Skip to content
Opens in a new window
Listen to this chapter • 5:00

[1] ಯೇಸು ಕ್ರಿಸ್ತನ ದಾಸನೂ ಅಪೊಸ್ತಲನೂ ಆಗಿರುವ ಸಿಮೆಯೋನ ಪೇತ್ರನು ನಮ್ಮ ದೇವರು ಮತ್ತು ರಕ್ಷಕನಾದ ಯೇಸು ಕ್ರಿಸ್ತನ ನೀತಿಯಿಂದ ನಮ್ಮಂತೆಯೇ ಅಮೂಲ್ಯವಾದ ನಂಬಿಕೆಯನ್ನು ಹೊಂದಿದವರಿಗೆ ಬರೆಯುವುದೇನಂದರೆ,

[2] ದೇವರನ್ನು ಕುರಿತಾಗಿಯೂ, ನಮ್ಮ ಕರ್ತನಾದ ಯೇಸು ಕ್ರಿಸ್ತನ ವಿಷಯವಾಗಿಯೂ ಇರುವ ಪರಿಜ್ಞಾನದಲ್ಲಿ ನಿಮಗೆ ಕೃಪೆಯೂ, ಶಾಂತಿಯೂ ಹೆಚ್ಚುಹೆಚ್ಚಾಗಿ ದೊರೆಯಲಿ.

[3] ನಮ್ಮನ್ನು ತನ್ನ ಮಹಿಮೆಯಿಂದಲೂ, ಗುಣಾತಿಶಯದಿಂದಲೂ ಕರೆದ ದೇವರ ವಿಷಯವಾಗಿ ಯೇಸುವಿನ ದಿವ್ಯಶಕ್ತಿಯು ನಮಗೆ ದೈವಿಕ ಪರಿಜ್ಞಾನವನ್ನು ಕೊಟ್ಟಿರುವುದರ ಮೂಲಕ ಜೀವಕ್ಕೂ, ಭಕ್ತಿಗೂ ಬೇಕಾದದ್ದೆಲ್ಲವನ್ನೂ ದಾನಮಾಡಲಾಗಿದೆಯೆಂದು ನಾವು ಬಲ್ಲೆವು.

[4] ನೀವು ಲೋಕದಲ್ಲಿ ದುರಾಶೆಯಿಂದುಂಟಾಗುವ ಕೆಟ್ಟತನದಿಂದ ದೂರವಾಗಿ ದೈವಸ್ವಭಾವದಲ್ಲಿ ಪಾಲನ್ನು ಹೊಂದುವವರಾಗಬೇಕೆಂಬ ಉದ್ದೇಶದಿಂದ ದೇವರು ತನ್ನ ಅತ್ಯಂತ ಮಹತ್ವವುಳ್ಳ ಮತ್ತು ಅಮೂಲ್ಯವಾದ ವಾಗ್ದಾನಗಳನ್ನು ನಮಗೆ ದಯಪಾಲಿಸಿದ್ದಾನೆ.

[5] ಈ ಕಾರಣದಿಂದಲೇ ನೀವು ಪೂರ್ಣಾಸಕ್ತಿಯುಳ್ಳವರಾಗಿ ನಿಮಗಿರುವ ನಂಬಿಕೆಗೆ ಸದ್ಗುಣವನ್ನೂ, ಸದ್ಗುಣಕ್ಕೆ ಜ್ಞಾನವನ್ನೂ,

[6] ಜ್ಞಾನಕ್ಕೆ ದಮೆಯನ್ನೂ, ದಮೆಗೆ ತಾಳ್ಮೆಯನ್ನೂ,

[7] ತಾಳ್ಮೆಗೆ ಭಕ್ತಿಯನ್ನೂ, ಭಕ್ತಿಗೆ ಸಹೋದರ ಸ್ನೇಹವನ್ನೂ, ಸಹೋದರ ಸ್ನೇಹಕ್ಕೆ ಪ್ರೀತಿಯನ್ನೂ ಕೂಡಿಸಿರಿ.

[8] ಇವು ನಿಮ್ಮಲ್ಲಿದ್ದು ಬೆಳೆದು ಬಂದರೆ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಕುರಿತಾದ ಪರಿಜ್ಞಾನದಲ್ಲಿ ನೀವು ನಿರುತ್ಸಾಹಿಗಳೂ, ನಿಷ್ಪ್ರಯೋಜಕರೂ ಆಗದಂತೆ ಮಾಡುತ್ತವೆ.

[9] ಇವುಗಳಿಲ್ಲದವನು ಕುರುಡನಾಗಿದ್ದಾನೆ. ಅವನು ದೂರ ದೃಷ್ಟಿಯಿಲ್ಲದವನಾಗಿದ್ದು ತನ್ನ ಹಿಂದಣ ಪಾಪಗಳು ಪರಿಹಾರವಾಗಿ ತಾನು ಶುದ್ಧನಾದದ್ದನ್ನು ಮರೆತುಬಿಟ್ಟಿದ್ದಾನೆ.

[10] ಆದ್ದರಿಂದ ಸಹೋದರರೇ, ದೇವರಲ್ಲಿ ನಿಮ್ಮ ಕರೆಯುವಿಕೆಯನ್ನೂ, ಆಯ್ಕೆಯನ್ನೂ ದೃಢಪಡಿಸಿಕೊಳ್ಳುವುದಕ್ಕೆ ಮತ್ತಷ್ಟು ಪ್ರಯಾಸಪಡಿರಿ. ಏಕೆಂದರೆ ನೀವು ಹೀಗೆ ಮಾಡುವುದಾದರೆ ಎಂದಿಗೂ ಎಡುವುದಿಲ್ಲ.

[11] ಹೀಗಿರುವುದರಿಂದ ನಮ್ಮ ಕರ್ತನೂ, ರಕ್ಷಕನೂ ಆಗಿರುವ ಯೇಸುಕ್ರಿಸ್ತನ ನಿತ್ಯ ರಾಜ್ಯದಲ್ಲಿ ನಿಮಗೆ ಧಾರಾಳವಾಗಿ ಪ್ರವೇಶವು ದೊರೆಯುವುದು.

[12] ಆದ್ದರಿಂದ ನೀವು ಈ ಸಂಗತಿಗಳನ್ನು ತಿಳಿದವರಾಗಿ ನಿಮಗೆ ದೊರೆತಿರುವ ಸತ್ಯದಲ್ಲಿ ಸ್ಥಿರವಾಗಿದ್ದರೂ ಅವುಗಳನ್ನು ನಿಮಗೆ ನೆನಪಿಸಿಕೊಡುವುದಕ್ಕೆ ನಾನು ಯಾವಾಗಲೂ ಸಿದ್ಧವಾಗಿರುವೆನು.

[13] ನಾನು ನನ್ನ ದೇಹವೆಂಬ ಗುಡಾರದಲ್ಲಿರುವ ತನಕ ನಿಮ್ಮನ್ನು ನೆನಪುಮಾಡಿಸಿ ಪ್ರೇರೇಪಿಸುವುದು ಯುಕ್ತವೆಂದೆಣಿಸಿದ್ದೇನೆ.

[14] ಏಕೆಂದರೆ ನಮ್ಮ ಕರ್ತನಾದ ಯೇಸು ಕ್ರಿಸ್ತನು ನನಗೆ ತಿಳಿಸಿದ ಪ್ರಕಾರ ನಾನು ಈ ಗುಡಾರವನ್ನು ಬಿಟ್ಟುಹೋಗುವ ಕಾಲವು ಸಮೀಪವಾಗಿದೆಯೆಂದು ಬಲ್ಲೆನು.

[15] ನೀವು ನನ್ನ ಮರಣಾನಂತರ ಇವುಗಳನ್ನು ಯಾವಾಗಲೂ ಜ್ಞಾಪಕ ಮಾಡಿಕೊಳ್ಳುವುದಕ್ಕಾಗಿ ನಾನು ಆಸಕ್ತಿವಹಿಸುವೆನು.

[16] ನಮ್ಮ ಕರ್ತನಾದ ಯೇಸುಕ್ರಿಸ್ತನ ಶಕ್ತಿಯನ್ನೂ, ಪ್ರತ್ಯಕ್ಷತೆಯನ್ನೂ ನಿಮಗೆ ತಿಳಿಯಪಡಿಸಿದ್ದರಲ್ಲಿ ಚಮತ್ಕಾರದಿಂದ ಕಲ್ಪಿಸಿದ ಕಟ್ಟುಕಥೆಗಳನ್ನು ನಾವು ಅನುಸರಿಸಲಿಲ್ಲ. ಆತನ ಮಹತ್ತನ್ನು ಕಣ್ಣಾರೆ ಕಂಡವರಾಗಿಯೇ ಅದನ್ನು ತಿಳಿಯಪಡಿಸಿದೆವು.

[17] ಏಕೆಂದರೆ, “ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ” ಎಂಬ ವಾಣಿಯು ಮಹೋನ್ನತವಾದ ಮಹಿಮೆಯಿಂದ ಆತನಿಗೆ ಉಂಟಾದದ್ದರಲ್ಲಿ ಆತನು ತಂದೆಯಾದ ದೇವರಿಂದ ಗೌರವವನ್ನೂ, ಮಹಿಮೆಯನ್ನೂ ಹೊಂದಿದನಲ್ಲವೇ.

[18] ನಾವು ಪರಿಶುದ್ಧ ಪರ್ವತದ ಮೇಲೆ ಆತನ ಸಂಗಡ ಇದ್ದಾಗ ಪರಲೋಕದಿಂದ ಬಂದ ಆ ವಾಣಿಯನ್ನು ನಾವು ಕೇಳಿಸಿಕೊಂಡೆವು.

[19] ಇದಲ್ಲದೆ ಪ್ರವಾದನವಾಕ್ಯವು ನಮಗೆ ಬಹುದೃಢವಾಗಿ ದೊರೆತಿದೆ. ಆ ದಿನವು ಅರುಣೋದಯವಾಗುವರೆಗೆ ಮತ್ತು ಉದಯ ನಕ್ಷತ್ರವು ನಿಮ್ಮ ಹೃದಯಗಳಲ್ಲಿ ಮೂಡುವತನಕ ಅದನ್ನು ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸುವ ದೀಪವೆಂದೆಣಿಸಿ ಅದಕ್ಕೆ ಲಕ್ಷ್ಯಕೊಟ್ಟರೆ ಒಳ್ಳೆಯದು.

[20] ಯಾವ ಪ್ರವಾದನಾ ವಾಕ್ಯವೂ ಕೇವಲ ಮನುಷ್ಯನ ಸ್ವಬುದ್ಧಿಯಿಂದ ವಿವರಿಸತಕ್ಕಂಥದ್ದಲ್ಲವೆಂಬುದನ್ನು ಮುಖ್ಯವಾಗಿ ಮೊದಲು ತಿಳಿದುಕೊಳ್ಳಿರಿ.

[21] ಏಕೆಂದರೆ ಯಾವ ಪ್ರವಾದನೆಯೂ ಎಂದೂ ಮನುಷ್ಯರ ಚಿತ್ತದಿಂದ ಉಂಟಾಗಲಿಲ್ಲ. ಆದರೆ ಮನುಷ್ಯರು ಪವಿತ್ರಾತ್ಮಪ್ರೇರಿತರಾಗಿ ದೇವರಿಂದ ಹೊಂದಿದ್ದನ್ನೇ ಮಾತನಾಡಿರುವುದು.

2 ಪೇತ್ರನು — Chapters