Skip to content
Opens in a new window
Listen to this chapter • 4:53

[1] ನನ್ನ ಪ್ರಿಯರೇ, ಮಹಿಮೆಯುಳ್ಳ ನಮ್ಮ ಕರ್ತ ಆಗಿರುವ ಯೇಸು ಕ್ರಿಸ್ತರಲ್ಲಿ ವಿಶ್ವಾಸಿಗಳಾಗಿರುವ ನೀವು ಪಕ್ಷಪಾತಿಗಳಾಗಿರಬಾರದು.

[2] ಹೇಗೆಂದರೆ ಒಬ್ಬ ಮನುಷ್ಯನು ಚಿನ್ನದ ಉಂಗುರವನ್ನೂ ಅಂದವಾದ ವಸ್ತ್ರವನ್ನೂ ಹಾಕಿಕೊಂಡು ನಿಮ್ಮ ಸಭೆಯೊಳಗೆ ಬರಲು ಮತ್ತು ಒಬ್ಬ ಬಡ ಮನುಷ್ಯನು ಹರಕು ಬಟ್ಟೆ ಹಾಕಿಕೊಂಡು ಬರಲು

[3] ನೀವು ಹೊಳೆಯುವ ವಸ್ತ್ರಗಳನ್ನು ಧರಿಸಿಕೊಂಡಿರುವವನನ್ನು ಗೌರವಿಸಿ ಆ ವ್ಯಕ್ತಿಗೆ, “ನೀವು ಇಲ್ಲಿಯ ಗೌರವ ಪೀಠದಲ್ಲಿ ಕುಳಿತುಕೊಳ್ಳಿರಿ,” ಎಂತಲೂ ಆ ಬಡವನಿಗೆ, “ನೀನು ಅಲ್ಲಿ ನಿಂತುಕೋ ಇಲ್ಲವೆ ಇಲ್ಲಿ ನನ್ನ ಕಾಲ್ಮಣೆಯ ಬಳಿ ಕುಳಿತುಕೋ,” ಎಂತಲೂ ಹೇಳಿದರೆ,

[4] ನೀವು ಪಕ್ಷಪಾತಿಗಳಾಗಿ ಕೆಟ್ಟ ಆಲೋಚನೆಗಳ ನ್ಯಾಯಾಧಿಪತಿಗಳಾಗಿರುತ್ತೀರಲ್ಲವೇ?

[5] ನನ್ನ ಪ್ರಿಯರೇ, ಕೇಳಿರಿ, ದೇವರು ಈ ಲೋಕದ ಬಡವರನ್ನು ನಂಬಿಕೆಯಲ್ಲಿ ಐಶ್ವರ್ಯವಂತರನ್ನಾಗಿಯೂ ತಮ್ಮನ್ನು ಪ್ರೀತಿಸುವವರಿಗೆ ತಾವು ವಾಗ್ದಾನಮಾಡಿದ ರಾಜ್ಯಕ್ಕೆ ಬಾಧ್ಯರನ್ನಾಗಿಯೂ ಇರಬೇಕೆಂದು ಆರಿಸಿಕೊಳ್ಳಲಿಲ್ಲವೇ?

[6] ನೀವಾದರೋ ಬಡವರನ್ನು ಅವಮಾನ ಪಡಿಸಿದ್ದೀರಿ. ನಿಮ್ಮನ್ನು ಬಾಧಿಸಿ ನ್ಯಾಯಸ್ಥಾನಗಳ ಮುಂದೆ ಎಳೆದುಕೊಂಡು ಹೋಗುವವರು ಐಶ್ವರ್ಯವಂತರಲ್ಲವೋ?

[7] ನೀವು ಕರೆಸಿಕೊಳ್ಳುವ ಆ ಯೋಗ್ಯವಾದ ನಾಮವನ್ನು ದೂಷಿಸುವವರು ಅವರಲ್ಲವೇ?

[8] “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು!” ಎಂದು ಪವಿತ್ರ ವೇದದಲ್ಲಿ ಬರೆದಿದೆ. ಈ ರಾಜಾಜ್ಞೆಯನ್ನು ನೆರವೇರಿಸುವವರಾದರೆ ನೀವು ಉತ್ತಮವಾದದ್ದನ್ನು ಮಾಡುವವರಾಗಿರುವಿರಿ.

[9] ನೀವು ಪಕ್ಷಪಾತಿಗಳಾಗಿದ್ದರೆ ಪಾಪಮಾಡುವವರಾಗಿದ್ದೀರಿ. ಮಾತ್ರವಲ್ಲದೆ ಮೋಶೆಯ ನಿಯಮದ ಪ್ರಕಾರ ಅಪರಾಧಿಗಳೆಂದು ನಿರ್ಣಯ ಹೊಂದುತ್ತೀರಿ.

[10] ಏಕೆಂದರೆ ಯಾವನಾದರೂ ಇಡೀ ಮೋಶೆಯ ನಿಯಮದಲ್ಲಿ ಒಂದೇ ಒಂದನ್ನು ಕೈಕೊಂಡು ನಡೆಯದೇ ಹೋದರೆ, ಅವನು ಇಡೀ ನಿಯಮವನ್ನೇ ಕೈಕೊಳ್ಳದ ಅಪರಾಧಿಯಾಗುತ್ತಾನೆ.

[11] ಏಕೆಂದರೆ, “ವ್ಯಭಿಚಾರ ಮಾಡಬಾರದು,” ಎಂದು ಹೇಳಿದ ದೇವರೇ, “ನರಹತ್ಯೆ ಮಾಡಬಾರದು,” ಎಂತಲೂ ಹೇಳಿದರು. ಆದಕಾರಣ ನೀನು ವ್ಯಭಿಚಾರ ಮಾಡದೆ ಇದ್ದರೂ ನರಹತ್ಯೆ ಮಾಡಿದರೆ ನಿಯಮವನ್ನು ಮೀರಿದವನಾದೆ.

[12] ಸ್ವಾತಂತ್ರ್ಯವನ್ನು ಉಂಟುಮಾಡುವ ನಿಯಮದಿಂದ ನಾವು ತೀರ್ಪುಹೊಂದುವೆವು ಎಂದು ತಿಳಿದು, ನಮ್ಮ ಮಾತುಗಳೂ ಕೃತ್ಯಗಳೂ ಅದಕ್ಕೆ ಅನುಸಾರವಾಗಿರಲಿ.

[13] ಕರುಣೆ ತೋರಿಸದೆ ಇರುವವರಿಗೆ ಕರುಣೆಯಿಲ್ಲದ ನ್ಯಾಯತೀರ್ಪಾಗುವುದು. ಕರುಣೆವುಳ್ಳವರೋ ನ್ಯಾಯತೀರ್ಪಿನ ಮೇಲೆಯೇ ವಿಜಯವನ್ನು ಸಾಧಿಸುವರು.

[14] ನನ್ನ ಪ್ರಿಯರೇ, ಒಬ್ಬನು ತನಗೆ ನಂಬಿಕೆಯುಂಟೆಂದು ಹೇಳಿಕೊಂಡು ಕ್ರಿಯೆಗಳಿಲ್ಲದವನಾಗಿದ್ದರೆ ಪ್ರಯೋಜನವೇನು? ಅಂಥ ನಂಬಿಕೆಯು ಅವನನ್ನು ರಕ್ಷಿಸುವುದೋ?

[15] ಒಬ್ಬ ಸಹೋದರನಿಗೆ ಇಲ್ಲವೆ ಒಬ್ಬ ಸಹೋದರಿಗೆ ಬಟ್ಟೆಯೂ ದಿನದ ಆಹಾರವೂ ಇಲ್ಲದಿರುವಾಗ,

[16] ನಿಮ್ಮಲ್ಲಿ ಒಬ್ಬನು ಅವನಿಗೆ ದೇಹಕ್ಕೆ ಬೇಕಾದವುಗಳನ್ನು ಕೊಡದೆ, “ಸಮಾಧಾನದಿಂದ ಹೋಗಿರಿ, ಚಳಿ ಕಾಯಿಸಿಕೊಳ್ಳಿರಿ, ಹೊಟ್ಟೆ ತುಂಬಿಸಿಕೊಳ್ಳಿರಿ,” ಎಂದು ಹೇಳಿದರೆ ಪ್ರಯೋಜನವೇನು?

[17] ಅದರಂತೆಯೇ, ಕ್ರಿಯೆಗಳಿಲ್ಲದ ನಂಬಿಕೆಯು, ಕ್ರಿಯೆಗಳು ಇಲ್ಲದಿರುವುದರಿಂದ ಸತ್ತ ನಂಬಿಕೆಯಾಗಿರುತ್ತದೆ.

[18] ಆದರೆ ಒಬ್ಬ ಮನುಷ್ಯನು, “ನಿನ್ನಲ್ಲಿ ನಂಬಿಕೆಯಿದೆ, ನನ್ನಲ್ಲಿ ಕ್ರಿಯೆಗಳಿವೆ,” ಎಂದು ವಾದಿಸಬಹುದು. ಅಂಥವನಿಗೆ, “ನೀನು ಕ್ರಿಯೆಗಳಿಲ್ಲದೆ ನಿನ್ನ ನಂಬಿಕೆಯನ್ನು ನನಗೆ ರುಜುಪಡಿಸು. ನಾನು ನನ್ನ ಕ್ರಿಯೆಗಳ ಮುಖಾಂತರ ನನ್ನ ನಂಬಿಕೆಯನ್ನು ನಿನಗೆ ರುಜುಪಡಿಸುತ್ತೇನೆ,” ಎಂದು ಹೇಳಬಹುದು.

[19] ದೇವರು ಒಬ್ಬರೇ ಎಂದು ನೀನು ನಂಬುತ್ತೀ, ಅದು ಒಳ್ಳೆಯದು, ದೆವ್ವಗಳು ಕೂಡ ಹಾಗೆಯೇ ನಂಬಿ ನಡುಗುತ್ತವೆ.

[20] ಮೂರ್ಖನೇ, ಕ್ರಿಯೆಗಳಿಲ್ಲದ ನಂಬಿಕೆಯು ಸತ್ತದ್ದೆಂದು ತಿಳಿದುಕೊಳ್ಳಲು ನಿನಗೆ ಪ್ರಮಾಣಗಳು ಬೇಕೋ?

[21] ನಮ್ಮ ಪಿತೃವಾದ ಅಬ್ರಹಾಮನು ತನ್ನ ಮಗನಾದ ಇಸಾಕನನ್ನು ಬಲಿಪೀಠದ ಮೇಲೆ ಅರ್ಪಿಸಿದಾಗ ನೀತಿನಿರ್ಣಯವನ್ನು ಹೊಂದಿದ್ದು ಕ್ರಿಯೆಗಳಿಂದಲ್ಲವೇ?

[22] ಅಬ್ರಹಾಮನ ನಂಬಿಕೆಯೂ ಕ್ರಿಯೆಗಳೂ ಒಂದಾಗಿ ಕಾರ್ಯ ಸಾಧಿಸಿದವು. ಹೀಗೆ ಅವನು ಮಾಡಿದ ಕ್ರಿಯೆಗಳಿಂದಲೇ ಅವನ ನಂಬಿಕೆಯು ಸಂಪೂರ್ಣಗೊಂಡಿತು ಎಂದು ನೋಡುತ್ತೇವೆ.

[23] ಹೀಗೆ, “ಅಬ್ರಹಾಮನು ದೇವರನ್ನು ನಂಬಿದನು. ಆ ನಂಬಿಕೆಯು ಅವನ ಲೆಕ್ಕಕ್ಕೆ ನೀತಿ ಎಂದು ಎಣಿಸಲಾಯಿತು,” ಎಂಬ ಪವಿತ್ರ ವೇದದ ವಾಕ್ಯವು ನೆರವೇರಿತು. ಅಬ್ರಹಾಮನು ದೇವರ ಸ್ನೇಹಿತನೆಂದು ಎಣಿಸಿಕೊಂಡನು.

[24] ಹೀಗೆ ಮನುಷ್ಯನು ನಂಬಿಕೆಯಿಂದ ಮಾತ್ರವಲ್ಲ ಕ್ರಿಯೆಗಳಿಂದಲೂ ನೀತಿವಂತನೆಂದು ನಿರ್ಣಯ ಹೊಂದುತ್ತಾನೆ ಎಂದು ನೀವು ನೋಡುತ್ತೀರಿ.

[25] ಅದೇ ರೀತಿಯಾಗಿ ರಹಾಬಳೆಂಬ ವೇಶ್ಯೆಯು ಸಹ ಗೂಢಚಾರರನ್ನು ಸೇರಿಸಿಕೊಂಡು, ಅವರನ್ನು ಬೇರೆ ದಾರಿಯಿಂದ ಕಳುಹಿಸಿದ ಕ್ರಿಯೆಗಳಿಂದಲೇ ಆಕೆಯು ನೀತಿನಿರ್ಣಯವನ್ನು ಹೊಂದಿದಳಲ್ಲವೇ?

[26] ಆತ್ಮವಿಲ್ಲದ ದೇಹವು ಸತ್ತದ್ದಾಗಿರುವ ಪ್ರಕಾರವೇ, ಕ್ರಿಯೆಗಳಿಲ್ಲದ ನಂಬಿಕೆಯೂ ಸತ್ತದ್ದಾಗಿರುತ್ತದೆ.

ಯಾಕೋಬನು — Chapters