Skip to content
Opens in a new window
Listen to this chapter • 1:40

[1] ಯೋನನು ಆ ಮೀನಿನ ಹೊಟ್ಟೆಯೊಳಗೆ ಇದ್ದು ಕೊಂಡು ತನ್ನ ದೇವರಾದ ಯೆಹೋವನಿಗೆ ಹೀಗೆ ಪ್ರಾರ್ಥನೆ ಮಾಡಿದನು:

[2] “ಕಷ್ಟದಲ್ಲಿ ನಾನು ಯೆಹೋವನಿಗೆ ಮೊರೆಯಿಟ್ಟೆನು; ಆತನು ನನಗೆ ಸದುತ್ತರವನ್ನು ದಯಪಾಲಿಸಿದನು; ಪಾತಾಳದ ಗರ್ಭದೊಳಗಿಂದ ಸಹಾಯಕ್ಕಾಗಿ ಕೂಗಿಕೊಂಡೆನು! ಆಹಾ, ನೀನು ನನ್ನ ಸ್ವರವನ್ನು ಲಾಲಿಸಿದೆ.

[3] ನನ್ನನ್ನು ಸಮುದ್ರದ ಅಗಾಧಸ್ಥಳದಲ್ಲಿ ಹಾಕಿದ್ದೀಯಲ್ಲಾ; ಪ್ರವಾಹವು ನನ್ನನ್ನು ಸುತ್ತಿಕೊಂಡಿತು; ಲೆಕ್ಕವಿಲ್ಲದ ಸಮುದ್ರದ ಅಲೆಗಳೂ, ತೆರೆಗಳೂ ನನ್ನ ಮೇಲೆ ದಾಟಿ ಹೋದವು

[4] ‘ನಿನ್ನ ಸಾನ್ನಿಧ್ಯದಿಂದ ತಳ್ಳಲ್ಪಟ್ಟಿದ್ದೇನೆ ಎಂದುಕೊಂಡೆನು; ನಾನು ನಿನ್ನ ಪರಿಶುದ್ಧ ಮಂದಿರದ ಕಡೆಗೆ ಪುನಃ ಹೇಗೆ ನೋಡುವೆನು?’

[5] ಜಲರಾಶಿಯು ನನ್ನನ್ನು ಮುತ್ತಿ ನನ್ನ ಪ್ರಾಣಕ್ಕೆ ಹಾನಿ ತಂದಿತು, ಮಹಾಸಾಗರವು ನನ್ನನ್ನು ಆವರಿಸಿತು, ಕಡಲಕಳೆಯು ನನ್ನ ತಲೆಯನ್ನು ಸುತ್ತಿಕೊಂಡಿತು.

[6] ಪರ್ವತಗಳ ತಳಹದಿಗೆ ಇಳಿದುಹೋದೆನು, ಭೂಲೋಕದ ದ್ವಾರಗಳ ಚಿಲಕಗಳು ಎಂದಿಗೂ ತೆಗೆಯದ ಹಾಗೆ ನನ್ನನ್ನು ಬಂಧಿಸಿದವು; ನನ್ನ ದೇವರಾದ ಯೆಹೋವನೇ, ನೀನು ನನ್ನ ಪ್ರಾಣವನ್ನು ಅಧೋಲೋಕದೊಳಗಿನಿಂದ ಉದ್ಧರಿಸಿದ್ದೀ.

[7] “ನನ್ನ ಆತ್ಮವು ನನ್ನಲ್ಲಿ ಕುಂದಿಹೋದಾಗ ಯೆಹೋವನಾದ ನಿನ್ನನ್ನು ನೆನಪು ಮಾಡಿಕೊಂಡು ಸ್ಮರಿಸಿದೆನು; ನನ್ನ ಬಿನ್ನಹವು ನಿನಗೆ ಮುಟ್ಟಿತು, ಅದು ನಿನ್ನ ಪರಿಶುದ್ಧಾಲಯವನ್ನು ಬಂದು ಸೇರಿತು.

[8] “ನಿರ್ಜೀವ ವಿಗ್ರಹಗಳನ್ನು ಅವಲಂಬಿಸಿದವರು ತಮ್ಮ ದೇವರ ಕರುಣಾನಿಧಿಯನ್ನು ತೊರೆದುಬಿಡುವರು.

[9] ಆದರೆ ನಾನು ಸ್ತೋತ್ರ ಧ್ವನಿಯಿಂದ ನಿನಗೆ ಯಜ್ಞವನ್ನರ್ಪಿಸುವೆನು, ನಿನಗೆ ಮಾಡಿಕೊಂಡ ಹರಕೆಯನ್ನು ಸಲ್ಲಿಸುವೆನು. ರಕ್ಷಣೆಯು ಯೆಹೋವನಿಂದಲೇ ಉಂಟಾಗುವುದು.”

[10] ಆಗ ಯೆಹೋವನು ಮೀನಿಗೆ ಅಪ್ಪಣೆಕೊಡಲು ಅದು ಯೋನನನ್ನು ಸಮುದ್ರದ ದಡದಲ್ಲಿ ಕಾರಿಬಿಟ್ಟಿತು.

ಯೋನನು — Chapters