Skip to content
Opens in a new window
Listen to this chapter • 4:28

[1] ನಾವು ನಮ್ಮ ವಿಷಯವಾಗಿ ಮತ್ತೆ ಹೊಗಳಿಕೊಳ್ಳಲು ಆರಂಭಿಸಿದ್ದೇವೆಯೇ? ಇತರ ಕೆಲವು ಜನರಿಗೆ ಬೇಕಾಗುವಂತೆ ನಿಮ್ಮ ಬಳಿಗೆ ಬರಲು ನನಗೆ ಯೋಗ್ಯತಾಪತ್ರಗಳನ್ನು ತೆಗೆದು ಕೊಳ್ಳಬೇಕಾಗಿದೆಯೋ? ಅಥವಾ ಬೇರೆಡೆಗೆ ಹೋಗುವಾಗ ನಿಮ್ಮಿಂದ ಯೋಗ್ಯತಾ ಪತ್ರಗಳನ್ನು ತೆಗೆದುಕೊಳ್ಳಬೇಕಾಗಿದೆಯೋ?

[2] ಸ್ವತಃ ನೀವೇ ನಮಗೆ ಯೋಗ್ಯತಾಪತ್ರವಾಗಿದ್ದೀರಿ. ಆ ಪತ್ರಗಳು ನಮ್ಮ ಹೃದಯಗಳಲ್ಲಿ ಬರೆಯಲ್ಪಟ್ಟಿವೆ. ಆ ಪತ್ರವನ್ನು ಎಲ್ಲರೂ ಬಲ್ಲರು, ಎಲ್ಲರೂ ಓದುತ್ತಾರೆ.

[3] ಕ್ರಿಸ್ತನು ನಮ್ಮ ಮೂಲಕವಾಗಿ ಕಳುಹಿಸಿದ ಕ್ರಿಸ್ತನ ಪತ್ರ ನೀವಾಗಿದ್ದೀರಿ. ಆ ಪತ್ರವನ್ನು ಬರೆದಿರುವುದು ಶಾಯಿಯಿಂದಲ್ಲ, ಜೀವಸ್ವರೂಪನಾದ ದೇವರ ಆತ್ಮನಿಂದ. ಇದನ್ನು ಕಲ್ಲುಹಲಿಗೆಗಳ ಮೇಲೆ ಬರೆದಿಲ್ಲ. ಇದನ್ನು ಮಾನವ ಹೃದಯಗಳ ಮೇಲೆ ಬರೆಯಲಾಗಿದೆ.

[4] ನಾವು ಈ ಸಂಗತಿಗಳನ್ನು ಹೇಳಬಲ್ಲೆವು; ಏಕೆಂದರೆ ನಾವು ಕ್ರಿಸ್ತನ ಮೂಲಕ ದೇವರ ಸನ್ನಿಧಿಯಲ್ಲಿ ಭರವಸದಿಂದಿದ್ದೇವೆ.

[5] ನಮ್ಮ ಸ್ವಂತ ಶಕ್ತಿಯಿಂದಲೇ ನಾವು ಯಾವ ಒಳ್ಳೆಯದನ್ನಾದರೂ ಮಾಡಬಲ್ಲೆವೆಂದು ನಾನು ಹೇಳುತ್ತಿಲ್ಲ. ನಾವು ಮಾಡುವ ಕಾರ್ಯಗಳನ್ನು ದೇವರು ಒದಗಿಸಿದ ಸಾಮರ್ಥ್ಯದಿಂದಲೇ ಮಾಡುತ್ತೇವೆ.

[6] ದೇವರು ತನ್ನ ಜನರೊಂದಿಗೆ ಮಾಡಿಕೊಂಡ ಹೊಸ ಒಡಂಬಡಿಕೆಗೆ ಸೇವಕರಾಗಿರುವ ಸಾಮರ್ಥ್ಯವನ್ನು ದೇವರೇ ನಮಗೆ ಕೊಟ್ಟನು. ಈ ಹೊಸ ಒಡಂಬಡಿಕೆಯು ಲಿಖಿತ ರೂಪವಾದ ಧರ್ಮಶಾಸ್ತ್ರವಲ್ಲ. ಇದು ಪವಿತ್ರಾತ್ಮನದು. ಲಿಖಿತ ರೂಪವಾದ ಧರ್ಮಶಾಸ್ತ್ರವು ಮರಣವನ್ನು ತರುತ್ತದೆ, ಆದರೆ ಪವಿತ್ರಾತ್ಮನು ಜೀವವನ್ನು ಕೊಡುತ್ತಾನೆ.

[7] ಮರಣವನ್ನು ವಿಧಿಸುವ ಸೇವೆಯು (ಧರ್ಮಶಾಸ್ತ್ರ) ಕಲ್ಲಿನ ಹಲಗೆಗಳ ಮೇಲೆ ಅಕ್ಷರಗಳಲ್ಲಿ ಬರೆಯಲ್ಪಟ್ಟಿತ್ತು. ಅದು ದೇವರ ಮಹಿಮೆಯೊಂದಿಗೆ ಬಂದಿತು. ಮೋಶೆಯ ಮುಖವು ಪ್ರಕಾಶಮಾನವಾಗಿ ಹೊಳೆಯುತ್ತಿದ್ದುದರಿಂದ ಇಸ್ರೇಲರು ಅವನ ಮುಖವನ್ನು ನೋಡಲಾರದೆ ಹೋದರು. ಆ ಬಳಿಕ ಆ ಮಹಿಮೆಯು ಕುಂದಿಹೋಯಿತು.

[8] ಹೀಗಿರಲಾಗಿ ಪವಿತ್ರಾತ್ಮನ ಸಂಬಂಧವಾದ ಸೇವೆಯು ಇನ್ನೂ ಹೆಚ್ಚಿನ ಮಹಿಮೆಯನ್ನು ಹೊಂದಿದೆ.

[9] ಇದರರ್ಥವೇನೆಂದರೆ: ಆ ಸೇವೆಯು (ಧರ್ಮಶಾಸ್ತ್ರ) ಜನರನ್ನು ಅಪರಾಧಿಗಳೆಂದು ತೀರ್ಪು ನೀಡಿತು, ಆದರೆ ಅದು ಮಹಿಮೆಯನ್ನು ಹೊಂದಿತ್ತು. ಹೀಗಿರಲಾಗಿ, ನೀತಿಗೆ ಸಾಧನವಾಗಿರುವ ಸೇವೆಯು ಇನ್ನೂ ಹೆಚ್ಚಿನ ಮಹಿಮೆಯನ್ನು ಉಂಟುಮಾಡುವುದು ಎಷ್ಟೋ ನಿಶ್ಚಯವಾಗಿದೆ.

[10] ಆ ಹಳೆ ಸೇವೆಯು ಮಹಿಮೆಯನ್ನು ಹೊಂದಿತ್ತು. ಆದರೆ ಅದು ಹೊಸ ಸೇವೆಯ ಎದುರಿನಲ್ಲಿ ಮಹಿಮೆಯಿಲ್ಲದ್ದಾಯಿತು.

[11] ಲಯಗೊಂಡ ಆ ಸೇವೆಯು ಮಹಿಮೆಯೊಂದಿಗೆ ಬಂದಿರುವುದಾಗಿದ್ದರೆ, ಎಂದೆಂದಿಗೂ ಮುಂದುವರಿಯುವ ಈ ಸೇವೆಯು ಇನ್ನೂ ಹೆಚ್ಚಿನ ಮಹಿಮೆಯನ್ನು ಹೊಂದಿದೆ.

[12] ನಮಗೆ ಈ ನಿರೀಕ್ಷೆ ಇರುವುದರಿಂದ ನಾವು ಬಹಳ ಧೈರ್ಯವಾಗಿದ್ದೇವೆ.

[13] ನಾವು ಮೋಶೆಯಂತಿಲ್ಲ. ಕುಂದಿ ಹೋಗುವ ಮಹಿಮೆಯು ಅಂತ್ಯಗೊಳ್ಳುವುದನ್ನು ಇಸ್ರೇಲರು ಕಾಣದಂತೆ ಮೋಶೆಯು ತನ್ನ ಮುಖಕ್ಕೆ ಮುಸುಕು ಹಾಕಿಕೊಂಡನು.

[14] ಆದರೆ ಅವರ ಬುದ್ಧಿಗೆ ಮಂಕು ಕವಿದಿದ್ದರಿಂದ ಅವರು ಅರ್ಥಮಾಡಿಕೊಳ್ಳಲಾಗಲಿಲ್ಲ. ಅವರು ಹಳೆ ಒಡಂಬಡಿಕೆಯನ್ನು ಓದುವಾಗ ಇಂದಿಗೂ ಅದೇ ಮುಸುಕು ಅರ್ಥವನ್ನು ಮರೆಮಾಡುತ್ತದೆ. ಆ ಮುಸುಕನ್ನು ತೆಗೆದು ಹಾಕಲಿಲ್ಲ. ಏಕೆಂದರೆ ಕ್ರಿಸ್ತನ ಮೂಲಕವಾಗಿ ಮಾತ್ರ ಅದು ತೆಗೆದುಹಾಕಲ್ಪಡುತ್ತದೆ.

[15] ಆದರೆ ಇಂದಿಗೂ ಸಹ, ಮೋಶೆಯ ಧರ್ಮಶಾಸ್ತ್ರವನ್ನು ಓದುವಾಗ, ಅವರ ಮನಸ್ಸುಗಳ ಮೇಲೆ ಮುಸುಕು ಇರುತ್ತದೆ.

[16] ಆದರೆ ಒಬ್ಬ ವ್ಯಕ್ತಿಯು ಮಾರ್ಪಾಟಾಗಿ ಪ್ರಭುವನ್ನು ಅನುಸರಿಸುವಾಗ ಆ ಮುಸುಕು ತೆಗೆಯಲ್ಪಡುವುದು.

[17] ಆ ಪ್ರಭುವು ಪವಿತ್ರಾತ್ಮನೇ. ಎಲ್ಲಿ ಪ್ರಭುವಿನ ಆತ್ಮನು ಇರುತ್ತಾನೋ ಅಲ್ಲಿ ಸ್ವತಂತ್ರವಿರುತ್ತದೆ.

[18] ನಮ್ಮ ಮುಖಗಳು ಮುಸುಕಿನಿಂದ ಮುಚ್ಚಲ್ಪಟ್ಟಿಲ್ಲ. ನಾವೆಲ್ಲರೂ ಮುಸುಕು ತೆರೆದ ಮುಖವುಳ್ಳವರಾಗಿದ್ದು ಪ್ರಭುವಿನ ಮಹಿಮೆಯನ್ನು ಪ್ರತಿಬಿಂಬಿಸುವ ಕನ್ನಡಿಯಂತಿದ್ದೇವೆ. ಪ್ರಭುವಿನಿಂದ ಹೊರಹೊಮ್ಮುವ ಮಹಿಮೆಯು ನಮ್ಮನ್ನು ಅಧಿಕಾಧಿಕವಾಗಿ ಮಾರ್ಪಡಿಸಿ ಆತನನ್ನೇ ಹೋಲುವಂತೆ ಮಾಡುತ್ತದೆ. ಇದೆಲ್ಲಾ ದೇವರಾತ್ಮನಾಗಿರುವ ಪ್ರಭುವಿನ ಕಾರ್ಯವೇ.

ಕೊರಿಂಥದವರಿಗೆ ಬರೆದ ಎರಡನೆ ಪತ್ರ — Chapters