[1] ಆದ್ದರಿಂದ ನಾನು ನಿಮಗೆ ನೀಡಲಿರುವ ಮುಂದಿನ ಸಂದರ್ಶನವು ನಿಮಗೆ ದುಃಖವನ್ನು ಉಂಟುಮಾಡುವ ಸಂದರ್ಶನವಾಗಿರಬಾರದೆಂದು ನಿರ್ಧರಿಸಿದೆನು.
[2] ನಾನು ನಿಮ್ಮನ್ನು ದುಃಖಗೊಳಿಸಿದರೆ, ನನ್ನನ್ನು ಸಂತೋಷಗೊಳಿಸುವವರು ಯಾರು? ನನ್ನಿಂದ ದುಃಖಿತರಾದ ನೀವು ಮಾತ್ರ ನನ್ನನ್ನು ಸಂತೋಷಪಡಿಸಬಲ್ಲಿರಿ.
[3] ನಾನು ನಿಮ್ಮ ಬಳಿಗೆ ಬಂದಾಗ, ನನ್ನನ್ನು ಸಂತೋಷಗೊಳಿಸಬೇಕಾದ ಜನರಿಂದಲೇ ನನಗೆ ದುಃಖವಾಗಬಾರದೆಂಬ ಉದ್ದೇಶದಿಂದ ನಾನು ನಿಮಗೆ ಈ ಪತ್ರವನ್ನು ಬರೆದೆನು. ನೀವೆಲ್ಲರೂ ನನ್ನ ಆನಂದದಲ್ಲಿ ಪಾಲುಗಾರರಾಗುತ್ತೀರಿ ಎಂಬ ಭರವಸೆ ನನಗಿತ್ತು.
[4] ನಾನು ಮೊದಲೊಮ್ಮೆ ನಿಮಗೆ ಬರೆದಾಗ, ನನ್ನ ಹೃದಯವು ಬಹಳ ಗಲಿಬಿಲಿಗೊಂಡಿತ್ತು ಮತ್ತು ದುಃಖಗೊಂಡಿತ್ತು. ನಾನು ಕಣ್ಣೀರಿಡುತ್ತಾ ನಿಮಗೆ ಬರೆದದ್ದು ನಿಮ್ಮನ್ನು ದುಃಖಗೊಳಿಸುವುದಕ್ಕಲ್ಲ, ನಿಮ್ಮನ್ನು ಎಷ್ಟು ಪ್ರೀತಿಸುತ್ತೇನೆಂಬುದನ್ನು ನೀವು ತಿಳಿದುಕೊಳ್ಳಬೇಕೆಂದಷ್ಟೆ.
[5] ನಿಮ್ಮ ಸಭೆಯ ಒಬ್ಬನು ದುಃಖವನ್ನು ಉಂಟುಮಾಡಿದ್ದು ನನಗಲ್ಲ. ಒಂದಲ್ಲ ಒಂದು ರೀತಿಯಲ್ಲಿ ಅವನು ನಿಮ್ಮೊಲ್ಲರಿಗೂ ದುಃಖವನ್ನು ಉಂಟುಮಾಡಿದ್ದಾನೆ. (ಅದು ತನ್ನ ವಾಸ್ತವ ಸ್ಥಿತಿಗಿಂತ ಹೆಚ್ಚು ಕೆಟ್ಟದ್ದಾಗಿ ಕಾಣುವಂತೆ ಮಾಡಲು ನನಗೆ ಇಷ್ಟವಿಲ್ಲ.)
[6] ನಿಮ್ಮ ಸಭೆಯ ಬಹುಮಂದಿ ಅವನಿಗೆ ವಿಧಿಸಿರುವ ಶಿಕ್ಷೆಯೇ ಸಾಕಾಗಿದೆ.
[7] ಆದರೆ ಈಗ ನೀವು ಅವನನ್ನು ಕ್ಷಮಿಸಬೇಕು ಮತ್ತು ಸಂತೈಸಬೇಕು. ಆಗ ಅವನು ಅತೀವ ದುಃಖದಿಂದ ಸಂಪೂರ್ಣವಾಗಿ ಸೋತುಹೋಗಲು ಸಾಧ್ಯವಾಗುವುದಿಲ್ಲ.
[8] ಆದ್ದರಿಂದ ನೀವು ಅವನನ್ನು ಪ್ರೀತಿಸುತ್ತೀರೆಂಬುದನ್ನು ಅವನಿಗೆ ತೋರಿಸಿಕೊಡಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
[9] ನೀವು ಎಲ್ಲಾ ವಿಷಯಗಳಲ್ಲಿ ವಿಧೇಯರಾಗಿದ್ದೀರೋ ಇಲ್ಲವೋ ಎಂಬುದನ್ನು ಪರೀಕ್ಷಿಸಿ ತಿಳಿದುಕೊಳ್ಳಲು ನಿಮಗೆ ಬರೆದೆನು.
[10] ನೀವು ಒಬ್ಬ ವ್ಯಕ್ತಿಯನ್ನು ಕ್ಷಮಿಸಿದರೆ, ನಾನೂ ಆ ವ್ಯಕ್ತಿಯನ್ನು ಕ್ಷಮಿಸುತ್ತೇನೆ. ನಾನು ಕ್ಷಮಿಸಿದ್ದನ್ನು ನಿಮಗೋಸ್ಕರವಾಗಿಯೇ ಕ್ಷಮಿಸಿದ್ದೇನೆ. ನಾನು ಕ್ಷಮಿಸಬೇಕಾದದ್ದನ್ನೆಲ್ಲ ಕ್ಷಮಿಸಿದ್ದೇನೆ ಮತ್ತು ಕ್ರಿಸ್ತನೇ ನನ್ನೊಂದಿಗೆ ಇದ್ದನು.
[11] ಸೈತಾನನು ನಮ್ಮಿಂದ ಯಾವುದನ್ನೂ ಕಸಿದುಕೊಳ್ಳಬಾರದೆಂದು ನಾನು ಹೀಗೆ ಮಾಡಿದೆನು. ಸೈತಾನನ ಯೋಜನೆಗಳು ಯಾವುವೆಂದು ನಮಗೆ ಚೆನ್ನಾಗಿ ತಿಳಿದಿವೆ.
[12] ನಾನು ಕ್ರಿಸ್ತನ ಸುವಾರ್ತೆಯನ್ನು ತಿಳಿಸುವುದಕ್ಕಾಗಿ ತ್ರೋವಕ್ಕೆ ಹೋದೆನು. ಪ್ರಭುವು ಅಲ್ಲಿ ನನಗೆ ಒಳ್ಳೆಯ ಅವಕಾಶವನ್ನು ಕೊಟ್ಟನು.
[13] ಆದರೆ ನನ್ನ ಸಹೋದರನಾದ ತೀತನನ್ನು ನಾನು ಅಲ್ಲಿ ಕಾಣಲಿಲ್ಲವಾದ್ದರಿಂದ ನನಗೆ ಸಮಾಧಾನವಿರಲಿಲ್ಲ. ಆದ್ದರಿಂದ ನಾನು ಅವರನ್ನು ವಂದಿಸಿ ಮಕೆದೋನಿಯಕ್ಕೆ ಹೊರಟೆನು.
[14] ದೇವರಿಗೆ ಸ್ತೋತ್ರವಾಗಲಿ. ದೇವರು ನಮ್ಮನ್ನು ಕ್ರಿಸ್ತನ ಮೂಲಕ ಯಾವಾಗಲೂ ವಿಜಯೋತ್ಸವದತ್ತ ನಡೆಸುತ್ತಿದ್ದಾನೆ. ದೇವರು ತನ್ನ ಜ್ಞಾನವೆಂಬ ಪರಿಮಳವನ್ನು ಎಲ್ಲಾ ಕಡೆಗಳಲ್ಲಿಯೂ ಹರಡಲು ನಮ್ಮನ್ನು ಉಪಯೋಗಿಸುತ್ತಿದ್ದಾನೆ.
[15] ರಕ್ಷಣಾಮಾರ್ಗದಲ್ಲಿರುವವರ ಮತ್ತು ನಾಶನಮಾರ್ಗದಲ್ಲಿರುವವರ ಮಧ್ಯದಲ್ಲಿ ನಾವು ಕ್ರಿಸ್ತನ ಪರಿಮಳವಾಗಿದ್ದೇವೆ. ದೇವರಿಗೆ ಇದೇ ನಮ್ಮ ಕಾಣಿಕೆ.
[16] ನಾಶನಮಾರ್ಗದಲ್ಲಿರುವ ಜನರಿಗೆ ಮರಣವನ್ನು ಉಂಟುಮಾಡುವ ಮರಣದ ವಾಸನೆಯಾಗಿದ್ದೇವೆ. ಆದರೆ ರಕ್ಷಣಾಮಾರ್ಗದಲ್ಲಿರುವ ಜನರಿಗೆ ಜೀವವನ್ನು ಉಂಟುಮಾಡುವ ಜೀವದ ವಾಸನೆಯಾಗಿದ್ದೇವೆ. ಹೀಗಿರಲಾಗಿ, ಈ ಕಾರ್ಯವನ್ನು ಮಾಡಲು ಯಾರು ಯೋಗ್ಯರಾಗಿದ್ದಾರೆ?
[17] ಇತರ ಅನೇಕರು ಮಾಡುವಂತೆ ನಾವು ದೇವರ ವಾಕ್ಯವನ್ನು ಕಲಬೆರಕೆ ಮಾಡುವುದಿಲ್ಲ. ಆದರೆ ಕ್ರಿಸ್ತನಲ್ಲಿದ್ದುಕೊಂಡು ದೇವರ ಸನ್ನಿಧಾನದಲ್ಲಿ ಸತ್ಯವನ್ನು ಹೇಳುತ್ತೇವೆ. ದೇವರಿಂದ ಕಳುಹಿಸಲ್ಪಟ್ಟ ಜನರಂತೆ ನಾವು ಮಾತಾಡುತ್ತೇವೆ.