Skip to content
Opens in a new window
Listen to this chapter • 8:04

[1] ನಂತರ ಮತ್ತೊಬ್ಬ ದೇವದೂತನು ಪರಲೋಕದಿಂದ ಬರುತ್ತಿರುವುದನ್ನು ನಾನು ನೋಡಿದೆನು. ಈ ದೇವದೂತನಿಗೆ ಮಹಾ ಅಧಿಕಾರವಿತ್ತು. ಈ ದೇವದೂತನ ಪ್ರಭಾವವು ಭೂಮಿಯನ್ನು ಪ್ರಕಾಶಗೊಳಿಸಿತು.

[2] ದೇವದೂತನು ತನ್ನ ಶಕ್ತಿಯುತವಾದ ಧ್ವನಿಯಿಂದ ಆರ್ಭಟಿಸಿದನು: “ಅವಳು ನಾಶವಾದಳು! ಬಾಬಿಲೋನೆಂಬ ಮಹಾನಗರಿಯು ನಾಶವಾದಳು! ಅವಳು (ಬಾಬಿಲೋನ್) ದೆವ್ವಗಳಿಗೆ ವಾಸಸ್ಥಾನವಾದಳು, ಸಕಲ ಅಶುದ್ಧಾತ್ಮಗಳಿಗೆ ನೆಲೆಯಾದಳು, ಅಶುದ್ಧವಾದ ಮತ್ತು ಅಸಹ್ಯವಾದ ಸಕಲ ಹಕ್ಕಿಗಳಿಗೆ ಆಶ್ರಯವಾದಳು.”

[3] ದೇವರ ಕೋಪವೆಂಬ ಮತ್ತು ಅವಳ ಲೈಂಗಿಕ ಪಾಪವೆಂಬ ದ್ರಾಕ್ಷಾರಸವನ್ನು ಲೋಕದ ಜನರೆಲ್ಲರೂ ಕುಡಿದು ಮತ್ತರಾದರು. ಭೂಲೋಕದ ರಾಜರುಗಳೆಲ್ಲ ಅವಳೊಂದಿಗೆ ಲೈಂಗಿಕ ಪಾಪ ಮಾಡಿದರು. ಭೂಲೋಕದ ವರ್ತಕರು ಅವಳ ಅತಿಯಾದ ಸುಖದಿಂದ ಶ್ರೀಮಂತರಾದರು.

[4] ನಂತರ ಪರಲೋಕದಿಂದ ಮತ್ತೊಂದು ಧ್ವನಿಯು ಹೀಗೆ ಹೇಳುವುದು ನನಗೆ ಕೇಳಿತು: “ನನ್ನ ಜನರೇ, ನೀವು ಆ ನಗರದಿಂದ ಹೊರಗೆ ಬಂದುಬಿಡಿ. ಆಗ ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗುವುದಿಲ್ಲ; ಅವಳಿಗಾಗುವ ಉಪದ್ರವಗಳು ನಿಮಗೆ ಸಂಭವಿಸುವುದಿಲ್ಲ.

[5] ಆ ನಗರಿಯ ಪಾಪಗಳು ಪರಲೋಕವನ್ನು ಮುಟ್ಟುವಂತೆ ಬೆಳೆದುನಿಂತಿವೆ. ಅವಳು ಮಾಡಿದ ಕೆಟ್ಟಕಾರ್ಯಗಳನ್ನು ದೇವರು ಮರೆತಿಲ್ಲ.

[6] ಆ ನಗರಿಯು ಬೇರೆಯವರಿಗೆ ಕೊಟ್ಟಂತೆ ನೀವೂ ಅವಳಿಗೆ ಕೊಡಿರಿ. ಅವಳು ಮಾಡಿದ್ದಕ್ಕೆ ಪ್ರತಿಯಾಗಿ ಎರಡರಷ್ಟನ್ನು ಅವಳಿಗೆ ಕೊಡಿರಿ. ಅವಳು ಇತರರಿಗೆ ಕೊಟ್ಟ ದ್ರಾಕ್ಷಾರಸಕ್ಕಿಂತ ಎರಡರಷ್ಟು ಗಟ್ಟಿಯಾದ ದ್ರಾಕ್ಷಾರಸವನ್ನು ಅವಳಿಗೆ ಸಿದ್ಧಪಡಿಸಿಕೊಡಿರಿ.

[7] ಅವಳು ತನ್ನನ್ನು ಘನಪಡಿಸಿಕೊಂಡು ವೈಭವದಿಂದ ಜೀವಿಸಿದಳು. ಆದ್ದರಿಂದ ಅದಕ್ಕೆ ತಕ್ಕಂತೆ ಸಂಕಟವನ್ನೂ ದುಃಖವನ್ನೂ ಅವಳಿಗೆ ಬರಮಾಡಿರಿ. ‘ನಾನು ನನ್ನ ಸಿಂಹಾಸನದ ಮೇಲೆ ಕುಳಿತಿರುವ ರಾಣಿ. ನಾನು ವಿಧವೆಯಲ್ಲ, ನಾನು ಎಂದೆಂದಿಗೂ ದುಃಖಿಸುವುದಿಲ್ಲ’ ಎಂದು ಅವಳು ತನಗೆ ತಾನೇ ಹೇಳಿಕೊಳ್ಳುತ್ತಾಳೆ.

[8] ಆದ್ದರಿಂದ ಅವಳಿಗೆ ಮರಣ, ಗೋಳಾಟ, ಭೀಕರ ಕ್ಷಾಮ ಎಂಬ ಉಪದ್ರವಗಳು ಒಂದೇ ದಿನದಲ್ಲಿ ಬರುತ್ತವೆ. ಅವಳಿಗೆ ತೀರ್ಪು ನೀಡಿದ ದೇವರಾಗಿರುವ ಪ್ರಭುವು ಬಲಿಷ್ಠನಾಗಿರುವುದರಿಂದ ಅವಳು ಬೆಂಕಿಯಿಂದ ನಾಶವಾಗುತ್ತಾಳೆ.

[9] “ಅವಳೊಂದಿಗೆ ಲೈಂಗಿಕ ಪಾಪಮಾಡಿ ಅವಳ ಸಂಪತ್ತಿನಲ್ಲಿ ಪಾಲುಗಾರರಾದ ಲೋಕದ ರಾಜರುಗಳು ಅವಳ ದಹನದಿಂದೇರುವ ಹೊಗೆಯನ್ನು ನೋಡುತ್ತಾರೆ. ಅವಳು ಸಾಯುತ್ತಿರುವುದನ್ನು ಕಂಡು ರಾಜರುಗಳು ಗೋಳಾಡುವರು ಮತ್ತು ದುಃಖಿಸುವರು.

[10] ಅವಳ ಯಾತನೆಯನ್ನು ಕಂಡು ರಾಜರುಗಳು ಭಯದಿಂದ ದೂರನಿಂತು ಹೀಗೆನ್ನುವರು: ‘ಅಯ್ಯೋ, ಅಯ್ಯೋ, ಮಹಾನಗರಿಯೇ, ಬಲಿಷ್ಠವಾದ ಬಾಬಿಲೋನ್ ಪಟ್ಟಣವೇ, ಒಂದೇ ಗಳಿಗೆಯಲ್ಲಿ ನಿನಗೆ ದಂಡನೆ ಆಯಿತಲ್ಲಾ!’

[11] “ಭೂಲೋಕದ ವರ್ತಕರು ಬಾಬಿಲೋನಿನ ವಿಷಯದಲ್ಲಿ ಗೋಳಾಡುವರು ಮತ್ತು ದುಃಖಿಸುವರು. ಅವರು ಮಾರುವ ವಸ್ತುಗಳನ್ನು ಕೊಂಡುಕೊಳ್ಳಲು ಯಾರೂ ಇಲ್ಲದಿರುವುದರಿಂದ ಅವರು ದುಃಖಿಸುವರು.

[12] ಅವರು ಚಿನ್ನ, ಬೆಳ್ಳಿ, ರತ್ನ, ಮುತ್ತು, ನಯವಾದ ನಾರುಮಡಿ, ಧೂಮ್ರ ವರ್ಣದ ವಸ್ತ್ರ, ರೇಷ್ಮೆ, ರಕ್ತಾಂಬರ, ಸಕಲ ವಿಧವಾದ ಅಗಿಲುಮರ, ದಂತದಿಂದ ಮಾಡಿದ ನಾನಾ ಬಗೆಯ ವಸ್ತುಗಳು, ಬಹು ಬೆಲೆಬಾಳುವ ಮರ, ತಾಮ್ರ, ಕಬ್ಬಿಣ ಮತ್ತು ಚಂದ್ರಕಾಂತ ಶಿಲೆ ಇವುಗಳನ್ನು ಮಾರುತ್ತಾರೆ.

[13] ಆ ವರ್ತಕರು ದಾಲ್ಚಿನ್ನಿ, ಸಾಂಬಾರ ಪದಾರ್ಥಗಳು, ಧೂಪ, ಪರಿಮಳತೈಲ, ಸಾಂಬ್ರಾಣಿ, ದ್ರಾಕ್ಷಾರಸ ಮತ್ತು ಆಲಿವ್‌ಎಣ್ಣೆ, ನಯವಾದ ಹಿಟ್ಟು, ಗೋಧಿ, ದನಕರು, ಕುರಿ, ಕುದುರೆಗಳು, ರಥಗಳು, ಗುಲಾಮರು ಮತ್ತು ಮಾನವ ಪ್ರಾಣಗಳನ್ನು ಮಾರುತ್ತಾರೆ. ವರ್ತಕರು ಅಳುತ್ತಾ ಹೀಗೆ ಹೇಳುವರು:

[14] ‘ಬಾಬಿಲೋನೇ, ನೀನು ಅಪೇಕ್ಷಿಸಿದ ಉತ್ತಮ ವಸ್ತುಗಳೆಲ್ಲವೂ ನಿನ್ನಿಂದ ಹೋಗಿಬಿಟ್ಟವು. ನಿನ್ನಲ್ಲಿದ್ದ ಶ್ರೀಮಂತಿಕೆಯ ಮತ್ತು ಅಲಂಕಾರಿಕ ವಸ್ತುಗಳೆಲ್ಲ ಅದೃಶ್ಯವಾಗಿಬಿಟ್ಟವು. ಅವುಗಳನ್ನು ಮತ್ತೆ ನೀನೆಂದಿಗೂ ಪಡೆಯುವುದಿಲ್ಲ.’

[15] “ಆ ವರ್ತಕರು ಅವಳ ಯಾತನೆಯನ್ನು ಕಂಡು ಭಯದಿಂದ ಅವಳಿಂದ ಬಹುದೂರದಲ್ಲಿ ನಿಂತುಕೊಳ್ಳುವರು. ಆ ವಸ್ತುಗಳನ್ನು ಅವಳಿಗೆ ಮಾರಿ ಶ್ರೀಮಂತರಾದ ವರ್ತಕರು ಇವರೇ.

[16] ಅವರು ದುಃಖದಿಂದ ಗೋಳಾಡುತ್ತಾ ಹೀಗೆನ್ನುವರು: ‘ಅಯ್ಯೋ, ಅಯ್ಯೋ, ಮಹಾನಗರಿಯೇ! ಅವಳು ನಯವಾದ ನಾರುಮಡಿಯನ್ನು, ಧೂಮ್ರವರ್ಣದ ಉಡುಪನ್ನು ಮತ್ತು ರಕ್ತಾಂಬರಗಳನ್ನು ಧರಿಸಿದ್ದಳು. ಅವಳು ಚಿನ್ನ, ರತ್ನ, ಮುತ್ತುಗಳಿಂದ ಶೋಭಿಸುತ್ತಿದ್ದಳು!

[17] ಈ ಶ್ರೀಮಂತಿಕೆಯೆಲ್ಲವೂ ಒಂದೇ ಗಳಿಗೆಯಲ್ಲಿ ನಾಶವಾಯಿತಲ್ಲಾ!’ “ಹಡಗುಗಳ ಒಡೆಯರೂ ಹಡಗುಗಳಲ್ಲಿ ಸಂಚರಿಸುವ ಜನರೆಲ್ಲರೂ ನಾವಿಕರೂ ಸಮುದ್ರದಿಂದ ಹಣವನ್ನು ಗಳಿಸುವ ಜನರೆಲ್ಲರೂ ದೂರದಲ್ಲಿ ನಿಂತುಕೊಂಡು

[18] ಬಾಬಿಲೋನಿನ ದಹನದಿಂದೇರುತ್ತಿದ್ದ ಹೊಗೆಯನ್ನು ನೋಡಿ ಅವರು ಗಟ್ಟಿಯಾದ ಧ್ವನಿಯಲ್ಲಿ, ‘ಈ ಮಹಾನಗರಿಯಂತಹ ನಗರವು ಇರಲೇ ಇಲ್ಲ!’ ಎಂದು ಹೇಳಿದರು.

[19] ಅವರು ತಮ್ಮ ತಲೆಯ ಮೇಲೆ ಧೂಳನ್ನು ಸುರಿದುಕೊಂಡು, ದುಃಖದಿಂದ ಗೋಳಾಡುತ್ತಾ ಹೀಗೆ ಹೇಳಿದರು: ‘ಅಯ್ಯೋ! ಅಯ್ಯೋ! ಈ ಮಹಾನಗರಿಗೆ ಎಂಥಾ ಗತಿಯಾಯಿತು! ಸಮುದ್ರದ ಮೇಲೆ ಹಡಗುಗಳನ್ನು ಹೊಂದಿದ್ದ ಜನರೆಲ್ಲರೂ ಅವಳ ಸಂಪತ್ತಿನಿಂದ ಶ್ರೀಮಂತರಾದರು! ಆದರೆ ಅವಳು ಒಂದೇ ಗಳಿಗೆಯಲ್ಲಿ ನಾಶವಾಗಿಬಿಟ್ಟಳು!

[20] ಪರಲೋಕವೇ, ಇದರಿಂದ ನೀನೂ ಸಂತೋಷಪಡು! ದೇವರ ಪರಿಶುದ್ಧ ಜನರೇ, ಅಪೊಸ್ತಲರೇ, ಪ್ರವಾದಿಗಳೇ, ನೀವೂ ಸಂತೋಷಪಡಿರಿ! ಅವಳು ನಿಮಗೆ ಮಾಡಿದ ಕೇಡುಗಳಿಗಾಗಿ ದೇವರು ಅವಳನ್ನು ದಂಡಿಸಿದನು.’”

[21] ನಂತರ ಬಲಿಷ್ಠನಾದ ದೇವದೂತನೊಬ್ಬನು ಒಂದು ದೊಡ್ಡ ಬಂಡೆಯನ್ನು ಎತ್ತಿಕೊಂಡನು. ಆ ಬಂಡೆಯು ಒಂದು ದೊಡ್ಡ ಬೀಸುವ ಕಲ್ಲಿನಂತಿತ್ತು. ದೇವದೂತನು ಆ ಬಂಡೆಯನ್ನು ಸಮುದ್ರದಲ್ಲಿ ಎಸೆದು ಹೀಗೆ ಹೇಳಿದನು: “ಮಹಾನಗರಿಯಾದ ಬಾಬಿಲೋನ್ ಹೀಗೆಯೇ ಕೆಳಕ್ಕೆ ಎಸೆಯಲ್ಪಡುವುದು. ಆ ನಗರಿಯು ಮತ್ತೆಂದಿಗೂ ಕಾಣಿಸುವುದಿಲ್ಲ.

[22] ಹಾರ್ಪ್ ಮುಂತಾದ ವಾದ್ಯಗಳನ್ನು ನುಡಿಸುವ ಜನರ ಸಂಗೀತವು, ಕೊಳಲು ಮತ್ತು ತುತೂರಿಗಳನ್ನು ನುಡಿಸುವ ಜನರ ಸಂಗೀತವು ನಿನ್ನಲ್ಲಿ ಇನ್ನೆಂದಿಗೂ ಕೇಳಿಬರುವುದಿಲ್ಲ. ಕುಶಲಕರ್ಮಿಗಳಾರೂ ನಿನ್ನಲ್ಲಿ ಸಿಕ್ಕುವುದಿಲ್ಲ. ಬೀಸುವ ಕಲ್ಲಿನ ಶಬ್ದವು ಇನ್ನೆಂದಿಗೂ ನಿನ್ನಲ್ಲಿ ಕೇಳಿಬರುವುದಿಲ್ಲ.

[23] ದೀಪದ ಬೆಳಕು ಇನ್ನೆಂದಿಗೂ ನಿನ್ನಲ್ಲಿ ಪ್ರಕಾಶಿಸುವುದಿಲ್ಲ. ವಧೂವರರ ಧ್ವನಿಯು ಇನ್ನೆಂದಿಗೂ ನಿನ್ನಲ್ಲಿ ಕೇಳಿಬರುವುದಿಲ್ಲ. ನಿನ್ನ ವರ್ತಕರು ಪ್ರಪಂಚದ ಮಹಾಪುರುಷರಾಗಿದ್ದರು. ನಿನ್ನ ಮಾಟದಿಂದ ಎಲ್ಲಾ ಜನಾಂಗಗಳೂ ಮರುಳಾದರು.

[24] ಅವಳು ಪ್ರವಾದಿಗಳ, ದೇವರ ಪರಿಶುದ್ಧಜನರ ಮತ್ತು ಭೂಮಿಯ ಮೇಲೆ ಕೊಲ್ಲಲ್ಪಟ್ಟವರೆಲ್ಲರ ರಕ್ತವನ್ನು ಸುರಿಸಿ ಅಪರಾಧಿಯಾದಳು.”

ಯೋಹಾನನು ಬರೆದ ಪ್ರಕಟನೆ — Chapters