Skip to content
Opens in a new window
Listen to this chapter • 4:03

[1] ಪ್ರಿಯರೇ, ಇಂಥಾ ವಾಗ್ದಾನಗಳು ನಮಗಿರುವುದರಿಂದ ನಮ್ಮ ದೇಹಾತ್ಮಗಳನ್ನು ಮಲಿನಗೊಳಿಸುವ ಎಲ್ಲಾ ವಿಷಯಗಳಿಂದ ನಮ್ಮನ್ನು ಶುದ್ಧಮಾಡಿ, ದೇವರ ಮೇಲಿನ ಭಯಭಕ್ತಿಯಿಂದ ನಮ್ಮ ಪವಿತ್ರತೆಯನ್ನು ಪರಿಪೂರ್ಣಗೊಳಿಸೋಣ.

[2] ನಿಮ್ಮ ಹೃದಯಗಳಲ್ಲಿ ನಮಗೆ ಸ್ಥಳ ಕೊಡಿರಿ. ನಾವು ಯಾರಿಗೂ ಅನ್ಯಾಯ ಮಾಡಲಿಲ್ಲ, ಯಾರಿಗೂ ನಾವು ಕೇಡು ಬಗೆಯಲಿಲ್ಲ, ನಾವು ಸ್ವಂತ ಲಾಭಕ್ಕಾಗಿ ಯಾರನ್ನೂ ದುಡಿಸಿಕೊಳ್ಳಲಿಲ್ಲ.

[3] ನಿಮ್ಮ ಮೇಲೆ ತಪ್ಪು ಹೊರಿಸುವುದಕ್ಕಾಗಿ ನಾನು ಇದನ್ನು ನಿಮಗೆ ಹೇಳುತ್ತಿಲ್ಲ. ನಾವು ನಿಮ್ಮೊಂದಿಗೆ ಜೀವಿಸಿ, ಸಾಯುವಷ್ಟರ ಮಟ್ಟಿಗೆ ನಾವು ನಮ್ಮ ಹೃದಯದಾಳದಿಂದ ನಿಮ್ಮನ್ನು ಪ್ರೀತಿಸುತ್ತಿದ್ದೇವೆ ಎಂದು ನಾನು ಹಿಂದೆ ಹೇಳಲಿಲ್ಲವೇ?

[4] ನಿಮ್ಮ ಮೇಲೆ ನನಗೆ ಪರಿಪೂರ್ಣ ಭರವಸೆ ಇದೆ. ನಿಮ್ಮ ಬಗ್ಗೆ ನಾನು ಹೆಮ್ಮೆಪಡುತ್ತೇನೆ. ನಾನು ಬಹಳವಾಗಿ ಪ್ರೋತ್ಸಾಹ ಹೊಂದಿ, ನಮಗೆ ಬಂದಿದ್ದ ಎಲ್ಲಾ ಸಂಕಟಗಳಲ್ಲಿ ನಾವು ನಿಮ್ಮಿಂದ ಮಿತಿಯಿಲ್ಲದಷ್ಟು ಆನಂದಪಡುತ್ತಿದ್ದೇನೆ.

[5] ನಾವು ಮಕೆದೋನ್ಯಕ್ಕೆ ಬಂದಿದ್ದಾಗ ನಮ್ಮ ದೇಹಕ್ಕೆ ವಿಶ್ರಾಂತಿ ದೊರೆಯಲಿಲ್ಲ. ಎಲ್ಲಾ ವಿಧದಲ್ಲಿಯೂ ಒತ್ತಡಗಳು: ಹೊರಗೆ ಹೋರಾಟ, ಒಳಗೆ ಅಂಜಿಕೆ.

[6] ಆದರೆ ಮನಗುಂದಿದವರನ್ನು ಸಂತೈಸುವ ದೇವರು ತೀತನ ಬರುವಿಕೆಯಿಂದ ನಮ್ಮನ್ನು ಸಂತೈಸಿದರು.

[7] ತೀತನು ಬರುವುದರಿಂದ ಮಾತ್ರವಲ್ಲ, ನೀವು ಅವನನ್ನು ಸ್ವೀಕರಿಸಿ, ಆದರಣೆಗಳಿಂದ ಸತ್ಕರಿಸಿದ್ದನ್ನು ಕೇಳಿ ನಮಗೆ ಸಂತೋಷವಾಯಿತು. ನೀವು ನನಗಾಗಿ ಹಂಬಲಿಸುತ್ತಿರುವುದನ್ನೂ, ಚಿಂತಿಸುವುದನ್ನೂ, ನನ್ನ ಮೇಲೆ ನಿಮಗಿರುವ ಆಳವಾದ ಅನುಕಂಪವನ್ನೂ ನಾವು ತೀತನಿಂದ ಕೇಳಿದಾಗ, ನಾನು ಇನ್ನೂ ಅಧಿಕ ಆನಂದಪಟ್ಟೆನು.

[8] ನಾನು ಬರೆದಿದ್ದ ಪತ್ರದಿಂದ ನಿಮಗೆ ದುಃಖವಾಗಿದ್ದಲ್ಲಿ, ನಾನು ಅದಕ್ಕೆ ಬೇಸರಪಡುವುದಿಲ್ಲ. ನನ್ನ ಪತ್ರದಿಂದ ನಿಮಗೆ ದುಃಖವಾಯಿತಲ್ಲಾ ಎಂದು ಸ್ವಲ್ಪಕಾಲ ನಾನು ನೊಂದುಕೊಂಡಿದ್ದರೂ,

[9] ಈಗ ಸಂತೋಷಪಡುತ್ತೇನೆ. ನಿಮಗೆ ದುಃಖವಾಯಿತೆಂಬ ಕಾರಣಕ್ಕಾಗಿ ಅಲ್ಲ. ಆ ದುಃಖವು ನಿಮ್ಮನ್ನು ಪಶ್ಚಾತ್ತಾಪಕ್ಕೆ ನಡೆಸಿ, ನಿಮಗಾದ ದುಃಖವು ದೇವರ ಚಿತ್ತದಿಂದ ಆಗಿದ್ದರಿಂದ ನಮ್ಮಿಂದ ನಿಮಗೆ ನಷ್ಟವಾಗಲಿಲ್ಲ ಎಂಬುದಕ್ಕಾಗಿಯೂ ಈಗ ಸಂತೋಷಪಡುತ್ತೇನೆ.

[10] ದೈವಿಕ ದುಃಖವು ಪಶ್ಚಾತ್ತಾಪವನ್ನು ತಂದು ರಕ್ಷಣೆಗೆ ನಡೆಸುತ್ತದೆ. ಆ ಪಶ್ಚಾತ್ತಾಪದಲ್ಲಿ ವಿಷಾಧವಿರುವುದಿಲ್ಲ. ಆದರೆ ಪ್ರಾಪಂಚಿಕ ದುಃಖವು ಮರಣಕ್ಕೆ ನಡೆಸುತ್ತದೆ.

[11] ಈ ದೈವಿಕ ದುಃಖವು ನಿಮ್ಮಲ್ಲಿ ಏನು ಉಂಟುಮಾಡಿದೆ ಗಮನಿಸಿರಿ: ನಿಮ್ಮಲ್ಲಿ ಎಂಥಾ ಉತ್ಸಾಹ, ನಿರಪರಾಧಕ್ಕಾಗಿ ಎಂಥಾ ಪ್ರಯಾಸ, ಎಷ್ಟು ರೋಷ, ಎಷ್ಟು ಭಯ, ಎಷ್ಟು ಹಂಬಲ, ಎಷ್ಟು ಆಸಕ್ತಿ, ನ್ಯಾಯಕ್ಕಾಗಿ ಎಷ್ಟು ಆತುರ. ಪ್ರತಿಯೊಂದು ವಿಷಯದಲ್ಲಿಯೂ ನೀವು ನಿರ್ದೋಷಿಗಳೆಂದು ರುಜುಪಡಿಸುತ್ತೀರಿ.

[12] ನಾನು ಆ ಪತ್ರ ನಿಮಗೆ ಬರೆದದ್ದು, ತಪ್ಪು ಮಾಡಿದವನಿಗೋಸ್ಕರವಾಗಿ ಅಲ್ಲ ಮತ್ತು ಆ ತಪ್ಪಿನಿಂದ ಹಾನಿಯಾದವರಿಗೋಸ್ಕರವಾಗಿಯೂ ಅಲ್ಲ, ನೀವು ನಮಗೆ ಎಷ್ಟು ನಿಷ್ಠೆಯುಳ್ಳವರು ಎಂದು ದೇವರ ಸನ್ನಿಧಿಯಲ್ಲಿ ನಿಮಗೆ ನೀವೇ ನೋಡುವಂತೆ ಬರೆದೆನು.

[13] ಆದಕಾರಣ ಇವೆಲ್ಲವುಗಳಿಂದ ನಮಗೆ ಉತ್ತೇಜನವಾಯಿತು. ನಮಗೆ ಉತ್ತೇಜನವಾಗಿದ್ದು ಅಲ್ಲದೆ, ನಿಮ್ಮೆಲ್ಲರಿಂದ ತೀತನ ಆತ್ಮಕ್ಕೆ ಉಪಶಮನವಾದ ಕಾರಣ, ನಾವು ಅವನ ಸಂತೋಷಕ್ಕಾಗಿ ಇನ್ನಷ್ಟು ಆನಂದಿಸಿದೆವು.

[14] ನಿಮ್ಮ ವಿಷಯವಾಗಿ ನಾನು ತೀತನ ಮುಂದೆ ಹೊಗಳಿದ್ದಕ್ಕೆ ನಾನು ಬೇಸರಪಡಬೇಕಾಗಿರಲಿಲ್ಲ. ನಾನು ನಿಮಗೆ ಹೇಳಿದ್ದೆಲ್ಲವೂ ಹೇಗೆ ಸತ್ಯವಾಗಿತ್ತೋ, ಹಾಗೆಯೇ ನಿಮ್ಮ ಬಗ್ಗೆ ನಾವು ತೀತನ ಬಗ್ಗೆ ಹೊಗಳಿದ್ದೆಲ್ಲವೂ ಸತ್ಯವಾದವು.

[15] ನೀವು ತೀತನ ಮಾತುಗಳಿಗೆ ವಿಧೇಯರಾಗಿದ್ದುದ್ದನ್ನೂ ಅವನನ್ನು ಭಯಭಕ್ತಿಯಿಂದಲೂ ನಡುಗುವಿಕೆಯಿಂದಲೂ ಸ್ವೀಕರಿಸಿದ್ದನ್ನೂ, ಅವನು ಜ್ಞಾಪಕಕ್ಕೆ ತಂದುಕೊಂಡಾಗ, ನಿಮ್ಮನ್ನು ಅತ್ಯಧಿಕವಾಗಿ ಪ್ರೀತಿಸುವವನಾಗಿದ್ದಾನೆ.

[16] ನಿಮ್ಮ ಮೇಲೆ ಸಂಪೂರ್ಣ ಭರವಸೆ ಇಡಬಹುದೆಂಬುದಕ್ಕಾಗಿ ನಾನು ಹರ್ಷಿಸುತ್ತೇನೆ.

2 ಕೊರಿಂಥದವರಿಗೆ — Chapters