Skip to content
Opens in a new window
Listen to this chapter • 3:17

[1] ಮೂರನೆಯ ದಿನದಲ್ಲಿ ಎಸ್ತೇರಳು ರಾಜವಸ್ತ್ರಭೂಷಿತಳಾಗಿ ಅರಮನೆಯ ಒಳಗಣ ಪ್ರಾಕಾರವನ್ನು ಪ್ರವೇಶಿಸಿ, ರಾಜಮಂದಿರದ ಎದುರಿನಲ್ಲಿ ನಿಂತಳು. ಅರಸನು ಆ ಮಂದಿರದಲ್ಲಿ ರಾಜಸಿಂಹಾಸನದ ಮೇಲೆ ಬಾಗಿಲಿಗೆ ಎದುರಾಗಿ ಕುಳಿತುಕೊಂಡಿದ್ದನು.

[2] ಅವನು ಪ್ರಾಕಾರದಲ್ಲಿ ನಿಂತಿರುವ ಎಸ್ತೇರ್ ರಾಣಿಯನ್ನು ಕಂಡ ಕೂಡಲೆ ಆಕೆಯ ಮೇಲೆ ದಯವಿಟ್ಟು ತನ್ನ ಕೈಯಲ್ಲಿದ್ದ ಸುವರ್ಣದಂಡವನ್ನು ಆಕೆಯ ಕಡೆಗೆ ಚಾಚಿದನು.

[3] ಎಸ್ತೇರಳು ಅರಸನ ಸಮೀಪಕ್ಕೆ ಹೋಗಿ ದಂಡದ ತುದಿಯನ್ನು ಮುಟ್ಟಿದಳು. ಆಗ ಅರಸನು ಆಕೆಗೆ, “ಎಸ್ತೇರ್ ರಾಣಿಯೇ, ನಿನಗೇನು ಬೇಕು? ನಿನ್ನ ವಿಜ್ಞಾಪನೆ ಯಾವುದು? ನನ್ನ ಅರ್ಧರಾಜ್ಯವನ್ನು ಕೇಳಿದರೂ ನಿನಗೆ ಕೊಡುತ್ತೇನೆ” ಅಂದನು.

[4] ಅದಕ್ಕೆ ಎಸ್ತೇರಳು, “ಅರಸನು ಒಪ್ಪುವುದಾದರೆ ನಾನು ಈಹೊತ್ತು ತಮಗೋಸ್ಕರ ಸಿದ್ಧಮಾಡಿಸಿರುವ ಔತಣಕ್ಕೆ ಹಾಮಾನನೊಡನೆ ಬರೋಣವಾಗಲಿ” ಎಂದು ಅರಿಕೆಮಾಡಿದಳು.

[5] ಕೂಡಲೆ ಅರಸನು, “ಎಸ್ತೇರಳ ವಿಜ್ಞಾಪನೆಯನ್ನು ನೆರವೇರಿಸುವುದಕ್ಕೆ ಹಾಮಾನನನ್ನು ಕರೆದುಕೊಂಡು ಬನ್ನಿರಿ” ಎಂದು ಅಪ್ಪಣೆಮಾಡಿ ಎಸ್ತೇರಳು ಮಾಡಿಸಿದ್ದ ಔತಣಕ್ಕೆ ಹಾಮಾನನ ಜೊತೆಯಲ್ಲಿ ಹೋದನು.

[6] ದ್ರಾಕ್ಷಾರಸ ಪಾನಮಾಡುವಾಗ ಅರಸನು ತಿರುಗಿ ಎಸ್ತೇರಳಿಗೆ, “ನಿನ್ನ ವಿಜ್ಞಾಪನೆ ಯಾವುದು ಹೇಳು; ಅದನ್ನು ನೆರವೇರಿಸುವೆನು. ನೀನು ನನ್ನ ಅರ್ಧರಾಜ್ಯವನ್ನು ಕೇಳಿಕೊಂಡರೂ ಸರಿಯೇ, ಅದನ್ನು ನಿನಗೆ ಕೊಡುವೆನು” ಅಂದನು.

[7] ಅದಕ್ಕೆ ಎಸ್ತೇರಳು, “ಅರಸನು ನನ್ನ ಮೇಲೆ ಕಟಾಕ್ಷವಿಟ್ಟು ನಾನು ಕೇಳುವುದನ್ನು ಕೊಡುವುದಕ್ಕೂ ನನ್ನ ವಿಜ್ಞಾಪನೆಯನ್ನು ನೆರವೇರಿಸುವುದಕ್ಕೂ ಮನಸ್ಸುಳ್ಳವರಾಗಿದ್ದರೆ

[8] ನಾನು ತಮಗೋಸ್ಕರ ಸಿದ್ಧಮಾಡಿಸುವ ಔತಣಕ್ಕೆ ನಾಳೆಯೂ ಹಾಮಾನನ ಜೊತೆಯಲ್ಲಿ ಬರೋಣವಾಗಲಿ; ಆಗ ಅರಸರು ಹೇಳಿದಂತೆ ಮಾಡುವೆನು. ಇದೇ ನನ್ನ ಮನವಿ” ಎಂದು ಉತ್ತರಕೊಟ್ಟಳು.

[9] ಆ ದಿನ ಹಾಮಾನನು ಆನಂದಲಹರಿಯಲ್ಲಿ ಮನೆಗೆ ಹೋಗುತ್ತಿರುವಾಗ ಮೊರ್ದೆಕೈಯು ತನಗೆ ಭಯಪಡದೆ, ತನ್ನ ಮುಂದೆ ಏಳದೆ ಅರಮನೆಯ ಹೆಬ್ಬಾಗಿಲಿನಲ್ಲಿ ಕುಳಿತಿರುವುದನ್ನು ಕಂಡು ಅವನ ಮೇಲೆ ಕೋಪಭರಿತನಾದನು.

[10] ಆದರೂ ತನ್ನ ಕೋಪವನ್ನು ಬಿಗಿಹಿಡಿದುಕೊಂಡು ಮನೆಗೆ ಹೋಗಿ ತನ್ನ ಆಪ್ತರನ್ನೂ, ಪತ್ನಿಯಾದ ಜೆರೆಷಳನ್ನೂ ಕರೆದನು.

[11] ಅವರ ಮುಂದೆ ತನ್ನ ಘನೈಶ್ವರ್ಯಗಳನ್ನೂ, ಪುತ್ರಲಾಭಾತಿಶಯವನ್ನೂ, ಅರಸನು ತನ್ನನ್ನು ಸನ್ಮಾನಿಸಿ ಎಲ್ಲಾ ಸರದಾರರಿಗಿಂತ, ರಾಜಸೇವಕರಿಗಿಂತ ತನಗೇ ಶ್ರೇಷ್ಠಸ್ಥಾನವನ್ನು ಅನುಗ್ರಹಿಸಿದ್ದನ್ನೂ ವರ್ಣಿಸಿ,

[12] “ಇದಲ್ಲದೆ ಎಸ್ತೇರ್ ರಾಣಿಯು ತಾನು ಸಿದ್ಧಮಾಡಿಸಿದ ಔತಣಕ್ಕೆ ಅರಸನ ಜೊತೆಯಲ್ಲಿ ನನ್ನ ಹೊರತಾಗಿ ಇನ್ನಾರನ್ನೂ ಆಹ್ವಾನಿಸಲಿಲ್ಲ. ನಾಳೆಯೂ ಅರಸನ ಜೊತೆಯಲ್ಲಿ ಬರಬೇಕೆಂದು ನನಗೆ ಹೇಳಿದ್ದಾಳೆ.

[13] ಆದರೂ ಮೊರ್ದೆಕೈ ಎಂಬ ಯೆಹೂದ್ಯನು ಅರಮನೆಯ ಬಾಗಿಲಿನಲ್ಲಿ ನನ್ನ ಕಣ್ಣ ಮುಂದೆ ಕುಳಿತಿರುವವರೆಗೂ ಇದೆಲ್ಲದರಿಂದ ನನಗೆ ತೃಪ್ತಿಯಾಗುವುದಿಲ್ಲ” ಅಂದನು.

[14] ಅದಕ್ಕೆ ಅವನ ಪತ್ನಿಯಾದ ಜೆರೆಷಳೂ ಅವನ ಎಲ್ಲಾ ಆಪ್ತರೂ, “ಐವತ್ತು ಮೊಳ ಎತ್ತರವಾದ ಒಂದು ಗಲ್ಲುಗಂಬವನ್ನು ಸಿದ್ಧಮಾಡಿಸಿ ನಾಳೆ ಅರಸನ ಅಪ್ಪಣೆಯನ್ನು ಪಡೆದುಕೊಂಡು ಮೊರ್ದೆಕೈಯನ್ನು ಅದಕ್ಕೆ ನೇತುಹಾಕಿಸಬೇಕು; ಆ ಮೇಲೆ ನೀನು ಸಂತೋಷದಿಂದ ಅರಸನ ಜೊತೆಯಲ್ಲಿ ಔತಣಕ್ಕೆ ಹೋಗಬಹುದು” ಎಂದು ಹೇಳಿದರು. ಹಾಮಾನನು ಈ ಮಾತಿಗೆ ಮೆಚ್ಚಿ ಗಲ್ಲುಗಂಬವನ್ನು ಸಿದ್ಧಮಾಡಿಸಿದನು.

ಎಸ್ತೇರಳು — Chapters