Skip to content
Opens in a new window
Listen to this chapter • 2:55

[1] ಸಭೆಯ ಹಿರಿಯನಾದ ನಾನು, ಪೂರ್ಣಹೃದಯದಿಂದ ಪ್ರೀತಿಸುವ ಪ್ರಿಯ ಗಾಯನಿಗೆ ಬರೆಯುವುದೇನಂದರೆ;

[2] ಪ್ರಿಯನೇ, ನೀನು, ನಿನ್ನ ಆತ್ಮ ವಿಷಯದಲ್ಲಿ ಅಭಿವೃದ್ಧಿ ಹೊಂದಿರುವ ಪ್ರಕಾರವೇ, ಎಲ್ಲಾ ವಿಷಯಗಳಲ್ಲಿಯೂ ಅಭಿವೃದ್ಧಿಹೊಂದಿ, ಸುಕ್ಷೇಮವಾಗಿ ಇರಬೇಕೆಂದು ನಾನು ಪ್ರಾರ್ಥಿಸುತ್ತೇನೆ.

[3] ಸಹೋದರರು ಆಗಾಗ್ಗೆ ನನ್ನ ಬಳಿಗೆ ಬಂದು, ನಿನ್ನಲ್ಲಿರುವ ಸತ್ಯವನ್ನು ಕುರಿತು ಮತ್ತು ನೀನು ಸತ್ಯವಂತನಾಗಿ ಜೀವಿಸುವವನು ಎಂದು ಹೇಳುವುದನ್ನು ಕೇಳುವಾಗ, ನಾನು ಬಹಳ ಸಂತೋಷಪಟ್ಟೆನು.

[4] ನನ್ನ ಮಕ್ಕಳು ಸತ್ಯವನ್ನನುಸರಿಸಿ ಜೀವಿಸುವವರಾಗಿದ್ದಾರೆಂಬುದನ್ನು ಕೇಳಿಸಿಕೊಳ್ಳುವುದಕ್ಕಿಂತ ಹೆಚ್ಚಾದ ಸಂತೋಷವು ನನಗಿಲ್ಲ.

[5] ಪ್ರಿಯನೇ, ನೀನು ಸಹೋದರರಿಗೂ ಅದಕ್ಕಿಂತಲೂ ಹೆಚ್ಚಾಗಿ ಅತಿಥಿಗಳನ್ನು ಸತ್ಕಾರ ಮಾಡುವುದರಲ್ಲಿ ನಂಬಿಗಸ್ತನಾಗಿ ನಡೆಯುತ್ತಿರುವಿ.

[6] ಅವರು ಸಭೆಯ ಮುಂದೆ ನೀನು ತೋರಿಸಿದ ಪ್ರೀತಿಯ ಕುರಿತು ಸಾಕ್ಷಿ ಹೇಳಿದ್ದಾರೆ. ಅವರು ತಮ್ಮ ಸಂಚಾರವನ್ನು ಇನ್ನೂ ಮುಂದುವರಿಸುವಂತೆ ದೇವರು ಮೆಚ್ಚುವ ರೀತಿಯಲ್ಲಿ ನೀನು ನೆರವಾಗಬೇಕು.

[7] ಏಕೆಂದರೆ, ಅವರು ಕ್ರಿಸ್ತನ ಹೆಸರನ್ನು ಪ್ರಚುರಪಡಿಸುವ ನಿಮಿತ್ತವಾಗಿ ಹೊರಟಿದ್ದಾರೆ. ಅನ್ಯಜನಗಳಿಂದ ಏನೂ ತೆಗೆದುಕೊಳ್ಳುವವರಲ್ಲ.

[8] ಆದುದರಿಂದ, ನಾವು ಸತ್ಯಕ್ಕೆ ಸಹಕಾರಿಗಳಾಗುವಂತೆ, ಅಂಥವರನ್ನು ಸೇರಿಸಿಕೊಳ್ಳುವ ಹಂಗಿನಲ್ಲಿದ್ದೇವೆ.

[9] ನಿಮ್ಮ ಸಭೆಗೆ ನಾನು ಕೆಲವು ಮಾತುಗಳನ್ನು ಬರೆದಿದ್ದೆನು; ಅಲ್ಲಿಯ ಸಭೆಗೆ ಪ್ರಮುಖನಾಗಬೇಕೆಂದಿರುವ ದಿಯೊತ್ರೇಫನು ನಮ್ಮ ಮಾತನ್ನು ಅಂಗೀಕರಿಸುತ್ತಿಲ್ಲ.

[10] ಆದಕಾರಣ, ನಾನು ಅಲ್ಲಿಗೆ ಬಂದಾಗ ಅವನು ಮಾಡುವ ಕೃತ್ಯಗಳನ್ನು ಕುರಿತು ಎಲ್ಲರಿಗೂ ತಿಳಿಸುವೆನು. ಅವನು ಹರಟೆಕೊಚ್ಚುವವನಾಗಿ, ನಮ್ಮ ವಿಷಯದಲ್ಲಿ ಅಪ ಪ್ರಚಾರ ಮಾಡುತ್ತಿದ್ದಾನೆ. ಇದರ ಜೊತೆಗೆ ಯಾವ ಸಹೋದರರನ್ನು ಸೇರಿಸಿಕೊಳ್ಳುವುದಿಲ್ಲ ಹಾಗೂ ನಾನು ಸೇರಿಸಿಕೊಳ್ಳಬೇಕೆಂದಿರುವವರಿಗೆ ಅಡ್ಡಿಮಾಡಿ ಅವರನ್ನು ಸಭೆಯೊಳಗಿಂದ ಬಹಿಷ್ಕರಿಸುತ್ತಾನೆ.

[11] ಪ್ರಿಯನೇ, ನೀನು ಕೆಟ್ಟ ನಡತೆಯನ್ನು ಅನುಸರಿಸದೆ, ಒಳ್ಳೆಯ ನಡತೆಯನ್ನು ಅನುಸರಿಸು; ಒಳ್ಳೆಯದನ್ನು ಮಾಡುವವನು ದೇವರ ಮಗನಾಗಿರುತ್ತಾನೆ. ಕೆಟ್ಟದ್ದನ್ನು ಮಾಡುವವನು ದೇವರನ್ನು ಕಂಡವನಲ್ಲ.

[12] ದೇಮೇತ್ರಿಯನು ಎಲ್ಲರಿಂದಲೂ, ಒಳ್ಳೆಯವನೆಂದು ಗುರುತಿಸಲ್ಪಟ್ಟಿದ್ದಾನೆ. ಅಲ್ಲದೆ ಸಾಕ್ಷಿಹೊಂದಿದವನಾಗಿದ್ದಾನೆ. ಅಷ್ಟೇ ಅಲ್ಲದೆ ನಾವು ಅವನ ಪರವಾಗಿ ಸಾಕ್ಷಿಕೊಡುತ್ತದೆ; ನಮ್ಮ ಸಾಕ್ಷಿ ಸತ್ಯವಾದದ್ದೆಂದು ನೀನು ಬಲ್ಲವನಾಗಿದ್ದೀಯ.

[13] ನಾನು ನಿನಗೆ ಬರೆಯಬೇಕಾದ ಅನೇಕ ವಿಷಯಗಳಿವೆ, ಆದರೆ ಮಸಿಯಿಂದ ಕಾಗದದ ಮೇಲೆ ಬರೆಯುವುದಕ್ಕೆ ನನಗಿಷ್ಟವಿಲ್ಲ.

[14] ನಾನು ಬೇಗನೆ ಬಂದು ನಿನ್ನನ್ನು ನೋಡುವೆನೆಂದು ನಿರೀಕ್ಷಿಸುತ್ತೇನೆ. ಆಗ ನಾವು ಮುಖಾ ಮುಖಿಯಾಗಿ ಮಾತನಾಡೋಣ.

[15] ನಿನಗೆ ಶಾಂತಿ ಇರಲಿ. ಸ್ನೇಹಿತರು ನಿನಗೆ ವಂದನೆ ಹೇಳುತ್ತಾರೆ. ಅಲ್ಲಿರುವ ಪ್ರತಿಯೊಬ್ಬ ಸ್ನೇಹಿತರೆಲ್ಲರನ್ನೂ ಹೆಸರಿಸಿ ವಂದಿಸು.