Skip to content
Opens in a new window
Listen to this chapter • 5:25

[1] ಮಕ್ಕಳೇ, ಪ್ರಭುವಿನ ಚಿತ್ತಕ್ಕನುಸಾರವಾಗಿ ನಿಮ್ಮ ತಂದೆತಾಯಿಗಳಿಗೆ ವಿಧೇಯರಾಗಿರಿ. ಅದು ನ್ಯಾಯಬದ್ಧವಾದದ್ದಾಗಿದೆ.

[2] ದೇವಾಜ್ಞೆಯು ಹೇಳುವಂತೆ, “ನೀವು ನಿಮ್ಮ ತಂದೆತಾಯಿಗಳನ್ನು ಗೌರವಿಸಬೇಕು.” ಈ ಮೊದಲನೆಯ ಆಜ್ಞೆಯು ವಾಗ್ದಾನವನ್ನು ಒಳಗೊಂಡಿದೆ.

[3] ಆ ವಾಗ್ದಾನವು ಇಂತಿದೆ: “ಆಗ ನಿಮಗೆ ಒಳ್ಳೆಯದಾಗುವುದು ಮತ್ತು ನೀವು ಭೂಮಿಯ ಮೇಲೆ ಬಹುಕಾಲ ಬದುಕುವಿರಿ.”

[4] ತಂದೆಗಳೇ, ನಿಮ್ಮ ಮಕ್ಕಳನ್ನು ಸಿಟ್ಟಿಗೆಬ್ಬಿಸದೆ ಪ್ರಭುವಿನ ಉಪದೇಶದಿಂದಲೂ ಬಾಲಶಿಕ್ಷೆಯಿಂದಲೂ ಬೆಳೆಸಿರಿ.

[5] ಸೇವಕರೇ, ನಿಮ್ಮ ಇಹಲೋಕದ ಯಜಮಾನರಿಗೆ ಭಯದಿಂದಲೂ ಗೌರವದಿಂದಲೂ ವಿಧೇಯರಾಗಿರಿ. ನೀವು ಕ್ರಿಸ್ತನಿಗೆ ವಿಧೇಯರಾಗುವಂತೆ ಯಥಾರ್ಥವಾದ ಹೃದಯದಿಂದ ವಿಧೇಯರಾಗಿರಿ.

[6] ಅವರ ಮೆಚ್ಚಿಕೆಯನ್ನು ಗಳಿಸಿಕೊಳ್ಳಬೇಕೆಂದು ಅವರು ಗಮನಿಸುತ್ತಿರುವಾಗ ಮಾತ್ರ ಸೇವೆ ಮಾಡದೆ ನೀವು ಕ್ರಿಸ್ತನಿಗೆ ವಿಧೇಯರಾಗಿರುವಂತೆ ಅವರಿಗೆ ವಿಧೇಯರಾಗಿರಬೇಕು. ದೇವರಿಗೆ ಇಷ್ಟವಾದದ್ದನ್ನು ನೀವು ಪೂರ್ಣಹೃದಯದಿಂದ ಮಾಡಬೇಕು.

[7] ನೀವು ಮಾಡತಕ್ಕ ಕೆಲಸವನ್ನು ಸಂತೋಷದಿಂದ ಮಾಡಿರಿ. ಕೇವಲ ಮನುಷ್ಯರ ಸೇವೆಯನ್ನು ಮಾಡುವವರಂತೆ ಮಾಡದೆ ಪ್ರಭುವಿನ ಸೇವೆಯನ್ನು ಮಾಡುವವರಂತೆ ಮಾಡಿರಿ.

[8] ಒಳ್ಳೆಯದನ್ನು ಮಾಡುವ ಪ್ರತಿಯೊಬ್ಬನಿಗೂ ದೇವರು ಪ್ರತಿಫಲವನ್ನು ಕೊಡುತ್ತಾನೆಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಿರಿ. ಪ್ರತಿಯೊಬ್ಬ ವ್ಯಕ್ತಿಯು ಅವನು ಸೇವಕನಾಗಿರಲಿ ಅಥವಾ ಸ್ವತಂತ್ರನಾಗಿರಲಿ ತಾನು ಮಾಡುವ ಒಳ್ಳೆಯ ಕಾರ್ಯಗಳಿಗೆ ಪ್ರತಿಫಲವನ್ನು ಹೊಂದುವನು.

[9] ಯಜಮಾನರೇ, ಅದೇರೀತಿಯಲ್ಲಿ ನಿಮ್ಮ ಸೇವಕರಿಗೆ ಒಳ್ಳೆಯವರಾಗಿರಿ. ಅವರಿಗೆ ಹೆದರಿಕೆಯಾಗುವಂಥ ಮಾತುಗಳನ್ನಾಡಬೇಡಿ. ನಿಮಗೂ ಅವರಿಗೂ ಒಡೆಯನಾಗಿರುವಾತನು ಪರಲೋಕದಲ್ಲಿದ್ದಾನೆ ಎಂಬುದು ನಿಮಗೆ ತಿಳಿದಿದೆ. ಆತನು ಪ್ರತಿಯೊಬ್ಬನಿಗೂ ಪಕ್ಷಪಾತವಿಲ್ಲದೆ ನ್ಯಾಯತೀರಿಸುವನು.

[10] ಕಡೇ ಮಾತೇನೆಂದರೆ, ಪ್ರಭುವಿನಲ್ಲಿಯೂ ಆತನ ಮಹಾಶಕ್ತಿಯಲ್ಲಿಯೂ ಬಲವಾಗಿರಿ.

[11] ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ. ಆಗ ಸೈತಾನನ ಕುತಂತ್ರಗಳಿಗೆ ವಿರುದ್ಧವಾಗಿ ಹೋರಾಡಲು ನಿಮಗೆ ಸಾಧ್ಯವಾಗುವುದು.

[12] ನಮ್ಮ ಹೋರಾಟವು ಜನರ ವಿರುದ್ಧವಲ್ಲ. ನಾವು ಅಂಧಕಾರದ ಅಧಿಪತಿಗಳಿಗೂ ಅಧಿಕಾರಿಗಳಿಗೂ ಮತ್ತು ಈ ಲೋಕದ ಕತ್ತಲೆಯ ಶಕ್ತಿಗಳಿಗೂ ಆಕಾಶಮಂಡಲದ ದುಷ್ಟಶಕ್ತಿಗಳಿಗೂ ವಿರುದ್ಧವಾಗಿ ಹೋರಾಡುತ್ತಿದ್ದೇವೆ.

[13] ಆದಕಾರಣವೇ ನೀವು ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಬೇಕು. ಆಗ ಯುದ್ಧದ ದಿನದಲ್ಲಿಯೂ ಹೋರಾಟವು ಸಂಪೂರ್ಣವಾಗಿ ಮುಗಿದಾದ ಮೇಲೆಯೂ ದೃಢವಾಗಿನಿಂತುಕೊಳ್ಳಲು ನಿಮಗೆ ಸಾಧ್ಯವಾಗುವುದು.

[14] ಆದ್ದರಿಂದ ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಂಡು ನೀತಿಯೆಂಬ ವಜ್ರಕವಚವನ್ನು ಎದೆಗೆ ಬಿಗಿದುಕೊಂಡು

[15] ಸಮಾಧಾನದ ಸುವಾರ್ತೆಯೆಂಬ ಪಾದರಕ್ಷೆಯನ್ನು ಹಾಕಿಕೊಂಡು ದೃಢವಾಗಿ ನಿಂತುಕೊಳ್ಳಿರಿ.

[16] ಅಲ್ಲದೆ ನಂಬಿಕೆಯೆಂಬ ಗುರಾಣಿಯನ್ನೂ ಹಿಡಿದುಕೊಳ್ಳಿರಿ. ಕೆಡುಕನ ಅಗ್ನಿಬಾಣಗಳನ್ನೆಲ್ಲಾ ತಡೆಯಲು ನಿಮಗೆ ಇದರಿಂದ ಸಾಧ್ಯವಾಗುವುದು.

[17] ದೇವರ ರಕ್ಷಣೆಯನ್ನು ಶಿರಸ್ತ್ರಾಣವನ್ನಾಗಿ ಧರಿಸಿಕೊಳ್ಳಿರಿ. ಪವಿತ್ರಾತ್ಮನ ಖಡ್ಗವನ್ನು ಅಂದರೆ ದೇವರ ವಾಕ್ಯವನ್ನು ತೆಗೆದುಕೊಳ್ಳಿರಿ.

[18] ನೀವು ಪವಿತ್ರಾತ್ಮನ ಸಹಾಯದಿಂದ ಯಾವಾಗಲೂ ದೇವರಲ್ಲಿ ಪ್ರಾರ್ಥಿಸುತ್ತಾ ಸಕಲವಿಧವಾದ ವಿಜ್ಞಾಪನೆಗಳನ್ನು ಮಾಡಿರಿ ಮತ್ತು ನಿಮಗೆ ಅಗತ್ಯವಾದವುಗಳಿಗಾಗಿ ಬೇಡಿಕೊಳ್ಳಿರಿ. ಇದಕ್ಕಾಗಿ ಯಾವಾಗಲೂ ಸಿದ್ಧರಾಗಿರಿ. ಪ್ರಾರ್ಥನೆಯನ್ನು ಬಿಟ್ಟುಕೊಡಬೇಡಿರಿ. ದೇವಜನರೆಲ್ಲರಿಗೋಸ್ಕರ ಯಾವಾಗಲೂ ಪ್ರಾರ್ಥಿಸಿರಿ.

[19] ಅಲ್ಲದೆ ನನಗಾಗಿಯೂ ಪ್ರಾರ್ಥಿಸಿರಿ. ನಾನು ಮಾತಾಡುವಾಗ ಸುವಾರ್ತೆಯ ರಹಸ್ಯಸತ್ಯವನ್ನು ನಿರ್ಭಯದಿಂದ ತಿಳಿಸಲು ಬೇಕಾದ ಮಾತನ್ನು ದೇವರು ನನಗೆ ಅನುಗ್ರಹಿಸುವಂತೆ ಪ್ರಾರ್ಥಿಸಿರಿ.

[20] ಸುವಾರ್ತೆಯನ್ನು ತಿಳಿಸುವುದೇ ನನ್ನ ಕೆಲಸ. ಈಗ ಸೆರೆಮನೆಯಲ್ಲಿಯೂ ನಾನು ಆ ಕೆಲಸವನ್ನು ಮಾಡುತ್ತಿದ್ದೇನೆ. ನಾನು ಯಾವ ರೀತಿ ಮಾತಾಡಬೇಕೋ ಅದೇ ರೀತಿ ನಿರ್ಭಯದಿಂದ ಮಾತಾಡಲು ಸಾಧ್ಯವಾಗುವಂತೆ ಪ್ರಾರ್ಥಿಸಿರಿ.

[21] ನಮ್ಮ ಪ್ರಿಯ ಸಹೋದರನಾದ ತುಖಿಕನನ್ನು ನಿಮ್ಮ ಬಳಿಗೆ ಕಳುಹಿಸುತ್ತಿದ್ದೇನೆ. ಅವನು ಪ್ರಭುವಿನ ಸೇವೆಯಲ್ಲಿ ನಂಬಿಗಸ್ತನಾದ ಸೇವಕನಾಗಿದ್ದಾನೆ. ಇಲ್ಲಿಯ ಸಂಗತಿಗಳನ್ನೆಲ್ಲಾ ಅವನು ನಿಮಗೆ ತಿಳಿಸುವನು. ನಾನು ಇಲ್ಲಿ ಹೇಗಿದ್ದೇನೆ ಮತ್ತು ಏನು ಮಾಡುತ್ತಿದ್ದೇನೆ ಎಂಬುದು ಆಗ ನಿಮಗೆ ಗೊತ್ತಾಗುವುದು.

[22] ನಮ್ಮ ಸ್ಥಿತಿಗತಿಗಳು ನಿಮಗೆ ತಿಳಿದಿರಬೇಕೆಂಬುದು ನನ್ನ ಇಷ್ಟ. ಅಲ್ಲದೆ ಅವನು ನಿಮ್ಮನ್ನು ಪ್ರೋತ್ಸಾಹಿಸುವನು.

[23] ತಂದೆಯಾದ ದೇವರಿಂದಲೂ ಪ್ರಭುವಾದ ಯೇಸು ಕ್ರಿಸ್ತನಿಂದಲೂ ನಿಮಗೆ ಶಾಂತಿಯೂ ನಂಬಿಕೆಯಿಂದ ಕೂಡಿದ ಪ್ರೀತಿಯೂ ಉಂಟಾಗಲಿ.

[24] ನಮ್ಮ ಪ್ರಭುವಾದ ಯೇಸು ಕ್ರಿಸ್ತನನ್ನು ನಿರಂತರವಾದ ಪ್ರೀತಿಯಿಂದ ಪ್ರೀತಿಸುವ ನಿಮ್ಮೆಲ್ಲರ ಮೇಲೆ ದೇವರ ಕೃಪೆಯಿರಲಿ.

ಎಫೆಸದವರಿಗೆ ಬರೆದ ಪತ್ರ — Chapters