[1] ದೇವರ ಚಿತ್ತಾನುಸಾರ ಕ್ರಿಸ್ತ ಯೇಸುವಿನ ಅಪೊಸ್ತಲನಾಗಿರುವ ಪೌಲನೂ ನಮ್ಮ ಸಹೋದರನಾದ ತಿಮೊಥೆಯನೂ,
[2] ಕ್ರಿಸ್ತನಲ್ಲಿರುವ ಕೊಲೊಸ್ಸೆಯ ದೇವರ ಪರಿಶುದ್ಧರಿಗೆ ಮತ್ತು ನಂಬಿಗಸ್ತರಾದ ಸಹೋದರ ಸಹೋದರಿಯರಿಗೆ: ನಮ್ಮ ತಂದೆಯಾದ ದೇವರಿಂದ ನಿಮಗೆ ಕೃಪೆಯೂ ಶಾಂತಿಯೂ ಆಗಲಿ.
[3] ನಾವು ನಿಮಗಾಗಿ ಪ್ರಾರ್ಥನೆ ಮಾಡುವಾಗ, ನಮ್ಮ ಕರ್ತ ಯೇಸುಕ್ರಿಸ್ತರ ತಂದೆಯಾದ ದೇವರಿಗೆ ಯಾವಾಗಲೂ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.
[4] ಏಕೆಂದರೆ, ಕ್ರಿಸ್ತ ಯೇಸುವಿನಲ್ಲಿ ನೀವು ಇಟ್ಟ ನಂಬಿಕೆ ಹಾಗೂ ದೇವಜನರೆಲ್ಲರ ಮೇಲಿರುವ ನಿಮ್ಮ ಪ್ರೀತಿಯ ವಿಷಯವಾಗಿ ನಾವು ಕೇಳಿದ್ದೇವೆ.
[5] ಪರಲೋಕದಲ್ಲಿ ನಿಮಗೋಸ್ಕರ ಕಾದಿರಿಸಲಾದ ನಿರೀಕ್ಷೆಯಿಂದಲೇ ಈ ವಿಶ್ವಾಸವೂ ಪ್ರೀತಿಯೂ ಬುಗ್ಗೆಯಾಗಿ ಒದಗಿಬರುತ್ತದೆ. ಈ ನಿರೀಕ್ಷೆಯ ಬಗ್ಗೆ ಸುವಾರ್ತೆಯ ಸತ್ಯ ಸಂದೇಶವನ್ನು ಮೊದಲೇ ನೀವು ಕೇಳಿದ್ದೀರಿ.
[6] ಆ ಸುವಾರ್ತೆಯು ಲೋಕದಲ್ಲೆಲ್ಲಾ ಹರಡಿದಂತೆ, ನಿಮಗೂ ತಲುಪಲು ನೀವು ಸಹ ಅದನ್ನು ಕೇಳಿ ದೇವರ ಕೃಪೆಯನ್ನು ನಿಜವಾಗಿಯೂ ತಿಳಿದುಕೊಂಡ ದಿವಸದಿಂದ ನಿಮ್ಮಲ್ಲಿಯೂ ಫಲಕೊಟ್ಟು ವೃದ್ಧಿಯಾಗುತ್ತಿದೆ.
[7] ಇದನ್ನು ನೀವು ನಮ್ಮ ಪ್ರೀತಿಯ ಜೊತೆ ಸೇವಕನಾದ ಎಪಫ್ರನಿಂದ ಕಲಿತುಕೊಂಡಿರಿ. ಅವನು ನಮಗೋಸ್ಕರ ಕ್ರಿಸ್ತನ ನಂಬಿಗಸ್ತನಾದ ಸೇವಕನು.
[8] ಪವಿತ್ರಾತ್ಮರಿಂದ ನೀವು ಹೊಂದಿರುವ ಪ್ರೀತಿಯನ್ನು ನಮಗೆ ತಿಳಿಸಿದವನೂ ಅವನೇ.
[9] ಆದಕಾರಣ ನಾವೂ ಸಹ ನಿಮ್ಮ ಬಗ್ಗೆ ಕೇಳಿದ ದಿನದಿಂದ ನಿಮಗಾಗಿ ಪ್ರಾರ್ಥಿಸುವುದನ್ನು ಬಿಡಲಿಲ್ಲ. ನೀವು ದೇವರಾತ್ಮ ನೀಡುವ ಜ್ಞಾನವನ್ನೂ ಗ್ರಹಿಕೆಯನ್ನೂ ಹೊಂದಿ, ದೇವರ ಚಿತ್ತದ ತಿಳುವಳಿಕೆಯಿಂದ ತುಂಬಿರಬೇಕೆಂದು ನಾವು ದೇವರಿಗೆ ಬೇಡಿಕೊಳ್ಳುತ್ತಿದ್ದೇವೆ.
[10] ಕರ್ತ ಯೇಸುವಿಗೆ ಯೋಗ್ಯರಾಗಿ ಜೀವಿಸಿ ಎಲ್ಲಾ ವಿಧದಲ್ಲಿ ಅವರನ್ನೇ ಮೆಚ್ಚಿಸುವವರಾಗಿರಬೇಕೆಂತಲೂ ನೀವು ಸಕಲ ಸತ್ಕಾರ್ಯದಲ್ಲಿ ಫಲಕೊಡುತ್ತಾ ದೇವರ ತಿಳುವಳಿಕೆಯಲ್ಲಿ ವೃದ್ಧಿಯಾಗುತ್ತಿರಬೇಕೆಂತಲೂ
[11] ದೇವರ ಮಹಿಮೆಯ ಪರಾಕ್ರಮದಿಂದ ಬರುವ ಸರ್ವಶಕ್ತಿಯನ್ನು ಹೊಂದಿ ಬಲಗೊಳ್ಳಲಿ ಎಂದು ಬೇಡಿಕೊಳ್ಳುತ್ತೇವೆ. ಆಗ ನೀವು ಸರ್ವತಾಳ್ಮೆಯನ್ನೂ ದೀರ್ಘಶಾಂತಿಯನ್ನೂ ಹೊಂದಿದವರಾಗಿ,
[12] ತಂದೆಯಾದ ದೇವರಿಗೆ ಹರ್ಷದಿಂದ ಕೃತಜ್ಞತೆಯನ್ನು ಸಲ್ಲಿಸುವಿರಿ. ಬೆಳಕಿನಲ್ಲಿರುವ ದೇವಭಕ್ತರ ಬಾಧ್ಯತೆಯಲ್ಲಿ ಪಾಲುಗಾರರಾಗುವುದಕ್ಕೆ ತಂದೆಯು ನಿಮ್ಮನ್ನು ಯೋಗ್ಯರನ್ನಾಗಿ ಮಾಡಿದ್ದಾರೆ.
[13] ತಂದೆಯು ನಮ್ಮನ್ನು ಅಂಧಕಾರದ ಅಧಿಪತ್ಯದಿಂದ ಬಿಡಿಸಿ ತಮ್ಮ ಪ್ರಿಯ ಪುತ್ರ ಕ್ರಿಸ್ತ ಯೇಸುವಿನ ರಾಜ್ಯದೊಳಗೆ ಸೇರಿಸಿದರು.
[14] ಕ್ರಿಸ್ತ ಯೇಸುವಿನಲ್ಲಿಯೇ ನಮಗೆ ವಿಮೋಚನೆ ಉಂಟಾಯಿತು. ನಮ್ಮ ಪಾಪಗಳ ಕ್ಷಮೆಯೇ ಆ ವಿಮೋಚನೆಯಾಗಿರುತ್ತದೆ.
[15] ಕ್ರಿಸ್ತ ಯೇಸು ಅದೃಶ್ಯರಾದ ದೇವರ ಸ್ವರೂಪವೂ ಸರ್ವಸೃಷ್ಟಿಗು ಜ್ಯೇಷ್ಠ ಪುತ್ರರೂ ಆಗಿದ್ದಾರೆ.
[16] ಏಕೆಂದರೆ ಭೂಪರಲೋಕಗಳಲ್ಲಿರುವ ಕಾಣುವಂತವುಗಳಾಗಲಿ, ಕಾಣದಂತವುಗಳಾಗಲಿ ಸಮಸ್ತವು ಇವರ ಮೂಲಕವೇ ಸೃಷ್ಟಿಸಲಾಯಿತು. ಸಿಂಹಾಸನಗಳಾಗಲಿ, ಪ್ರಭುತ್ವಗಳಾಗಲಿ, ದೊರೆತನಗಳಾಗಲಿ, ಅಧಿಕಾರಗಳಾಗಲಿ ಕ್ರಿಸ್ತನಲ್ಲಿಯೇ ಸೃಷ್ಟಿಗೊಂಡವು. ಸರ್ವವೂ ಕ್ರಿಸ್ತರಿಂದಲೂ ಕ್ರಿಸ್ತರಿಗಾಗಿಯೂ ಸೃಷ್ಟಿಹೊಂದಿತು.
[17] ಕ್ರಿಸ್ತ ಯೇಸು ಎಲ್ಲದಕ್ಕೂ ಮೊದಲು ಇದ್ದವರು, ಇವರಲ್ಲಿಯೇ ಸಮಸ್ತವೂ ನೆಲೆಯಾಗಿದೆ.
[18] ಕ್ರಿಸ್ತ ಯೇಸು ಸಭೆಯೆಂಬ ದೇಹಕ್ಕೆ ಶಿರಸ್ಸಾಗಿದ್ದಾರೆ. ಎಲ್ಲದರಲ್ಲಿಯೂ ಇವರೇ ಪ್ರಥಮ ಸ್ಥಾನಹೊಂದಿರುವಂತೆ, ಆರಂಭವೂ ಸತ್ತು ಎದ್ದು ಬಂದವರಲ್ಲಿ ಪ್ರಥಮವಾದವರು ಆಗಿದ್ದಾರೆ. ಹೀಗೆ ಇವರು ಎಲ್ಲದರಲ್ಲಿಯೂ ಸರ್ವಶ್ರೇಷ್ಠರಾಗಿದ್ದಾರೆ.
[19] ಏಕೆಂದರೆ ದೇವರು ಕ್ರಿಸ್ತ ಯೇಸುವಿನಲ್ಲಿ ಸರ್ವಸಂಪೂರ್ಣತೆಯು ವಾಸವಾಗಿರಲು ಬಯಸಿದರು.
[20] ಕ್ರಿಸ್ತ ಯೇಸು ಶಿಲುಬೆಯ ಮೇಲೆ ಸುರಿಸಿದ ರಕ್ತದ ಮೂಲಕವಾಗಿ, ದೇವರು ಸಮಾಧಾನವನ್ನು ಉಂಟುಮಾಡಿ, ಕ್ರಿಸ್ತನ ಮೂಲಕವೇ ಭೂಪರಲೋಕಗಳಲ್ಲಿರುವ ಎಲ್ಲವನ್ನೂ ತಮ್ಮೊಂದಿಗೆ ಸಂಧಾನಪಡಿಸಿಕೊಂಡರು.
[21] ಹಿಂದಿನ ಕಾಲದಲ್ಲಿ ನೀವು ನಿಮ್ಮ ದುಷ್ಕೃತ್ಯಗಳ ನಿಮಿತ್ತ ದೇವರಿಂದ ದೂರವಿದ್ದವರೂ ಮನಸ್ಸಿನಲ್ಲಿ ದೇವರ ಶತ್ರುಗಳೂ ಆಗಿದ್ದೀರಿ.
[22] ಈಗಲಾದರೋ ದೇವರು ನಿಮ್ಮನ್ನು ಪರಿಶುದ್ಧರನ್ನಾಗಿಯೂ ನಿರ್ದೋಷಿಗಳನ್ನಾಗಿಯೂ ನಿಂದಾರಹಿತರನ್ನಾಗಿಯೂ ತಮ್ಮ ಸನ್ನಿಧಿಯಲ್ಲಿ ನಿಲ್ಲಿಸಿಕೊಳ್ಳುವಂತೆ, ಕ್ರಿಸ್ತನ ಮಾಂಸದೇಹದ ಮರಣದಿಂದ ಈಗ ನಿಮ್ಮನ್ನು ಸಂಧಾನಪಡಿಸಿಕೊಂಡಿದ್ದಾರೆ.
[23] ನೀವು ನಿಮ್ಮ ನಂಬಿಕೆಯಲ್ಲಿ ಸ್ಥಿರವಾಗಿ ಮುಂದುವರೆದು ನೆಲೆಗೊಂಡು, ಸುವಾರ್ತೆಯ ನಿರೀಕ್ಷೆಯಿಂದ ತೊಲಗಿ ಹೋಗದಿರಿ. ನೀವು ಕೇಳಿದಂಥ ಮತ್ತು ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ ಸಾರಲಾದ ಈ ಸುವಾರ್ತೆಗೆ ಪೌಲನೆಂಬ ನಾನು ಸೇವಕನಾದೆನು.
[24] ಈಗ ನಾನು ನಿಮಗೋಸ್ಕರ ಸಹಿಸುತ್ತಿರುವ ಬಾಧೆಗಳಲ್ಲಿ ಆನಂದಿಸುತ್ತೇನೆ. ಕ್ರಿಸ್ತ ಯೇಸುವಿನ ಸಂಕಟಗಳೊಳಗೆ ಇನ್ನೂ ಕೊರತೆಯಾಗಿರುವುದನ್ನು ಅವರ ದೇಹವಾಗಿರುವ ಸಭೆಗಾಗಿ ನನ್ನ ದೇಹದಲ್ಲಿ ತೀರಿಸುತ್ತೇನೆ.
[25] ನಿಮಗೋಸ್ಕರವಾಗಿ ನನಗೆ ದೇವರು ಕೊಟ್ಟಿರುವ ಜವಾಬ್ದಾರಿಗೆ ಅನುಸಾರವಾಗಿ, ದೇವರ ವಾಕ್ಯವನ್ನು ಸಂಪೂರ್ಣವಾಗಿ ಸಾರಲು ನಾನು ಸಭೆಗೆ ಸೇವಕನಾದೆನು.
[26] ಆ ರಹಸ್ಯವು ಹಿಂದಿನ ಯುಗಗಳಿಂದಲೂ ತಲತಲಾಂತರಗಳಿಂದಲೂ ಮರೆಯಾಗಿತ್ತು. ಆದರೂ ಈಗ ಅದು ಕರ್ತ ಯೇಸುವಿನ ಜನರಿಗೆ ಪ್ರಕಟವಾಗಿದೆ.
[27] ಯೆಹೂದ್ಯರಲ್ಲದವರಲ್ಲಿ ಆ ರಹಸ್ಯದ ಮಹಿಮೆಯ ಐಶ್ವರ್ಯವು ಎಷ್ಟೆಂಬುದನ್ನು ದೇವರು ತಮ್ಮ ಜನರಿಗೆ ಪ್ರಕಟಿಸುವುದಕ್ಕೆ ಮನಸ್ಸು ಮಾಡಿದ್ದಾರೆ. ಆ ರಹಸ್ಯವು ಏನೆಂದರೆ, ನಿಮ್ಮಲ್ಲಿರುವ ಕ್ರಿಸ್ತ ಯೇಸು ಮಹಿಮೆಯ ನಿರೀಕ್ಷೆಯಾಗಿದ್ದಾರೆ ಎಂಬುದೇ.
[28] ಈ ಕ್ರಿಸ್ತ ಯೇಸುವನ್ನೇ ನಾವು ಸಾರುವವರಾಗಿದ್ದೇವೆ; ಪ್ರತಿಯೊಬ್ಬರೂ ಕ್ರಿಸ್ತ ಯೇಸುವಿನಲ್ಲಿ ಪರಿಪಕ್ವತೆಯುಳ್ಳವರಾಗಿ ಸಮರ್ಪಿಸುವಂತೆ, ಪ್ರತಿಯೊಬ್ಬರನ್ನೂ ಎಚ್ಚರಿಸಿ ಎಲ್ಲಾ ಜ್ಞಾನದಲ್ಲಿ ಪ್ರತಿಯೊಬ್ಬರಿಗೂ ಬೋಧಿಸುತ್ತಿದ್ದೇವೆ.
[29] ನನ್ನಲ್ಲಿ ಬಲದಿಂದ ಕಾರ್ಯ ಮಾಡುವ ಕ್ರಿಸ್ತನ ಶಕ್ತಿಗೆ ಅನುಸಾರವಾಗಿ, ನಾನೂ ಸಹ ಪ್ರಯಾಸ ಪಡುತ್ತಾ ಈ ಗುರಿಗಾಗಿ ಹೋರಾಡುತ್ತೇನೆ.