Skip to content
Opens in a new window
Listen to this chapter • 7:29

[1] ಯೆಹೋವ ದೇವರ ಕೋಪದ ಕೋಲಿನಿಂದ ಕಷ್ಟವನ್ನು ನೋಡಿದ ಮನುಷ್ಯನು ನಾನೇ.

[2] ಅವರು ನನ್ನನ್ನು ಕರೆತಂದು ನಡೆಸಿದ್ದು ಕತ್ತಲೆಗೇ ಹೊರತು ಬೆಳಕಿಗಲ್ಲ.

[3] ನಿಶ್ಚಯವಾಗಿ ಅವರು ನನಗೆ ವಿರೋಧವಾಗಿ ತಿರುಗಿದ್ದಾರೆ. ಅವರು ದಿನವೆಲ್ಲಾ ತಮ್ಮ ಕೈಯನ್ನು ನನಗೆ ವಿರೋಧವಾಗಿ ತಿರುಗಿಸಿದ್ದಾರೆ.

[4] ನನ್ನ ಮಾಂಸ, ಚರ್ಮವನ್ನು ಆತನು ಹಳೆಯದನ್ನಾಗಿ ಮಾಡಿದ್ದಾರೆ. ಅವರು ನನ್ನ ಎಲುಬುಗಳನ್ನು ಮುರಿದಿದ್ದಾರೆ.

[5] ಅವರು ನನಗೆ ವಿರೋಧವಾಗಿ ಕಟ್ಟಿದ್ದಾರೆ ಮತ್ತು ನನ್ನನ್ನು ವಿಷದಿಂದಲೂ, ಸಂಕಟದಿಂದಲೂ ಸುತ್ತಿಕೊಂಡಿದ್ದಾರೆ.

[6] ಅವರು ನನ್ನನ್ನು ಬಹುಕಾಲದ ಹಿಂದೆ ಸತ್ತವರ ಹಾಗೆ, ಕತ್ತಲೆಯ ಸ್ಥಳಗಳಲ್ಲಿ ಇರಿಸಿದ್ದಾರೆ.

[7] ನಾನು ಹೊರಗೆ ಬಾರದ ಹಾಗೆ, ಅವರು ನನ್ನ ಸುತ್ತಲೂ ಗೋಡೆಯನ್ನು ಕಟ್ಟಿದ್ದಾರೆ. ಅವರು ನನ್ನ ಸಂಕೋಲೆಯ ಭಾರವನ್ನು ಹೆಚ್ಚಿಸಿದ್ದಾರೆ.

[8] ನಾನು ಕರೆದು ಕೂಗಿದರೂ ಅವರು ನನ್ನ ಪ್ರಾರ್ಥನೆಯನ್ನು ಲಾಲಿಸುವುದಿಲ್ಲ.

[9] ಕೆತ್ತಿದ ಕಲ್ಲಿನಿಂದ ನನ್ನ ಮಾರ್ಗಗಳನ್ನು ಮುಚ್ಚಿ, ಆ ನನ್ನ ದಾರಿಗಳನ್ನು ಡೊಂಕು ಮಾಡಿದ್ದಾನೆ.

[10] ಅವರು ನನಗೆ ಹೊಂಚು ಹಾಕುವ ಕರಡಿಯ ಹಾಗೆಯೂ, ಗುಪ್ತ ಸ್ಥಳಗಳಲ್ಲಿರುವ ಸಿಂಹದ ಹಾಗೆಯೂ ಇದ್ದಾರೆ.

[11] ಅವರು ನನ್ನ ಮಾರ್ಗಗಳನ್ನು ತಪ್ಪಿಸಿ, ನನ್ನನ್ನು ತುಂಡುಗಳನ್ನಾಗಿ ಕತ್ತರಿಸಿ, ನನ್ನನ್ನು ಹಾಳು ಮಾಡಿದ್ದಾರೆ.

[12] ಅವರು ತನ್ನ ಬಿಲ್ಲನ್ನು ಬಗ್ಗಿಸಿದ್ದಾರೆ, ನನ್ನನ್ನು ಬಾಣಕ್ಕೆ ಗುರಿಮಾಡಿದ್ದಾರೆ.

[13] ಅವರು ತನ್ನ ಬತ್ತಳಿಕೆಯಲ್ಲಿನ ಬಾಣಗಳನ್ನು ನನ್ನ ಅಂತರಂಗಗಳಲ್ಲಿ ತೂರಿ ಹೋಗುವಹಾಗೆ ಮಾಡಿದ್ದಾರೆ.

[14] ನಾನು ನನ್ನ ಎಲ್ಲಾ ಜನರಿಗೆ ಹಾಸ್ಯವೂ, ದಿನವೆಲ್ಲವೂ ಅವರ ಗೇಲಿಯ ಹಾಡಾಗಿಯೂ ಇದ್ದೇನೆ.

[15] ಅವರು ನನ್ನನ್ನು ಕಹಿಯಿಂದ ತುಂಬಿಸಿ, ವಿಷ ಸಸ್ಯಗಳಿಂದ ನನ್ನನ್ನು ತಣಿಸಿದ್ದಾರೆ.

[16] ಅವರು ನುರುಜು ಕಲ್ಲುಗಳಿಂದ ನನ್ನ ಹಲ್ಲುಗಳನ್ನು ಮುರಿದು, ಅವರು ನನ್ನನ್ನು ಧೂಳಿನಲ್ಲಿ ತುಳಿದಿದ್ದಾರೆ.

[17] ನನ್ನ ಪ್ರಾಣವನ್ನು ಸಮಾಧಾನದಿಂದ ದೂರ ಮಾಡಿದ್ದಾರೆ, ನಾನು ಸಮೃದ್ಧಿಯನ್ನು ಮರೆತುಬಿಟ್ಟೆನು.

[18] “ಅಯ್ಯೋ, ನನ್ನ ಬಲವು ಮತ್ತು ನನ್ನ ನಿರೀಕ್ಷೆಯು ಯೆಹೋವ ದೇವರಿಂದ ನಾಶವಾದವು,” ಎಂದು ನಾನು ಹೇಳಿದೆನು.

[19] ನನ್ನ ಸಂಕಟವನ್ನು, ನನ್ನ ಅಲೆದಾಡುವಿಕೆಯನ್ನು, ನನ್ನ ಕಹಿಯನ್ನು, ನನ್ನ ವಿಷತನವನ್ನು ನಾನು ಜ್ಞಾಪಕಮಾಡಿಕೊಂಡಿದ್ದೇನೆ.

[20] ನನ್ನ ಪ್ರಾಣವು ಇನ್ನೂ ಅವುಗಳನ್ನು ಜ್ಞಾಪಿಸಿಕೊಳ್ಳುತ್ತಾ ನನ್ನೊಳಗೆ ಕುಂದಿಹೋಗಿದೆ.

[21] ಇದನ್ನು ನಾನು ನನ್ನ ಮನಸ್ಸಿಗೆ ತಂದುಕೊಳ್ಳುತ್ತೇನೆ. ಆದ್ದರಿಂದ ನನಗೆ ನಿರೀಕ್ಷೆ ಇದೆ.

[22] ನಾವು ನಾಶವಾಗದೇ ಉಳಿದಿರುವುದು ಯೆಹೋವ ದೇವರ ಮಹಾ ಪ್ರೀತಿಯಿಂದಲೇ. ಏಕೆಂದರೆ ಅವರ ಅನುಕಂಪಗಳು ಮುಗಿಯುವುದಿಲ್ಲ.

[23] ಅವು ಪ್ರತಿ ಮುಂಜಾನೆಯೂ ಹೊಸದಾಗಿರುವುವು. ನಿನ್ನ ನಂಬಿಗಸ್ತಿಕೆಯು ಮಹತ್ತಾದದ್ದು.

[24] “ಯೆಹೋವ ದೇವರೇ ನನ್ನ ಪಾಲು, ಆದ್ದರಿಂದ ನಾನು ಅವರಿಗಾಗಿ ಕಾದಿರುತ್ತೇನೆ,” ಎಂದು ನಾನು ನನ್ನೊಳಗೆ ಎಂದುಕೊಳ್ಳುವೆನು.

[25] ಆತನನ್ನು ನಿರೀಕ್ಷಿಸುವವರಿಗೂ, ಆತನನ್ನು ಹುಡಕುವವರಿಗೂ ಯೆಹೋವ ದೇವರು ಒಳ್ಳೆಯವರಾಗಿದ್ದಾರೆ.

[26] ಮನುಷ್ಯನು ಮೌನವಾಗಿ ಯೆಹೋವ ದೇವರ ರಕ್ಷಣೆಗೆ ಕಾಯುವುದು ಒಳ್ಳೆಯದು.

[27] ತನ್ನ ಯೌವನದಲ್ಲಿ ನೊಗವನ್ನು ಹೊಂದಿರುವುದು ಮಾನವನಿಗೆ ಒಳ್ಳೆಯದು.

[28] ಅವನು ಒಂಟಿಯಾಗಿ ಕುಳಿತು ಮೌನವಾಗಿರಲಿ. ಏಕೆಂದರೆ ಯೆಹೋವ ದೇವರೇ ಅದನ್ನು ಅವನ ಮೇಲೆ ಹೊರಿಸಿದ್ದಾರೆ.

[29] ಒಂದು ವೇಳೆ ನಿರೀಕ್ಷೆ ಇರಬಹುದೇನೋ ಎಂದು ಅವನು ತನ್ನ ಮುಖವನ್ನು ಧೂಳಿನಲ್ಲಿ ಇಟ್ಟುಕೊಳ್ಳಲಿ.

[30] ಅವನು ತನ್ನನ್ನು ಹೊಡೆಯುವವನಿಗೆ ಕೆನ್ನೆ ಕೊಡಲಿ. ಅವನು ನಿಂದೆಯಿಂದಲೇ ತುಂಬಿರಲಿ.

[31] ಏಕೆಂದರೆ ಕರ್ತದೇವರು ಜನರನ್ನು ಎಂದೆಂದಿಗೂ ತಳ್ಳಿಬಿಡುವುದಿಲ್ಲ.

[32] ಆತನು ದುಃಖಪಡಿಸಿದರೂ, ತನ್ನ ಒಡಂಬಡಿಕೆಯ ಮಹಾಪ್ರೀತಿಯಿಂದ ಅನುಕಂಪ ತೋರಿಸುವರು.

[33] ಏಕೆಂದರೆ ಆತನು ಬೇಕೆಂದು ಮನುಷ್ಯರ ಮಕ್ಕಳಿಗೆ ಬಾಧೆಯನ್ನೂ, ದುಃಖವನ್ನೂ ಕೊಡುವುದಿಲ್ಲ.

[34] ಭೂಲೋಕದ ಸೆರೆಯವರನ್ನೆಲ್ಲಾ ಕಾಲುಗಳ ಕೆಳಗೆ ತುಳಿಯುವುದನ್ನೂ,

[35] ಮಹೋನ್ನತನ ಸನ್ನಿಧಿಯಲ್ಲಿ ಮನುಷ್ಯನ ನ್ಯಾಯವನ್ನು ನಿರಾಕರಿಸುವುದನ್ನೂ,

[36] ಮನುಷ್ಯನನ್ನು ಅವನ ಜಗಳದಲ್ಲಿ ಅನ್ಯಾಯವಾಗಿ ತೀರಿಸುವುದು ಕರ್ತದೇವರು ಮೆಚ್ಚುವುದಿಲ್ಲ.

[37] ಕರ್ತದೇವರು ಆಜ್ಞಾಪಿಸದೆ ಇರುವಾಗ, ಸಂಭವಿಸಿ ನಡೆಯುವ ಹಾಗೆ ಹೇಳುವವನು ಯಾರು?

[38] ಮಹೋನ್ನತರ ಬಾಯಿಂದ ಕೇಡೂ, ಒಳ್ಳೆಯ ಸಂಗತಿಗಳೂ ಹೊರಡುವುದಿಲ್ಲವೇ?

[39] ಬದುಕುವ ಮನುಷ್ಯನು ತನ್ನ ಪಾಪಗಳ ಶಿಕ್ಷೆಗಾಗಿ ಗೊಣಗುಟ್ಟುವುದೇಕೆ?

[40] ನಾವು ನಮ್ಮ ಮಾರ್ಗಗಳನ್ನು ಪರಿಶೋಧಿಸಿ, ಪರೀಕ್ಷಿಸಿಕೊಂಡು ಆಮೇಲೆ ಯೆಹೋವ ದೇವರ ಬಳಿಗೆ ತಿರುಗಿಕೊಳ್ಳೋಣ.

[41] ನಮ್ಮ ಹೃದಯಗಳನ್ನು ನಮ್ಮ ಕೈಗಳೊಂದಿಗೆ ಪರಲೋಕದ ದೇವರ ಕಡೆಗೆ ಎತ್ತಿಕೊಳ್ಳೋಣ.

[42] ನಾವು ದ್ರೋಹಮಾಡಿದ್ದೇವೆ ಮತ್ತು ಎದುರು ಬಿದ್ದಿದ್ದೇವೆ, ನೀವು ಮನ್ನಿಸಲಿಲ್ಲ.

[43] ಕೋಪದಲ್ಲಿ ನಮ್ಮನ್ನು ಮುಚ್ಚಿ ಹಿಂಸಿಸಿದ್ದೀರಿ. ಕನಿಕರಿಸದೆ ಕೊಂದು ಹಾಕಿರುವಿರಿ.

[44] ನಮ್ಮ ಪ್ರಾರ್ಥನೆಯು ನಿನ್ನ ಸನ್ನಿಧಿಗೆ ಸೇರದಂತೆ ನಿನ್ನನ್ನು ಮೇಘದಿಂದ ಮುಚ್ಚಿಕೊಂಡಿದ್ದೀರಿ.

[45] ನೀನು ನಮ್ಮನ್ನು ಜನರ ಮಧ್ಯದಲ್ಲಿ ಕಲ್ಮಷವನ್ನಾಗಿಯೂ, ಕಸವನ್ನಾಗಿಯೂ ಮಾಡಿದ್ದೀಯೆ.

[46] ನಮ್ಮ ಎಲ್ಲಾ ಶತ್ರುಗಳು ನಮಗೆ ವಿರುದ್ಧವಾಗಿ ಅವರ ಬಾಯಿಗಳನ್ನು ತೆರೆದಿದ್ದಾರೆ.

[47] ಭಯವನ್ನೂ, ನಾಶವನ್ನೂ ನಾವು ಅನುಭವಿಸಿದ್ದೇವೆ.

[48] ನನ್ನ ಜನರ ನಾಶದ ನಿಮಿತ್ತವಾಗಿ, ನನ್ನ ಕಣ್ಣಿನಿಂದ ನೀರು ನದಿಯಾಗಿ ಹರಿದು ಹೋಗುತ್ತದೆ.

[49] ಯೆಹೋವ ದೇವರು ಕಟಾಕ್ಷಿಸಿ, ಪರಲೋಕದಿಂದ ನೋಡುವ ತನಕ ನೇತ್ರವು ನಿರಂತರ ಕಣ್ಣೀರು ಸುರಿಸುತ್ತದೆ.

[50] ವಿಶ್ರಮಿಸಿಕೊಳ್ಳುವುದೂ ಇಲ್ಲ.

[51] ನನ್ನ ನಗರದ ಪುತ್ರಿಯರೆಲ್ಲರ ನಿಮಿತ್ತವಾಗಿ ನನ್ನ ಕಣ್ಣುಗಳು ನನ್ನ ಹೃದಯವನ್ನು ಪೀಡಿಸಿದೆ.

[52] ನನ್ನ ಶತ್ರುಗಳು ಕಾರಣವಿಲ್ಲದೆ ಪಕ್ಷಿಯಂತೆ ನನ್ನನ್ನು ಕಠೋರವಾಗಿ ಹಿಂದಟ್ಟಿ ಬೇಟೆಯಾಡಿದರು.

[53] ಅವರು ಕಾರಾಗೃಹದಲ್ಲಿ ನನ್ನ ಜೀವವನ್ನು ತೆಗೆದುಹಾಕಿ, ನನ್ನ ಮೇಲೆ ಕಲ್ಲನ್ನು ಹಾಕಿದ್ದಾರೆ.

[54] ನನ್ನ ತಲೆಯ ಮೇಲೆ ನೀರು ಹರಿಯಿತು. ಆಗ ನಾನು ನಾಶವಾದೆನು ಅಂದುಕೊಂಡೆನು.

[55] ಯೆಹೋವ ದೇವರೇ, ನಾನು ಆಳವಾದ ಕಾರಾಗೃಹದಿಂದ ನಿಮ್ಮ ಹೆಸರನ್ನು ಎತ್ತಿ ಬೇಡಿಕೊಂಡೆನು.

[56] ನೀನು ನನ್ನ ಸ್ವರವನ್ನು ಕೇಳಿದ್ದೀ. “ನನ್ನ ಶ್ವಾಸಕ್ಕೂ, ನನ್ನ ಕೂಗಿಗೂ ನಿನ್ನ ಕಿವಿಯನ್ನು ಮರೆಮಾಡಬೇಡಿರಿ.”

[57] ನಾನು ನಿನ್ನನ್ನು ಕರೆದ ದಿನದಲ್ಲಿ ನೀನು ಸಮೀಪಕ್ಕೆ ಬಂದು, “ಭಯಪಡಬೇಡ,” ಎಂದು ಹೇಳಿದಿರಿ.

[58] ಕರ್ತದೇವರೇ, ನೀನು ನನ್ನ ಪ್ರಾಣದ ವ್ಯಾಜ್ಯಗಳನ್ನು ನಡೆಸಿ, ನನ್ನ ಜೀವವನ್ನು ವಿಮೋಚಿಸಿದ್ದೀರಿ.

[59] ಯೆಹೋವ ದೇವರೇ, ನೀವು ನನ್ನ ಅನ್ಯಾಯವನ್ನು ನೋಡಿದ್ದೀರಿ, ನೀವು ನನ್ನ ನ್ಯಾಯವನ್ನು ತೀರಿಸಿರಿ.

[60] ನನಗೆ ವಿರುದ್ಧವಾಗಿ ಅವರ ಎಲ್ಲಾ ಪ್ರತೀಕಾರವನ್ನೂ ನೋಡಿದ್ದೀರಲ್ಲಾ.

[61] ಯೆಹೋವ ದೇವರೇ, ಅವರ ಎಲ್ಲಾ ಕಲ್ಪನೆಗಳನ್ನೂ ಮತ್ತು ನನಗೆ ವಿರುದ್ಧವಾಗಿ ಹೇಳುವವರ ತುಟಿಗಳನ್ನೂ,

[62] ದಿನವಿಡೀ ನನಗೆ ವಿರುದ್ಧವಾದ ಅವರ ದುರಾಲೋಚನೆಯನ್ನೂ ಕೇಳಿರುವಿರಿ.

[63] ಅವರನ್ನು ನೋಡು! ಕುಳಿತು ಅಥವಾ ನಿಂತಾಗ, ಅವರು ತಮ್ಮ ಹಾಡುಗಳಲ್ಲಿ ನನ್ನನ್ನು ಅಣಕಿಸುತ್ತಾರೆ.

[64] ಯೆಹೋವ ದೇವರೇ, ಅವರ ಕೈಕೆಲಸಗಳ ಪ್ರಕಾರ ಅವರಿಗೆ ಪ್ರತಿಫಲವನ್ನು ಕೊಡಿ.

[65] ಅವರಿಗೆ ದುಃಖಕರವಾದ ಹೃದಯವನ್ನೂ, ನಿಮ್ಮ ಶಾಪವನ್ನೂ ಕೊಡಿ.

[66] ಯೆಹೋವ ದೇವರೇ, ಆಕಾಶದ ಕೆಳಗಿನಿಂದ ಕೋಪದಿಂದ ಅವರನ್ನು ಹಿಂಸಿಸಿ ಹಾಳುಮಾಡಿರಿ.

ಪ್ರಲಾಪಗಳು — Chapters