[1] ಪ್ರಿಯರೇ, ನಿಮಗೀಗ ಬರೆಯುವುದು ಎರಡನೆಯ ಪತ್ರ.
[2] ಪರಿಶುದ್ಧ ಪ್ರವಾದಿಗಳು ಪೂರ್ವದಲ್ಲಿ ಹೇಳಿದ ಮಾತುಗಳನ್ನೂ ಕರ್ತನಾದ ರಕ್ಷಕನು ನಿಮ್ಮ ಅಪೊಸ್ತಲರ ಮೂಲಕ ಕೊಟ್ಟ ಅಪ್ಪಣೆಯನ್ನೂ ನೀವು ಜ್ಞಾಪಕಮಾಡಿಕೊಳ್ಳಬೇಕೆಂದು ಈ ಎರಡು ಪತ್ರಿಕೆಗಳ ಮೂಲಕ ನಿಮಗೆ ತಿಳಿಸಿಕೊಡುತ್ತಾ ನಿಮ್ಮ ನಿರ್ಮಲವಾದ ಮನಸ್ಸನ್ನು ಎಚ್ಚರಗೊಳಿಸುತ್ತಿದ್ದೇನೆ.
[3] ಕಡೆ ದಿನಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು ಕುಚೋದ್ಯ ಮಾಡುತ್ತಾ,
[4] “ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು? ನಮ್ಮ ಪೂರ್ವಿಕರು ನಿದ್ರೆಹೊಂದಿದ ನಂತರದಿಂದ; ಸಮಸ್ತವೂ ಸೃಷ್ಟಿಯ ಆರಂಭದಲ್ಲಿ ಇದ್ದ ಹಾಗೆಯೇ ಇದೆಯಲ್ಲಾ?” ಎಂದು ಪರಿಹಾಸ್ಯಮಾಡುತ್ತಾ ಕೇಳುವರೆಂಬುದಾಗಿ ನೀವು ಮೊದಲು ತಿಳಿದುಕೊಳ್ಳಬೇಕು.
[5] ಆದರೆ ಪೂರ್ವಕಾಲದಲ್ಲಿ ಭೂಮ್ಯಾಕಾಶಗಳು ದೇವರ ವಾಕ್ಯದ ಮೂಲಕ ನೀರಿನೊಳಗಿನಿಂದ ಹಾಗೂ ನೀರಿನಿಂದ ರೂಪಿಸಲ್ಪಟ್ಟಿತೆಂಬುದನ್ನು ಅವರು ಉದ್ದೇಶರ್ಪೂವಕವಾಗಿಯೇ ಮರೆತುಬಿಡುತ್ತಾರೆ.
[6] ಆ ನೀರಿನಿಂದಲೇ ಅಂದಿನ ಲೋಕವು ಜಲಪ್ರಳಯದಲ್ಲಿ ನಾಶವಾಯಿತು.
[7] ಆದರೆ ಈಗಿನ ಭೂಮ್ಯಾಕಾಶಗಳು ಅದೇ ವಾಕ್ಯದಿಂದ ಅಗ್ನಿನಾಶಕ್ಕಾಗಿ ಕಾದಿರಿಸಲ್ಪಟ್ಟಿವೆ. ಅವು ನ್ಯಾಯ ತೀರ್ಪಿನ ದಿನಕ್ಕಾಗಿ ಮತ್ತು ಭಕ್ತಿಹೀನರ ನಾಶಕ್ಕಾಗಿ ಉಳಿಸಲ್ಪಟ್ಟಿವೆ.
[8] ಪ್ರಿಯರೇ, ಕರ್ತನ ಎಣಿಕೆಯಲ್ಲಿ ಒಂದು ದಿನವು ಸಾವಿರ ವರ್ಷಗಳಂತೆಯೂ ಸಾವಿರ ವರ್ಷಗಳು ಒಂದು ದಿನದಂತೆಯೂ ಇವೆ ಎಂಬುದನ್ನು ಮಾತ್ರ ಮರೆಯಬೇಡಿರಿ.
[9] ಕರ್ತನು ತನ್ನ ವಾಗ್ದಾನಗಳನ್ನು ನೆರವೇರಿಸುವುದಕ್ಕೆ ತಡಮಾಡುತ್ತಾನೆಂಬುದಾಗಿ ಕೆಲವರು ತಿಳಿದುಕೊಂಡಿರುವ ಪ್ರಕಾರ ಆತನು ತಡಮಾಡುವವನಲ್ಲ. ಯಾರೊಬ್ಬನೂ ನಾಶವಾಗುವುದರಲ್ಲಿ ಆತನು ಇಷ್ಟಪಡದೆ ಎಲ್ಲರೂ ಪಶ್ಚಾತ್ತಾಪ ಪಡಬೇಕೆಂದು ಅಪೇಕ್ಷಿಸುವವನಾಗಿದ್ದು ನಿಮ್ಮ ವಿಷಯದಲ್ಲಿ ದೀರ್ಘಶಾಂತಿಯುಳ್ಳವನಾಗಿದ್ದಾನೆ.
[10] ಆದರೂ ಕರ್ತನ ದಿನವು ಕಳ್ಳನು ಬರುವಂತೆ ಬರುತ್ತದೆ. ಆ ದಿನದಲ್ಲಿ ಆಕಾಶ ಮಂಡಲವು ಮಹಾಘೋಷದಿಂದ ಇಲ್ಲದೆ ಹೋಗುವವು. ಮೂಲಧಾತುಗಳು ಉರಿದು ಲಯವಾಗಿ ಹೋಗುವವು. ಭೂಮಿಯೂ ಅದರಲ್ಲಿರುವ ಕೆಲಸಗಳೂ ಸುಟ್ಟು ಹೋಗುವವು.
[11] ಇವೆಲ್ಲವುಗಳು ಹೀಗೆ ನಾಶವಾಗಿ ಹೋಗುವುದರಿಂದ ನೀವು ಎಂಥವರಾಗಿರಬೇಕು? ಪರಿಶುದ್ಧವಾಗಿಯೂ ಭಕ್ತಿಯುಳ್ಳವರಾಗಿಯೂ ಜೀವಿಸಬೇಕು.
[12] ದೇವರ ದಿನದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಆತುರಪಡುವ ಆ ದಿನದಲ್ಲಿ ಆಕಾಶಮಂಡಲವು ಬೆಂಕಿಯಿಂದ ನಾಶವಾಗಿ ಹೋಗುವವು. ಅತಿ ಉಷ್ಣದಿಂದ ಮೂಲಧಾತುಗಳು ಉರಿದು ಕರಗಿ ಹೋಗುವವು.
[13] ಆದರೂ ನಾವು ದೇವರ ವಾಗ್ದಾನದ ಪ್ರಕಾರ ನೂತನ ಆಕಾಶ ಮಂಡಲವನ್ನೂ ಮತ್ತು ನೂತನ ಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ. ಅವುಗಳಲ್ಲಿ ನೀತಿಯು ವಾಸವಾಗಿರುವುದು.
[14] ಆದಕಾರಣ ಪ್ರಿಯರೇ, ನೀವು ಇವುಗಳನ್ನು ಎದುರುನೋಡುವವರಾಗಿರುವುದರಿಂದ ಆತನೊಂದಿಗೆ ಸಮಾಧಾನದಲ್ಲಿದ್ದು ನಿರ್ಮಲರಾಗಿಯೂ ನಿರ್ದೋಷಿಗಳಾಗಿಯೂ ಆತನಿಗೆ ಕಾಣಿಸಿಕೊಳ್ಳುವಂತೆ ಪ್ರಯತ್ನಿಸಿರಿ.
[15] ನಮ್ಮ ಕರ್ತನ ದೀರ್ಘಶಾಂತಿಯು ನಮ್ಮ ರಕ್ಷಣಾರ್ಥವಾಗಿ ಇದೆ ಎಂದು ಪರಿಗಣಿಸಿರಿ. ನಮ್ಮ ಪ್ರಿಯ ಸಹೋದರನಾದ ಪೌಲನು ಸಹ ತನಗೆ ಅನುಗ್ರಹಿಸಿರುವ ಜ್ಞಾನದ ಪ್ರಕಾರ ನಿಮಗೆ ಬರೆದಿದ್ದಾನೆ.
[16] ಅವನು ತನ್ನ ಎಲ್ಲಾ ಪತ್ರಿಕೆಗಳಲ್ಲಿಯೂ ಈ ವಿಷಯಗಳನ್ನು ಕುರಿತು ಹೇಳಿದ್ದಾನೆ. ಆ ಪತ್ರಗಳಲ್ಲಿರುವ ಕೆಲವು ಸಂಗತಿಗಳು ನಿಮಗೆ ಅರ್ಥಮಾಡಿಕೊಳ್ಳುವುದಕ್ಕೆ ಕಠಿಣವಾಗಿವೆ. ಅಜ್ಞಾನಿಗಳೂ, ಚಂಚಲಚಿತ್ತರೂ ಆದವರು ಉಳಿದ ಗ್ರಂಥಗಳ ಹಾಗೆ ಇದನ್ನೂ ತಪ್ಪಾಗಿ ಅರ್ಥ ಕೊಟ್ಟು ತಮಗೆ ನಾಶವನ್ನುಂಟು ಮಾಡಿಕೊಳ್ಳುತ್ತಾರೆ.
[17] ಆದಕಾರಣ ಪ್ರಿಯರೇ, ನೀವು ಈ ಸಂಗತಿಗಳನ್ನು ಮುಂಚಿತವಾಗಿ ತಿಳಿದುಕೊಂಡಿರುವುದರಿಂದ ದುಷ್ಟರ ವಂಚನೆಯಲ್ಲಿ ಸಿಕ್ಕಿ ನಿಮ್ಮ ಸ್ಥಿರವಾದ ನಂಬಿಕೆಯನ್ನು ಬಿಟ್ಟು ಭ್ರಷ್ಟರಾಗದಂತೆಯೂ ಎಚ್ಚರಿಕೆಯಾಗಿರಿ.
[18] ನಮ್ಮ ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ಕುರಿತಾದ ಕೃಪೆಯಲ್ಲಿಯೂ ಜ್ಞಾನದಲ್ಲಿಯೂ ನೀವು ಅಭಿವೃದ್ಧಿ ಹೊಂದಿರಿ. ಆತನಿಗೆ ಈಗಲೂ ಸದಾಕಾಲವೂ ಮಹಿಮೆಯುಂಟಾಗಲಿ. ಆಮೆನ್.