[1] ಆದರೆ ಇಸ್ರಾಯೇಲ್ ಜನರೊಂದಿಗೆ ಸುಳ್ಳುಪ್ರವಾದಿಗಳೂ ಸಹ ಇದ್ದರು. ಅದೇ ಪ್ರಕಾರ ನಿಮ್ಮಲ್ಲಿಯೂ ಸುಳ್ಳುಬೋಧಕರು ಇರುವರು. ಅವರು ಹಾನಿಕರವಾದ ದುರ್ಬೋಧನೆಗಳನ್ನು ರಹಸ್ಯವಾಗಿ ಒಳಗೆತರುವವರೂ ತಮ್ಮನ್ನು ಕೊಂಡುಕೊಂಡ ಒಡೆಯನನ್ನೂ ಕೂಡ ಅಲ್ಲಗಳೆಯುವವರೂ ಆಗಿದ್ದು ಫಕ್ಕನೆ ತಮ್ಮ ಮೇಲೆ ನಾಶನವನ್ನು ಬರಮಾಡಿಕೊಳ್ಳುವರು.
[2] ಅವರ ದುಷ್ಕರ್ಮಗಳ ಮಾರ್ಗವನ್ನು ಅನೇಕರು ಅನುಸರಿಸುವರು. ಅವರ ನಿಮಿತ್ತ ಸತ್ಯಮಾರ್ಗಕ್ಕೆ ದೂಷಣೆ ಉಂಟಾಗುವುದು.
[3] ಅವರು ದ್ರವ್ಯಾಶೆಯುಳ್ಳವರಾಗಿ ಕಲ್ಪಿತ ಮಾತುಗಳನ್ನಾಡುತ್ತಾ ನಿಮ್ಮನ್ನು ಮಾರಾಟಮಾಡಿ ಲಾಭವನ್ನು ಸಂಪಾದಿಸಬೇಕೆಂದಿರುವರು. ಧೀರ್ಘಕಾಲದಿಂದ ಅಂಥವರಿಗಿರುವಂಥ ದಂಡನೆಯ ತೀರ್ಪು ತಪ್ಪದೆ ಬರುತ್ತಿರುವುದು. ಅವರಿಗೆ ಬರುವ ನಾಶವು ತೂಕಡಿಸುವುದಿಲ್ಲ.
[4] ಹೇಗೆಂದರೆ ದೇವದೂತರು ಪಾಪಮಾಡಿದಾಗ ದೇವರು ಅವರನ್ನು ಸುಮ್ಮನೆ ಬಿಡದೆ ನರಕಕ್ಕೆ ದೊಬ್ಬಿ ನ್ಯಾಯತೀರ್ಪನ್ನು ಹೊಂದುವುದಕ್ಕಾಗಿ ಸಂಕೋಲೆಗಳಿಂದ ಬಂಧಿಸಿ ಕತ್ತಲೆಯ ಕೂಪಕ್ಕೆ ಒಪ್ಪಿಸಿದನು.
[5] ಆತನು ಭಕ್ತಿಹೀನರಾದ ಪುರಾತನ ಲೋಕವನ್ನು ಸುಮ್ಮನೆ ಬಿಡದೆ ಅವರ ಮೇಲೆ ಜಲಪ್ರಳಯವನ್ನು ಬರಮಾಡಿದನು. ಆದರೆ ಸುನೀತಿಯನ್ನು ಸಾರುತ್ತಿದ್ದ ನೋಹನನ್ನೂ ಮತ್ತು ಅವನೊಂದಿಗಿದ್ದ ಇತರ ಏಳು ಜನರನ್ನು ಮಾತ್ರ ಉಳಿಸಿದನು.
[6] ಆತನು ಸೊದೋಮ್ ಗೊಮೋರ ಪಟ್ಟಣಗಳನ್ನು ಸುಟ್ಟು ಬೂದಿಮಾಡಿ ಇನ್ನು ಮೇಲೆ ಭಕ್ತಿಹೀನರಾಗಿ ಬದುಕುವವರಿಗೆ ಬರುವ ದುರ್ಗತಿಯನ್ನು ಸೂಚಿಸುವುದಕ್ಕಾಗಿ ದೃಷ್ಟಾಂತವಾಗಿ ಅವುಗಳಿಗೆ ದಂಡನೆಯನ್ನು ವಿಧಿಸಿದನು.
[7] ಆದರೆ ದೇವರು ಆ ದುಷ್ಟರ ಅನೈತಿಕ ನಡತೆಗೆ ನೊಂದುಕೊಂಡಿದ್ದ ನೀತಿವಂತನಾದ ಲೋಟನನ್ನು ಕಾಪಾಡಿದನು.
[8] ಏಕೆಂದರೆ ಆ ನೀತಿವಂತನು ಅವರ ಮಧ್ಯದಲ್ಲಿ ಇದ್ದುಕೊಂಡು ಅವರ ಅನ್ಯಾಯ ಕೃತ್ಯಗಳನ್ನು ನೋಡುತ್ತಾ ಕೇಳುತ್ತಾ ಅವುಗಳ ನಿಮಿತ್ತ ದಿನೇ ದಿನೇ ತನ್ನ ನೀತಿಯುಳ್ಳ ಆತ್ಮದಲ್ಲಿ ಬಹಳವಾಗಿ ನೊಂದುಕೊಂಡನು.
[9] ಕರ್ತನು ಭಕ್ತರನ್ನು ಕಷ್ಟಗಳಿಂದ ರಕ್ಷಿಸುವುದಕ್ಕೂ ಅನೀತಿವಂತರನ್ನು ಶಿಕ್ಷಿಸುವುದಕ್ಕಾಗಿ ನ್ಯಾಯತೀರ್ಪಿನ ದಿನದ ತನಕ ಇಡುವುದಕ್ಕೂ ಬಲ್ಲವನಾಗಿದ್ದಾನೆ.
[10] ಮುಖ್ಯವಾಗಿ ಶಾರೀರಿಕ ಬಂಡುತನದ ದುರಾಶೆಗಳಲ್ಲಿ ನಡೆದು ಪ್ರಭುತ್ವವನ್ನು ತಿರಸ್ಕಾರ ಮಾಡುವವರನ್ನು ಹೀಗೆ ಶಿಕ್ಷಿಸುವನು. ಇವರು ಯಾರಿಗೂ ಹೆದರದೇ ಸ್ವೇಚ್ಛಾಪರರಾಗಿದ್ದಾರೆ. ಮಹಿಮಾಪದವಿಯವರನ್ನು ನಿರ್ಭಯವಾಗಿ ದೂಷಿಸುವರು.
[11] ದೇವದೂತರು ಬಲದಲ್ಲಿಯೂ ಮಹತ್ತಿನಲ್ಲಿಯೂ ಶ್ರೇಷ್ಠರಾಗಿದ್ದರೂ ಕರ್ತನ ಮುಂದೆ ಅವರಿಗೆ ವಿರೋಧವಾಗಿ ದೂಷಣೆಯನ್ನು, ನಿಂದೆಯನ್ನು ಹೇಳದಿರಲು, ಆ ಗರ್ವಿಷ್ಠರು ಮಹಿಮಾಪದವಿಗಳನ್ನು ದೂಷಿಸಲು ಹಿಂಜರಿಯುವುದಿಲ್ಲ.
[12] ಸ್ವಾಭಾವಿಕವಾಗಿ ಸೆರೆಹಿಡಿಯಲ್ಪಟ್ಟು ನಾಶವಾಗುವುದಕ್ಕೆ ಹುಟ್ಟಿರುವ ವಿವೇಕಶೂನ್ಯ ಪ್ರಾಣಿಗಳಂತಿರುವ ಈ ದುರ್ಬೋಧಕರು ತಮಗೆ ತಿಳಿಯದವುಗಳ ವಿಷಯವಾಗಿ ದೂಷಿಸುವವರಾಗಿದ್ದಾರೆ. ಇವರು ತಮ್ಮ ಕೆಟ್ಟತನದಿಂದ ತಾವೇ ಸಂಪೂರ್ಣ ನಾಶವಾಗುವರು.
[13] ತಮ್ಮ ದುರ್ನೀತಿಗೆ ಸರಿಯಾದ ದುಷ್ಫಲವನ್ನು ಹೊಂದುವರು. ದುಂದುಗಾರಿಕೆಯಲ್ಲಿ ಹಗಲನ್ನು ಕಳೆಯುವುದೇ ಸುಖವೆಂದೆಣಿಸುತ್ತಾರೆ. ಇವರು ನಿಮ್ಮೊಂದಿಗೆ ಔತಣ ಮಾಡುತ್ತಿರುವಾಗ ವಂಚಕರಾಗಿದ್ದು ಉಂಡು ಕುಡಿದು ಕಳಂಕಕ್ಕೂ, ಅವಮಾನಕ್ಕೂ ಕಾರಣರಾಗಿದ್ದಾರೆ.
[14] ಇವರು ವ್ಯಭಿಚಾರಿಣಿಯನ್ನು ಕಂಡು ಆನಂದಿಸುವವರೂ, ಪಾಪವನ್ನು ಕಂಡು ತೃಪ್ತಿಹೊಂದದ ಕಣ್ಣುಳ್ಳವರೂ, ಚಂಚಲತೆ ಮನಸ್ಸುವುಳ್ಳವರನ್ನು ಮರುಳುಗೊಳಿಸುವವರೂ, ಹಣದಾಸೆಯಲ್ಲಿ ಪರಿಣಿತಿ ಪಡೆದ ಹೃದಯವುಳ್ಳವರೂ, ಶಾಪಗ್ರಸ್ತ ಮಕ್ಕಳೂ ಆಗಿದ್ದಾರೆ.
[15] ಇವರು ಸನ್ಮಾರ್ಗವನ್ನು ಬಿಟ್ಟವರು. ಹಾದಿ ತಪ್ಪಿದವರು ಮತ್ತು ಬೇಯೋರಿನ ಮಗನಾದ ಬಿಳಾಮನ ಮಾರ್ಗವನ್ನು ಹಿಡಿದವರಾಗಿದ್ದಾರೆ. ಈ ಬಿಳಾಮನು ಅನೀತಿಯಿಂದ ದೊರಕುವ ಸಂಭಾವನೆಯನ್ನು ಪ್ರೀತಿಸಿದನು.
[16] ಆದರೆ ಅವನ ದುಷ್ಟ ಕೃತ್ಯಕ್ಕೆ ಖಂಡನೆಯಾಯಿತು. ಮೂಕ ಪ್ರಾಣಿಯಾದ ಕತ್ತೆಯು ಮನುಷ್ಯಸ್ವರದಿಂದ ಮಾತನಾಡಿ ಆ ಪ್ರವಾದಿಯ ಹುಚ್ಚುತನವನ್ನು ಅಡ್ಡಿ ಮಾಡಿತು.
[17] ಇವರು ನೀರಿಲ್ಲದ ಹಾಳು ಬಾವಿಗಳೂ, ಬಿರುಗಾಳಿಯಿಂದ ಬಡಿಸಿಕೊಂಡು ಹಾರಿಹೋಗುವ ಮೋಡಗಳೂ ಆಗಿದ್ದಾರೆ. ಇಂಥವರಿಗಾಗಿ ಕಗ್ಗತ್ತಲೆಯನ್ನು ಸಂಗ್ರಹಿಸಿ ಇಡಲಾಗಿದೆ.
[18] ಕೇಡುಕಿನ ಮಾರ್ಗದಲ್ಲಿ ನಡೆಯುವವರ ಸಹವಾಸದಿಂದ ಹೊಸದಾಗಿ ತಪ್ಪಿಸಿಕೊಂಡವರ ಸಂಗಡ ಇವರು ಹುರುಳಿಲ್ಲದ ಪೊಳ್ಳು ಮಾತುಗಳನ್ನಾಡಿ ಕೆಟ್ಟ ಕಾಮಾಭಿಲಾಷೆ ಹುಟ್ಟಿಸಿ ಅತಿಯಾದ ಬಂಡುತನದಿಂದ ಅವರನ್ನು ಮರುಳುಗೊಳಿಸುತ್ತಾರೆ.
[19] ಇಂಥವರು ಸ್ವಾತಂತ್ರ್ಯ ಕೊಡುತ್ತೇವೆಂದು ಅವರಿಗೆ ವಾಗ್ದಾನಮಾಡುತ್ತಾರೆ. ಆದರೆ ತಾವೇ ಕೆಟ್ಟತನಕ್ಕೆ ದಾಸರಾಗಿದ್ದಾರೆ. ಒಬ್ಬನು ಯಾವುದಕ್ಕೆ ಸೋಲುವನೋ ಅವನು ಅದರ ದಾಸನಾಗಿದ್ದಾನಷ್ಟೇ.
[20] ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನನ್ನು ಕುರಿತಾದ ಪರಿಜ್ಞಾನಹೊಂದಿ ಲೋಕದ ಮಲಿನತ್ವಗಳಿಗೆ ತಪ್ಪಿಸಿಕೊಂಡವರು ತಿರುಗಿ ಅವುಗಳಲ್ಲಿ ಸಿಕ್ಕಿಕೊಂಡು ಸೋತುಹೋದರೆ ಅವರ ಅಂತ್ಯಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗಿರುವುದು.
[21] ಅವರು ನೀತಿಮಾರ್ಗವನ್ನು ತಿಳಿದು ತಮಗೆ ಕೊಡಲ್ಪಟ್ಟ ಪರಿಶುದ್ಧ ಆಜ್ಞೆಯನ್ನು ಬಿಟ್ಟು ದೂರ ಹೋಗುವುದಕ್ಕಿಂತ ಆ ಮಾರ್ಗವನ್ನು ತಿಳಿಯದೆ ಹೋಗಿದ್ದರೆ ಚೆನ್ನಾಗಿತ್ತು.
[22] “ನಾಯಿ ತಾನು ಕಕ್ಕಿದ್ದನ್ನು ನೆಕ್ಕುವುದಕ್ಕೆ ತಿರುಗಿಕೊಂಡಿತು. ಮತ್ತು ಮೈತೊಳೆದ ಹಂದಿ ಕೆಸರಿನಲ್ಲಿ ಹೊರಳಾಡುವುದಕ್ಕೆ ಹೋಯಿತು.” ಎಂಬ ಗಾದೆ ಅವರಿಗೆ ಸರಿಯಾಗಿ ಅನ್ವಯಿಸುತ್ತದೆ.