ್ಯಗಳನ್ನೂ ಮತ್ತು ಭೋಜನವನ್ನು ಒದಗಿಸಿದನು. ಅವನು ಆಕೆಗೊಸ್ಕರ ಏಳು ಮಂದಿ ಸೇವಕಿಯರನ್ನೂ ಅರಮನೆಯಿಂದ ಆರಿಸಿಕೊಂಡು ಆಕೆಯನ್ನೂ ಮತ್ತು ಆಕೆಯ ಸೇವಕಿಯರನ್ನೂ ಅಂತಃಪುರದ ಉತ್ತಮ ಭಾಗದಲ್ಲಿರಿಸಿದನು.

[10] ಎಸ್ತೇರಳು ತಾನು ಇಂಥ ಜನಾಂಗದವಳು, ಇಂಥ ಕುಲದವಳು ಎಂಬುದನ್ನು ತೋರ್ಪಡಿಸಿಕೊಳ್ಳಲಿಲ್ಲ; ಮೊರ್ದೆಕೈಯು ಹೀಗೆ ಅಪ್ಪಣೆಕೊಟ್ಟಿದ್ದನು.

[11] ಅವನು ಆಕೆಯ ಕ್ಷೇಮವನ್ನು ಮತ್ತು ಆಕೆ ಮುಂದೆ ಏನು ಮಾಡಬೇಕು ಎಂದು ವಿಚಾರಿಸುವುದಕ್ಕಾಗಿ ಪ್ರತಿದಿನವೂ ಅಂತಃಪುರದ ಪ್ರಾಕಾರದ ಮುಂದೆ ತಿರುಗಾಡುತ್ತಿದ್ದನು.

[12] ಕನ್ಯೆಯರ ಲೇಪನಕಾಲವು ಪೂರೈಸುವುದಕ್ಕೆ ಗಂಧರಸಪ್ರಯೋಗದಲ್ಲಿ ಆರು ತಿಂಗಳೂ, ಪರಿಮಳದ್ರವ್ಯ ಕಾಂತಿವರ್ಧಕದ್ರವ್ಯಗಳ ಪ್ರಯೋಗದಲ್ಲಿ ಆರು ತಿಂಳಗಳೂ ಅಂತು ಹನ್ನೆರಡು ತಿಂಗಳು ಕಳೆದವು. ಈ ಕಾಲ ಮುಗಿದನಂತರ ರಾಜನ ಅರಮನೆಯ ನಿಯಮದ ಮೇರೆಗೆ ತನ್ನನ್ನು ಸಿದ್ಧಪಡಿಸಿಕೊಂಡ ಪ್ರತಿಯೊಬ್ಬ ಕನ್ಯೆಯು ಅರಸನಾದ ಅಹಷ್ವೇರೋಷನ ಬಳಿಗೆ ಹೋಗಬೇಕಾಗಿತ್ತು.

[13] ಅರಸನ ಬಳಿಗೆ ಹೋಗುವ ಸರದಿ ಯಾರಿಗೆ ಬರುವುದೋ ಆಕೆಯು ಅಂತಃಪುರದಿಂದ ಅರಮನೆಗೆ ತೆಗೆದುಕೊಂಡು ಹೋಗುವುದಕ್ಕೋಸ್ಕರ ಏನು ಕೇಳಿದರೂ ಕೊಡಲ್ಪಡುವುದು.

[14] ಆಕೆಯು ಅಲ್ಲಿಗೆ ಸಾಯಂಕಾಲ ಹೋದವಳು ಮರುದಿನ ಬೆಳಿಗ್ಗೆ ಅರಸನ ಉಪಪತ್ನಿಯರ ಪಾಲಕನಾದ ಶವಷ್ಗಜನೆಂಬ ರಾಜಕಂಚುಕಿಯ ವಶದಲ್ಲಿದ್ದ ಎರಡನೆಯ ಅಂತಃಪುರಕ್ಕೆ ಬರುವಳು. ಅರಸನು ಅವಳನ್ನು ಮೆಚ್ಚಿ ಹೆಸರು ಹೇಳಿ ಕರೆಯಿಸಿದ ಹೊರತಾಗಿ ಒಬ್ಬಳೂ ಅರಸನ ಬಳಿಗೆ ಪುನಃ ಹೋಗುವ ಹಾಗಿರಲಿಲ್ಲ.

[15] ಅರಸನ ಬಳಿಗೆ ಹೋಗುವುದಕ್ಕೆ ಮೊರ್ದೆಕೈಯ ದತ್ತುಪುತ್ರಿಯೂ ಅವನ ಚಿಕ್ಕಪ್ಪನಾದ ಅಬೀಹೈಲನ ಮಗಳೂ ಆದ ಎಸ್ತೇರಳ ಸರದಿ ಬಂದಾಗ, ಅಂತಃಪುರ ಪಾಲಕನಾದ ಹೇಗೈ ಎಂಬ ರಾಜಕಂಚುಕಿಯು ನೇಮಿಸಿದ್ದನ್ನೇ ಹೊರತು ಆಕೆ ಬೇರೇನೂ ಕೇಳಲಿಲ್ಲ. ನೋಡುವವರೆಲ್ಲರೂ ಆಕೆಯನ್ನು ಮೆಚ್ಚುತ್ತಿದ್ದರು.

[16] ಅರಸನಾದ ಅಹಷ್ವೇರೋಷನ ಬಳಿಗೆ ಅವನ ಆಳ್ವಿಕೆಯ ಏಳನೆಯ ವರ್ಷದ ಹತ್ತನೆಯ ತಿಂಗಳಾದ ಪುಷ್ಯ ಮಾಸದಲ್ಲಿ ಆಕೆಯನ್ನು ರಾಜಗೃಹಕ್ಕೆ ಕರೆದುಕೊಂಡು ಬಂದರು.

[17] ಅರಸನು ಎಲ್ಲಾ ಸ್ತ್ರೀಯರಲ್ಲಿ ಎಸ್ತೇರಳನ್ನು ಮೆಚ್ಚಿದನು. ಎಲ್ಲಾ ಕನ್ಯೆಯರಲ್ಲಿ ಆಕೆಯು ಅವನ ದಯೆಗೂ, ಪ್ರೀತಿಗೂ ಪಾತ್ರಳಾದುದರಿಂದ ಅವನು ರಾಜ ಮುಕುಟವನ್ನು ಆಕೆಯ ತಲೆಯ ಮೇಲಿಟ್ಟು, ಆಕೆಯನ್ನು ವಷ್ಟಿಗೆ ಬದಲಾಗಿ ರಾಣಿಯನ್ನಾಗಿ ಮಾಡಿಕೊಂಡನು.

[18] ಅವನು ತನ್ನ ಎಲ್ಲಾ ಸರದಾರರಿಗೂ ಮತ್ತು ಪರಿವಾರದವರಿಗೂ ಎಸ್ತೇರಳ ಔತಣ ಎಂದು ದೊಡ್ಡ ಔತಣವನ್ನು ಮಾಡಿಸಿ, ಎಲ್ಲಾ ಸಂಸ್ಥಾನಗಳಲ್ಲಿಯೂ ಸೆರೆಯವರನ್ನು ಬಿಡಿಸಿ, ರಾಜರ ಘನತೆಗೆ ತಕ್ಕಂತೆ ಉದಾರವಾಗಿ ದಾನಧರ್ಮಗಳನ್ನು ಮಾಡಿದನು.

[19] ಎರಡನೆಯ ಬಾರಿ ಕನ್ಯೆಯರನ್ನು ಸೇರಿಸುತ್ತಿದ್ದಾಗ ಮೊರ್ದೆಕೈಯು ಅರಮನೆಯ ಹೆಬ್ಬಾಗಿಲಲ್ಲಿ ಕುಳಿತುಕೊಂಡಿದ್ದನು.

[20] ಎಸ್ತೇರಳಾದರೋ ಮೊರ್ದೆಕೈಯ ಪರಾಂಬರಿಕೆಯಲ್ಲಿದ್ದ ದಿನಗಳಲ್ಲಿ ಹೇಗೋ ಹಾಗೆ ಆಗಲೂ ಅವನ ಆಜ್ಞೆಯನ್ನು ಅನುಸರಿಸುವವಳಾಗಿ ತಾನು ಇಂಥ ಕುಲದವಳು, ಇಂಥ ಜನಾಂಗದವಳು ಎಂಬುದನ್ನು ಯಾರಿಗೂ ತೋರ್ಪಡಿಸಿಕೊಳ್ಳಲಿಲ್ಲ.

[21] ಆ ದಿನಗಳಲ್ಲಿ ಮೊರ್ದೆಕೈಯು ಅರಮನೆಯ ದ್ವಾರಪಾಲಕರಾದ ಬಿಗೆತಾನ್ ಮತ್ತು ತೆರೆಷ್ ಎಂಬ ಇಬ್ಬರು ರಾಜಕಂಚುಕಿಯರು ಕೋಪವುಳ್ಳವರಾಗಿ ಅರಸನಾದ ಅಹಷ್ವೇರೋಷನಿಗೆ ವಿರುದ್ಧವಾಗಿ ಕೈಯೆತ್ತಬೇಕೆಂದು ಒಳಸಂಚು ಮಾಡಿದ್ದರು.

[22] ಈ ಸಂಗತಿಯು ಮೊರ್ದೆಕೈಗೆ ಗೊತ್ತಾದಾಗ ಅವನು ಅದನ್ನು ಎಸ್ತೇರ್ ರಾಣಿಗೆ ತಿಳಿಸಿದನು. ಆಕೆಯು ಅವನ ಹೆಸರನ್ನು ಅರಸನಿಗೆ ಹೇಳಿ ಆ ಸಂಗತಿಯನ್ನು ತಿಳಿಸಿದಳು.

[23] ಈ ವಿಷಯವು ವಿಚಾರಣೆಗೆ ಬಂದಾಗ ಅದು ನಿಜವೆಂದು ಸಾಬೀತಾದುದರಿಂದ ಆ ಇಬ್ಬರನ್ನೂ ಗಲ್ಲಿಗೆ ಹಾಕಿಸಿದರು. ಆ ಸಂಗತಿಯು ರಾಜನ ದಿನಚರಿಪುಸ್ತಕದಲ್ಲಿ ಬರೆದು ದಾಖಲಿಸಲಾಯಿತು.

ಎಸ್ತೇರಳು — Chapters