Skip to content
Opens in a new window
Listen to this chapter • 2:50

[1] ಆದ್ದರಿಂದ ನಿಮ್ಮ ಅಗಲಿಕೆಯನ್ನು ಸಹಿಸಲಾಗದೆ, ನಾವು ಅಥೇನೆಯಲ್ಲಿ ಒಬ್ಬಂಟಿಗರಾಗಿಯೇ ಇರುವುದು ಒಳ್ಳೆಯದೆಂದು ಯೋಚಿಸಿದೆವು.

[2] ನಿಮ್ಮನ್ನು ದೃಢಪಡಿಸುವುದಕ್ಕೂ ನಿಮ್ಮ ನಂಬಿಕೆಯ ವಿಷಯವಾಗಿ ನಿಮ್ಮನ್ನು ಉತ್ತೇಜಿಸುವುದಕ್ಕೂ ನಮ್ಮ ಸಹೋದರನೂ ದೇವರ ಸೇವಕನೂ ಯೇಸುಕ್ರಿಸ್ತರ ಸುವಾರ್ತೆಯಲ್ಲಿ ನಮ್ಮ ಜೊತೆ ಸೇವಕನೂ ಆಗಿರುವ ತಿಮೊಥೆಯನನ್ನು ಕಳುಹಿಸಿದೆವು.

[3] ಹೀಗಿರುವಲ್ಲಿ ಈ ಸಂಕಟಗಳಿಂದ ಒಬ್ಬರೂ ಚಂಚಲರಾಗಬೇಡಿರಿ. ಏಕೆಂದರೆ ಇವುಗಳಿಗಾಗಿಯೇ ನಾವು ನೇಮಕವಾಗಿದ್ದೇವೆ ಎಂದು ನೀವೇ ಬಲ್ಲಿರಿ.

[4] ನಾವು ನಿಮ್ಮ ಬಳಿಯಲ್ಲಿದ್ದಾಗ ಸಂಕಟವನ್ನು ಅನುಭವಿಸಲೇಬೇಕೆಂದು ಮುಂದಾಗಿ ಹೇಳಿದೆವಲ್ಲಾ. ಹಾಗೆ ಆಯಿತೆಂದು ನೀವೂ ಚೆನ್ನಾಗಿ ಬಲ್ಲಿರಿ.

[5] ಈ ಕಾರಣದಿಂದ, ನಮ್ಮ ಪ್ರಯಾಸವು ವ್ಯರ್ಥವಾಗುವಂತೆ ಶೋಧಕನು ನಿಮ್ಮನ್ನು ಶೋಧಿಸುವನೋ ಎಂಬ ಭಯದ ದೆಸೆಯಿಂದ, ನಾನು ಸಹ ಸಹಿಸಲಾರದೆ ನಿಮ್ಮ ನಂಬಿಕೆಯ ವಿಷಯದಲ್ಲಿ ತಿಳಿದುಕೊಳ್ಳುವುದಕ್ಕೆ ತಿಮೊಥೆಯನನ್ನು ಕಳುಹಿಸಿದೆನು.

[6] ತಿಮೊಥೆಯನು ಈಗಲೇ ನಿಮ್ಮಿಂದ ನಮ್ಮ ಬಳಿಗೆ ಬಂದು ನಿಮ್ಮ ವಿಶ್ವಾಸ ಹಾಗೂ ಪ್ರೀತಿಯ ವಿಷಯವಾಗಿ ಒಳ್ಳೆಯ ವರ್ತಮಾನವನ್ನು ತಂದಿದ್ದಾನೆ. ನೀವು ನಮ್ಮನ್ನು ಯಾವಾಗಲೂ ಚೆನ್ನಾಗಿ ನೆನಪಿಸಿಕೊಂಡು, ನಾವು ನಿಮ್ಮನ್ನು ಹೇಗೋ ಹಾಗೆಯೇ ನೀವೂ ನಮ್ಮನ್ನು ನೋಡುವುದಕ್ಕೆ ಹಾರೈಸುತ್ತೀರೆಂಬುದನ್ನು ತಿಳಿಸಿದ್ದಾನೆ.

[7] ಈ ಕಾರಣದಿಂದ ಪ್ರಿಯರೇ, ನಮ್ಮ ಎಲ್ಲಾ ಇಕ್ಕಟ್ಟು ಹಾಗೂ ಹಿಂಸೆಗಳಲ್ಲಿಯೂ ನಿಮ್ಮ ನಂಬಿಕೆಯ ಮೂಲಕ ನಮಗೆ ಆದರಣೆಯಾಯಿತು.

[8] ಏಕೆಂದರೆ ನೀವು ಕರ್ತ ಯೇಸುವಿನಲ್ಲಿ ದೃಢವಾಗಿ ನಿಂತಿರುವುದರಿಂದಲೇ ಈಗ ನಾವು ನಿಜವಾಗಿಯೂ ಜೀವಿಸುತ್ತಿದ್ದೇವೆ.

[9] ನಿಮ್ಮ ನಿಮಿತ್ತ ನಮ್ಮ ದೇವರ ಮುಂದೆ ನಮಗಿರುವ ಎಲ್ಲಾ ಆನಂದಕ್ಕೆ ಬದಲಾಗಿ ದೇವರಿಗೆ ಹೇಗೆ ಸಾಕಷ್ಟು ಕೃತಜ್ಞತೆಯನ್ನು ಸಲ್ಲಿಸಬಹುದು?

[10] ನಿಮ್ಮ ಮುಖವನ್ನು ನೋಡುವುದಕ್ಕಾಗಿಯೂ ನಿಮ್ಮ ನಂಬಿಕೆಯಲ್ಲಿರುವ ಕೊರತೆಯನ್ನು ನಿವಾರಿಸುವುದಕ್ಕೂ ನಾವು ಹಗಲಿರುಳು ಆಸಕ್ತಿಯಿಂದ ಪ್ರಾರ್ಥಿಸುತ್ತಿದ್ದೇವೆ.

[11] ನಮ್ಮ ತಂದೆಯಾದ ದೇವರೂ ನಮಗೆ ಕರ್ತ ಆಗಿರುವ ಯೇಸುವೂ ನಾವು ನಿಮ್ಮಲ್ಲಿಗೆ ಬರುವಂತೆ ಮಾರ್ಗವನ್ನು ಸುಗಮಗೊಳಿಸಲಿ.

[12] ನಮ್ಮ ಪ್ರೀತಿಯು ನಿಮ್ಮ ಕಡೆಗೆ ಸಮೃದ್ಧಿಯಾಗಿರುವಂತೆಯೇ ನಿಮ್ಮ ಪ್ರೀತಿಯೂ ಒಬ್ಬರಿಂದೊಬ್ಬರಿಗೂ ಎಲ್ಲರ ಮೇಲೆಯೂ ತುಂಬಿರುವಂತೆ ಕರ್ತ ಯೇಸು ನಿಮಗೆ ಅನುಗ್ರಹಿಸಲಿ.

[13] ನಮಗೆ ಕರ್ತ ಆಗಿರುವ ಯೇಸುವು ತಮ್ಮ ಎಲ್ಲಾ ಪರಿಶುದ್ಧರೊಂದಿಗೆ ಬರುವಾಗ, ನೀವು ತಂದೆ ದೇವರ ಮುಂದೆ ಪರಿಶುದ್ಧರೂ ನಿರ್ದೋಷಿಗಳೂ ಆಗಿರುವಂತೆ ನಿಮ್ಮ ಹೃದಯಗಳನ್ನು ಬಲಪಡಿಸಲಿ!

1 ಥೆಸಲೋನಿಕದವರಿಗೆ — Chapters