[1] ಯಜಮಾನರೇ, ನಿಮ್ಮ ಸೇವಕರಿಗೆ ನ್ಯಾಯವಾದದ್ದನ್ನೂ ಸರಿಯಾದದ್ದನ್ನೂ ಮಾಡಿರಿ. ಪರಲೋಕದಲ್ಲಿ ನಿಮಗೂ ಒಬ್ಬ ಯಜಮಾನನಿದ್ದಾನೆ ಎಂಬುದು ನಿಮ್ಮ ಜ್ಞಾಪಕದಲ್ಲಿರಲಿ.
[2] ಪ್ರಾರ್ಥನೆಯನ್ನು ತಪ್ಪದೆ ಮಾಡಿರಿ, ನೀವು ಪ್ರಾರ್ಥಿಸುವಾಗ, ಯಾವಾಗಲೂ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿರಿ.
[3] ನಮಗಾಗಿಯೂ ನೀವು ಪ್ರಾರ್ಥಿಸಿ. ಜನರಿಗೆ ದೇವರ ಸಂದೇಶವನ್ನು ತಿಳಿಸಲು ಅನುಕೂಲವಾದ ಸಂದರ್ಭವನ್ನು ಆತನು ನಿಮಗೆ ದಯಪಾಲಿಸುವಂತೆ ಪ್ರಾರ್ಥಿಸಿರಿ. ದೇವರು ಕ್ರಿಸ್ತನ ಬಗ್ಗೆ ತಿಳಿಸಿರುವ ರಹಸ್ಯಸತ್ಯವನ್ನು ನಾವು ಬೋಧಿಸಲಾಗುವಂತೆ ಪ್ರಾರ್ಥಿಸಿರಿ. ನಾನು ಈ ಸತ್ಯವನ್ನು ಬೋಧಿಸಿದರಿಂದಲೇ ಈಗ ಸೆರೆಮನೆಯಲ್ಲಿದ್ದೇನೆ.
[4] ಈ ಸತ್ಯವನ್ನು ನಾನು ಜನರಿಗೆ ಸ್ಪಷ್ಟವಾಗಿಯೂ ಸರಳವಾಗಿಯೂ ತಿಳಿಸಲು ಸಾಧ್ಯವಾಗುವಂತೆ ಪ್ರಾರ್ಥಿಸಿರಿ.
[5] ಅವಿಶ್ವಾಸಿಗಳೊಂದಿಗೆ ವ್ಯವಹರಿಸುವಾಗ ಜ್ಞಾನವುಳ್ಳವರಾಗಿರಿ. ನಿಮ್ಮ ಸಮಯವನ್ನು ಅತ್ಯುತ್ತಮವಾದ ರೀತಿಯಲ್ಲಿ ಬಳಸಿರಿ.
[6] ನೀವು ಮಾತನಾಡುವಾಗಲೆಲ್ಲಾ ದಯೆಯುಳ್ಳವರಾಗಿಯೂ ಜ್ಞಾನವುಳ್ಳವರಾಗಿಯೂ ಮಾತನಾಡಿರಿ. ಆಗ ಪ್ರತಿಯೊಬ್ಬರಿಗೂ ಯೋಗ್ಯವಾದ ರೀತಿಯಲ್ಲಿ ಉತ್ತರಿಸಲು ಶಕ್ತರಾಗುವಿರಿ.
[7] ತುಖಿಕನು ಕ್ರಿಸ್ತನಲ್ಲಿ ನನ್ನ ಪ್ರೀತಿಯ ಸಹೋದರನಾಗಿದ್ದಾನೆ. ನನ್ನೊಡನೆ ಅವನೂ ಪ್ರಭುವಿನಲ್ಲಿ ನಂಬಿಗಸ್ತನಾದ ಸೇವಕನೂ ದಾಸನೂ ಆಗಿದ್ದಾನೆ. ನನಗೆ ಸಂಭವಿಸುತ್ತಿರುವುದನ್ನೆಲ್ಲ ಅವನು ನಿಮಗೆ ತಿಳಿಸುತ್ತಾನೆ.
[8] ಆದಕಾರಣವೇ ನಾನು ಅವನನ್ನು ಕಳುಹಿಸುತ್ತಿದ್ದೇನೆ. ನಾವು ಹೇಗಿರುವೆವು ಎಂಬುದನ್ನು ನೀವು ತಿಳಿದುಕೊಳ್ಳಬೇಕೆಂಬುದು ನನ್ನ ಅಪೇಕ್ಷೆ. ನಿಮ್ಮನ್ನು ಪ್ರೋತ್ಸಾಹಿಸಲು ನಾನು ಅವನನ್ನು ಒನೇಸಿಮನ ಜೊತೆಯಲ್ಲಿ ಕಳುಹಿಸುತ್ತಿದ್ದೇನೆ.
[9] ಒನೇಸಿಮನು ಕ್ರಿಸ್ತನಲ್ಲಿ ನಂಬಿಗಸ್ತನಾದ ಪ್ರೀತಿಯ ಸಹೋದರನಾಗಿದ್ದಾನೆ. ಅವನು ನಿಮ್ಮ ಊರಿನವನೇ. ಇಲ್ಲಿ ಸಂಭವಿಸಿದ್ದೆಲ್ಲವನ್ನು ಅವರು ನಿಮಗೆ ತಿಳಿಸುತ್ತಾರೆ.
[10] ಅರಿಸ್ತಾರ್ಕನು ವಂದನೆ ತಿಳಿಸಿದ್ದಾನೆ. ಅವನೂ ನನ್ನೊಡನೆ ಸೆರೆಯಲ್ಲಿದ್ದಾನೆ. ಬಾರ್ನಬನಿಗೆ ಸೋದರ ಬಾಂಧ್ಯವ್ಯವುಳ್ಳ ಮಾರ್ಕನೂ ವಂದನೆಯನ್ನು ಹೇಳುತ್ತಾನೆ. (ಮಾರ್ಕನ ಬಗ್ಗೆ ನೀವು ಏನು ಮಾಡಬೇಕೆಂಬುದನ್ನು ನಾನು ಈಗಾಗಲೇ ಹೇಳಿದ್ದೇನೆ. ಅವನು ಬಂದರೆ ಅವನನ್ನು ಸ್ವಾಗತಿಸಿರಿ.)
[11] ಯೇಸುವು (ಯುಸ್ತನೆಂದೂ ಅವನನ್ನು ಕರೆಯುತ್ತಾರೆ.) ಸಹ ವಂದನೆಯನ್ನು ಹೇಳುತ್ತಾನೆ. ಯೆಹೂದ್ಯರಲ್ಲಿ ವಿಶ್ವಾಸಿಗಳಾಗಿರುವ ಇವರು ಮಾತ್ರವೇ ದೇವರ ರಾಜ್ಯಕ್ಕಾಗಿ ನನ್ನ ಜೊತೆ ಕೆಲಸ ಮಾಡುತ್ತಿದ್ದಾರೆ. ಇವರೇ ನನಗೆ ಆದರಣೆಯಾಗಿದ್ದಾರೆ.
[12] ಎಪಫ್ರನು ಸಹ ವಂದನೆ ತಿಳಿಸಿದ್ದಾನೆ. ಅವನು ಯೇಸು ಕ್ರಿಸ್ತನ ಸೇವಕನು. ಅವನು ನಿಮ್ಮವರಲ್ಲಿ ಒಬ್ಬನಾಗಿದ್ದಾನೆ. ಅವನು ಯಾವಾಗಲೂ ನಿಮಗಾಗಿ ಪ್ರಾರ್ಥಿಸುತ್ತಾನೆ. ನೀವು ಆತ್ಮಿಕತೆಯಲ್ಲಿ ಬೆಳೆಯುತ್ತಾ ಸಂಪೂರ್ಣತೆಯನ್ನು ಮುಟ್ಟಬೇಕೆಂತಲೂ ದೇವರ ಚಿತ್ತವನ್ನು ಪೂರ್ಣವಾಗಿ ತಿಳಿದುಕೊಂಡು ದೃಢವಾಗಿರಬೇಕೆಂತಲೂ ಪ್ರಾರ್ಥಿಸುತ್ತಾನೆ.
[13] ಅವನು ನಿಮಗೋಸ್ಕರ, ಲವೊದಿಕೀಯ ಮತ್ತು ಹಿರೆಯಾ ಪೊಲಿಯದ ಜನರಿಗೋಸ್ಕರ ಬಹಳ ಪ್ರಯಾಸಪಟ್ಟು ಕೆಲಸ ಮಾಡಿದನೆಂಬುದು ನನಗೆ ತಿಳಿದಿದೆ.
[14] ದೇಮನು ಮತ್ತು ಪ್ರೀತಿಯ ಸ್ನೇಹಿತನಾದ ವೈದ್ಯ ಲೂಕನು ವಂದನೆಗಳನ್ನು ಹೇಳುತ್ತಾರೆ.
[15] ಲವೊದಿಕೀಯದಲ್ಲಿರುವ ಸಹೋದರ ಸಹೋದರಿಯರಿಗೆ ವಂದನೆಗಳನ್ನು ತಿಳಿಸಿರಿ. ನುಂಫಳಿಗೂ ಅವಳ ಮನೆಯಲ್ಲಿ ಸೇರುವ ಸಭೆಯವರಿಗೂ ವಂದನೆಗಳನ್ನು ತಿಳಿಸಿರಿ.
[16] ಈ ಪತ್ರವನ್ನು ಓದಿದ ನಂತರ ಲವೊದಿಕೀಯದ ಸಭೆಯವರಿಗೂ ಓದಲು ಕೊಡಿರಿ. ನಾನು ಲವೊದಿಕೀಯದವರಿಗೆ ಬರೆದಿರುವ ಪತ್ರವನ್ನು ನೀವೂ ಓದಿರಿ.
[17] ಅರ್ಖಿಪ್ಪನಿಗೆ, “ಪ್ರಭುವು ನಿನಗೆ ವಹಿಸಿರುವ ಸೇವೆಯನ್ನು ಖಂಡಿತವಾಗಿ ನೆರವೇರಿಸಬೇಕು” ಎಂದು ತಿಳಿಸಿರಿ.
[18] ನಿಮಗೆ ನನ್ನ ವಂದನೆಗಳು. ಪೌಲನೆಂಬ ನಾನು ನನ್ನ ಸ್ವಂತ ಕೈಯಿಂದ ಇದನ್ನು ಬರೆದಿದ್ದೇನೆ. ಸೆರೆಮನೆಯಲ್ಲಿರುವ ನನ್ನನ್ನು ಜ್ಞಾಪಿಸಿಕೊಳ್ಳಿರಿ. ದೇವರ ಕೃಪೆಯು ನಿಮ್ಮೊಂದಿಗಿರಲಿ.