Skip to content
Opens in a new window
Listen to this chapter • 6:32

[1] ನೀವು ದೇವರ ಪ್ರಿಯ ಮಕ್ಕಳಾಗಿದ್ದೀರಿ; ಆದ್ದರಿಂದ ನೀವು ಆತನನ್ನು ಅನುಸರಿಸಬೇಕು.

[2] ಪ್ರೀತಿಯಿಂದ ಬಾಳಿರಿ. ಕ್ರಿಸ್ತನು ನಮ್ಮನ್ನು ಪ್ರೀತಿಸಿದಂತೆ ನೀವೂ ಇತರರನ್ನು ಪ್ರೀತಿಸಿರಿ. ಕ್ರಿಸ್ತನು ನಮಗೋಸ್ಕರವಾಗಿ ತನ್ನನ್ನೇ ಪರಿಮಳದ ಕಾಣಿಕೆಯಾಗಿಯೂ ಯಜ್ಞವಾಗಿಯೂ ದೇವರಿಗೆ ಸಮರ್ಪಿಸಿಕೊಂಡನು.

[3] ಆದರೆ ನಿಮ್ಮ ಮಧ್ಯದಲ್ಲಿ ಲೈಂಗಿಕ ಪಾಪವಿರಕೂಡದು. ಯಾವ ಬಗೆಯ ದುಷ್ಟತ್ವವಾಗಲಿ ಸ್ವಾರ್ಥತೆಯಾಗಲಿ ಇರಕೂಡದು. ಏಕೆಂದರೆ ಅವುಗಳು ದೇವರ ಪರಿಶುದ್ಧ ಜನರಿಗೆ ಯೋಗ್ಯವಾದವುಗಳಲ್ಲ.

[4] ಅಲ್ಲದೆ ನಿಮ್ಮ ಮಧ್ಯದಲ್ಲಿ ಕೆಟ್ಟಮಾತುಗಳು ಇರಕೂಡದು. ನೀವು ಮೂರ್ಖತನದಿಂದ ಮಾತಾಡಕೂಡದು ಮತ್ತು ಹೊಲಸಾದ ಹಾಸ್ಯನುಡಿಗಳನ್ನು ಹೇಳಕೂಡದು. ಇವುಗಳು ನಿಮಗೆ ಯೋಗ್ಯವಾದವುಗಳಲ್ಲ. ಆದರೆ ನೀವು ದೇವರಿಗೆ ಸ್ತೋತ್ರ ಸಲ್ಲಿಸುವವರಾಗಿರಬೇಕು.

[5] ಇದು ನಿಮಗೆ ಚೆನ್ನಾಗಿ ತಿಳಿದಿರಲಿ: ಲೈಂಗಿಕ ಪಾಪಮಾಡುವವರಿಗೆ, ದುಷ್ಕೃತ್ಯಗಳನ್ನು ಮಾಡುವವರಿಗೆ, ಸ್ವಾರ್ಥಿಗಳಿಗೆ, ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಸ್ಥಳವೇ ಇಲ್ಲ. ಸ್ವಾರ್ಥತೆಯು ವಿಗ್ರಹಾರಾಧನೆಗೆ ಸಮಾನವಾಗಿದೆ.

[6] ಅಸತ್ಯವಾದ ಸಂಗತಿಗಳನ್ನು ಹೇಳಿ ನಿಮ್ಮನ್ನು ಮೋಸಪಡಿಸಲು ಯಾರಿಗೂ ಅವಕಾಶ ಕೊಡಬೇಡಿ. ಆ ಕೆಟ್ಟಸಂಗತಿಗಳ ನಿಮಿತ್ತ ದೇವರ ಕೋಪವು ಆತನಿಗೆ ವಿಧೇಯರಾಗದ ಜನರ ಮೇಲೆ ಬರುತ್ತದೆ.

[7] ಆದ್ದರಿಂದ ನೀವು ಅಂಥ ಜನರೊಂದಿಗೆ ಪಾಲುಗಾರರಾಗಬೇಡಿ.

[8] ಹಿಂದಿನ ಕಾಲದಲ್ಲಿ ನೀವು ಕಗ್ಗತ್ತಲೆಯಾಗಿದ್ದಿರಿ. ಈಗಲಾದರೋ ನೀವು ಕರ್ತನಲ್ಲಿ ಪೂರ್ಣಬೆಳಕಾಗಿದ್ದೀರಿ. ಆದ್ದರಿಂದ ಬೆಳಕಿಗೆ ಸೇರಿದ ಮಕ್ಕಳಂತೆ ಜೀವಿಸಿರಿ.

[9] ಬೆಳಕಿನ ಫಲವು ಉಪಕಾರದಲ್ಲಿಯೂ ನೀತಿಯಲ್ಲಿಯೂ ಸತ್ಯದಲ್ಲಿಯೂ ಕಂಡುಬರುತ್ತದೆ.

[10] ಪ್ರಭುವಿಗೆ ಯಾವುದು ಮೆಚ್ಚಿಕೆಯಾದದ್ದೆಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿ.

[11] ಕತ್ತಲೆಯಲ್ಲಿರುವ ಜನರು ಮಾಡುವಂಥ ಕಾರ್ಯಗಳನ್ನು ಮಾಡಬೇಡಿ. ಅವುಗಳಿಂದ ಒಳ್ಳೆಯದೇನೂ ಆಗುವುದಿಲ್ಲ. ಆದರೆ ಕತ್ತಲೆಯಲ್ಲಿ ನಡೆಯುವ ಕಾರ್ಯಗಳು ತಪ್ಪಾದವುಗಳೆಂದು ತೋರಿಸಲು ಒಳ್ಳೆಯ ಕಾರ್ಯಗಳನ್ನು ಮಾಡಿರಿ.

[12] ಆ ಜನರು ಕತ್ತಲೆಯಲ್ಲಿ ಮಾಡುವ ಗುಪ್ತಕಾರ್ಯಗಳ ಬಗ್ಗೆ ಮಾತಾಡುವುದಕ್ಕೂ ನಾಚಿಕೆಯಾಗುತ್ತದೆ.

[13] ಆದರೆ ಆ ಕಾರ್ಯಗಳು ತಪ್ಪಾದವುಗಳೆಂದು ನಾವು ತೋರಿಸುವಾಗ ಬೆಳಕಿನಿಂದ ಆ ಕಾರ್ಯಗಳು ಸ್ಪಷ್ಟವಾಗಿ ಕಾಣಿಸುತ್ತವೆ.

[14] ಪ್ರತಿಯೊಂದನ್ನು ಸ್ಪಷ್ಟವಾಗಿ ತೋರಿಸುವಂಥದ್ದೇ ಬೆಳಕು. ಆದ್ದರಿಂದಲೇ ಹೀಗೆ ಬರೆದದೆ: “ನಿದ್ರೆಮಾಡುವವನೇ, ಎಚ್ಚರವಾಗು! ಸತ್ತವರನ್ನು ಬಿಟ್ಟು ಎದ್ದೇಳು, ಕ್ರಿಸ್ತನು ನಿನ್ನ ಮೇಲೆ ಪ್ರಕಾಶಿಸುವನು.”

[15] ಆದ್ದರಿಂದ ನೀವು ಹೇಗೆ ಜೀವಿಸುತ್ತಿದ್ದೀರಿ ಎಂಬುದರ ಬಗ್ಗೆ ಬಹು ಎಚ್ಚರಿಕೆಯಿಂದಿರಿ. ಅವಿವೇಕಿಗಳಂತೆ ಜೀವಿಸದೆ ವಿವೇಕಿಗಳಾಗಿ ಜೀವಿಸಿರಿ.

[16] ಈ ದಿನಗಳು ಕೆಟ್ಟವುಗಳಾಗಿವೆ. ಆದ್ದರಿಂದ ನಿಮಗಿರುವ ಪ್ರತಿಯೊಂದು ಅವಕಾಶವನ್ನು ಒಳ್ಳೆಯದಕ್ಕಾಗಿ ಉಪಯೋಗಿಸಿರಿ.

[17] ನಿಮ್ಮ ಜೀವಿತಗಳ ಬಗ್ಗೆ ಮೂರ್ಖರಾಗಿರದೆ ದೇವರ ಚಿತ್ತವೇನೆಂಬುದನ್ನು ತಿಳಿದುಕೊಳ್ಳಿರಿ.

[18] ಮದ್ಯಪಾನಮಾಡಿ ಮತ್ತರಾಗಬೇಡಿ, ಅದು ಪಾಪಕೃತ್ಯಗಳಿಗೆ ನಡೆಸುತ್ತದೆ, ಆದರೆ ಯಾವಾಗಲೂ ಪವಿತ್ರಾತ್ಮಭರಿತರಾಗಿರಿ.

[19] ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಆತ್ಮಿಕ ಹಾಡುಗಳಿಂದಲೂ ಒಬ್ಬರಿಗೊಬ್ಬರು ಮಾತಾಡಿರಿ. ನಿಮ್ಮ ಹೃದಯಗಳಲ್ಲಿ ಪ್ರಭುವಿಗೆ ವಾದ್ಯ ನುಡಿಸುತ್ತಾ ಹಾಡಿರಿ.

[20] ಪ್ರತಿಯೊಂದು ವಿಷಯದಲ್ಲಿಯೂ ತಂದೆಯಾದ ದೇವರಿಗೆ ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಹೆಸರಿನಲ್ಲಿ ಯಾವಾಗಲೂ ಸ್ತೋತ್ರಮಾಡಿರಿ.

[21] ನೀವು ಒಬ್ಬರಿಗೊಬ್ಬರು ವಿಧೇಯರಾಗಿರಬೇಕು. ಏಕೆಂದರೆ ನೀವು ಕ್ರಿಸ್ತನಲ್ಲಿ ಭಯಭಕ್ತಿ ಉಳ್ಳವರಾಗಿರಬೇಕು.

[22] ಸ್ತ್ರೀಯರೇ, ನೀವು ಪ್ರಭುವಿಗೆ ಅಧೀನರಾಗಿರುವಂತೆ ನಿಮ್ಮ ಗಂಡಂದಿರಿಗೂ ಅಧೀನರಾಗಿರಿ.

[23] ಕ್ರಿಸ್ತನು ಸಭೆಗೆ ಶಿರಸ್ಸಾಗಿರುವಂತೆ ಗಂಡನು ಹೆಂಡತಿಗೆ ಶಿರಸ್ಸಾಗಿದ್ದಾನೆ. ಸಭೆಯು ಕ್ರಿಸ್ತನ ದೇಹವಾಗಿದೆ. ಕ್ರಿಸ್ತನು ಆ ದೇಹದ ರಕ್ಷಕನಾಗಿದ್ದಾನೆ.

[24] ಸಭೆಯು ಕ್ರಿಸ್ತನ ಅಧೀನದಲ್ಲಿದೆ. ಇದೇ ನಿಯಮವು ಸ್ತ್ರೀಯರಿಗೆ ಅನ್ವಯಿಸುತ್ತದೆ. ಪ್ರತಿಯೊಂದು ವಿಷಯದಲ್ಲಿಯೂ ಸ್ತ್ರೀಯರು ತಮ್ಮ ಗಂಡಂದಿರಿಗೆ ಅಧೀನರಾಗಿರಬೇಕು.

[25] ಪುರುಷರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದಂತೆ ನೀವು ನಿಮ್ಮ ಹೆಂಡತಿಯರನ್ನು ಪ್ರೀತಿಸಬೇಕು.

[26] ಕ್ರಿಸ್ತನು ಸಭೆಯನ್ನು ಪರಿಶುದ್ಧಗೊಳಿಸುವುದಕ್ಕಾಗಿ ಪ್ರಾಣಕೊಟ್ಟನು. ಸುವಾರ್ತೆಯನ್ನು ತಿಳಿಸುವುದರ ಮೂಲಕ ಜಲಸ್ನಾನವನ್ನು ಮಾಡಿಸಿ ಆತನು ಸಭೆಯನ್ನು ಶುದ್ಧಗೊಳಿಸಿದನು.

[27] ಮಹಿಮಾಪೂರ್ಣಳಾದ ಕನ್ನಿಕೆಯೋ ಎಂಬಂತಿರುವ ಸಭೆಯನ್ನು ತನಗೇ ಕೊಡಬೇಕೆಂದು ಆತನು ಪ್ರಾಣಕೊಟ್ಟನು. ಸಭೆಯು ದೋಷವಿಲ್ಲದೆ ಶುದ್ಧವಾಗಿರಬೇಕೆಂದು ಮತ್ತು ದುಷ್ಟತ್ವವಾಗಲಿ ಪಾಪವಾಗಲಿ ಅಥವಾ ಬೇರೆ ಯಾವುದೇ ತಪ್ಪಾಗಲಿ ಸಭೆಯಲ್ಲಿರಕೂಡದೆಂದು ಆತನು ಪ್ರಾಣಕೊಟ್ಟನು.

[28] ಆದ್ದರಿಂದ ಪುರುಷರು ತಮ್ಮ ಸ್ವಂತ ದೇಹಗಳನ್ನು ಪ್ರೀತಿಸುವಂತೆ ತಮ್ಮ ಹೆಂಡತಿಯರನ್ನು ಪ್ರೀತಿಸಬೇಕು. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸುವವನಾಗಿದ್ದಾನೆ.

[29] ಏಕೆಂದರೆ ಯಾವನೂ ತನ್ನ ದೇಹವನ್ನು ದ್ವೇಷಿಸುವುದಿಲ್ಲ. ಪ್ರತಿಯೊಬ್ಬನು ತನ್ನ ದೇಹವನ್ನು ಪೋಷಿಸಿ ಜಾಗ್ರತೆಯಿಂದ ನೋಡಿಕೊಳ್ಳುತ್ತಾನೆ. ಕ್ರಿಸ್ತನು ಸಭೆಗೋಸ್ಕರ ಮಾಡುವಂಥದ್ದು ಅದೇ ಆಗಿದೆ.

[30] ಏಕೆಂದರೆ ನಾವು ಆತನ ದೇಹದ ಅಂಗಗಳಾಗಿದ್ದೇವೆ.

[31] ಪವಿತ್ರ ಗ್ರಂಥವು ಹೇಳುವಂತೆ, “ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು ಮತ್ತು ಅವರಿಬ್ಬರು ಒಂದೇ ದೇಹವಾಗುವರು.”

[32] ನಾನು ಕ್ರಿಸ್ತನಿಗೂ ಸಭೆಗೂ ಇರುವ ಸಂಬಂಧವನ್ನು ಕುರಿತು ಮಾತಾಡುತ್ತಿದ್ದೇನೆ. ರಹಸ್ಯವಾದ ಈ ಸತ್ಯವು ಬಹು ಮುಖ್ಯವಾದದ್ದು.

[33] ಆದರೆ ನಿಮ್ಮಲ್ಲಿ ಪ್ರತಿ ಪುರುಷನು ತನ್ನನ್ನು ತಾನು ಪ್ರೀತಿಸುವಂತೆ ತನ್ನ ಹೆಂಡತಿಯನ್ನು ಪ್ರೀತಿಸಬೇಕು ಮತ್ತು ಸ್ತ್ರೀಯು ತನ್ನ ಗಂಡನಿಗೆ ಭಯಭಕ್ತಿಯಿಂದರಬೇಕು.

ಎಫೆಸದವರಿಗೆ ಬರೆದ ಪತ್ರ — Chapters