[1] ಆದ್ದರಿಂದ ನೀವು ದೇವರ ಪ್ರಿಯರಾದ ಮಕ್ಕಳಂತೆ ದೇವರ ಮಾದರಿಯನ್ನು ಅನುಸರಿಸಿ ಬಾಳಿರಿ.
[2] ಕ್ರಿಸ್ತ ಯೇಸು ನಮ್ಮನ್ನು ಪ್ರೀತಿಸಿ ನಮಗೋಸ್ಕರ ತಮ್ಮನ್ನೇ ದೇವರಿಗೆ ಸುಗಂಧ ಕಾಣಿಕೆಯಾಗಿಯೂ ಯಜ್ಞವಾಗಿಯೂ ಸಮರ್ಪಿಸಿಕೊಂಡ ಪ್ರಕಾರ ನೀವೂ ಸಹ ಪ್ರೀತಿಯಿಂದ ಬಾಳಿರಿ.
[3] ಆದರೆ ನಿಮ್ಮೊಳಗೆ ಅನೈತಿಕತೆಯಾಗಲಿ, ಯಾವ ಅಶುದ್ಧತ್ವವಾಗಲಿ, ಇಲ್ಲವೆ ಲೋಭವಾಗಲಿ ಇರಲೇಬಾರದು. ಇವು ದೇವರ ಪರಿಶುದ್ಧರಿಗೆ ಯೋಗ್ಯವಲ್ಲ.
[4] ಅಶ್ಲೀಲತೆ, ಬುದ್ಧಿಹೀನ ಮಾತು, ಅಸಭ್ಯ ಹರಟೆ ಇವು ಬೇಡ, ಇವು ಅಯುಕ್ತವಾಗಿವೆ, ಪ್ರತಿಯಾಗಿ ದೇವರಿಗೆ ಕೃತಜ್ಞತಾ ಸ್ತುತಿಮಾಡಿರಿ.
[5] ಏಕೆಂದರೆ ಯಾವ ಜಾರನಾಗಲಿ, ಅಶುದ್ಧನಾಗಲಿ, ದೇವರಲ್ಲದವುಗಳನ್ನು ಪೂಜಿಸುವ ಲೋಭಿಯಾಗಲಿ ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಹಕ್ಕುಬಾಧ್ಯತೆಯನ್ನು ಹೊಂದುವುದಿಲ್ಲವೆಂಬುದು ನಿಮಗೆ ಮನದಟ್ಟಾಗಿರಲಿ.
[6] ಪ್ರಯೋಜನವಿಲ್ಲದ ಮಾತುಗಳಿಂದ ಯಾರೂ ನಿಮ್ಮನ್ನು ವಂಚಿಸದಿರಲಿ. ಏಕೆಂದರೆ ಇಂಥವುಗಳ ದೆಸೆಯಿಂದ ದೇವರ ಕೋಪಾಗ್ನಿಯು ಅವರಿಗೆ ಅವಿಧೇಯರಾದ ಮಕ್ಕಳ ಮೇಲೆ ಬರುತ್ತದೆ.
[7] ಆದ್ದರಿಂದ ನೀವು ಅವರೊಂದಿಗೆ ಪಾಲುಗಾರರಾಗಿರಬೇಡಿರಿ.
[8] ನೀವು ಹಿಂದೊಮ್ಮೆ ಕತ್ತಲೆಯಾಗಿದ್ದಿರಿ. ಆದರೆ ಈಗ ನೀವು ಕರ್ತನಲ್ಲಿ ಬೆಳಕಾಗಿದ್ದೀರಿ. ಬೆಳಕಿನ ಮಕ್ಕಳಾಗಿ ಬಾಳಿರಿ.
[9] ಬೆಳಕಿನ ಫಲವು ಎಲ್ಲಾ ಒಳ್ಳೆಯತನದಲ್ಲಿಯೂ ನೀತಿಯಲ್ಲಿಯೂ ಸತ್ಯದಲ್ಲಿಯೂ ಇರುತ್ತದೆ.
[10] ಕರ್ತನಿಗೆ ಮೆಚ್ಚಿಗೆಯಾದದ್ದು ಏನೆಂಬುದನ್ನು ಪರಿಶೋಧಿಸಿರಿ.
[11] ನಿಷ್ಪ್ರಯೋಜಕವಾದ ಕತ್ತಲೆಯ ಕಾರ್ಯಗಳೊಂದಿಗೆ ಪಾಲುಗಾರರಾಗಿರದೆ ಅವುಗಳನ್ನು ಬೆಳಕಿಗೆ ತನ್ನಿರಿ.
[12] ಆ ಅವಿಧೇಯರು ಗುಟ್ಟಾಗಿ ಮಾಡುವ ಕೃತ್ಯಗಳನ್ನು ಹೇಳುವುದಕ್ಕೂ ಅವಮಾನಕರವಾಗಿವೆ.
[13] ಆದರೆ, ಬಹಿರಂಗವಾದವುಗಳೆಲ್ಲವೂ ಬೆಳಕಿನಿಂದ ಪ್ರಕಟವಾಗುತ್ತವೆ. ಎಲ್ಲವನ್ನೂ ಪ್ರಕಾಶಪಡಿಸುವಂಥದ್ದು ಬೆಳಕೇ.
[14] ಆದ್ದರಿಂದ ಹೀಗೆ ಹೇಳಲಾಗಿದೆ: “ನಿದ್ರೆ ಮಾಡುವವನೇ, ಎಚ್ಚರವಾಗು, ಸತ್ತವರಿಂದ ಎದ್ದೇಳು, ಕ್ರಿಸ್ತನು ನಿನ್ನ ಮೇಲೆ ಪ್ರಕಾಶಿಸುವನು.”
[15] ಆದಕಾರಣ ನೀವು ಹೇಗೆ ಜೀವಿಸಬೇಕೆಂದು ಜಾಗರೂಕರಾಗಿರಿ. ಅಜ್ಞಾನಿಗಳಂತಿರದೆ, ಜಾಣರಾಗಿ ಜೀವಿಸಿರಿ.
[16] ಈ ದಿನಗಳು ಕೆಟ್ಟವುಗಳಾಗಿರುವುದರಿಂದ, ಸರ್ವ ಸದಾವಕಾಶಗಳನ್ನೂ ಸದ್ವಿನಿಯೋಗಿಸಿಕೊಳ್ಳಿರಿ.
[17] ಆದಕಾರಣ ಬುದ್ಧಿಹೀನರಾಗಿರದೆ ಕರ್ತನ ಚಿತ್ತವೇನೆಂಬುದನ್ನು ತಿಳಿದವರಾಗಿರಿ.
[18] ಮದ್ಯಪಾನ ಮಾಡಿ ಮತ್ತರಾಗಬೇಡಿರಿ. ಅದು ದುಷ್ಟತನಕ್ಕೆ ಎಡೆಮಾಡುತ್ತದೆ. ಆದರೆ ಪವಿತ್ರಾತ್ಮರಿಂದ ತುಂಬಿದವರಾಗಿದ್ದು,
[19] ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಆತ್ಮನಿಂದಾದ ಹಾಡುಗಳಿಂದಲೂ ಪರಸ್ಪರ ಮಾತನಾಡಿಕೊಳ್ಳುತ್ತಾ ನಿಮ್ಮ ಹೃದಯಾಂತರಾಳದಿಂದ ಕರ್ತನಿಗೆ ಹಾಡಿ ಹರಸಿರಿ.
[20] ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಹೆಸರಿನಲ್ಲಿ ತಂದೆಯಾದ ದೇವರಿಗೆ, ಯಾವಾಗಲೂ ಎಲ್ಲಾ ಕಾರ್ಯಗಳಿಗೋಸ್ಕರ ಕೃತಜ್ಞತೆಯನ್ನು ಸಲ್ಲಿಸಿರಿ.
[21] ಇದಲ್ಲದೆ ಕ್ರಿಸ್ತನ ಭಯಭಕ್ತಿಯಲ್ಲಿ ಒಬ್ಬರಿಗೊಬ್ಬರು ಅಧೀನರಾಗಿ ನಡೆದುಕೊಳ್ಳಿರಿ.
[22] ಹೆಂಡತಿಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮ ನಿಮ್ಮ ಗಂಡಂದಿರಿಗೆ ಅಧೀನರಾಗಿರಿ.
[23] ಏಕೆಂದರೆ, ಕ್ರಿಸ್ತ ಯೇಸು ಸಭೆಗೆ ಶಿರಸ್ಸಾಗಿರುವ ಪ್ರಕಾರ ಗಂಡನು ಹೆಂಡತಿಗೆ ಶಿರಸ್ಸಾಗಿದ್ದಾನೆ. ಕ್ರಿಸ್ತ ಯೇಸು ತಮ್ಮ ಸಭೆ ಎಂಬ ದೇಹಕ್ಕೆ ರಕ್ಷಕರಾಗಿದ್ದಾರೆ.
[24] ಸಭೆಯು ಕ್ರಿಸ್ತನಿಗೆ ಹೇಗೆ ಅಧೀನವಾಗಿದೆಯೋ ಹಾಗೆಯೇ ಸ್ತ್ರೀಯರು ತಮ್ಮ ತಮ್ಮ ಗಂಡಂದಿರಿಗೆ ಎಲ್ಲಾ ವಿಷಯಗಳಲ್ಲಿ ಅಧೀನರಾಗಿರಬೇಕು.
[25] ಗಂಡಂದಿರೇ, ಕ್ರಿಸ್ತ ಯೇಸು ಸಭೆಯನ್ನು ಪ್ರೀತಿಸಿ, ಅದಕ್ಕಾಗಿ ತಮ್ಮನ್ನು ತಾವೇ ಒಪ್ಪಿಸಿಕೊಟ್ಟಂತೆಯೇ ನೀವು ನಿಮ್ಮ ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ.
[26] ಕ್ರಿಸ್ತ ಯೇಸು ತಮ್ಮ ಸಭೆಯನ್ನು ವಾಕ್ಯದ ನೀರಿನ ಸ್ನಾನದಿಂದ ಪವಿತ್ರಗೊಳಿಸಿ, ಶುದ್ಧಮಾಡಿ,
[27] ಅದನ್ನು ಕಳಂಕ, ಸುಕ್ಕು ಇಂಥದ್ದು ಯಾವುದೂ ಇಲ್ಲದೆ ಪರಿಶುದ್ಧವೂ ದೋಷವಿಲ್ಲದ್ದೂ ಆಗಿರುವ ಮಹಿಮೆಯುಳ್ಳ ಸಭೆಯನ್ನಾಗಿ ತಮ್ಮ ಮುಂದೆ ನಿಲ್ಲಿಸಿಕೊಳ್ಳಬೇಕೆಂದು ತಮ್ಮನ್ನೇ ಒಪ್ಪಿಸಿಕೊಟ್ಟರು.
[28] ಗಂಡಂದಿರು ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವಂತೆಯೇ ತಮ್ಮ ಹೆಂಡತಿಯರನ್ನು ಪ್ರೀತಿಸಬೇಕು. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸುತ್ತಾನೆ.
[29] ಏಕೆಂದರೆ, ಯಾರೂ ಸ್ವಂತ ಶರೀರವನ್ನು ಎಂದೂ ದ್ವೇಷಿಸುವುದಿಲ್ಲ, ಬದಲಿಗೆ ತಮ್ಮ ಶರೀರವನ್ನು ಪೋಷಿಸಿ ಸಂರಕ್ಷಿಸುತ್ತಾರೆ. ಅದೇ ಪ್ರಕಾರ ಕರ್ತ ಯೇಸು ಸಭೆಯನ್ನು ಪೋಷಿಸಿ, ಸಂರಕ್ಷಿಸುವವರಾಗಿದ್ದಾರೆ.
[30] ನಾವು ಕ್ರಿಸ್ತ ಯೇಸುವಿನ ದೇಹದ ಅಂಗಗಳಾಗಿದ್ದೇವೆ.
[31] “ಇದರ ನಿಮಿತ್ತದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು, ಅವರಿಬ್ಬರೂ ಒಂದೇ ಶರೀರವಾಗಿರುವರು.”
[32] ಈ ರಹಸ್ಯವು ಮಹತ್ತಾದದ್ದು. ಆದರೆ ನಾನು ಕ್ರಿಸ್ತನ ಹಾಗೂ ಸಭೆಯ ವಿಷಯವಾಗಿ ಮಾತನಾಡುತ್ತಿದ್ದೇನೆ.
[33] ಆದರೂ ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನನ್ನು ಪ್ರೀತಿಸುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಬೇಕು. ಹೆಂಡತಿಯು ತನ್ನ ಗಂಡನನ್ನು ಗೌರವಿಸುವವಳಾಗಿರಬೇಕು.