Skip to content
Opens in a new window
Listen to this chapter • 4:36

[1] ನಾವು ಜೀವಿಸುತ್ತಿರುವ ನಮ್ಮ ದೇಹವೆಂಬ ಗುಡಾರವು ನಾಶವಾಗಿ ಹೋದರೂ, ಪರಲೋಕದಲ್ಲಿ ಶಾಶ್ವತವಾದ ನಿವಾಸವು ನಮಗೆ ಉಂಟೆಂದು ಬಲ್ಲೆವು. ಅದು ಮಾನವರ ಕೈಯಿಂದ ಕಟ್ಟಿದ ನಿವಾಸವಲ್ಲ, ದೇವರಿಂದಲೇ ನಿರ್ಮಿತವಾದದ್ದಾಗಿದೆ.

[2] ನಮ್ಮ ಪರಲೋಕದ ನಿವಾಸವನ್ನು ನೀವೂ ಧರಿಸಿಕೊಳ್ಳಬೇಕೆಂದು ಅಪೇಕ್ಷಿಸಿ, ಈ ಜೀವನದಲ್ಲಿ ನರಳುತ್ತಿದ್ದೇವೆ.

[3] ಏಕೆಂದರೆ, ನಾವು ಪರಲೋಕದ ನಿವಾಸವನ್ನು ಧರಿಸಿಕೊಂಡಾಗ, ಆತ್ಮವಿಲ್ಲದ ದೇಹವಾಗಿ ನಾವು ಇರುವುದಿಲ್ಲ.

[4] ನಾವು ಈ ದೇಹವೆಂಬ ಗುಡಾರದಲ್ಲಿರುವ ತನಕ ನರಳುತ್ತೇವೆ, ಭಾರದಿಂದ ಬಳಲುತ್ತೇವೆ. ಈ ಗುಡಾರವೆಂಬ ಹಳೆಯ ಶರೀರವು ನಮ್ಮಿಂದ ಕಳಚಿ ಹೋಗಬೇಕೆಂಬುದು ನಮ್ಮ ಇಷ್ಟವಲ್ಲ. ಆದರೆ ಪರಲೋಕದ ನಿವಾಸವೆಂಬ ನೂತನ ಶರೀರವನ್ನು ನಾವು ಧರಿಸಿಕೊಳ್ಳಲು ಬಯಸುತ್ತೇವೆ. ಏಕೆಂದರೆ ನಶ್ವರವಾದ ಈ ನಮ್ಮ ದೇಹವು ಅಮರತ್ವವನ್ನು ಧರಿಸಿಕೊಳ್ಳಬೇಕು.

[5] ಈ ಉದ್ದೇಶಕ್ಕಾಗಿಯೇ ನಮ್ಮನ್ನು ಸಿದ್ಧಮಾಡಿದ ದೇವರು, ಮುಂಬರುವುದರ ಖಾತರಿಯಾಗಿ ನಮಗೆ ತಮ್ಮ ಆತ್ಮವನ್ನೇ ಕೊಟ್ಟಿದ್ದಾರೆ.

[6] ಹೀಗಿರುವುದರಿಂದ ಶರೀರದಲ್ಲಿ ವಾಸಿಸುವವರೆಗೂ ನಾವು ಕರ್ತನಿಂದ ದೂರವಾಗಿದ್ದೇವೆಂದು ತಿಳಿದು, ನಾವು ಯಾವಾಗಲೂ ಭರವಸೆ ಉಳ್ಳವರಾಗಿದ್ದೇವೆ.

[7] ನಾವು ನೋಡುವವರಾಗಿ ಜೀವಿಸದೆ, ನಂಬುವವರಾಗಿ ಜೀವಿಸುತ್ತಿದ್ದೇವೆ.

[8] ನಮ್ಮ ದೇಹವನ್ನು ಬಿಟ್ಟು ಕರ್ತನ ಬಳಿಯಲ್ಲಿಯೇ ಇರುವುದು ಉತ್ತಮವೆಂದು ಆಶಿಸಿ, ಅದರಲ್ಲಿ ಭರವಸೆ ಉಳ್ಳವರಾಗಿರುತ್ತೇವೆ.

[9] ಆದ್ದರಿಂದ ನಾವು ದೇಹದಲ್ಲಿದ್ದರೂ ಸರಿಯೇ, ಅದನ್ನು ಬಿಟ್ಟಿದ್ದರೂ ಸರಿಯೇ ಕರ್ತನನ್ನು ಮೆಚ್ಚಿಸಬೇಕೆಂಬುದೇ ನಮ್ಮ ಗುರಿಯಾಗಿದೆ.

[10] ಏಕೆಂದರೆ, ನಾವೆಲ್ಲರೂ ನಮ್ಮ ದೇಹದ ಮೂಲಕ ನಡೆಸಿದ ಒಳ್ಳೆಯದಕ್ಕಾಗಲಿ, ಕೆಟ್ಟದ್ದಕ್ಕಾಗಲಿ ಸಿಗಬೇಕಾದ ಪ್ರತಿಫಲವನ್ನು ಹೊಂದುವುದಕ್ಕೋಸ್ಕರ ಕ್ರಿಸ್ತನ ನ್ಯಾಯಾಸನದ ಮುಂದೆ ಕಾಣಿಸಿಕೊಳ್ಳಲೇಬೇಕು.

[11] ಕರ್ತನ ಭಯಭಕ್ತಿಯನ್ನು ಅರಿತಿರುವ ಕಾರಣ, ಜನರ ಮನವೊಲಿಸಲು ನಾವು ಪ್ರಯತ್ನಿಸುತ್ತೇವೆ. ನಾವು ಎಂಥವರೆಂದು ದೇವರು ಚೆನ್ನಾಗಿ ಬಲ್ಲವರಾಗಿದ್ದಾರೆ. ಅದು ನಿಮ್ಮ ಮನಸ್ಸಾಕ್ಷಿಗೂ ತಿಳಿದಿದೆ ಎಂದು ನಾನು ನಂಬುತ್ತೇನೆ.

[12] ಮತ್ತೊಮ್ಮೆ ನಮ್ಮನ್ನು ನಾವೇ ಹೊಗಳಿಕೊಳ್ಳುತ್ತೇವೆಂದು ನೀವು ಭಾವಿಸಬೇಡಿ. ನಮ್ಮನ್ನು ಕುರಿತು ನೀವು ಹೆಮ್ಮೆ ಪಡುವಂತೆ ಒಂದು ಅವಕಾಶವನ್ನು ನಾವು ನಿಮಗೆ ಒದಗಿಸುತ್ತೇವೆ ಅಷ್ಟೇ. ಹೀಗೆ ಮನುಷ್ಯರ ಹೃದಯವನ್ನಲ್ಲಾ, ಹೊರತೋರಿಕೆಯನ್ನು ಕಂಡು ಹೆಮ್ಮೆ ಪಡುವವರಿಗೆ ನೀವು ಉತ್ತರ ಕೊಡುವಿರಿ.

[13] ನಮಗೆ ಬುದ್ಧಿ ಭ್ರಮಣೆಯಾಗಿದ್ದರೆ, ಅದು ದೇವರಿಗಾಗಿಯೇ. ನಾವು ಸ್ವಸ್ಥಬುದ್ಧಿಯುಳ್ಳವರಾಗಿದ್ದರೆ, ಅದು ನಿಮಗಾಗಿಯೇ.

[14] ಕ್ರಿಸ್ತ ಯೇಸುವಿನ ಪ್ರೀತಿಯು ನಮ್ಮನ್ನು ಒತ್ತಾಯಪಡಿಸುತ್ತದೆ. ಏಕೆಂದರೆ, ಎಲ್ಲರಿಗೋಸ್ಕರ ಕ್ರಿಸ್ತ ಯೇಸು ಸತ್ತದ್ದರಿಂದ, ಎಲ್ಲರೂ ಸತ್ತಂತಾಯಿತು.

[15] ಜೀವಿಸುವವರು ಇನ್ನು ಮೇಲೆ ತಮಗಾಗಿ ಜೀವಿಸದೆ, ತಮಗಾಗಿ ಸತ್ತು ಪುನರುತ್ಥಾನವಾಗಿ ಬಂದ ಕ್ರಿಸ್ತ ಯೇಸುವಿಗೋಸ್ಕರವೇ ಜೀವಿಸಬೇಕೆಂದು ಕ್ರಿಸ್ತ ಯೇಸು ಎಲ್ಲರಿಗೋಸ್ಕರ ಸತ್ತರು.

[16] ಇನ್ನು ಮೇಲೆ ನಾವು ಯಾರನ್ನೂ ಶರೀರ ಸಂಬಂಧವಾಗಿ ಅರಿತುಕೊಳ್ಳುವುದಿಲ್ಲ. ಒಂದು ಕಾಲದಲ್ಲಿ ಕ್ರಿಸ್ತ ಯೇಸುವನ್ನು ನಾವು ಶರೀರ ಸಂಬಂಧವಾಗಿ ಅರಿತಿದ್ದೆವು. ಆದರೆ ಇನ್ನು ಮುಂದೆ ಕ್ರಿಸ್ತ ಯೇಸುವನ್ನು ಶರೀರ ಸಂಬಂಧವಾಗಿ ನಾವು ಅರಿತುಕೊಳ್ಳುವುದಿಲ್ಲ.

[17] ಆದ್ದರಿಂದ ಯಾರಾದರೂ ಕ್ರಿಸ್ತ ಯೇಸುವಿನಲ್ಲಿದ್ದರೆ, ಅವರು ನೂತನ ಸೃಷ್ಟಿಯಾಗಿದ್ದಾರೆ: ಹಳೆಯದೆಲ್ಲವೂ ಹೋಗಿ ಅವರಿಗೆ ಹೊಸ ಸೃಷ್ಟಿಯು ಬರುವುದು.

[18] ಇವೆಲ್ಲವೂ ದೇವರಿಂದಲೇ ಆಯಿತು. ನಮ್ಮನ್ನು ಕ್ರಿಸ್ತ ಯೇಸುವಿನ ಮೂಲಕ ತಮ್ಮೊಂದಿಗೆ ಸಮಾಧಾನ ಮಾಡಿಕೊಂಡ ದೇವರು, ಇತರರನ್ನು ಸಮಾಧಾನಕ್ಕೆ ತರುವ ಸೇವೆಯನ್ನೂ ನಮಗೆ ಕೊಟ್ಟಿರುತ್ತಾರೆ:

[19] ಹೇಗೆಂದರೆ, ದೇವರು ಮನುಷ್ಯರ ಪಾಪಗಳನ್ನು ಅವರಿಗೆ ವಿರೋಧವಾಗಿ ಲೆಕ್ಕಿಸದೆ, ಕ್ರಿಸ್ತ ಯೇಸುವಿನಲ್ಲಿ ಇಡೀ ಜಗತ್ತನ್ನೇ ತಮ್ಮೊಂದಿಗೆ ಸಮಾಧಾನಪಡಿಸುತ್ತಿದ್ದಾರೆ. ಈ ಸಮಾಧಾನದ ಸಂದೇಶವನ್ನೇ ದೇವರು ನಮಗೊಪ್ಪಿಸಿ ಕೊಟ್ಟಿದ್ದಾರೆ.

[20] ಆದ್ದರಿಂದ ನಾವು ಕ್ರಿಸ್ತ ಯೇಸುವಿನ ರಾಯಭಾರಿಗಳಾಗಿದ್ದೇವೆ. ದೇವರೇ ನಮ್ಮ ಮೂಲಕ ನಿಮಗೆ ಕರೆ ನೀಡುತ್ತಾರೆ. ಆದ್ದರಿಂದ ಕ್ರಿಸ್ತ ಯೇಸುವಿನ ಪರವಾಗಿ ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ: ದೇವರೊಡನೆ ಸಮಾಧಾನ ಮಾಡಿಕೊಳ್ಳಿರಿ.

[21] ಪಾಪವನ್ನೇ ಅರಿಯದ ಕ್ರಿಸ್ತ ಯೇಸುವನ್ನು ದೇವರು ನಮಗೋಸ್ಕರ ಪಾಪವನ್ನಾಗಿ ಮಾಡಿದರು. ಹೀಗೆ ಕ್ರಿಸ್ತ ಯೇಸುವಿನಲ್ಲಿ ದೇವರ ನೀತಿಯನ್ನಾಗಿ ದೇವರು ನಮ್ಮನ್ನು ಮಾಡಿದರು.

2 ಕೊರಿಂಥದವರಿಗೆ — Chapters