[1] ಈ ಕಾರಣದಿಂದ ಯೆಹೂದ್ಯರಲ್ಲದವರಾಗಿರುವ ನಿಮ್ಮ ನಿಮಿತ್ತ ಕ್ರಿಸ್ತ ಯೇಸುವಿನ ಸೆರೆಯಾಳಾಗಿರುವ ಪೌಲನೆಂಬ ನಾನು ಹೇಳುವುದೇನೆಂದರೆ:
[2] ನಿಮಗೋಸ್ಕರವಾಗಿ ನನಗೆ ಕೊಡಲಾದ ದೇವರ ಕೃಪೆಯ ಕಾರ್ಯಭಾರವನ್ನು ನೀವು ಕೇಳಿದ್ದೀರಿ,
[3] ಅವರು ರಹಸ್ಯವನ್ನು ಪ್ರಕಟನೆಯಿಂದ ನನಗೆ ತಿಳಿಸಿದರೆಂದು ನಾನು ನಿಮಗೆ ಮೊದಲೇ ಸಂಕ್ಷೇಪವಾಗಿ ಬರೆದಿದ್ದೇನೆ.
[4] ಅದನ್ನು ನೀವು ಓದಿದರೆ ಕ್ರಿಸ್ತನ ರಹಸ್ಯದ ಕುರಿತಾಗಿ ನನಗಿರುವ ಒಳನೋಟವನ್ನು ನೀವೇ ಅರ್ಥಮಾಡಿಕೊಳ್ಳುವಿರಿ.
[5] ಈ ರಹಸ್ಯವು ದೇವರ ಪರಿಶುದ್ಧ ಅಪೊಸ್ತಲರಿಗೂ ಪ್ರವಾದಿಗಳಿಗೂ ದೇವರಾತ್ಮರ ಮೂಲಕ ಈಗ ಪ್ರಕಟಿಸಿದಂತೆ, ಬೇರೆ ತಲೆಮಾರುಗಳಲ್ಲಿದ್ದ ಜನರಿಗೆ ತಿಳಿಸಿರಲಿಲ್ಲ.
[6] ಸುವಾರ್ತೆಯ ಮೂಲಕ ಯೆಹೂದ್ಯರಲ್ಲದವರೂ ಸಹ ಇಸ್ರಾಯೇಲರೊಂದಿಗೆ ವಾರಸುದಾರರೂ ಒಂದೇ ದೇಹದ ಅವಯವಗಳೂ ಕ್ರಿಸ್ತ ಯೇಸುವಿನಲ್ಲಿ ದೇವರ ವಾಗ್ದಾನದ ಸಹಪಾಲುಗಾರರೂ ಆಗಿರಬೇಕೆಂಬುದೇ ಈ ರಹಸ್ಯ.
[7] ದೇವರ ಶಕ್ತಿಯ ಕ್ರಿಯೆಯಿಂದ ನನಗೆ ಕೊಡಲಾದ ಅವರ ದೇವ ಕೃಪಾದಾನಕ್ಕೆ ಅನುಸಾರವಾಗಿ ನಾನು ಈ ಸುವಾರ್ತೆಗೆ ಸೇವಕನಾದೆನು.
[8] ನಾನು ಕರ್ತನ ಜನರೆಲ್ಲರಲ್ಲಿಯೂ ಅತ್ಯಲ್ಪನಾಗಿದ್ದೇನೆ. ಹಾಗಿದ್ದರೂ, ನನಗೆ ಈ ಕೃಪೆ ಕೊಡಲಾಯಿತು: ಏಕೆಂದರೆ, ನಾನು ಕ್ರಿಸ್ತನ ಅಪರಿಮಿತವಾದ ಐಶ್ವರ್ಯವನ್ನು ಯೆಹೂದ್ಯರಲ್ಲದವರಿಗೆ ಸಾರುವಂತೆಯೂ
[9] ಸಮಸ್ತವನ್ನೂ ಸೃಷ್ಟಿಸಿದ ದೇವರಲ್ಲಿ ಲೋಕಾದಿಯಿಂದ ಮರೆಯಾಗಿದ್ದ ಕಾರ್ಯಭಾರದ ರಹಸ್ಯವು ಏನೆಂಬುದನ್ನು ಎಲ್ಲರಿಗೂ ಸ್ಪಷ್ಟಪಡಿಸುವುದಕ್ಕಾಗಿಯೂ ಆಗಿರುತ್ತದೆ.
[10] ಬಹು ಪ್ರಕಾರದ ದೇವರ ಜ್ಞಾನವು ಪರಲೋಕದಲ್ಲಿ ರಾಜತ್ವಗಳಿಗೂ ಅಧಿಕಾರಗಳಿಗೂ ಈಗ ಸಭೆಯ ಮೂಲಕ ಗೊತ್ತಾಗಬೇಕೆಂಬುದೇ ದೇವರ ಉದ್ದೇಶ.
[11] ಹೀಗೆ ದೇವರು ತಮ್ಮ ನಿತ್ಯ ಉದ್ದೇಶದ ಪ್ರಕಾರ ಇದನ್ನು ನಮ್ಮ ಕರ್ತ ಆಗಿರುವ ಕ್ರಿಸ್ತ ಯೇಸುವಿನಲ್ಲಿ ನೆರವೇರಿಸಿದರು.
[12] ಕ್ರಿಸ್ತನಲ್ಲಿಯೂ ಕ್ರಿಸ್ತನ ಮೇಲೆ ನಂಬಿಕೆಯನ್ನಿಡುವುದರ ಮೂಲಕವೂ ನಾವು ಸ್ವಾತಂತ್ರ್ಯದಿಂದಲೂ ಭರವಸೆಯಿಂದಲೂ ದೇವರನ್ನು ಸಮೀಪಿಸಲು ಈಗ ಸಾಧ್ಯ.
[13] ಆದ್ದರಿಂದ, ನಿಮಗಾಗಿ ನನಗುಂಟಾದ ಸಂಕಟಗಳು ನಿಮಗೆ ಮಹಿಮೆಯಾಗಿರುವುದರಿಂದ, ನೀವು ಧೈರ್ಯಗೆಡಬಾರದೆಂದು ನಾನು ನಿಮ್ಮನ್ನು ಕೇಳಿಕೊಳ್ಳುತ್ತೇನೆ.
[14] ಈ ಕಾರಣದಿಂದ, ಪರಲೋಕ ಭೂಲೋಕದಲ್ಲಿರುವ ಪ್ರತಿ ಕುಟುಂಬವೂ ಹೆಸರು ಪಡೆದಿರಲು ಕಾರಣವಾಗಿರುವ ತಂದೆಯ ಮುಂದೆ ನಾನು ಮೊಣಕಾಲೂರುತ್ತೇನೆ:
[16] ದೇವರು ತಮ್ಮ ಮಹಿಮೆಯ ಐಶ್ವರ್ಯಕ್ಕನುಸಾರವಾಗಿ ತಮ್ಮ ಆತ್ಮನ ಮೂಲಕ ನಿಮ್ಮನ್ನು ಆಂತರ್ಯದಲ್ಲಿ ಶಕ್ತಿಯಿಂದ ಬಲಪಡಿಸಲಿ ಎಂದು ಪ್ರಾರ್ಥಿಸುತ್ತೇನೆ.
[17] ನಂಬಿಕೆಯ ಮೂಲಕ ಕ್ರಿಸ್ತನು ನಿಮ್ಮ ಹೃದಯಗಳಲ್ಲಿ ವಾಸಿಸಲಿ. ನೀವು ಪ್ರೀತಿಯಲ್ಲಿ ಬೇರೂರಿ ನೆಲೆಗೊಂಡು ನಿಂತು
[18] ದೇವರ ಪರಿಶುದ್ಧರೆಲ್ಲರೊಂದಿಗೆ ಅದರ ಅಗಲ, ಉದ್ದ, ಆಳ ಮತ್ತು ಎತ್ತರವನ್ನು ಪೂರ್ಣವಾಗಿ ಕ್ರಿಸ್ತನ ಪ್ರೀತಿಯನ್ನು ಅರಿಯುವುದಕ್ಕೆ ಶಕ್ತರಾಗಲಿ.
[19] ಮತ್ತು ತಿಳುವಳಿಕೆಗೆ ಅಪಾರವಾದ ಕ್ರಿಸ್ತನ ಪ್ರೀತಿಯನ್ನು ನೀವು ತಿಳಿದುಕೊಂಡು ದೇವರ ಸರ್ವಸಂಪೂರ್ಣತೆಯಿಂದ ತುಂಬಿದವರಾಗಲಿ ಎಂದು ಅವರನ್ನು ಬೇಡಿಕೊಳ್ಳುತ್ತೇನೆ.
[20] ನಮ್ಮಲ್ಲಿ ಕಾರ್ಯಸಾಧಿಸುವ ತಮ್ಮ ಶಕ್ತಿಯ ಪ್ರಕಾರ ನಾವು ಬೇಡುವುದಕ್ಕಿಂತಲೂ ಯೋಚಿಸುವುದಕ್ಕಿಂತಲೂ ಅತ್ಯಧಿಕವಾಗಿಯೇ ಎಲ್ಲವನ್ನೂ ಮಾಡಲು ಶಕ್ತರಾದ ದೇವರಿಗೆ
[21] ಸಭೆಯಲ್ಲಿ ಕ್ರಿಸ್ತ ಯೇಸುವಿನ ಮೂಲಕ ತಲತಲಾಂತರಕ್ಕೂ ಯುಗಯುಗಾಂತರಕ್ಕೂ ಮಹಿಮೆ ಉಂಟಾಗಲಿ. ಆಮೆನ್.