Skip to content
Opens in a new window
Listen to this chapter • 3:44

[1] ಯಜಮಾನರೇ, ಪರಲೋಕದಲ್ಲಿ ನಿಮಗೂ ಯಜಮಾನನಿದ್ದಾನೆಂದು ತಿಳಿದು ನಿಮ್ಮ ದಾಸರಿಗೆ ನ್ಯಾಯವಾದದ್ದನ್ನೂ, ಯೋಗ್ಯವಾದದ್ದನ್ನೂ ಕೊಡಿರಿ.

[2] ಎಚ್ಚರವಾಗಿದ್ದು ಕೃತಜ್ಞತೆ ಉಳ್ಳವರಾಗಿ ಪ್ರಾರ್ಥನೆಯಲ್ಲಿ ನಿರತರಾಗಿರಿ.

[3] ನಾವು ಕ್ರಿಸ್ತ ಯೇಸುವಿನ ರಹಸ್ಯವನ್ನು ಮಾತನಾಡುವಂತೆ ದೇವರು ನಮ್ಮ ಸಂದೇಶಕ್ಕೆ ಬಾಗಿಲನ್ನು ತೆರೆಯುವಂತೆ ನಮಗೋಸ್ಕರವೂ ಪ್ರಾರ್ಥಿಸಿರಿ. ಈ ಸೇವೆಗಾಗಿಯೇ ನಾನು ಸೆರೆಯಲ್ಲಿದ್ದೇನಲ್ಲಾ.

[4] ಆದಕಾರಣ ನಾನು ಆ ರಹಸ್ಯವನ್ನು ಮಾಡಬಯಸುವ ರೀತಿಯಲ್ಲಿ ಸ್ಪಷ್ಟವಾಗಿ ಸಾರುವಂತೆಯೂ ಬೇಡಿಕೊಳ್ಳಿರಿ.

[5] ಪ್ರತಿಯೊಂದು ಅವಕಾಶವನ್ನೂ ಸದುಪಯೋಗ ಮಾಡಿಕೊಂಡು ಹೊರಗಿನವರೊಂದಿಗೆ ಜಾಣತನದಿಂದ ನಡೆದುಕೊಳ್ಳಿರಿ.

[6] ನಿಮ್ಮ ಸಂಭಾಷಣೆ ಯಾವಾಗಲೂ ಪೂರ್ಣ ಕೃಪೆಯುಳ್ಳದ್ದೂ, ಉಪ್ಪಿನಿಂದ ಹದವುಳ್ಳದ್ದೂ ಆಗಿರಲಿ. ಹೀಗೆ ನೀವು ಪ್ರತಿಯೊಬ್ಬರಿಗೂ ಹೇಗೆ ಉತ್ತರಕೊಡಬೇಕು ಎಂಬುದನ್ನು ತಿಳಿದುಕೊಳ್ಳುವಿರಿ.

[7] ಪ್ರಿಯ ಸಹೋದರನೂ ನಂಬಿಗಸ್ತ ಸೇವಕನೂ ಮತ್ತು ಕರ್ತ ಯೇಸುವಿನಲ್ಲಿ ಜೊತೆಯ ದಾಸನೂ ಆಗಿರುವ ತುಖಿಕನು ನನ್ನ ವಿಷಯವನ್ನೆಲ್ಲಾ ನಿಮಗೆ ತಿಳಿಸುವನು.

[8] ನೀವು ನಮ್ಮ ಪರಿಸ್ಥಿತಿಗಳನ್ನು ತಿಳಿದುಕೊಳ್ಳುವಂತೆಯೂ, ಅವನು ನಿಮ್ಮ ಹೃದಯಗಳನ್ನು ಉತ್ತೇಜಿಸುವಂತೆಯೂ ಅವನನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ.

[9] ನಿಮ್ಮಲ್ಲಿ ಒಬ್ಬನಾಗಿರುವ ನಂಬಿಗಸ್ತನೂ, ಪ್ರಿಯ ಸಹೋದರನೂ ಆದ ಓನೇಸಿಮನ ಜೊತೆಯಲ್ಲಿ ಅವನನ್ನು ನಾನು ಕಳುಹಿಸಿದ್ದೇನೆ. ಅವರು ಇಲ್ಲಿ ನಡೆಯುವ ವಿಷಯಗಳನ್ನೆಲ್ಲಾ ನಿಮಗೆ ತಿಳಿಸುವರು.

[10] ನನ್ನ ಜೊತೆ ಸೆರೆಯಾಳಾದ ಅರಿಸ್ತಾರ್ಕ, ಬಾರ್ನಬನ ಸಹೋದರಿಯ ಮಗನಾದ ಮಾರ್ಕನು ನಿಮಗೆ ವಂದನೆ ಹೇಳುತ್ತಾರೆ. ಮಾರ್ಕನ ವಿಷಯದಲ್ಲಿ ನೀವು ಮಾರ್ಗದರ್ಶನ ಹೊಂದಿದ್ದೀರಲ್ಲಾ, ಅವನು ನಿಮ್ಮ ಬಳಿಗೆ ಬಂದರೆ ಅವನನ್ನು ಸೇರಿಸಿಕೊಳ್ಳಿರಿ.

[11] ಯೂಸ್ತನೆನಿಸಿಕೊಳ್ಳುವ ಯೇಸುವೂ ನಿಮ್ಮನ್ನು ವಂದಿಸುತ್ತಾನೆ. ದೇವರ ರಾಜ್ಯಕ್ಕಾಗಿ ನನ್ನ ಜೊತೆ ಕೆಲಸದವರಾಗಿದ್ದವರಲ್ಲಿ ಇವರು ಮಾತ್ರವೇ ಯೆಹೂದ್ಯರು. ಇವರು ನನಗೆ ತುಂಬಾ ಆದರಣೆಯಾಗಿದ್ದರು.

[12] ನಿಮ್ಮಲ್ಲಿ ಒಬ್ಬನೂ ಕ್ರಿಸ್ತ ಯೇಸುವಿನ ದಾಸನೂ ಆಗಿರುವ ಎಪಫ್ರನು ನಿಮಗೆ ವಂದನೆ ಹೇಳುತ್ತಾನೆ. ನೀವು ದೇವರ ಚಿತ್ತದ ಬಗ್ಗೆ ಪರಿಪಕ್ವರಾಗಿ, ಪೂರ್ಣ ನಿಶ್ಚಯವುಳ್ಳವರಾಗಿ ನಿಂತು, ಎಲ್ಲಾ ವಿಷಯಗಳಲ್ಲಿ ನಿಮಗೋಸ್ಕರ ಆಸಕ್ತಿಯಿಂದ ಪ್ರಾರ್ಥನೆಗಳಲ್ಲಿ ಯಾವಾಗಲೂ ಹೋರಾಡುತ್ತಾನೆ.

[13] ನಿಮಗಾಗಿಯೂ ಲವೊದಿಕೀಯ ಹಾಗೂ ಹಿರಿಯಾಪೊಲಿಯ ಜನರಿಗಾಗಿಯೂ ಅವನು ಬಹಳ ಪ್ರಯಾಸಪಡುತ್ತಿದ್ದಾನೆಂದು ಎಪಫ್ರನ ವಿಷಯವಾಗಿ ನಾನು ಸಾಕ್ಷಿ ಹೇಳುತ್ತೇನೆ.

[14] ಪ್ರಿಯ ವೈದ್ಯನಾದ ಲೂಕನು ಮತ್ತು ದೇಮನು ನಿಮಗೆ ವಂದನೆ ಹೇಳುತ್ತಾರೆ.

[15] ಲವೊದಿಕೀಯದಲ್ಲಿರುವ ಸಹೋದರರಿಗೂ ನುಂಫಳಿಗೂ ಆಕೆಯ ಮನೆಯಲ್ಲಿರುವ ಸಭೆಗೂ ವಂದನೆಗಳನ್ನು ಹೇಳಿರಿ.

[16] ಈ ಪತ್ರವನ್ನು ನಿಮ್ಮ ಮಧ್ಯದಲ್ಲಿ ಓದಿದ ತರುವಾಯ ಲವೊದಿಕೀಯದವರ ಸಭೆಯಲ್ಲಿಯೂ ಓದಿ ಹೇಳುವ ವ್ಯವಸ್ಥೆಮಾಡಿರಿ. ಹಾಗೆಯೇ ಲವೊದಿಕೀಯದಿಂದ ಬರುವ ಪತ್ರವನ್ನು ನೀವೂ ಓದಿಕೊಳ್ಳಿರಿ.

[17] ಅರ್ಖಿಪ್ಪನಿಗೆ, “ನೀನು ಕರ್ತ ಯೇಸುವಿನಿಂದ ಹೊಂದಿರುವ ಸೇವೆಯನ್ನು ನೆರವೇರಿಸುವುದಕ್ಕೆ ಎಚ್ಚರವಾಗಿರಬೇಕು!” ಎಂದು ಹೇಳಿರಿ.

[18] ಇದು ಪೌಲನಾದ ನಾನೇ ನನ್ನ ಕೈಯಿಂದ ಬರೆದ ವಂದನೆ. ನಾನು ಸೆರೆಯಲ್ಲಿದ್ದೇನೆಂಬುದನ್ನು ಜ್ಞಾಪಕಮಾಡಿಕೊಳ್ಳಿರಿ. ಕೃಪೆಯು ನಿಮ್ಮೊಂದಿಗಿರಲಿ.

ಕೊಲೊಸ್ಸೆಯವರಿಗೆ — Chapters