[1] ಮಕ್ಕಳೇ, ನೀವು ಕರ್ತನಲ್ಲಿ ನಿಮ್ಮ ತಂದೆತಾಯಿಗಳಿಗೆ ವಿಧೇಯರಾಗಿರಿ, ಇದು ಸೂಕ್ತವಾದದ್ದು.
[2] “ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು,” ಎಂಬುದು ವಾಗ್ದಾನ ಸಹಿತವಾದ ಮೊದಲನೆಯ ಆಜ್ಞೆಯಾಗಿದೆ.
[3] “ಸನ್ಮಾನಿಸಿದರೆ ನಿನಗೆ ಶುಭವಾಗುವುದು. ನೀನು ಭೂಮಿಯ ಮೇಲೆ ಬಹುಕಾಲ ಬದುಕುವೆ.”
[4] ತಂದೆಗಳೇ, ನಿಮ್ಮ ಮಕ್ಕಳನ್ನು ಸಿಟ್ಟಿಗೆಬ್ಬಿಸಬೇಡಿರಿ; ಕರ್ತನ ಶಿಸ್ತಿನಲ್ಲಿಯೂ ಉಪದೇಶದಲ್ಲಿಯೂ ಮಕ್ಕಳನ್ನು ಬೆಳೆಸಿರಿ.
[5] ಸೇವಕರೇ, ಭಯಭಕ್ತಿಯಿಂದಲೂ ಸರಳ ಹೃದಯದಿಂದ ಕ್ರಿಸ್ತನಿಗೆ ವಿಧೇಯರಾಗುವ ಪ್ರಕಾರ ಲೌಕಿಕವಾಗಿ ನಿಮ್ಮ ಯಜಮಾನನಾಗಿರುವವರಿಗೆ ವಿಧೇಯರಾಗಿರಿ.
[6] ಯಜಮಾನರನ್ನು ಮೆಚ್ಚಿಸುವವರಂತೆ ಕಣ್ಣಿಗೆ ಕಾಣುವಾಗ ಮಾತ್ರ ಅವರಿಗೆ ಸೇವೆಮಾಡದೆ, ಕ್ರಿಸ್ತನ ದಾಸರಿಗೆ ತಕ್ಕಂತೆ ಮನಃಪೂರ್ವಕವಾಗಿ ದೇವರ ಚಿತ್ತವನ್ನು ನೆರವೇರಿಸಿರಿ.
[7] ನೀವು ಮನುಷ್ಯರಿಗೋಸ್ಕರವಲ್ಲ, ಕರ್ತನಿಗೋಸ್ಕರವೇ ಸೇವೆ ಮಾಡುವಂತೆ, ಪೂರ್ಣಮನಸ್ಸಿನಿಂದ ಸೇವೆಮಾಡಿರಿ.
[8] ದಾಸನಾಗಲಿ, ಸ್ವತಂತ್ರನಾಗಲಿ ತಾನು ಯಾವ ಸತ್ಕಾರ್ಯವನ್ನು ಮಾಡುತ್ತಾನೋ ಅದರ ಪ್ರತಿಫಲವನ್ನು ಕರ್ತ ಯೇಸುವಿನಿಂದ ಹೊಂದುವನೆಂದು ನೀವು ತಿಳಿದಿದ್ದೀರಿ.
[9] ಯಜಮಾನರೇ, ನೀವು ಸಹ ನಿಮ್ಮ ಸೇವಕರೊಡನೆ ಅದೇ ರೀತಿಯಾಗಿ ನಡೆದುಕೊಳ್ಳಿರಿ. ಪರಲೋಕದಲ್ಲಿ ನಿಮಗೆ ಯಜಮಾನನಿದ್ದಾನೆಂತಲೂ ಆತನಲ್ಲಿ ಪಕ್ಷಪಾತವಿಲ್ಲವೆಂತಲೂ ತಿಳಿದು ಅವರನ್ನು ಬೆದರಿಸುವುದನ್ನು ಬಿಟ್ಟುಬಿಡಿರಿ.
[10] ಕೊನೆಯದಾಗಿ, ಕರ್ತನಲ್ಲಿಯೂ ಅವರ ಪರಾಕ್ರಮ ಶಕ್ತಿಯಲ್ಲಿಯೂ ಬಲಗೊಳ್ಳಿರಿ.
[11] ನೀವು ಪಿಶಾಚನ ತಂತ್ರಗಳನ್ನು ಎದುರಿಸಿ ನಿಲ್ಲುವುದಕ್ಕೆ ಶಕ್ತರಾಗುವಂತೆ ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ.
[12] ಏಕೆಂದರೆ, ನಾವು ಹೋರಾಡುವುದು ನರಮಾನವರೊಂದಿಗಲ್ಲ, ರಾಜತ್ವಗಳ ಮೇಲೆಯೂ ಅಧಿಕಾರಿಗಳ ಮೇಲೆಯೂ ಈ ಲೋಕದ ಅಂಧಕಾರದ ಅಧಿಪತಿಗಳ ಮೇಲೆಯೂ ಆಕಾಶಮಂಡಲದಲ್ಲಿರುವ ದುರಾತ್ಮಗಳ ಸೇನೆಗಳ ಮೇಲೆಯೂ ಆಗಿದೆ.
[13] ಆದುದರಿಂದ ವೈರಿಯು ದಾಳಿಮಾಡುವ ದಿನವು ಬರುವಾಗ ನೀವು ಅವನನ್ನು ಎದುರಿಸಿ ನಿಲ್ಲುವಂತೆಯು, ಎಲ್ಲವನ್ನು ಜಯಿಸಿ ಮುಗಿಸಿದ ಮೇಲೆ ನಿಲ್ಲಲು ಶಕ್ತರಾಗುವಂತೆ, ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ.
[14] ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಂಡು, ನೀತಿಯೆಂಬ ಕವಚವನ್ನು ಧರಿಸಿಕೊಳ್ಳಿರಿ.
[15] ಸಮಾಧಾನದ ಸುವಾರ್ತೆಯ ಸಿದ್ಧತೆಯೆಂಬ ಪಾದರಕ್ಷೆಗಳನ್ನು ಮೆಟ್ಟಿಕೊಂಡು ನಿಲ್ಲಿರಿ.
[16] ಇವೆಲ್ಲವುಗಳೊಂದಿಗೆ ವಿಶ್ವಾಸವೆಂಬ ಗುರಾಣಿಯನ್ನು ಹಿಡಿದುಕೊಳ್ಳಿರಿ. ಈ ಗುರಾಣಿಯಿಂದಲೇ, ನೀವು ಕೆಡುಕನ ಅಗ್ನಿಬಾಣಗಳನ್ನೆಲ್ಲಾ ನಂದಿಸುವುದಕ್ಕೆ ಶಕ್ತರಾಗುವಿರಿ.
[17] ಇದಲ್ಲದೆ ರಕ್ಷಣೆಯೆಂಬ ಶಿರಸ್ತ್ರಾಣವನ್ನು ಧರಿಸಿಕೊಳ್ಳಿರಿ. ದೇವರ ವಾಕ್ಯವೆಂಬ ಪವಿತ್ರಾತ್ಮರ ಖಡ್ಗವನ್ನು ಎತ್ತಿ ಹಿಡಿಯಿರಿ.
[18] ನೀವು ಪವಿತ್ರಾತ್ಮ ದೇವರಲ್ಲಿ ಎಲ್ಲಾ ಸಮಯಗಳಲ್ಲಿಯೂ ಸಕಲ ವಿಧವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಯಿಂದಲೂ ಪ್ರಾರ್ಥಿಸಿರಿ. ಇದರಲ್ಲಿ ಪೂರ್ಣ ಸ್ಥಿರಚಿತ್ತರಾಗಿದ್ದು ಕರ್ತನ ಜನರೆಲ್ಲರಿಗಾಗಿ ಪ್ರಾರ್ಥನೆ ಮಾಡುತ್ತಾ ಎಚ್ಚರವಾಗಿರಿ.
[19] ನಾನು ಬಾಯಿ ತೆರೆಯುವಾಗ ಸುವಾರ್ತೆಯ ರಹಸ್ಯವನ್ನು ಧೈರ್ಯವಾಗಿ ತಿಳಿಯಪಡಿಸುವುದಕ್ಕೆ ಮಾತನ್ನು ನನಗೆ ದಯಪಾಲಿಸಬೇಕೆಂದು ಪ್ರಾರ್ಥಿಸಿರಿ.
[20] ಏಕೆಂದರೆ ಆ ಸುವಾರ್ತೆಗಾಗಿಯೇ ಸೆರೆಯಲ್ಲಿರುವ ರಾಯಭಾರಿಯಾದ ನಾನು ಅದನ್ನು ಸಾರುವುದರಲ್ಲಿ ಧೈರ್ಯವಾಗಿ ಮಾತನಾಡುವ ಹಂಗಿನಲ್ಲಿದ್ದೇನೆ.
[21] ನನ್ನ ವಿಷಯವಾಗಿಯೂ ನಾನು ಮಾಡುತ್ತಿರುವುದರ ವಿಷಯವಾಗಿಯೂ ಪ್ರಿಯ ಸಹೋದರನೂ ಕರ್ತನಲ್ಲಿ ನಂಬಿಗಸ್ತನಾದ ಸೇವಕನೂ ಆಗಿರುವ ತುಖಿಕನು ನಿಮಗೆ ಎಲ್ಲವನ್ನೂ ತಿಳಿಸುವನು.
[22] ನೀವು ನಮ್ಮ ಸಮಾಚಾರವನ್ನು ತಿಳಿದುಕೊಳ್ಳುವಂತೆಯೂ ಅವನು ನಿಮ್ಮ ಹೃದಯಗಳನ್ನು ಉತ್ತೇಜಿಸುವಂತೆಯೂ ಅವನನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ.
[23] ತಂದೆಯಾದ ದೇವರಿಂದಲೂ ಕರ್ತ ಆಗಿರುವ ಯೇಸು ಕ್ರಿಸ್ತರಿಂದಲೂ ಶಾಂತಿಯೂ ಮತ್ತು ನಂಬಿಕೆಯಿಂದ ಕೂಡಿದ ಪ್ರೀತಿಯೂ ಸಹೋದರರಿಗೆ ಇರಲಿ.
[24] ನಮ್ಮ ಕರ್ತ ಆಗಿರುವ ಯೇಸು ಕ್ರಿಸ್ತರನ್ನು ಅಳಿದು ಹೋಗದ ಪ್ರೀತಿಯಿಂದ ಪ್ರೀತಿಸುವವರೆಲ್ಲರ ಮೇಲೆ ಕೃಪೆಯಿರಲಿ.