Skip to content
Opens in a new window
Listen to this chapter • 4:12

[1] ಆದ್ದರಿಂದ ನನ್ನ ಸಹೋದರ ಸಹೋದರಿಯರೇ, ಪರಿಶುದ್ಧ ಜನರಾಗುವುದಕ್ಕಾಗಿ ದೇವರಿಂದ ಕರೆಯಲ್ಪಟ್ಟವರಾದ ನೀವು ಯೇಸುವನ್ನೇ ಕುರಿತು ಆಲೋಚಿಸಿರಿ. ದೇವರು ಆತನನ್ನು ನಮ್ಮ ಬಳಿಗೆ ಕಳುಹಿಸಿದನು. ಆತನೇ ನಮ್ಮ ನಂಬಿಕೆಯ ಪ್ರಧಾನಯಾಜಕನು.

[2] ಯೇಸುವನ್ನು ದೇವರು ನಮ್ಮ ಬಳಿಗೆ ಕಳುಹಿಸಿ, ಆತನನ್ನು ನಮ್ಮ ಪ್ರಧಾನಯಾಜಕನನ್ನಾಗಿ ಮಾಡಿದನು. ಆತನು ಮೋಶೆಯಂತೆ ದೇವರಿಗೆ ನಂಬಿಗಸ್ತನಾಗಿದ್ದನು. ದೇವರ ಮನೆಯಲ್ಲಿ ದೇವರ ಇಷ್ಟಕ್ಕನುಗುಣವಾಗಿ ಮಾಡಬೇಕಾದುದನ್ನೆಲ್ಲ ಆತನು ಮಾಡಿದನು.

[3] ಒಬ್ಬ ಮನುಷ್ಯನು ಮನೆಯನ್ನು ಕಟ್ಟಿದಾಗ, ಜನರು ಮನೆಗಿಂತಲೂ ಅವನಿಗೇ ಹೆಚ್ಚು ಮಾನ್ಯತೆಯನ್ನು ಕೊಡುವಂತೆಯೇ ಯೇಸು ಮೋಶೆಗಿಂತ ಹೆಚ್ಚು ಮಾನ್ಯತೆಯನ್ನು ಹೊಂದಿದ್ದಾನೆ.

[4] ಪ್ರತಿಯೊಂದು ಮನೆಯು ಯಾರಾದರೊಬ್ಬರಿಂದ ಕಟ್ಟಲ್ಪಟ್ಟಿರಬೇಕು. ಆದರೆ ದೇವರು ಎಲ್ಲವನ್ನು ನಿರ್ಮಿಸಿದನು.

[5] ದೇವರ ಮನೆಯಲ್ಲೆಲ್ಲಾ ಮೋಶೆಯು ಸೇವಕನಂತೆ ನಂಬಿಗಸ್ತನಾಗಿದ್ದನು. ಮುಂದೆ ಪ್ರಕಟವಾಗಲಿದ್ದ ಸಂಗತಿಗಳಿಗೆ ಅವನು ಸಾಕ್ಷಿಯಾಗಿದ್ದನು.

[6] ಕ್ರಿಸ್ತನಾದರೋ ಮಗನಾಗಿ ದೇವರ ಮನೆಯನ್ನು ಆಳುವುದರಲ್ಲಿ ನಂಬಿಗಸ್ತನಾಗಿದ್ದಾನೆ. ವಿಶ್ವಾಸಿಗಳಾದ ನಾವು ನಮಗಿರುವ ಮಹಾ ನಿರೀಕ್ಷೆಯಲ್ಲಿ ದೃಢವಾಗಿಯೂ ಹೆಮ್ಮೆಯಿಂದಲೂ ಇರುವುದಾಗಿದ್ದರೆ ದೇವರ ಮನೆಯವರಾಗಿದ್ದೇವೆ.

[7] ಆದ್ದರಿಂದ ಪವಿತ್ರಾತ್ಮನು ಹೇಳುವ ಪ್ರಕಾರ, “ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಟ್ಟರೆ,

[8] ಪೂರ್ವಕಾಲದಲ್ಲಿ ನಿಮ್ಮ ಹಿರಿಯರು ದೇವರಿಗೆ ವಿರುದ್ಧವಾಗಿದ್ದಂತೆ ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿ. ಅಂದು ಅವರು ಮರುಭೂಮಿಯಲ್ಲಿ ದೇವರನ್ನು ಪರೀಕ್ಷಿಸಿದರು.

[9] ನಾನು ಮರಳುಗಾಡಿನಲ್ಲಿ ನಲವತ್ತು ವರ್ಷಗಳ ಕಾಲ ಮಾಡಿದ್ದನ್ನು ನಿಮ್ಮ ಪೂರ್ವಿಕರು ನೋಡಿದರೂ ನನ್ನನ್ನೂ ನನ್ನ ತಾಳ್ಮೆಯನ್ನೂ ಪರೀಕ್ಷಿಸಿದರು.

[10] ಆದ್ದರಿಂದ ಅವರ ಮೇಲೆ ನಾನು ಕೋಪಗೊಂಡಿದ್ದೆನು. ‘ಅವರ ಆಲೋಚನೆಗಳು ಯಾವಾಗಲೂ ತಪ್ಪಾಗಿವೆ. ನನ್ನ ಮಾರ್ಗವನ್ನು ಅವರು ಅರ್ಥಮಾಡಿಕೊಳ್ಳಲೇ ಇಲ್ಲ’ ಎಂದು ನಾನು ಹೇಳಿದೆನು.

[11] ‘ಆ ಜನರು ನನ್ನ ವಿಶ್ರಾಂತಿಯಲ್ಲಿ ಎಂದಿಗೂ ಪ್ರವೇಶಿಸುವುದಿಲ್ಲ’ ಎಂದು ನಾನು ಕೋಪಗೊಂಡು ಪ್ರಮಾಣ ಮಾಡಿದೆನು.” ಕೀರ್ತನೆ. 95:7-11

[12] ಆದ್ದರಿಂದ ಸಹೋದರ ಸಹೋದರಿಯರೇ, ನಿಮ್ಮಲ್ಲಿ ಯಾರೂ ಕೆಟ್ಟಬುದ್ಧಿಯುಳ್ಳವರಾಗದಂತೆ, ನಂಬದವರಾಗದಂತೆ, ಜೀವಸ್ವರೂಪನಾದ ದೇವರನ್ನು ತೊರೆಯದಂತೆ ಎಚ್ಚರಿಕೆಯಿಂದಿರಿ.

[13] ಆದರೆ ಒಬ್ಬರನ್ನೊಬ್ಬರು ಪ್ರತಿದಿನವೂ ಸಂತೈಸಿರಿ. “ಈ ದಿನ”ವು ಇನ್ನೂ ಇರುವಾಗಲೇ ಇದನ್ನೆಲ್ಲ ಮಾಡಿರಿ. ಪಾಪದಿಂದಾಗಲಿ ಪಾಪವು ಮೋಸಗೊಳಿಸುವ ರೀತಿಯಿಂದಾಗಲಿ ನಿಮ್ಮಲ್ಲಿ ಯಾರೂ ಕಠಿಣರಾಗದಂತೆ ಒಬ್ಬರಿಗೊಬ್ಬರು ಸಹಾಯ ಮಾಡಿರಿ.

[14] ನಾವೆಲ್ಲರೂ ಒಟ್ಟಾಗಿ ಕ್ರಿಸ್ತನಲ್ಲಿ ಪಾಲುಗಾರರಾಗಿದ್ದೇವೆ. ಆರಂಭದಲ್ಲಿ ನಮಗಿದ್ದ ದೃಢನಂಬಿಕೆಯನ್ನು ಅಂತ್ಯದವರೆಗೂ ಬಲವಾಗಿ ಹಿಡಿದುಕೊಳ್ಳುವುದಾದರೆ ಇದು ನಿಜವಾಗುತ್ತದೆ.

[15] ಪವಿತ್ರ ಗ್ರಂಥವು ಹೇಳುವುದೇನೆಂದರೆ: “ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಟ್ಟರೆ, ಪೂರ್ವಕಾಲದಲ್ಲಿ ನಿಮ್ಮ ಹಿರಿಯರು ದೇವರಿಗೆ ವಿರುದ್ಧವಾಗಿದ್ದಂತೆ ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿ.” ಕೀರ್ತನೆ 95:7-8

[16] ದೇವರ ಸ್ವರವನ್ನು ಕೇಳಿಯೂ ಆತನಿಗೆ ವಿರುದ್ಧರಾದವರು ಯಾರು? ಮೋಶೆಯ ಮೂಲಕ ಈಜಿಪ್ಟಿನಿಂದ ಬಿಡುಗಡೆ ಹೊಂದಿದವರಲ್ಲವೇ?

[17] ನಲವತ್ತು ವರ್ಷಗಳ ಕಾಲ ದೇವರು ಯಾರ ಮೇಲೆ ಕೋಪಗೊಂಡಿದ್ದನು? ಪಾಪವನ್ನು ಮಾಡಿದವರ ಮೇಲಲ್ಲವೇ? ಅವರೆಲ್ಲರೂ ಮರುಭೂಮಿಯಲ್ಲಿ ಸತ್ತುಹೋದರು.

[18] ತನ್ನ ವಿಶ್ರಾಂತಿಯಲ್ಲಿ ಅವರು ಸೇರುವುದೇ ಇಲ್ಲವೆಂದು ದೇವರು ಪ್ರಮಾಣ ಮಾಡಿದಾಗ, ಆತನು ಯಾರೊಡನೆ ಮಾತಾಡುತ್ತಿದ್ದನು? ತನಗೆ ಅವಿಧೇಯರಾದ ಜನರ ಬಗ್ಗೆ ಅಲ್ಲವೇ?

[19] ಆದ್ದರಿಂದ ದೇವರ ವಿಶ್ರಾಂತಿಯಲ್ಲಿ ಪ್ರವೇಶಿಸಲು ಆ ಜನರಿಗೆ ಅವಕಾಶ ದೊರೆಯಲಿಲ್ಲ. ಅವರಲ್ಲಿ ನಂಬಿಕೆ ಇಲ್ಲದಿದ್ದ ಕಾರಣವೇ ಅವರು ಪ್ರವೇಶಿಸಲಿಲ್ಲ.

ಇಬ್ರಿಯರಿಗೆ ಬರೆದ ಪತ್ರ — Chapters