Skip to content
Opens in a new window
Listen to this chapter • 3:54

[1] ನಂತರ ಮತ್ತೊಬ್ಬ ಬಲಿಷ್ಠನಾದ ದೇವದೂತನೊಬ್ಬನು ಪರಲೋಕದಿಂದ ಇಳಿದುಬರುವುದನ್ನು ನಾನು ನೋಡಿದೆನು. ಆ ದೇವದೂತನು ಮೇಘವನ್ನು ಧರಿಸಿಕೊಂಡಿದ್ದನು. ಅವನ ತಲೆಯ ಸುತ್ತಲೂ ಕಾಮನಬಿಲ್ಲಿತ್ತು. ಆ ದೇವದೂತನ ಮುಖವು ಸೂರ್ಯನಂತೆಯೂ ಅವನ ಕಾಲುಗಳು ಬೆಂಕಿಯ ಕಂಬಗಳಂತೆಯೂ ಇದ್ದವು.

[2] ಆ ದೇವದೂತನು ಒಂದು ಚಿಕ್ಕ ಸುರುಳಿಯನ್ನು ಹಿಡಿದಿದ್ದನು. ಅವನ ಕೈಯಲ್ಲಿದ್ದ ಸುರುಳಿಯು ಬಿಚ್ಚಿತ್ತು. ಅವನು ತನ್ನ ಬಲಪಾದವನ್ನು ಸಮುದ್ರದ ಮೇಲೆಯೂ, ತನ್ನ ಎಡಪಾದವನ್ನು ಭೂಮಿಯ ಮೇಲೆಯೂ ಇಟ್ಟು,

[3] ಸಿಂಹ ಗರ್ಜಿಸುವಂತೆ ಗಟ್ಟಿಯಾಗಿ ಆರ್ಭಟಿಸಿದನು. ಆ ಬಳಿಕ ಏಳು ಗುಡುಗುಗಳ ಧ್ವನಿಯು ಮಾತನಾಡಿತು.

[4] ಅದನ್ನು ನಾನು ಬರೆಯಬೇಕೆಂದಿದ್ದಾಗ ಪರಲೋಕದಿಂದ ಬಂದ ಒಂದು ಧ್ವನಿಯು ನನಗೆ, “ಏಳು ಗುಡುಗುಗಳು ಹೇಳಿದ್ದನ್ನು ನೀನು ಬರೆಯಬೇಡ. ಅವುಗಳನ್ನು ರಹಸ್ಯವಾಗಿಟ್ಟಿರು” ಎಂದು ಹೇಳಿತು.

[5] ಅನಂತರ ಭೂಮಿಯ ಮೇಲೆ ಮತ್ತು ಸಮುದ್ರದ ಮೇಲೆ ನಿಂತಿದ್ದ ಒಬ್ಬ ದೇವದೂತನನ್ನು ಕಂಡೆನು. ಅವನು ತನ್ನ ಬಲಗೈಯನ್ನು ಪರಲೋಕದತ್ತ ಚಾಚಿದನು.

[6] ಆ ದೇವದೂತನು ಯುಗ ಯುಗಾಂತರಗಳಲ್ಲಿಯೂ ನೆಲೆಸಿರುವಾತನ ಮತ್ತು ಆಕಾಶವನ್ನು ಮತ್ತು ಅದರಲ್ಲಿರುವ ಸಮಸ್ತವನ್ನು, ಭೂಮಿಯನ್ನು ಮತ್ತು ಅದರಲ್ಲಿರುವ ಸಮಸ್ತವನ್ನು, ಸಮುದ್ರವನ್ನು ಮತ್ತು ಅದರಲ್ಲಿರುವ ಸಮಸ್ತವನ್ನು ಸೃಷ್ಟಿಸ್ಟಿದಾತನ ಶಕ್ತಿಯಿಂದ ಹೀಗೆ ವಾಗ್ದಾನವನ್ನು ಮಾಡಿದನು: “ಇನ್ನು ಕಾಯುವ ಅಗತ್ಯವಿಲ್ಲ;

[7] ಏಳನೆಯ ದೇವದೂತನು ತನ್ನ ತುತೂರಿಯನ್ನು ಊದಲು ಸಿದ್ಧನಾಗುವ ದಿನಗಳಲ್ಲಿ ದೇವರ ರಹಸ್ಯವಾದ ಯೋಜನೆಯು ನೆರವೇರುವುದು. ದೇವರು ತನ್ನ ಸೇವಕರಾದ ಪ್ರವಾದಿಗಳಿಗೆ ತಿಳಿಸಿದ ಸುವಾರ್ತೆಯೇ ಈ ಯೋಜನೆ.”

[8] ಬಳಿಕ ಪರಲೋಕದಿಂದ ಮತ್ತೆ ಅದೇ ಧ್ವನಿಯನ್ನು ನಾನು ಕೇಳಿದೆನು. ಆ ಧ್ವನಿಯು ನನಗೆ, “ಹೋಗು, ದೇವದೂತನ ಕೈಯಲ್ಲಿರುವ ಬಿಚ್ಚಿದ ಸುರುಳಿಯನ್ನು ತೆಗೆದುಕೊ. ಆ ದೇವದೂತನು ಸಮುದ್ರದ ಮೇಲೆ ಮತ್ತು ಭೂಮಿಯ ಮೇಲೆ ನಿಂತಿದ್ದಾನೆ” ಎಂದು ಹೇಳಿತು.

[9] ಆದ್ದರಿಂದ ನಾನು ಆ ದೇವದೂತನ ಬಳಿಗೆ ಹೋಗಿ, ಆ ಚಿಕ್ಕ ಸುರುಳಿಯನ್ನು ಕೊಡುವಂತೆ ಕೇಳಿದೆನು. ಆ ದೇವದೂತನು ನನಗೆ, “ಸುರುಳಿಯನ್ನು ತೆಗೆದುಕೊಂಡು ಅದನ್ನು ತಿಂದುಬಿಡು. ಅದು ನಿನ್ನ ಹೊಟ್ಟೆಯಲ್ಲಿ ಕಹಿಯಾಗಿರುವುದು, ಆದರೆ ನಿನ್ನ ಬಾಯಲ್ಲಿ ಅದು ಜೇನಿನಂತೆ ಸಿಹಿಯಾಗಿರುವುದು” ಎಂದು ಹೇಳಿದನು.

[10] ಆ ಚಿಕ್ಕ ಸುರುಳಿಯನ್ನು ದೇವದೂತನ ಕೈಯಿಂದ ನಾನು ತೆಗೆದುಕೊಂಡು ತಿಂದೆನು. ನನ್ನ ಬಾಯಲ್ಲಿ ಅದು ಜೇನಿನಂತೆ ಸಿಹಿಯಾಗಿತ್ತು, ಆದರೆ ನಾನು ಅದನ್ನು ತಿಂದಬಳಿಕ, ಅದು ನನ್ನ ಹೊಟ್ಟೆಯಲ್ಲಿ ಕಹಿಯಾಯಿತು.

[11] ಆಗ ಅವನು ನನಗೆ, “ನೀನು ಮತ್ತೆ ಅನೇಕ ಜನಾಂಗಗಳ, ಪ್ರಜೆಗಳ, ಭಾಷೆಗಳ ಮತ್ತು ರಾಜರುಗಳ ವಿಷಯದಲ್ಲಿ ಪ್ರವಾದನೆ ಮಾಡಬೇಕು” ಎಂದು ತಿಳಿಸಿದನು.

ಯೋಹಾನನು ಬರೆದ ಪ್ರಕಟನೆ — Chapters