Skip to content
Opens in a new window
Listen to this chapter • 4:32

[1] ನವೊಮಿಯ ಗಂಡನಾದ ಎಲೀಮೆಲೆಕನ ಗೋತ್ರದಲ್ಲಿ ಬೋವಜನೆಂಬ ಬಹು ಧನವಂತನಾದ ಒಬ್ಬ ಸಂಬಂಧಿಕನಿದ್ದನು.

[2] ಮೋವಾಬ್ಯಳಾದ ರೂತಳು ನವೊಮಿಗೆ, “ನಾನು ಹೋಗಿ, ಹಕ್ಕಲ ತೆನೆಗಳನ್ನು ಆಯ್ದುಕೊಳ್ಳಲು ಅವಕಾಶ ಮಾಡಿಕೊಡುವವರ ಹೊಲದಿಂದ ತೆನೆಗಳನ್ನು ಸಂಗ್ರಹಿಸಿಕೊಂಡು ಬರುತ್ತೇನೆ” ಅಂದಳು. ಅದಕ್ಕೆ ನವೊಮಿ “ಹೋಗಿ ಬಾ ಮಗಳೆ” ಅಂದಳು.

[3] ಆಕೆಯು ದೈವಯೋಗದಿಂದ ಎಲೀಮೆಲೆಕನ ಗೋತ್ರದವನಾದ ಬೋವಜನ ಸ್ವತ್ತಾಗಿದ್ದ ಹೊಲಕ್ಕೆ ಹೋಗಿ ತೆನೆ ಕೊಯ್ಯುವವರ ಹಿಂದಿನಿಂದ ಹಕ್ಕಲಾಯುತ್ತಾ ಇದ್ದಳು.

[4] ಆಗ ಬೋವಜನು ಬೇತ್ಲೆಹೇಮಿನಿಂದ ಹೊಲಕ್ಕೆ ಬಂದು ಕೊಯ್ಯುವವರಿಗೆ, “ಯೆಹೋವನು ನಿಮ್ಮ ಸಂಗಡ ಇರಲಿ” ಅಂದನು. ಅವರು, “ಯೆಹೋವನು ನಿನ್ನನ್ನು ಆಶೀರ್ವದಿಸಲಿ” ಎಂದು ಹರಸಿದರು.

[5] ತೆನೆ ಕೊಯ್ಯುವವರ ಜೊತೆಯಲ್ಲಿ ರೂತಳನ್ನು ನೋಡಿ ಬೋವಜನು ತೆನೆ ಕೊಯ್ಯುವವರನ್ನು ನಿರ್ವಹಿಸಲು ನೇಮಿಸಿದ್ದ ತನ್ನ ಸೇವಕನನ್ನು, “ಈ ಹೆಂಗಸು ಯಾರು?” ಎಂದು ಕೇಳಿದ್ದಕ್ಕೆ

[6] ಅವನು “ಈಕೆಯು ಮೋವಾಬ್ ಸೀಮೆಯಿಂದ ನವೊಮಿಯ ಸಂಗಡ ಬಂದ ಮೋವಾಬ್ ಸ್ತ್ರೀ.” ಎಂದನು.

[7] ಇವಳು ತೆನೆ “ಕೊಯ್ಯುವವರೊಂದಿಗೆ ಸಿವುಡುಗಳ ಮಧ್ಯದಲ್ಲಿ ಹಕ್ಕಲಾಯ್ದುಕೊಳ್ಳುವ ಹಾಗೆ ಅಪ್ಪಣೆ ನೀಡಬೇಕೆಂದು ಕೇಳಿಕೊಂಡಳು. ಬೆಳಿಗ್ಗೆ ಬಂದವಳು ಇನ್ನೂ ಇಲ್ಲಿಯೇ ಇದ್ದಾಳೆ. ಸದ್ಯಕ್ಕೆ ಮನೆಯಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದಾಳೆ” ಅಂದನು.

[8] ಆಗ ಬೋವಜನು ರೂತಳಿಗೆ, “ನನ್ನ ಮಗಳೇ, ಕೇಳು; ನನ್ನ ಹೊಲವನ್ನು ಬಿಟ್ಟು ಬೇರೆಯವರ ಹೊಲಕ್ಕೆ ಹೋಗಬೇಡ; ನನ್ನ ಹೆಣ್ಣಾಳುಗಳ ಜೊತೆಯಲ್ಲೇ ಇರು.

[9] ನನ್ನ ಆಳುಗಳು ತೆನೆ ಕೊಯ್ಯುವುದಕ್ಕೋಸ್ಕರ ಯಾವ ಹೊಲಕ್ಕೆ ಹೋಗುತ್ತಾರೋ ಆ ಹೊಲಕ್ಕೆ ನೀನೂ ಹೋಗು. ನಿನ್ನನ್ನು ಯಾರೂ ಮುಟ್ಟಬಾರದೆಂದು ನನ್ನ ಸೇವಕರಿಗೆ ಅಪ್ಪಣೆಕೊಟ್ಟಿದ್ದೇನೆ. ನಿನಗೆ ಬಾಯಾರಿಕೆಯಾದರೆ ಹೋಗಿ ನನ್ನ ಸೇವಕರೇ ತುಂಬಿಸಿದ ನೀರಿನ ಪಾತ್ರೆಗಳಿಂದ ನೀರು ಕುಡಿಯಬಹುದು” ಎಂದು ಹೇಳಿದನು.

[10] ರೂತಳು ಅವನಿಗೆ ಸಾಷ್ಟಾಂಗನಮಸ್ಕಾರ ಮಾಡಿ “ಪರದೇಶಿಯಾದ ನನ್ನ ಮೇಲೆ ಇಷ್ಟು ಕಟಾಕ್ಷವಿಟ್ಟು ದಯೆ ತೋರಿಸಲು ಕಾರಣವೇನು?” ಎಂದು ಕೇಳಿದಳು.

[11] ಅದಕ್ಕೆ ಬೋವಜನು, “ನಿನ್ನ ಗಂಡನು ಮರಣ ಹೊಂದಿದ ದಿನದಿಂದ ನಿನ್ನ ಅತ್ತೆಗಾಗಿ ನೀನು ಮಾಡಿದ್ದೆಲ್ಲವೂ, ನನಗೆ ತಿಳಿದಿದೆ. ಹಾಗೂ ನಿನ್ನ ತಂದೆತಾಯಿಗಳನ್ನೂ, ಸ್ವದೇಶವನ್ನೂ ಬಿಟ್ಟು, ನಿನಗೆ ಅರಿಯದ ಜನರ ಬಳಿಗೆ ಬಂದಿರುವಿಯೆಂಬುದು ನನಗೆ ಚೆನ್ನಾಗಿ ಗೊತ್ತಿದೆ.

[12] ನೀನು ಮಾಡಿದ್ದ ಎಲ್ಲಾ ಒಳ್ಳೆಯಕಾರ್ಯದ ಪ್ರತಿಫಲವಾಗಿ ಯೆಹೋವನು ನಿನಗೆ ಒಳ್ಳೆಯ ಫಲವನ್ನು ಕೊಡಲಿ; ನೀನು ಯಾವ ದೇವರ ಕೃಪಾಶಿರ್ವಾದದ ಆಶ್ರಯ ಹೊಂದಲು ಬಂದಿರುವೆಯೋ ಆ ಇಸ್ರಾಯೇಲಿನ ದೇವರಾದ ಯೆಹೋವನು ನಿನಗೆ ಉತ್ತಮವಾದ ಆಶ್ರಯವನ್ನು ಪ್ರತಿಫಲವನ್ನು ಅನುಗ್ರಹಿಸಲಿ” ಎಂದು ಉತ್ತರ ಕೊಟ್ಟನು.

[13] ಆಗ ಆಕೆಯು, “ಸ್ವಾಮೀ, ತಾವು ದಾಸಿಯಾದ ನನ್ನನ್ನು ಕಟಾಕ್ಷಿಸಿದ್ದೀರಿ; ನಾನು ತಮ್ಮ ದಾಸಿಯೆನಿಸಿಕೊಳ್ಳುವುದಕ್ಕೆ ಯೋಗ್ಯಳಲ್ಲದಿದ್ದರೂ ನನ್ನನ್ನು ಕನಿಕರಿಸಿ ಪ್ರೀತಿಯಿಂದ ಮಾತನಾಡಿಸಿದಿರಿ” ಅಂದಳು.

[14] ಊಟದ ವೇಳೆಯಲ್ಲಿ ಬೋವಜನು “ಇಲ್ಲಿ ಬಾ; ರೊಟ್ಟಿಯನ್ನು ತೆಗೆದುಕೊಂಡು ಮುರಿದು ಹುಳಿರಸದಲ್ಲಿ ಅದ್ದಿ ತಿನ್ನು” ಎಂದು ಕರೆಯಲು ಆಕೆಯು ಹೋಗಿ ತೆನೆ ಕೊಯ್ಯುವವರ ಬಳಿಯಲ್ಲಿ ಕುಳಿತುಕೊಂಡಳು. ಇದಲ್ಲದೆ ಅವನು ಆಕೆಗೆ ಸುಟ್ಟ ತೆನೆಗಳನ್ನು ಕೊಟ್ಟನು. ಆಕೆಯು ತಿಂದು ತೃಪ್ತಳಾಗಿ ಇನ್ನೂ ಉಳಿಸಿಕೊಂಡಳು.

[15] ತರುವಾಯ ತಿರುಗಿ ಹಕ್ಕಲಾಯುವುದಕ್ಕೆ ಏಳಲು ಬೋವಜನು ತನ್ನ ಸೇವಕರಿಗೆ, “ಈಕೆಯು ಸಿವುಡುಗಳ ಮಧ್ಯದಲ್ಲಿ ಹಕ್ಕಲಾಯ್ದುಕೊಳ್ಳಲಿ, ಅಡ್ಡಿ ಮಾಡಬೇಡಿರಿ;

[16] ಸಿವುಡುಗಳಿಂದ ತೆನೆಗಳನ್ನು ಕಿತ್ತುಹಾಕಿರಿ; ಈಕೆಯು ಕೂಡಿಸಿಕೊಳ್ಳಲಿ, ಗದರಿಸಬೇಡಿರಿ” ಎಂದು ಆಜ್ಞಾಪಿಸಿದನು.

[17] ರೂತಳು ಸಾಯಂಕಾಲದ ವರೆಗೂ ಹಕ್ಕಲಾಯ್ದು ಕೂಡಿಸಿದ್ದನ್ನು ಬಡಿದಾಗ ಸುಮಾರು ಮೂವತ್ತು ಸೇರು ಜವೆಗೋದಿ ಸಿಕ್ಕಿತು.

[18] ಆಕೆಯು ಅದನ್ನು ಹೊತ್ತುಕೊಂಡು ಊರಿಗೆ ಬಂದು, ಆಕೆ ಹಕ್ಕಲಾಯ್ದದು ಸಂಗ್ರಹಿಸಿದ್ದನ್ನು ತನ್ನ ಅತ್ತೆಗೆ ತೋರಿಸಿದಳು. ತಾನು ಉಳಿಸಿಟ್ಟಿದ್ದ ಸುಟ್ಟ ತೆನೆಯನ್ನು ರೂತಳು ತನ್ನ ಅತ್ತೆಗೆ ಕೊಟ್ಟಳು.

[19] ಅತ್ತೆಯು “ನೀನು ಈ ಹೊತ್ತು ಯಾರ ಹೊಲದಲ್ಲಿ ಹಕ್ಕಲಾಯ್ದಿ? ಎಲ್ಲಿ ಕೆಲಸಮಾಡಿದಿ? ನಿನ್ನನ್ನು ಕಟಾಕ್ಷಿಸಿದವನಿಗೆ ಶುಭವಾಗಲಿ” ಎನ್ನಲು ರೂತಳು ನಾನು ಹಕ್ಕಲಾಯ್ದ ಹೊಲದ ಯಜಮಾನನ ಹೆಸರು, ಬೋವಜನೆಂದು ತಿಳಿಸಿದಳು.

[20] ಆಗ ನವೊಮಿಯು “ಸತ್ತವರಿಗೂ, ಬದುಕುವವರಿಗೂ ಮಾಡಿದ ವಾಗ್ದಾನಗಳನ್ನು ನೆರವೇರಿಸುವ ಯೆಹೋವನು ಆತನನ್ನು ಆಶೀರ್ವದಿಸಲಿ” ಎಂದು ಹರಸಿ, “ಆ ಮನುಷ್ಯನು ನಮಗೆ ಹತ್ತಿರದ ನೆಂಟ, ಪೋಷಿಸಬೇಕಾದವನು” ಎಂದು ರೂತಳಿಗೆ ತಿಳಿಸಿದಳು.

[21] ಆಗ ಮೋವಾಬ್ಯಳಾದ ರೂತಳು “ಇದಲ್ಲದೆ ಆ ಮನುಷ್ಯನು ನನಗೆ, ‘ಸುಗ್ಗಿ ಮುಗಿಯುವವರೆಗೂ ನನ್ನ ಆಳುಗಳ ಜೊತೆಯಲ್ಲೇ ಇರು ಎಂದು ಹೇಳಿದ್ದಾನೆ’” ಎಂದಳು.

[22] ನವೊಮಿಯು ತನ್ನ ಸೊಸೆಯಾದ ರೂತಳಿಗೆ “ನನ್ನ ಮಗಳೇ, ನೀನು ಅವನ ಹೆಣ್ಣಾಳುಗಳ ಸಂಗಡಲೇ ಹೊರಟುಹೋಗುವುದು ಒಳ್ಳೆಯದು; ಬೇರೆ ಹೊಲದಲ್ಲಿ ನಿನಗೆ ತೊಂದರೆಯಾದೀತು” ಎಂದು ಹೇಳಿದಳು.

[23] ಅದರಂತೆಯೇ ರೂತಳು ಅತ್ತೆಯ ಜೊತೆಯಲ್ಲಿದ್ದುಕೊಂಡು ಜವೆಗೋದಿಯ ಮತ್ತು ಗೋದಿಯ ಸುಗ್ಗಿ ಮುಗಿಯುವ ವರೆಗೆ ಬೋವಜನ ಹೆಣ್ಣಾಳುಗಳ ಸಂಗಡಲೇ ಹೋಗಿ ಹಕ್ಕಲಾಯುತ್ತಿದ್ದಳು.

ರೂತಳು — Chapters