Skip to content
Opens in a new window
Listen to this chapter • 1:51

[1] ಯೆಹೋವನ ವಾಕ್ಯವು ಯೋನನಿಗೆ ಎರಡನೆಯ ಸಾರಿ ಉಂಟಾಯಿತು.

[2] ಅದೇನೆಂದರೆ “ನೀನು ಹೊರಟು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ ನಾನು ನಿನಗೆ ಆಜ್ಞಾಪಿಸುವ ಸಂದೇಶವನ್ನು ಸಾರು” ಎಂದು ಹೇಳಿದನು.

[3] ಆಗ ಯೋನನು ಎದ್ದು ಯೆಹೋವನ ಅಪ್ಪಣೆಯಂತೆ ನಿನೆವೆಗೆ ಹೋದನು. ನಿನೆವೆಯು ಮೂರು ದಿನದ ಪ್ರಯಾಣದಷ್ಟು ಅತಿ ವಿಸ್ತಾರವಾದ ಮಹಾದೊಡ್ಡ ಪಟ್ಟಣವಾಗಿತ್ತು.

[4] ಯೋನನು ಪಟ್ಟಣವನ್ನು ಪ್ರವೇಶಿಸಿ ಒಂದು ದಿನದಷ್ಟು ದೂರ ಪ್ರಯಾಣಮಾಡಿದ ನಂತರ “ನಲವತ್ತು ದಿನಗಳಾದ ಮೇಲೆ ನಿನೆವೆಯು ಕೆಡವಲ್ಪಡುವುದು” ಎಂದು ಸಾರತೊಡಗಿದನು.

[5] ಇದನ್ನು ಕೇಳಿ ನಿನೆವೆಯವರು ದೇವರಲ್ಲಿ ನಂಬಿಕೆಯಿಟ್ಟು ಉಪವಾಸವನ್ನು ಮಾಡಬೇಕೆಂದು ಸಾರಿ ಹೇಳಿದರು; ದೊಡ್ಡವರು ಮೊದಲುಗೊಂಡು ಚಿಕ್ಕವರ ತನಕ ಎಲ್ಲರೂ ಗೋಣಿತಟ್ಟನ್ನು ಸುತ್ತಿಕೊಂಡರು.

[6] ಆ ಸುದ್ದಿಯು ನಿನೆವೆಯ ಅರಸನಿಗೆ ತಿಳಿಯಲು ಅವನು ಸಿಂಹಾಸನದಿಂದ ಎದ್ದು, ತನ್ನ ನಿಲುವಂಗಿಯನ್ನು ತೆಗೆದುಬಿಟ್ಟು, ಗೋಣಿತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಕುಳಿತುಕೊಂಡನು.

[7] ಇದಲ್ಲದೆ ಅರಸನು ತನ್ನ ಮತ್ತು ರಾಜ್ಯಾಧಿಕಾರಿಗಳ ಆಜ್ಞೆಯನ್ನು ನಿನೆವೆಯಲ್ಲಿ ಹೊರಡಿಸಿ ಹೇಳಿದ್ದೇನೆಂದರೆ: “ಜನ, ಪಶು, ಮಂದೆ, ಹಿಂಡು ಇವುಗಳು ಸಹ ಏನೂ ರುಚಿ ನೋಡುವುದಾಗಲೀ, ತಿನ್ನುವುದಾಗಲೀ, ಕುಡಿಯುವುದಾಗಲೀ ಮಾಡಬಾರದು.

[8] ಜನರಿಗೂ ಪಶುಗಳಿಗೂ ಗೋಣಿತಟ್ಟು ಹೊದಿಕೆಯಾಗಲಿ; ಎಲ್ಲರೂ ದೇವರಿಗೆ ಬಲವಾಗಿ ಮೊರೆಯಿಡಲಿ; ಒಬ್ಬೊಬ್ಬನು ತನ್ನ ತನ್ನ ದುರ್ಮಾರ್ಗಗಳನ್ನೂ, ತಾನು ನಡಿಸುತ್ತಿದ್ದ ಹಿಂಸೆಯನ್ನೂ ತೊರೆದು ಬಿಡಲಿ.

[9] ದೇವರು ಒಂದು ವೇಳೆ ಮನಮರುಗಿ, ಮನಸ್ಸನ್ನು ಬದಲಾಯಿಸಿಕೊಂಡು ತನ್ನ ಉಗ್ರಕೋಪವನ್ನು ತೊರೆದರೆ, ನಾವು ನಾಶವಾಗದೆ ಉಳಿದೇವು” ಎಂಬುದನ್ನು ನಿನೆವೆಯಲ್ಲೆಲ್ಲಾ ಸಾರಿಸಿದನು.

[10] ದೇವರು ನಿನೆವೆಯವರ ಕೃತ್ಯಗಳನ್ನು ನೋಡಿ, ಅವರು ತಮ್ಮ ದುರ್ಮಾರ್ಗತನದಿಂದ ತಿರುಗಿಕೊಂಡರೆಂದು ತಿಳಿದು ತನ್ನ ಮನಸ್ಸನ್ನು ಬದಲಾಯಿಸಿ, ತಾನು ಅವರಿಗೆ ಮಾಡುವೆನೆಂದು ಪ್ರಕಟಿಸಿದ್ದ ಕೇಡನ್ನು ಮಾಡದೆ ಬಿಟ್ಟನು.

ಯೋನನು — Chapters