[1] ನೀವು ಕ್ರಿಸ್ತನೊಂದಿಗೆ ಜೀವಂತವಾಗಿ ಎದ್ದವರಾಗಿದ್ದರೆ, ಮೇಲಿರುವವುಗಳನ್ನೇ ಹುಡುಕಿರಿ. ಅಲ್ಲಿ ಕ್ರಿಸ್ತ ಯೇಸು ದೇವರ ಬಲಗಡೆಯಲ್ಲಿ ಕುಳಿತುಕೊಂಡಿದ್ದಾರೆ.
[2] ಪರಲೋಕದ ಕಾರ್ಯಗಳ ಮೇಲೆಯೇ ನಿಮ್ಮ ಮನಸ್ಸಿಡಿರಿ, ಭೂಸಂಬಂಧವಾದವುಗಳ ಮೇಲೆ ಮನಸ್ಸಿಡಬೇಡಿರಿ.
[3] ಏಕೆಂದರೆ ನೀವು ಸತ್ತಿರುವಿರಲ್ಲಾ, ನಿಮ್ಮ ಜೀವವು ಕ್ರಿಸ್ತ ಯೇಸುವಿನೊಂದಿಗೆ ದೇವರಲ್ಲಿ ಮರೆಯಾಗಿದೆ.
[4] ನಿಮಗೆ ಜೀವವಾಗಿರುವ ಕ್ರಿಸ್ತ ಯೇಸು ಪ್ರತ್ಯಕ್ಷರಾಗುವಾಗ, ನೀವು ಸಹ ಅವರೊಂದಿಗೆ ಮಹಿಮೆಯಲ್ಲಿ ಪ್ರತ್ಯಕ್ಷರಾಗುವಿರಿ.
[5] ಆದ್ದರಿಂದ ಅನೈತಿಕತೆ, ಅಶುದ್ಧತ್ವ, ಕಾಮಾಭಿಲಾಷೆ, ದುರಾಶೆ, ದೇವರಲ್ಲದವುಗಳನ್ನು ಆರಾಧಿಸುವುದಕ್ಕೆ ಸಮರಾಗಿರುವರು ಲೋಭ ಮುಂತಾದ ನಿಮ್ಮ ಲೌಕಿಕವಾದ ಸ್ವಭಾವಗಳನ್ನು ಸಾಯಿಸಿರಿ.
[6] ಇವುಗಳ ನಿಮಿತ್ತ ದೇವರ ಕೋಪವು ಉಂಟಾಗುತ್ತಲಿದೆ.
[7] ಒಮ್ಮೆ ನೀವೂ ಸಹ ಅಂಥವುಗಳನ್ನು ಅನುಸರಿಸುತ್ತಿದ್ದಾಗ ಅವುಗಳಲ್ಲಿಯೇ ಜೀವಿಸಿದಿರಿ.
[8] ಈಗಲಾದರೋ ಕ್ರೋಧ, ಕೋಪ, ಮತ್ಸರ, ದೂಷಣೆ, ನಿಮ್ಮ ಬಾಯಿಂದ ಹೊರಡುವ ದುರ್ಭಾಷೆ ಇವುಗಳನ್ನು ಬಿಟ್ಟುಬಿಡಿರಿ.
[9] ಒಬ್ಬರಿಗೊಬ್ಬರು ಸುಳ್ಳಾಡಬೇಡಿರಿ, ನೀವು ಹಳೆಯ ಸ್ವಭಾವವನ್ನು ಅದರ ಕೃತ್ಯಗಳನ್ನು ಕೂಡ ತೆಗೆದು ಹಾಕಿದ್ದೀರಲ್ಲವೇ!
[10] ಸೃಷ್ಟಿಕರ್ತನ ಸ್ವರೂಪವನ್ನು, ತಿಳುವಳಿಕೆಯಲ್ಲಿ ನವೀಕರಣ ಹೊಂದುತ್ತಿರುವ ಆ ನೂತನ ಸ್ವಭಾವವನ್ನೇ ಧರಿಸಿಕೊಂಡವರಾಗಿದ್ದೀರಲ್ಲಾ.
[11] ಯೆಹೂದ್ಯರು ಯೆಹೂದ್ಯರಲ್ಲದವರು, ಸುನ್ನತಿ ಹೊಂದಿದವರು, ಸುನ್ನತಿ ಹೊಂದದವರು, ನಾಗರಿಕ, ಅನಾಗರಿಕ, ಆಳು, ಸ್ವತಂತ್ರರು ಎಂಬ ಭೇದವಿಲ್ಲ. ಆದರೆ ಕ್ರಿಸ್ತ ಯೇಸುವೇ ಸಮಸ್ತರಲ್ಲಿಯೂ ಸಮಸ್ತವೂ ಆಗಿದ್ದಾರೆ.
[12] ಆದಕಾರಣ ದೇವರಿಂದ ಆಯ್ಕೆಯಾದವರೂ ಪರಿಶುದ್ಧರೂ ಪ್ರಿಯರೂ ಆಗಿರುವ ನೀವು ಕನಿಕರ, ದಯೆ, ದೀನತ್ವ, ಸಾತ್ವಿಕತ್ವ, ದೀರ್ಘಶಾಂತಿ ಇವುಗಳನ್ನು ಧರಿಸಿಕೊಳ್ಳಿರಿ.
[13] ಯಾವನಿಗಾದರೂ ಇನ್ನೊಬ್ಬನ ಮೇಲೆ ದೂರು ಇದ್ದರೂ, ಒಬ್ಬರನ್ನೊಬ್ಬರು ಸಹಿಸಿಕೊಂಡು ಕ್ಷಮಿಸಿರಿ. ಕರ್ತ ಯೇಸುವು ನಿಮ್ಮನ್ನು ಕ್ಷಮಿಸಿದಂತೆಯೇ, ನೀವು ಒಬ್ಬರನ್ನೊಬ್ಬರು ಕ್ಷಮಿಸಿರಿ.
[14] ಎಲ್ಲದಕ್ಕಿಂತ ಮಿಗಿಲಾಗಿ, ಎಲ್ಲವನ್ನೂ ಪರಿಪೂರ್ಣವಾದ ಐಕ್ಯತೆಯಲ್ಲಿ ಬಂಧಿಸುವ ಪ್ರೀತಿಯನ್ನು ಧರಿಸಿಕೊಳ್ಳಿರಿ.
[15] ಕ್ರಿಸ್ತ ಯೇಸುವಿನ ಸಮಾಧಾನವು ನಿಮ್ಮ ಹೃದಯಗಳಲ್ಲಿ ಆಳಲಿ, ಆ ಸಮಾಧಾನಕ್ಕಾಗಿಯೇ ನೀವು ಸಹ ಒಂದೇ ದೇಹವಾಗಿರುವಂತೆ ಕರೆಯಲಾಗಿದ್ದೀರಿ. ನೀವು ಕೃತಜ್ಞತೆಯುಳ್ಳವರಾಗಿರಿ.
[16] ಕ್ರಿಸ್ತ ಯೇಸುವಿನ ವಾಕ್ಯವು ನಿಮ್ಮಲ್ಲಿ ಸಮೃದ್ಧಿಯಾಗಿ ವಾಸಿಸಲಿ. ಆ ವಾಕ್ಯದಿಂದಲೇ, ನೀವು ಸಕಲ ಜ್ಞಾನದಲ್ಲಿ ಕೃತಜ್ಞತೆಯೊಂದಿಗೆ ನಿಮ್ಮ ಹೃದಯಗಳಲ್ಲಿ ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಆತ್ಮಿಕ ಹಾಡುಗಳಿಂದಲೂ ಕರ್ತ ಯೇಸುವನ್ನು ಕೊಂಡಾಡುತ್ತಾ ಒಬ್ಬರಿಗೊಬ್ಬರು ಉಪದೇಶಿಸುತ್ತಾ, ಬುದ್ಧಿ ಹೇಳುತ್ತಾ ಇರಿ.
[17] ನೀವು ಮಾತಿನಿಂದಾಗಲಿ, ಕ್ರಿಯೆಯಿಂದಾಗಲಿ ಏನು ಮಾಡಿದರೂ ಅದೆಲ್ಲವನ್ನೂ ನಮಗೆ ಕರ್ತ ಆಗಿರುವ ಕ್ರಿಸ್ತ ಯೇಸುವಿನ ಹೆಸರಿನಲ್ಲಿಯೇ ಮಾಡಿರಿ, ಕ್ರಿಸ್ತ ಯೇಸುವಿನ ಮೂಲಕ ತಂದೆಯಾದ ದೇವರಿಗೆ ಕೃತಜ್ಞತಾಸ್ತುತಿಯನ್ನು ಸಲ್ಲಿಸಿರಿ.
[18] ಹೆಂಡತಿಯರೇ, ನೀವು ಕರ್ತ ಯೇಸುವಿನಲ್ಲಿ ಯೋಗ್ಯರಾಗಿರುವಂತೆ ನಿಮ್ಮ ನಿಮ್ಮ ಗಂಡಂದಿರಿಗೆ ಅಧೀನರಾಗಿರಿ.
[19] ಗಂಡಂದಿರೇ, ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ. ಅವರೊಂದಿಗೆ ಕಠಿಣವಾಗಿ ವರ್ತಿಸಬೇಡಿರಿ.
[20] ಮಕ್ಕಳೇ, ಎಲ್ಲಾ ವಿಧಗಳಲ್ಲಿ ನಿಮ್ಮ ತಂದೆತಾಯಿಗಳಿಗೆ ವಿಧೇಯರಾಗಿರಿ. ಏಕೆಂದರೆ ಇದು ಕರ್ತ ಯೇಸುವಿಗೆ ಬಹು ಮೆಚ್ಚಿಕೆಯಾಗಿದೆ.
[21] ತಂದೆಯರೇ, ನಿಮ್ಮ ಮಕ್ಕಳನ್ನು ರೇಗಿಸಬೇಡಿರಿ. ಹಾಗೆ ಮಾಡಿದರೆ, ಅವರು ನಿರಾಶರಾಗುವರು.
[22] ಸೇವಕರೇ, ಭೂಮಿಯಲ್ಲಿ ನಿಮ್ಮ ಯಜಮಾನರಾಗಿರುವವರು ನೋಡುತ್ತಿರುವಾಗ ಮಾತ್ರ ಸೇವೆ ಮಾಡುವವರಾಗದೆ, ಕರ್ತ ಯೇಸುವಿಗೆ ಭಯಪಡುವವರಾಗಿ ಸರಳ ಹೃದಯದಿಂದ ಕೆಲಸಮಾಡಿ, ಅವರಿಗೆ ವಿಧೇಯರಾಗಿರಿ.
[23] ನೀವು ಏನನ್ನು ಮಾಡಿದರೂ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೆ ಕರ್ತನಿಗೋಸ್ಕರವೇ ಎಂದು ಹೃದಯಪೂರ್ವಕವಾಗಿ ಮಾಡಿರಿ.
[24] ಕರ್ತ ಯೇಸುವಿನಿಂದ ಬಾಧ್ಯತೆಯನ್ನು ಬಹುಮಾನವಾಗಿ ಹೊಂದುವಿರೆಂದು ತಿಳಿದಿದ್ದೀರಲ್ಲಾ. ಏಕೆಂದರೆ ನೀವು ಕರ್ತ ಆಗಿರುವ ಕ್ರಿಸ್ತ ಯೇಸುವನ್ನೇ ಸೇವೆಮಾಡುವವರಾಗಿದ್ದೀರಿ.
[25] ಆದರೆ ಅನ್ಯಾಯ ಮಾಡುವವನು ತಾನು ಮಾಡಿದ ಅನ್ಯಾಯಕ್ಕೆ ತಕ್ಕದ್ದನ್ನು ಹೊಂದುವನು ಮತ್ತು ದೇವರಲ್ಲಿ ಪಕ್ಷಪಾತವಿರುವುದಿಲ್ಲ.