Skip to content
Opens in a new window
Listen to this chapter • 5:14

[1] ನೀವು ಕ್ರಿಸ್ತನ ಜೊತೆಯಲ್ಲಿ ಜೀವಂತವಾಗಿ ಎದ್ದುಬಂದಿರುವುದರಿಂದ ಪರಲೋಕದವುಗಳನ್ನು ಪಡೆಯಲು ಪ್ರಯತ್ನಿಸಿರಿ. ಕ್ರಿಸ್ತ ಯೇಸು ಪರಲೋಕದಲ್ಲಿ ದೇವರ ಬಲಗಡೆ ಆಸನಾರೂಢನಾಗಿದ್ದಾನೆ.

[2] ಪರಲೋಕದವುಗಳನ್ನು ಮಾತ್ರ ಆಲೋಚಿಸಿ, ಭೂಲೋಕದವುಗಳನ್ನು ಆಲೋಚಿಸಬೇಡಿ.

[3] ನಿಮ್ಮ ಹಳೆಯ ಸ್ವಭಾವ ಸತ್ತುಹೋಗಿದೆ, ನಿಮ್ಮ ಹೊಸ ಜೀವವು ಕ್ರಿಸ್ತನೊಂದಿಗೆ ದೇವರಲ್ಲಿದೆ.

[4] ಕ್ರಿಸ್ತನೇ ನಿಮ್ಮ ಜೀವ, ಆತನು ಮರಳಿ ಪ್ರತ್ಯಕ್ಷನಾದಾಗ, ನೀವೂ ಆತನ ಪ್ರಭಾವದೊಂದಿಗೆ ಪ್ರತ್ಯಕ್ಷರಾಗುವಿರಿ.

[5] ಆದ್ದರಿಂದ ದುಷ್ಕೃತ್ಯಗಳಾದ ಲೈಂಗಿಕ ಪಾಪ, ದುರಾಚಾರ, ಕಾಮಾಭಿಲಾಷೆ, ದುರಾಶೆ ಮತ್ತು ಸ್ವಾರ್ಥತೆಗಳನ್ನು ನಿಮ್ಮ ಜೀವಿತದಿಂದ ತೆಗೆದುಹಾಕಿರಿ. ಸ್ವಾರ್ಥವು ವಿಗ್ರಹಾರಾಧನೆಗೆ ಸಮವಾಗಿದೆ.

[6] ಇವು ದೇವರನ್ನು ಕೋಪಗೊಳಿಸುತ್ತವೆ.

[7] ಪೂರ್ವಕಾಲದ ನಿಮ್ಮ ದುಷ್ಟಜೀವನದಲ್ಲಿ ಈ ಕಾರ್ಯಗಳನ್ನೆಲ್ಲ ನೀವು ಮಾಡಿರುವಿರಿ.

[8] ಈಗಲಾದರೋ ಕೋಪ, ಕ್ರೋಧ, ಮತ್ಸರ, ಚುಚ್ಚು ಮಾತು ಮತ್ತು ದುರ್ಭಾಷೆಗಳನ್ನು ನಿಮ್ಮ ಜೀವಿತದಿಂದ ತೆಗೆದುಹಾಕಿರಿ.

[9] ಒಬ್ಬರಿಗೊಬ್ಬರು ಸುಳ್ಳು ಹೇಳಬೇಡಿ. ಏಕೆಂದರೆ ನೀವು ನಿಮ್ಮ ಹಳೆಯ ಪಾಪಪೂರಿತ ಜೀವನವನ್ನು ಮತ್ತು ನಿಮ್ಮ ಮೊದಲಿನ ಕಾರ್ಯಗಳನ್ನು ಬಿಟ್ಟುಬಿಟ್ಟಿದ್ದೀರಿ.

[10] ನೀವು ಹೊಸ ಜೀವನವನ್ನು ಆರಂಭಿಸಿರುವಿರಿ. ಈ ಹೊಸ ಜೀವನದಲ್ಲಿ ನೀವು ನಿಮ್ಮನ್ನು ಸೃಷ್ಟಿಸಿದಾತನ ಹೋಲಿಕೆಯ ಮೇರೆಗೆ ನೂತನರಾಗುತ್ತಿದ್ದೀರಿ. ದೇವರ ಬಗ್ಗೆ ನಿಜವಾದ ತಿಳುವಳಿಕೆಯನ್ನು ಈ ಹೊಸ ಜೀವನ ಕೊಡುತ್ತದೆ.

[11] ಈ ಹೊಸ ಜೀವನದಲ್ಲಿ ಗ್ರೀಕರ ಮತ್ತು ಯೆಹೂದ್ಯರ ಮಧ್ಯದಲ್ಲಾಗಲಿ, ಸುನ್ನತಿಯನ್ನು ಮಾಡಿಸಿಕೊಂಡಿರುವ ಮತ್ತು ಮಾಡಿಸಿಕೊಂಡಿಲ್ಲದ ಜನರ ಮಧ್ಯದಲ್ಲಾಗಲಿ ಪರದೇಶದವರ ಅಥವಾ ಅನಾಗರೀಕರ ಮಧ್ಯದಲ್ಲಾಗಲಿ, ಗುಲಾಮರ ಅಥವಾ ಸ್ವತಂತ್ರರಾದ ಜನರ ಮಧ್ಯದಲ್ಲಾಗಲಿ ಯಾವ ಭೇದವೂ ಇಲ್ಲ. ಎಲ್ಲಾ ವಿಶ್ವಾಸಿಗಳಲ್ಲಿಯೂ ಕ್ರಿಸ್ತನಿದ್ದಾನೆ. ಅವರಿಗೆ ಕ್ರಿಸ್ತನೊಬ್ಬನೇ ಅಗತ್ಯ.

[12] ದೇವರು ನಿಮ್ಮನ್ನು ಆರಿಸಿಕೊಂಡಿದ್ದಾನೆ ಮತ್ತು ನಿಮ್ಮನ್ನು ತನ್ನ ಪವಿತ್ರ ಜನರನ್ನಾಗಿಸಿದ್ದಾನೆ. ಆತನು ನಿಮ್ಮನ್ನು ಪ್ರೀತಿಸುತ್ತಾನೆ. ಹೀಗಿರಲಾಗಿ ಕನಿಕರ, ದಯೆ, ದೀನತೆ, ವಿನಯಶೀಲತೆ, ಶಾಂತಿ, ಸಹನೆ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ.

[13] ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ. ಬೇರೆಯವರ ಮೇಲೆ ಹೇಳುವಂಥ ದೂರುಗಳು ನಿಮ್ಮಲ್ಲಿದ್ದರೂ ಕ್ಷಮಿಸಿಬಿಡಿರಿ. ಪ್ರಭುವು ನಿಮ್ಮನ್ನು ಕ್ಷಮಿಸಿದ್ದರಿಂದ ನೀವೂ ಇತರರನ್ನು ಕ್ಷಮಿಸಿರಿ.

[14] ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮಲ್ಲಿ ಪ್ರೀತಿಯಿರಲಿ. ಪ್ರೀತಿಯು ನಿಮ್ಮನ್ನೆಲ್ಲರನ್ನೂ ಸಂಪೂರ್ಣವಾದ ಒಗ್ಗಟ್ಟಿನಲ್ಲಿರಿಸುವುದು.

[15] ಕ್ರಿಸ್ತನು ನೀಡುವ ಶಾಂತಿಯು ನಿಮ್ಮ ಆಲೋಚನಗಳನ್ನೆಲ್ಲ ತನ್ನ ಹತೋಟಿಯಲ್ಲಿಟ್ಟುಕೊಂಡಿರಲಿ. ನೀವೆಲ್ಲರೂ ಒಂದೇ ದೇಹಕ್ಕೆ ಸೇರಿದವರಾದ್ದರಿಂದ ಶಾಂತಿಯಿಂದಿರಲು ಕರೆಯಲ್ಪಟ್ಟಿದ್ದೀರಿ. ಯಾವಾಗಲು ಕೃತಜ್ಞರಾಗಿರಿ.

[16] ಕ್ರಿಸ್ತನ ಉಪದೇಶವು ನಿಮ್ಮ ಅಂತರಂಗದಲ್ಲಿ ಸಮೃದ್ಧವಾಗಿ ನೆಲಸಿರಲಿ. ನೀವು ದೇವರಿಂದ ಕಲಿತುಕೊಂಡದ್ದನ್ನು ಉಪದೇಶಿಸುವುದಕ್ಕೂ ಒಬ್ಬರನ್ನೊಬ್ಬರು ಬಲಪಡಿಸುವುದಕ್ಕೂ ಉಪಯೋಗಿಸಿರಿ. ನಿಮ್ಮ ಹೃದಯದಲ್ಲಿ ದೇವರಿಗೆ ಕೃತಜ್ಞರಾಗಿದ್ದು ಹಾಡುಗಳನ್ನು, ಕೀರ್ತನೆಗಳನ್ನು, ಸಂಗೀತಗಳನ್ನು ಹಾಡಿರಿ.

[17] ನೀವು ನುಡಿಯಿಂದಾಗಲಿ, ನಡೆಯಿಂದಾಗಲಿ ಏನು ಮಾಡಿದರೂ ಅದೆಲ್ಲವನ್ನೂ ನಿಮ್ಮ ಪ್ರಭುವಾದ ಯೇಸುವಿಗಾಗಿ ಮಾಡಿರಿ. ನೀವು ಏನು ಮಾಡಿದರೂ ಯೇಸುವಿನ ಮೂಲಕ ತಂದೆಯಾದ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿರಿ.

[18] ಸ್ತ್ರೀಯರೇ, ನಿಮ್ಮ ಗಂಡಂದಿರಿಗೆ ವಿಧೇಯರಾಗಿರಿ. ಇದು ಪ್ರಭುವಿನಲ್ಲಿ ನೀವು ಮಾಡುವ ಯೋಗ್ಯ ಕಾರ್ಯವಾಗಿದೆ.

[19] ಪುರುಷರೇ, ನಿಮ್ಮ ಪತ್ನಿಯರನ್ನು ಪ್ರೀತಿಸಿ, ಅವರೊಡನೆ ಸಾತ್ವಿಕರಾಗಿರಿ.

[20] ಮಕ್ಕಳೇ, ನಿಮ್ಮ ತಂದೆತಾಯಿಗಳಿಗೆ ಎಲ್ಲಾ ವಿಷಯಗಳಲ್ಲಿಯೂ ವಿಧೇಯರಾಗಿರಿ. ಇದು ಪ್ರಭುವಿಗೆ ಸಂತೋಷವನ್ನು ಉಂಟುಮಾಡುವುದು.

[21] ತಂದೆಗಳೇ, ನಿಮ್ಮ ಮಕ್ಕಳಿಗೆ ಕಿರುಕುಳ ಕೊಡಬೇಡಿ. ಇಲ್ಲವಾದರೆ ಅವರು ಕುಂದಿಹೋಗುವರು.

[22] ಸೇವಕರೇ, ಎಲ್ಲಾ ಕಾರ್ಯಗಳಲ್ಲಿಯೂ ನಿಮ್ಮ ಯಜಮಾನರಿಗೆ ವಿಧೇಯರಾಗಿರಿ. ಅವರ ಮೆಚ್ಚಿಕೆಯನ್ನು ಗಳಿಸುವುದಕ್ಕಾಗಿ ಅವರ ಕಣ್ಣೆದುರಿನಲ್ಲಿ ಮಾತ್ರ ಸೇವೆ ಮಾಡದಿರಿ. ನೀವು ಪ್ರಭುವಿಗೆ ಭಯಪಡುವುದರಿಂದ ನಿಮ್ಮ ಯಜಮಾನರಿಗೆ ಯಥಾರ್ಥವಾಗಿ ಸೇವೆ ಮಾಡಿರಿ.

[23] ಎಲ್ಲಾ ಕಾರ್ಯಗಳನ್ನು ನಿಮ್ಮಿಂದಾದಷ್ಟು ಅತ್ಯುತ್ತಮವಾಗಿಯೇ ಮಾಡಿರಿ. ಯಾವುದೇ ಕಾರ್ಯವನ್ನಾಗಲಿ ಜನರಿಗಾಗಿ ಮಾಡದೆ ಪ್ರಭುವಿಗಾಗಿ ಮಾಡಿರಿ.

[24] ಪ್ರಭುವಿನಿಂದಲೇ ನಿಮಗೆ ಪ್ರತಿಫಲ ದೊರೆಯುತ್ತದೆ ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಂಡಿರಿ. ಆತನು ತನ್ನ ಜನರಿಗೆ ಮಾಡಿದ ವಾಗ್ದಾನವು ನಿಮ್ಮ ನೆನಪಿನಲ್ಲಿರಲಿ.

[25] ಅನ್ಯಾಯ ಮಾಡುವವನು ಅದಕ್ಕೆ ತಕ್ಕ ಶಿಕ್ಷೆಯನ್ನು ಪಡೆಯುವನು. ಪ್ರಭುವಿನಲ್ಲಿ ಪಕ್ಷಪಾತವಿಲ್ಲ.

ಕೊಲೊಸ್ಸೆಯವರಿಗೆ ಬರೆದ ಪತ್ರ — Chapters