[1] ಪೂರ್ವಕಾಲದಲ್ಲಿ ದೇವರು ಪ್ರವಾದಿಗಳ ಮೂಲಕ ನಮ್ಮ ಜನರೊಂದಿಗೆ ಹಲವಾರು ವಿಧದಲ್ಲಿ ಅನೇಕ ಸಲ ಮಾತನಾಡಿದನು.
[2] ಈಗ, ಕೊನೆಯ ದಿನಗಳಲ್ಲಿ ದೇವರು ಮತ್ತೆ ನಮ್ಮ ಜೊತೆಯಲ್ಲಿ ತನ್ನ ಮಗನ ಮೂಲಕ ಮಾತನಾಡಿದನು. ದೇವರು ತನ್ನ ಮಗನ ಮೂಲಕ ಲೋಕವನ್ನೆಲ್ಲ ಸೃಷ್ಟಿಸಿ, ಸಮಸ್ತಕ್ಕೂ ಆತನನ್ನೇ ಬಾಧ್ಯಸ್ತನನ್ನಾಗಿ ಮಾಡಿದನು.
[3] ದೇವರ ಮಹಿಮೆಯು ಆತನಲ್ಲಿ ತೋರಿಬಂದಿತು. ಆತನು ದೇವರ ಸ್ವಭಾವದ ಪ್ರತಿರೂಪವಾಗಿದ್ದಾನೆ. ಆತನು ತನ್ನ ಶಕ್ತಿಯ ಆಜ್ಞೆಯಿಂದ ಪರಿಪಾಲಿಸುತ್ತಿದ್ದಾನೆ. ಆತನು ಜನರನ್ನು ಅವರ ಪಾಪಗಳಿಂದ ಶುದ್ಧಿಮಾಡಿ, ಸ್ವರ್ಗದಲ್ಲಿ ಮಹತ್ವವುಳ್ಳ ದೇವರ ಬಲಗಡೆಯಲ್ಲಿ ಆಸನಾರೂಢನಾದನು.
[4] ದೇವರು ಆತನಿಗೆ ದೇವದೂತರಿಗಿಂತ ಎಷ್ಟೋ ಶ್ರೇಷ್ಠವಾದ ಹೆಸರನ್ನು ದಯಪಾಲಿಸಿದನು. ಆತನು ದೇವದೂತರಿಗಿಂತ ಅಷ್ಟೊಂದು ಶ್ರೇಷ್ಠನಾದನು.
[5] ದೇವರು ಯಾವ ದೂತರಿಗೂ ಈ ಸಂಗತಿಗಳನ್ನು ಎಂದೂ ಹೇಳಿಲ್ಲ: “ನೀನು ನನ್ನ ಮಗ; ಈ ದಿನ ನಾನು ನಿನ್ನ ತಂದೆಯಾದೆನು.” ಕೀರ್ತನೆ. 2:7 ದೇವರು ದೂತನೊಬ್ಬನಿಗೆ ಎಂದೂ ಹೀಗೆ ಹೇಳಿಲ್ಲ: “ನಾನು ಅವನ ತಂದೆಯಾಗಿರುವೆನು, ಅವನು ನನ್ನ ಮಗನಾಗಿರುವನು.” 2 ಸಮುವೇಲ 7:14
[6] ದೇವರು ತನ್ನ ಚೊಚ್ಚಲ ಮಗನನ್ನು ಈ ಲೋಕಕ್ಕೆ ಬರಮಾಡುವಾಗ, ಆತನು ಹೇಳುವುದೇನೆಂದರೆ, “ದೇವದೂತರೆಲ್ಲರೂ ಆತನನ್ನು ಆರಾಧಿಸಲಿ.” ಧರ್ಮೋಪದೇಶ. 32:43
[7] ದೇವರು ತನ್ನ ದೂತರನ್ನು ಕುರಿತು ಹೇಳಿದ್ದು ಹೀಗಿದೆ: “ದೇವರು ತನ್ನ ದೂತರನ್ನು ಗಾಳಿಗಳನ್ನಾಗಿ ಮಾಡಿದನು. ಆತನು ತನ್ನ ಸೇವಕರನ್ನು ಬೆಂಕಿಯ ಜ್ವಾಲೆಗಳಂತೆ ಮಾಡಿದನು.” ಕೀರ್ತನೆ. 104:4
[8] ಆದರೆ ದೇವರು ತನ್ನ ಮಗನನ್ನು ಕುರಿತು ಹೀಗೆ ಹೇಳಿದನು: “ದೇವರೇ, ನಿನ್ನ ಸಿಂಹಾಸನವು ಯುಗಯುಗಾಂತರಗಳಲ್ಲೂ ಇರುವುದು. ನೀನು ನಿನ್ನ ರಾಜ್ಯವನ್ನು ಸಮರ್ಪಕವಾದ ತೀರ್ಪುಗಳೊಡನೆ ಆಳುವೆ.
[9] ನೀನು ಒಳ್ಳೆಯದನ್ನು ಪ್ರೀತಿಸುವೆ, ಕೆಟ್ಟದ್ದನ್ನು ದ್ವೇಷಿಸುವೆ. ಆದ್ದರಿಂದ ದೇವರು, ಹೌದು, ನಿನ್ನ ದೇವರೇ ನಿನ್ನನ್ನು ನಿನ್ನ ಸಂಗಡಿಗರಿಗಿಂತ ಉನ್ನತಸ್ಥಾನಕ್ಕೆ ಏರಿಸಿ ಪರಮಾನಂದದ ತೈಲದಿಂದ ಅಭಿಷೇಕಿಸಿದ್ದಾನೆ.” ಕೀರ್ತನೆ. 45:6-7
[10] ಇದಲ್ಲದೆ ದೇವರು ಹೀಗೆನ್ನುತ್ತಾನೆ: “ಪ್ರಭುವೇ, ಆದಿಯಲ್ಲಿ ನೀನು ಈ ಲೋಕವನ್ನು ಸೃಷ್ಟಿಸಿದೆ. ಗಗನಮಂಡಲವು ನಿನ್ನ ಕೈಕೆಲಸವಾಗಿದೆ.
[11] ಇವೆಲ್ಲವು ನಾಶವಾಗುತ್ತವೆ, ಆದರೆ ನೀನು ಶಾಶ್ವತವಾಗಿರುವೆ. ಎಲ್ಲಾ ವಸ್ತುಗಳೂ ವಸ್ತ್ರಗಳಂತೆ ಹಳೆಯವಾಗುವವು.
[12] ನೀನು ಅವುಗಳನ್ನು ಮೇಲಂಗಿಯಂತೆ ಮಡಿಚಿಡುವೆ. ಅವು ವಸ್ತ್ರಗಳಂತೆ ಬದಲಾಗುತ್ತವೆ. ಆದರೆ ನೀನು ಎಂದೆಂದಿಗೂ ಬದಲಾಗುವುದಿಲ್ಲ. ನಿನ್ನ ಜೀವಕ್ಕೆ ಅಂತ್ಯವೆಂಬುದಿಲ್ಲ.” ಕೀರ್ತನೆ. 102:25-27
[13] ದೇವರು ಯಾವ ದೂತನಿಗೂ ಇದನ್ನೆಂದೂ ಹೇಳಿಲ್ಲ: “ನಾನು ನಿನ್ನ ಶತ್ರುಗಳನ್ನು ನಿನಗೆ ಪಾದಪೀಠವನ್ನಾಗಿ ಮಾಡುವತನಕ, ನೀನು ನನ್ನ ಬಲಗಡೆಯಲ್ಲಿ ಕುಳಿತುಕೊ.” ಕೀರ್ತನೆ. 110:1
[14] ದೇವದೂತರೆಲ್ಲರೂ ದೇವರ ಸೇವೆಮಾಡುವ ಆತ್ಮಗಳಾಗಿದ್ದಾರೆ ಮತ್ತು ರಕ್ಷಣೆಯನ್ನು ಹೊಂದಿಕೊಳ್ಳುವ ಜನರ ಸಹಾಯಕ್ಕಾಗಿ ಕಳುಹಿಸಲ್ಪಟ್ಟವರಾಗಿದ್ದಾರೆ.