Skip to content
Opens in a new window
Listen to this chapter • 3:06

[1] ನಾನು ನಿಮ್ಮ ಬಳಿಗೆ ಬರುವುದು ಇದು ಮೂರನೆಯ ಸಾರಿ. “ಇಬ್ಬರು ಮೂವರು ಸಾಕ್ಷಿಗಳ ಬಾಯಿಂದ ಪ್ರತಿಯೊಂದು ಮಾತೂ ಸ್ಥಾಪಿತವಾಗಬೇಕು,” ಎಂದು ಬರೆಯಲಾಗಿದೆ.

[2] ನಾನು ಎರಡನೆಯ ಸಾರಿ ನಿಮ್ಮ ಬಳಿಗೆ ಬಂದಿದ್ದಾಗ, ಗತಕಾಲದಲ್ಲಿ ಪಾಪ ಮಾಡುತ್ತಿದ್ದವರನ್ನು ಎಚ್ಚರಿಸಿದೆನು. ನಾನು ತಿರುಗಿ ಬಂದರೆ, ನಿಮ್ಮನ್ನು ಶಿಕ್ಷಿಸದೆ ಬಿಡುವುದಿಲ್ಲವೆಂದು ಹೇಗೆ ಹೇಳಿದೆನೋ, ಹಾಗೆಯೇ ಈಗಲೂ ನಿಮಗೆ ದೂರದಲ್ಲಿದ್ದುಕೊಂಡು ಹೇಳುತ್ತಿದ್ದೇನೆ.

[3] ಕ್ರಿಸ್ತ ಯೇಸು ನನ್ನ ಮೂಲಕ ಮಾತನಾಡುತ್ತಾನೆಂಬುದಕ್ಕೆ ನಿಮಗೆ ಬೇಕಾದ ನಿದರ್ಶನವು ಆಗ ತೋರಿಬರುವುದು. ಬಲಹೀನನಾಗಿ ಕ್ರಿಸ್ತನು ನಿಮ್ಮೊಂದಿಗೆ ವ್ಯವಹರಿಸದೆ, ನಿಮ್ಮ ನಡುವೆ ಶಕ್ತನಾಗಿದ್ದಾನೆ.

[4] ಕ್ರಿಸ್ತ ಯೇಸು ಬಲಹೀನತೆಯಲ್ಲಿ ಶಿಲುಬೆಗೆ ಹಾಕಲಾದರು ನಿಜ. ಆದರೆ ಅವರು ದೇವರ ಶಕ್ತಿಯಿಂದ ಜೀವಿಸುತ್ತಿದ್ದಾರೆ. ನಾವು ಸಹ ಬಲಹೀನತೆಯುಳ್ಳವರಾಗಿದ್ದೇವೆ. ಆದರೆ ನಾವು ನಿಮ್ಮ ಸೇವೆ ಮಾಡುವಂತೆ, ನಾವು ಕ್ರಿಸ್ತ ಯೇಸುವಿನೊಂದಿಗೆ ದೇವರ ಶಕ್ತಿಯಿಂದ ಬದುಕುತ್ತಿದ್ದೇವೆ.

[5] ನಂಬಿಕೆಯಲ್ಲಿ ಇದ್ದೀರೋ, ಇಲ್ಲವೋ ಎಂದು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ. ನಿಮ್ಮನ್ನು ಪರಿಶೋಧಿಸಿಕೊಳ್ಳಿರಿ. ಏನು, ಕ್ರಿಸ್ತ ಯೇಸು ನಿಮ್ಮಲ್ಲಿದ್ದಾರೆಂಬುದರ ಬಗ್ಗೆ ನಿಮಗೆ ನಂಬಿಕೆಯಿಲ್ಲವೋ? ಅವರು ನಿಮ್ಮಲ್ಲಿಲ್ಲದಿದ್ದರೆ, ನೀವು ಪರೀಕ್ಷೆಯಲ್ಲಿ ಉತ್ತೀರ್ಣರಾದವರಲ್ಲ.

[6] ನಾವಂತೂ ಉತ್ತೀರ್ಣರಾದವರೆಂದು ನಿಮಗೆ ಗೊತ್ತಾಗುವುದೆಂದು ನಾನು ನಿರೀಕ್ಷಿಸುತ್ತೇನೆ.

[7] ನೀವು ಕೆಟ್ಟದ್ದೇನೂ ಮಾಡಬಾರದೆಂದು ನಾವು ದೇವರನ್ನು ಪ್ರಾರ್ಥಿಸುತ್ತೇವೆ. ಇದರಲ್ಲಿ ನಾವೇ ಉತ್ತೀರ್ಣರಾದವರು ಎಂದು ಕಂಡುಬರಬೇಕೆಂಬುದು ನಮ್ಮ ಉದ್ದೇಶವಲ್ಲ. ನಾವು ಸೋತವರಾಗಿ ಕಂಡುಬಂದರೂ ನೀವು ಒಳ್ಳೆಯದನ್ನೇ ಮಾಡಬೇಕೆಂಬುದು ನಮ್ಮ ಪ್ರಾರ್ಥನೆಯಾಗಿದೆ.

[8] ಸತ್ಯಕ್ಕೆ ವಿರುದ್ಧವಾಗಿ ನಾವೇನೂ ಮಾಡಲಾರೆವು. ಸತ್ಯದ ಪರವಾಗಿಯೇ ಎಲ್ಲವನ್ನೂ ಮಾಡುತ್ತೇವೆ.

[9] ನಾವು ಬಲಹೀನರಾಗಿದ್ದರೂ, ನೀವು ಬಲಿಷ್ಠರಾಗಿದ್ದಿರೆಂದು ತಿಳಿದು ಆನಂದಪಡುತ್ತೇವೆ. ನೀವು ಪರಿಪೂರ್ಣರಾಗಬೇಕೆಂದೇ ನಾವು ಪ್ರಾರ್ಥಿಸುತ್ತೇವೆ.

[10] ಇದಕ್ಕಾಗಿಯೇ ನಾನು ನಿಮ್ಮಲ್ಲಿ ಇಲ್ಲದಿರುವಾಗ, ಈ ಮಾತುಗಳನ್ನು ಬರೆದಿದ್ದೇನೆ. ನಾನು ಬಂದಾಗ ನಿಮ್ಮನ್ನು ಕೆಡವಿ ಹಾಕುವುದಕ್ಕಲ್ಲ ಆದರೆ ಕಟ್ಟುವುದಕ್ಕಾಗಿ ಕರ್ತ ಯೇಸು ನನಗೆ ಕೊಟ್ಟಿರುವ ಅಧಿಕಾರದಿಂದ ನಿಮಗೆ ಕಾಠಿಣ್ಯವನ್ನು ತೋರಿಸುವುದಕ್ಕೆ ಅವಕಾಶವಿರಬಾರದೆಂದು ಅಪೇಕ್ಷಿಸುತ್ತೇನೆ.

[11] ಪ್ರಿಯರೇ, ಕಡೆಯ ಮಾತೇನೆಂದರೆ, ಆನಂದಪಡಿರಿ! ನಿಮ್ಮನ್ನು ಪೂರ್ಣ ಪುನಃಸ್ಥಾಪನೆಗಾಗಿ ಕ್ರಮಪಡಿಸಿಕೊಳ್ಳಿರಿ, ಉತ್ತೇಜನಗೊಳ್ಳಿರಿ, ಒಂದೇ ಮನಸ್ಸುಳ್ಳವರಾಗಿರಿ, ಸಮಾಧಾನದಿಂದಿರಿ. ಆಗ ಪ್ರೀತಿ ಹಾಗೂ ಶಾಂತಿಯ ದೇವರು ನಿಮ್ಮ ಸಂಗಡ ಇರುವರು.

[12] ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ.

[13] ದೇವಜನರೆಲ್ಲರೂ ನಿಮಗೆ ತಮ್ಮ ವಂದನೆಗಳನ್ನು ತಿಳಿಸಿದ್ದಾರೆ.

[14] ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಕೃಪೆಯೂ ದೇವರ ಪ್ರೀತಿಯೂ ಪವಿತ್ರಾತ್ಮ ದೇವರ ಅನ್ಯೋನ್ಯತೆಯೂ ನಿಮ್ಮೆಲ್ಲರ ಸಂಗಡ ಇರಲಿ.

2 ಕೊರಿಂಥದವರಿಗೆ — Chapters