[1] ಪ್ರಿಯರೇ, ನಿಮಗೀಗ ಬರೆಯುವುದು ಎರಡನೆಯ ಪತ್ರ. ಈ ಎರಡು ಪತ್ರಗಳಲ್ಲಿಯೂ ನಿಮ್ಮ ನೆನಪಿಗೆ ತಂದು ನಿಮ್ಮ ನಿರ್ಮಲವಾದ ಮನಸ್ಸನ್ನು ಉತ್ತೇಜಿಸಿದ್ದೇನೆ.
[2] ಪರಿಶುದ್ಧ ಪ್ರವಾದಿಗಳು ಪೂರ್ವದಲ್ಲಿ ಹೇಳಿದ ಮಾತುಗಳನ್ನೂ ನಮಗೆ ಕರ್ತ ಹಾಗೂ ರಕ್ಷಕ ಆಗಿರುವವರು ನಿಮ್ಮ ಅಪೊಸ್ತಲರ ಮೂಲಕ ಕೊಟ್ಟ ಅಪ್ಪಣೆಯನ್ನೂ ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಬಯಸುತ್ತೇನೆ.
[3] ಕಡೇ ದಿವಸಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು,
[4] “ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು? ಪಿತೃಗಳು ನಿದ್ರೆಹೊಂದಿದಂದಿನಿಂದ ಸಮಸ್ತವೂ ಸೃಷ್ಟಿ ಮೊದಲುಗೊಂಡು ಹಾಗೆಯೇ ಇರುತ್ತದಲ್ಲಾ?” ಎಂದು ಕುಚೋದ್ಯದಿಂದ ಕೇಳುವರೆಂದು ನೀವು ಮೊದಲು ತಿಳಿದುಕೊಳ್ಳಬೇಕು.
[5] ಆದರೆ ಪೂರ್ವಕಾಲದಲ್ಲಿ ದೇವರ ವಾಕ್ಯದಿಂದ ಆಕಾಶವು ಅಸ್ತಿತ್ವಕ್ಕೆ ಬಂದಿತು ಎಂತಲೂ ಜಲದಿಂದ ಜಲದ ಮೂಲಕ ಭೂಮಿಯು ಉಂಟಾಯಿತೆಂಬುದನ್ನು ಅವರು ಬೇಕೆಂತಲೇ ಮರೆತುಬಿಡುತ್ತಾರೆ.
[6] ಈ ಜಲದಿಂದ ಆ ಸಮಯದಲ್ಲಿ ಜಗತ್ತು ಪ್ರಳಯದಲ್ಲಿ ನಾಶವಾಯಿತು.
[7] ಆದರೆ ಈಗಿನ ಆಕಾಶವೂ ಭೂಮಿಯೂ ಅದೇ ವಾಕ್ಯದಿಂದ ಬೆಂಕಿಗಾಗಿ ಕಾದಿರಿಸಲಾಗಿವೆ. ಅವು ನ್ಯಾಯತೀರ್ಪಿಗಾಗಿ ಮತ್ತು ಭಕ್ತಿಹೀನರ ನಾಶನಕ್ಕಾಗಿ ಇಡಲಾಗಿವೆ.
[8] ಆದರೆ ಪ್ರಿಯರೇ, ಕರ್ತದೇವರ ಎಣಿಕೆಯಲ್ಲಿ ಒಂದು ದಿನವು ಸಾವಿರ ವರ್ಷಗಳಂತೆಯೂ ಸಾವಿರ ವರ್ಷಗಳು ಒಂದು ದಿನದಂತೆಯೂ ಇವೆ ಎಂಬುದನ್ನು ಮಾತ್ರ ಮರೆಯಬೇಡಿರಿ.
[9] ಕರ್ತದೇವರು ತಮ್ಮ ವಾಗ್ದಾನದ ವಿಷಯವಾಗಿ ತಡಮಾಡುತ್ತಾರೆಂಬದಾಗಿ ಕೆಲವರು ಎಣಿಸುವ ಪ್ರಕಾರ ಅವರು ತಡಮಾಡುವವರಲ್ಲ. ಆದರೆ ಯಾವನಾದರೂ ನಾಶವಾಗುವುದರಲ್ಲಿ ಅವರು ಇಷ್ಟಪಡದೆ ಎಲ್ಲರೂ ಪಶ್ಚಾತ್ತಾಪಡಬೇಕೆಂದು ಅಪೇಕ್ಷಿಸುವವರಾಗಿದ್ದು ನಮ್ಮ ಕಡೆಗೆ ದೀರ್ಘಶಾಂತರಾಗಿದ್ದಾರೆ.
[10] ಆದರೂ ಕರ್ತ ಯೇಸುವಿನ ದಿನವು ರಾತ್ರಿಯಲ್ಲಿ ಕಳ್ಳನು ಬರುವಂತೆ ಬರುತ್ತದೆ. ಆ ದಿನದಲ್ಲಿ ಆಕಾಶಗಳು ಮಹಾಘೋಷದಿಂದ ಇಲ್ಲದೆ ಹೋಗುವವು. ಅತಿ ಉಷ್ಣದಿಂದ ಪಂಚಭೂತಗಳು ಉರಿದು ಲಯವಾಗಿ ಹೋಗುವವು. ಭೂಮಿಯೂ ಅದರಲ್ಲಿರುವ ಕೆಲಸಗಳೂ ಸುಟ್ಟು ಹೋಗುವವು.
[11] ಇವೆಲ್ಲವುಗಳು ಹೀಗೆ ಲಯವಾಗಿ ಹೋಗುವುದರಿಂದ ನೀವು ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿರಬೇಕು.
[12] ದೇವರ ದಿನದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಆತುರಪಡುವ ಆ ದಿನದಲ್ಲಿ ಆಕಾಶಗಳು ಬೆಂಕಿಹತ್ತಿ ಲಯವಾಗಿ ಹೋಗುವವು. ಅತಿ ಉಷ್ಣದಿಂದ ಪಂಚಭೂತಗಳು ಉರಿದು ಕರಗಿ ಹೋಗುವವಲ್ಲವೇ?
[13] ಆದರೂ ನಾವು ದೇವರ ವಾಗ್ದಾನದ ಪ್ರಕಾರ ನೂತನ ಆಕಾಶಗಳನ್ನೂ ನೂತನ ಭೂಮಿಯನ್ನೂ ಎದುರುನೋಡುತ್ತಾ ಇದ್ದೇವೆ. ಅವುಗಳಲ್ಲಿ ನೀತಿಯು ವಾಸವಾಗಿರುವುದು.
[14] ಆದಕಾರಣ ಪ್ರಿಯ ಸ್ನೇಹಿತರೇ, ನೀವು ಇಂಥವುಗಳನ್ನು ಎದುರು ನೋಡುವವರಾಗಿರುವುದರಿಂದ ಸಮಾಧಾನದಲ್ಲಿದ್ದು ನಿರ್ಮಲರಾಗಿಯೂ ನಿರ್ದೋಷಿಗಳಾಗಿಯೂ ಅವರಿಗೆ ಕಾಣಿಸಿಕೊಳ್ಳುವಂತೆ ಜಾಗ್ರತೆಯುಳ್ಳವರಾಗಿರಿ.
[15] ನಮ್ಮ ಕರ್ತದೇವರ ದೀರ್ಘಶಾಂತಿಯು ನಮ್ಮ ರಕ್ಷಣೆಯ ಕಾರಣಕ್ಕಾಗಿ ಇದೆ ಎಂದು ಎಣಿಸಿಕೊಳ್ಳಿರಿ. ನಮ್ಮ ಪ್ರಿಯ ಸಹೋದರನಾದ ಪೌಲನು ಸಹ ತನಗೆ ಅನುಗ್ರಹಿಸಿರುವ ಜ್ಞಾನದ ಪ್ರಕಾರ ನಿಮಗೆ ಬರೆದಿದ್ದಾನೆ.
[16] ಅವನು ತನ್ನ ಎಲ್ಲಾ ಪತ್ರಿಕೆಗಳಲ್ಲಿಯೂ ಈ ವಿಷಯಗಳನ್ನು ಕುರಿತು ಹೇಳಿದ್ದಾನೆ. ಆ ಪತ್ರಗಳಲ್ಲಿರುವ ಕೆಲವು ವಿಷಯಗಳು ತಿಳಿಯುವುದಕ್ಕೆ ಕಷ್ಟವಾಗಿವೆ. ಪವಿತ್ರ ವೇದದ ಮಿಕ್ಕಾದ ಭಾಗಗಳಿಗೆ ಸಹ ತಪ್ಪಾದ ಅರ್ಥಮಾಡಿಕೊಂಡ ಹಾಗೆಯೇ ವಿದ್ಯಾಹೀನರೂ ಚಪಲಚಿತ್ತರೂ ಇವುಗಳಿಗೂ ತಪ್ಪಾದ ಅರ್ಥಮಾಡಿಕೊಂಡು ತಮಗೆ ನಾಶವನ್ನುಂಟುಮಾಡಿಕೊಳ್ಳುತ್ತಾರೆ.
[17] ಆದಕಾರಣ ಪ್ರಿಯರೇ, ನೀವು ಈ ಸಂಗತಿಗಳನ್ನು ಮುಂದಾಗಿ ತಿಳಿದುಕೊಂಡಿರುವುದರಿಂದ ನಿಯಮರಹಿತರ ಸೆಳೆಯುವಿಕೆಗೆ ಮರುಳಾಗಿ ನಿಮ್ಮ ಸ್ಥಿರತೆಯಿಂದ ಬಿದ್ದುಹೋಗದಂತೆ ಎಚ್ಚರಿಕೆಯಿಂದಿರಿ.
[18] ನೀವು ಕೃಪೆಯಲ್ಲಿ ಬೆಳೆಯಿರಿ ಮತ್ತು ನಮಗೆ ಕರ್ತ ಹಾಗೂ ರಕ್ಷಕ ಆಗಿರುವ ಕ್ರಿಸ್ತ ಯೇಸುವಿನ ವಿಷಯವಾದ ಜ್ಞಾನದಲ್ಲಿಯೂ ಬೆಳೆಯಿರಿ. ಅವರಿಗೆ ಈಗಲೂ ಸರ್ವಕಾಲವೂ ಮಹಿಮೆ ಇರಲಿ! ಆಮೆನ್.