[1] ನವೊಮಿಯು ಸೊಸೆಗೆ, “ನನ್ನ ಮಗಳೇ, ನಿನಗೆ ಒಳ್ಳೆಯದಾಗುವುದಕ್ಕಾಗಿ, ನೀನು ಗೃಹಿಣಿಯಾಗಿ ಸುಖದಿಂದಿರುವುದಕ್ಕೋಸ್ಕರ ನಾನು ಪ್ರಯತ್ನಿಸಬೇಕಲ್ಲವೇ?
[2] ಈಗ ನೀನು ಯಾರ ಹೆಣ್ಣಾಳುಗಳ ಜೊತೆಯಲ್ಲಿರುತ್ತೀಯೋ ಆ ಬೋವಜನು ನಮ್ಮ ಸಂಬಂಧಿಕನಲ್ಲವೇ? ಅವನು ಈ ರಾತ್ರಿ ಕಣದಲ್ಲಿ ಜವೆಗೋದಿಯನ್ನು ತೂರುವನು.
[3] ನೀನು ಸ್ನಾನಮಾಡಿ, ಸುಗಂಧತೈಲವನ್ನು ಹಚ್ಚಿಕೊಂಡು, ಶ್ರೇಷ್ಠವಸ್ತ್ರಗಳನ್ನು ಧರಿಸಿಕೊಂಡು ಅಲ್ಲಿಗೆ ಹೋಗು; ಅವನು ಅನ್ನಪಾನಗಳನ್ನು ತೆಗೆದುಕೊಳ್ಳುವವರೆಗೂ ಮರೆಯಾಗಿದ್ದು.
[4] ಅವನು ಮಲಗಿದ ಸ್ಥಳವನ್ನು ತಿಳಿದುಕೊಂಡು ಹೋಗಿ ಅವನ ಕಾಲುಗಳ ಮೇಲಣ ಹೊದಿಕೆಯನ್ನು ತೆಗೆದು ಬಿಟ್ಟು ಅಲ್ಲೇ ಮಲಗಿಕೋ; ಆ ಮೇಲೆ ಮಾಡತಕ್ಕದ್ದನ್ನು ಅವನು ನಿನಗೆ ತಿಳಿಸುವನು” ಅಂದಳು.
[5] ಅದಕ್ಕೆ ರೂತಳು “ನೀನು ಹೇಳಿದ ಹಾಗೆಯೇ ಮಾಡುವೆನು” ಎಂದು ಹೇಳಿದಳು.
[6] ಅತ್ತೆಯ ಆಜ್ಞೆಯಂತೆಯೇ ಕಣಕ್ಕೆ ಹೋಗಿ,
[7] ಬೋವಜನು ಅನ್ನಪಾನಗಳನ್ನು ತೆಗೆದುಕೊಂಡು ಸಂತುಷ್ಟನಾಗಿ ರಾಶಿಯ ಬಳಿಯಲ್ಲಿ ಮಲಗಿದ ಮೇಲೆ ರಹಸ್ಯವಾಗಿ ಬಂದು ಅವನ ಕಾಲುಗಳ ಮೇಲಣ ಹೊದಿಕೆಯನ್ನು ತೆಗೆದುಬಿಟ್ಟು, ಕಾಲ್ಬದಿಯಲ್ಲಿ ಮಲಗಿದಳು.
[8] ಮಧ್ಯರಾತ್ರಿಯಲ್ಲಿ ಎಚ್ಚರವಾದಾಗ ಬೋವಜನು ತನ್ನ ಕಾಲುಗಳ ಬಳಿಯಲ್ಲಿ ಮಲಗಿರುವ ಹೆಂಗಸನ್ನು ಕಂಡು,
[9] ಹೆದರಿ ಆಕೆಯನ್ನು “ನೀನು ಯಾರು?” ಎಂದು ಕೇಳಲು ಆಕೆಯು “ನಾನು ನಿನ್ನ ದಾಸಿಯಾದ ರೂತಳು, ನೀನು ಸಮೀಪಬಂಧುವಾಗಿರುವುದರಿಂದ ನಿನ್ನ ಹೊದಿಕೆಯ ಅಂಚನ್ನು ನನ್ನ ಮೇಲೆ ಹಾಕು” ಅಂದಳು.
[10] ಆಗ ಅವನು “ಮಗಳೇ, ಯೆಹೋವನಿಂದ ನಿನಗೆ ಆಶೀರ್ವಾದವಾಗಲಿ; ನೀನು ಬಡವರೂ ಅಥವಾ ಐಶ್ವರ್ಯವಂತರೂ ಆದ ಯೌವನಸ್ಥರ ಹಿಂದೆ ಹೋಗಲಿಲ್ಲ. ಈಗ ನಿನ್ನ ಪತಿಭಕ್ತಿಯು ಮೊದಲಗಿಂತ ವಿಶೇಷವಾಗಿ ಪ್ರತ್ಯಕ್ಷವಾಯಿತು.
[11] ನನ್ನ ಮಗಳೇ, ಈಗ ಭಯಪಡಬೇಡ. ನೀನು ಗುಣವಂತೆಯೆಂಬುದು ಊರಿನವರಿಗೆಲ್ಲಾ ತಿಳಿದಿದೆ; ಆದ್ದರಿಂದ ನೀನು ಹೇಳಿದ್ದನ್ನೆಲ್ಲಾ ಮಾಡುವೆನು.
[12] ನಾನು ಸಮೀಪಬಂಧುವೆಂಬುದು ನಿಜ; ಆದರೂ ನನಗಿಂತ ಸಮೀಪ ಬಂಧು ಒಬ್ಬನಿದ್ದಾನೆ.
[13] ಈ ರಾತ್ರಿ ಇಲ್ಲೇ ಇರು; ನಾಳೆ ಅವನು ಮೈದುನಧರ್ಮವನ್ನು ನೆರವೇರಿಸಿದರೆ ಸರಿ; ಇಲ್ಲವಾದರೆ ಯೆಹೋವನಾಣೆ, ನಾನೇ ಅದನ್ನು ನೆರವೇರಿಸುವೆನು. ಬೆಳಗಾಗುವ ತನಕ ಇಲ್ಲೇ ಮಲಗಿಕೋ” ಎಂದು ಹೇಳಿದನು.
[14] ಆಕೆಯು ಆ ವರೆಗೂ ಅವನ ಕಾಲುಗಳ ಬಳಿಯಲ್ಲೇ ಮಲಗಿಕೊಂಡಿದ್ದಳು. ಒಬ್ಬ ಹೆಂಗಸು ಕಣಕ್ಕೆ ಬಂದಿದ್ದಳೆಂಬುವುದು ಯಾರಿಗೂ ಗೊತ್ತಾಗಬಾರದೆಂದು ಅವನು ಹೇಳಿದ್ದರಿಂದ ಗುರುತು ಹಿಡಿಯಲಾರದಷ್ಟು ಕತ್ತಲಿರುವಾಗಲೇ ಆಕೆಯು ಎದ್ದಳು.
[15] ಆಗ ಅವನು ಆಕೆಗೆ “ನಿನ್ನ ಮೇಲ್ಹೊದಿಕೆಯನ್ನು ಹಾಸು” ಎಂದು ಹೇಳಿದನು, ಆಕೆ ಹಾಸಲು ಅದರಲ್ಲಿ ಆರು ಪಡಿ ಜವೆಗೋದಿಯನ್ನು ಹಾಕಿ ಹೊರಿಸಿ ಕಳುಹಿಸಿದನು. ಆಕೆಯು ಊರೊಳಕ್ಕೆ ಹೋದಳು.
[16] ಅತ್ತೆಯ ಬಳಿಗೆ ಬಂದಾಗ, ಅತ್ತೆಯು “ನನ್ನ ಮಗಳೇ, ನೀನು ಹೋಗಿದ್ದ ಕಾರ್ಯವೇನಾಯಿತು?” ಎಂದು ಕೇಳಲು ಆಕೆಯು ಆ ಮನುಷ್ಯನು ಮಾಡಿದ್ದೆಲ್ಲವನ್ನೂ ತಿಳಿಸಿ,
[17] “‘ನೀನು ಬರಿಗೈಯಿಂದ ಅತ್ತೆಯ ಬಳಿಗೆ ಹೋಗಬಾರದೆಂದು’ ಹೇಳಿ ಈ ಆರು ಪಡಿ ಜವೆಗೋದಿಯನ್ನು ಕೊಟ್ಟನು” ಅಂದಳು.
[18] ಅತ್ತೆಯು “ನನ್ನ ಮಗಳೇ, ಈ ಕಾರ್ಯವು ಏನಾಗುವುದೆಂದು ಗೊತ್ತಾಗುವವರೆಗೂ ಸುಮ್ಮನಿರು; ಈ ವಿಷಯವನ್ನು ಇತ್ಯರ್ಥ ಮಾಡುವವರೆಗೂ ಅವನಿಗೆ ಸಮಾಧಾನವಿರಲಾರದು” ಎಂದು ಹೇಳಿದಳು.