Skip to content
Opens in a new window
Listen to this chapter • 4:02

[1] ಸಹೋದರರೇ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಆಗಮನದ ವಿಷಯವಾಗಿಯೂ ಮತ್ತು ನಾವು ಆತನ ಎದುರಿನಲ್ಲಿ ಕೂಡಿಕೊಳ್ಳುವುದರ ವಿಷಯವಾಗಿಯೂ ನಿಮ್ಮನ್ನು ವಿನಂತಿಸುವುದೇನಂದರೆ,

[2] ಕರ್ತನ ಆಗಮನದ ದಿನವು ಈಗಾಗಲೇ ಬಂದಿದೆಯೆಂಬುದಾಗಿ ಆತ್ಮದಿಂದಾಗಲಿ ಮಾತಿನಿಂದಾಗಲಿ ಅಥವಾ ನಮ್ಮ ಪತ್ರದಿಂದಾಗಲಿ ನೀವು ಬೇಗನೆ ಮನದಲ್ಲಿ ಚಂಚಲರಾಗಿ ಕಳವಳಪಡಬೇಡಿರಿ.

[3] ಯಾರೂ ಯಾವ ವಿಧದಲ್ಲಿಯೂ ನಿಮ್ಮನ್ನು ಮೋಸಗೊಳಿಸದಂತೆ ನೋಡಿಕೊಳ್ಳಿರಿ, ಯಾಕೆಂದರೆ ಮೊದಲು ನಂಬಿಕೆಯ ಭ್ರಷ್ಟತೆಯುಂಟಾಗಿ ನಾಶನದ ಮಗನಾದ ಅಧರ್ಮ ಪುರುಷನು ಬಯಲಿಗೆ ಬಾರದ ಹೊರತು ಆ ದಿನವು ಬರುವುದಿಲ್ಲ.

[4] ಯಾವುದು ದೇವರೆನಿಸಿಕೊಳ್ಳುತ್ತದೋ ಯಾವುದು ಆರಾಧಿಸಲ್ಪಡುತ್ತದೋ ಅದನ್ನೆಲ್ಲಾ ನಾಶನಕ್ಕೆ ಅಧೀನನಾದ ಆ ಪುರುಷನು ಎದುರಿಸಿ ಅದಕ್ಕಿಂತ ಮೇಲಾಗಿ ತನ್ನನ್ನು ತಾನೇ ಹೆಚ್ಚಿಸಿಕೊಂಡು ತಾನು ದೇವರೆಂದು ಘೋಷಿಸಿಕೊಂಡು ದೇವರ ಗರ್ಭಗುಡಿಯಲ್ಲೇ ಕುಳಿತುಕೊಳ್ಳುತ್ತಾನೆ.

[5] ನಾನು ನಿಮ್ಮ ಸಂಗಡ ಇದ್ದಾಗ ಈ ಸಂಗತಿಗಳನ್ನು ಹೇಳಿದ್ದು ಜ್ಞಾಪಕವಿಲ್ಲವೋ?

[6] ಇದಲ್ಲದೆ ಅವನು ನೇಮಕವಾದ ಸಮಯದಲ್ಲೇ ಹೊರತು ಬಯಲಿಗೆ ಬರುವುದಕ್ಕೆ ಏನು ಅಡ್ಡಿ ಮಾಡುತ್ತದೋ ಅದು ನಿಮಗೆ ತಿಳಿದೇ ಇದೆ.

[7] ಅಧರ್ಮವು ಈಗಲೂ ಗುಪ್ತವಾಗಿ ತನ್ನ ಕಾರ್ಯವನ್ನು ಸಾಧಿಸುತ್ತದೆ, ಆದರೆ ತಡೆಗಟ್ಟುವವನು ದಾರಿಬಿಡುವ ತನಕ ಅದು ಗುಪ್ತವಾಗಿಯೇ ಇರುವುದು.

[8] ಆಗ ಅಧರ್ಮಸ್ವರೂಪನು ಕಾಣಿಸಿಕೊಳ್ಳುವನು, ಅವನನ್ನು ಯೇಸು ಕರ್ತನು ತನ್ನ ಬಾಯಿಯ ಉಸಿರಿನಿಂದ ಕೊಲ್ಲುವನು, ತನ್ನ ಬರುವಿಕೆಯ ಪ್ರತ್ಯಕ್ಷತೆಯಿಂದ ಸಂಹರಿಸುವನು.

[9] ಆ ಅಧರ್ಮಸ್ವರೂಪನು, ಸೈತಾನನ ಕಾರ್ಯಕ್ಕೆ ಅನುಸಾರವಾಗಿ, ಅದು ಸುಳ್ಳಾದ ಸಕಲವಿಧವಾದ ಮಹತ್ಕಾರ್ಯ, ಸೂಚಕಕಾರ್ಯ, ಅದ್ಭುತಕಾರ್ಯ ಇವುಗಳಿಂದಲೂ,

[10] ದುರ್ನೀತಿಯ ಎಲ್ಲಾ ವಂಚನೆಯಿಂದಲೂ ಕೂಡಿ ನಾಶದ ಮಾರ್ಗದಲ್ಲಿರುವವರಿಗೋಸ್ಕರವಾಗಿ ಬರುವನು. ಯಾಕೆಂದರೆ ಅವರು ಸತ್ಯವನ್ನು ಪ್ರೀತಿಸದೆ ನಿರಾಕರಿಸಿದ್ದರಿಂದ ರಕ್ಷಣೆಯನ್ನು ಹೊಂದದೆ ನಾಶವಾಗುತ್ತಾರೆ.

[11] ಇದೇ ಕಾರಣದಿಂದ ದೇವರು ಗಾಢಭ್ರಮೆಯನ್ನು ಅವರಲ್ಲಿಗೆ ಕಳುಹಿಸಿ ಅವರು ಆ ಸುಳ್ಳನ್ನು ನಂಬುವಂತೆ ಒಳಪಡಿಸುತ್ತಾನೆ.

[12] ಸತ್ಯವನ್ನು ನಂಬದೆ ಅನೀತಿಯಲ್ಲಿ ಆನಂದಪಡುವವರೆಲ್ಲರೂ ಈ ಪ್ರಕಾರ ನ್ಯಾಯತೀರ್ಪಿಗೆ ಗುರಿಯಾಗುವರು.

[13] ಕರ್ತನಿಗೆ ಪ್ರಿಯರಾಗಿರುವ ಸಹೋದರರೇ, ನೀವು ಪವಿತ್ರಾತ್ಮನಿಂದ ಶುದ್ಧೀಕರಿಸಲ್ಪಟ್ಟವರಾಗಿ, ಸತ್ಯದ ಮೇಲೆ ನಂಬಿಕೆಯನ್ನಿಟ್ಟು, ರಕ್ಷಣೆಯನ್ನು ಪಡೆಯುವುದಕ್ಕಾಗಿ ದೇವರು ನಿಮ್ಮನ್ನು ಆದಿಯಿಂದ ಆರಿಸಿಕೊಂಡಿದ್ದರಿಂದ ನಾವು ನಿಮ್ಮ ವಿಷಯದಲ್ಲಿ ಯಾವಾಗಲೂ ದೇವರಿಗೆ ಕೃತಜ್ಞತಾಸ್ತುತಿಮಾಡುವುದಕ್ಕೆ ಬದ್ಧರಾಗಿದ್ದೇವೆ.

[14] ನೀವು ಹೀಗೆ ರಕ್ಷಿಸಲ್ಪಟ್ಟು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮಹಿಮೆಯನ್ನು ಸಂಪಾದಿಸಿಕೊಳ್ಳಬೇಕೆಂದು ದೇವರು ನಮ್ಮ ಸುವಾರ್ತೆಯ ಮೂಲಕವಾಗಿ ನಿಮ್ಮನ್ನು ಕರೆದನು.

[15] ಹೀಗಿರುವುದರಿಂದ ಸಹೋದರರೇ, ದೃಢವಾಗಿ ನಿಲ್ಲಿರಿ. ನಾವು ಮಾತಿನಿಂದಾಗಲಿ, ಪತ್ರದ ಮೂಲಕವಾಗಲಿ ನಿಮಗೆ ಬೋಧಿಸಿದ ಸಂಪ್ರದಾಯಗಳನ್ನು ಭದ್ರವಾಗಿ ಹಿಡಿದುಕೊಂಡಿರಿ.

[16] ಮತ್ತು ನಮ್ಮನ್ನು ಪ್ರೀತಿಸಿ ನಮಗೆ ನಿತ್ಯವಾದ ಆದರಣೆಯನ್ನೂ ಉತ್ತಮವಾದ ನಿರೀಕ್ಷೆಯನ್ನೂ ಕೃಪೆಯಿಂದ ಅನುಗ್ರಹಿಸಿದ ನಮ್ಮ ತಂದೆಯಾದ ದೇವರೂ ನಮ್ಮ ಕರ್ತನಾದ ಯೇಸು ಕ್ರಿಸ್ತನೂ ತಾನೇ ನಿಮ್ಮ ಹೃದಯಗಳನ್ನು ಸಂತೈಸಿ,

[17] ಸಕಲ ಸತ್ಕಾರ್ಯದಲ್ಲಿಯೂ, ಸದ್ವಾಕ್ಯದಲ್ಲಿಯೂ ದೃಢಪಡಿಸಲಿ.

2 ಥೆಸಲೋನಿಕದವರಿಗೆ — Chapters