[1] ಚೀಯೋನಿನಲ್ಲಿ ಕೊಂಬೂದಿರಿ, ನನ್ನ ಪರಿಶುದ್ಧ ಪರ್ವತದಲ್ಲಿ ಎಚ್ಚರಿಕೆಯ ದಿನ ಮೊಳಗಲಿ. ಸಮಸ್ತ ದೇಶದ ನಿವಾಸಿಗಳು ನಡುಗಲಿ, ಏಕೆಂದರೆ ಯೆಹೋವನ ದಿನವು ಬರುತ್ತದೆ; ಅದು ಸಮೀಪವಾಗಿದೆ.
[2] ಅದು ಕತ್ತಲೆಯ ಮತ್ತು ಮೊಬ್ಬಿನ ದಿನವೂ, ಕಾರ್ಮುಗಿಲಿನ ಕಗ್ಗತ್ತಲ ದಿನವೂ ಆಗಿದೆ. ಉದಯವು ಬೆಟ್ಟಗಳ ಮೇಲೆ ಹರಡಿಕೊಳ್ಳುವ ಹಾಗೆ, ಪ್ರಬಲವಾದ ದೊಡ್ಡ ಸೈನ್ಯವು ಬರುತ್ತದೆ. ಅದರ ಹಾಗೆ ಹಿಂದೆಂದೂ ಬಂದಿಲ್ಲ, ಇನ್ನು ಮುಂದೆಯೂ ಬರುವುದಿಲ್ಲ, ತಲತಲಾಂತರಗಳ ವರ್ಷಗಳವರೆಗೂ ಬರುವುದಿಲ್ಲ.
[3] ಅವುಗಳ ಮುಂದೆ ಬೆಂಕಿಯು ದಹಿಸುತ್ತದೆ, ಹಿಂದೆ ಜ್ವಾಲೆಯು ಧಗಧಗಿಸುತ್ತದೆ. ಅವು ಬರುವುದಕ್ಕೆ ಮೊದಲು ದೇಶವು ಏದೆನ್ ಉದ್ಯಾನದಂತೆ ಇತ್ತು, ಅವು ದಾಟಿಹೋದ ಮೇಲೆ ಬೆಗ್ಗಾಡಾಯಿತು. ಹೌದು, ಅವುಗಳಿಂದ ಯಾವುದೂ ತಪ್ಪಿಸಿಕೊಳ್ಳಲಾರದು.
[4] ಆ ಸೈನ್ಯಗಳ ಆಕಾರವು ಕುದುರೆಗಳ ಆಕಾರದ ಹಾಗೆ ಕಾಣಿಸುತ್ತದೆ; ಅವು ಸವಾರರಂತೆ ಓಡುತ್ತವೆ.
[5] ಬೆಟ್ಟಗಳ ತುದಿಯಲ್ಲಿ ಅವು ಹಾರಾಡುತ್ತ ರಥಗಳಂತೆ ಚೀತ್ಕಾರ ಮಾಡುತ್ತವೆ; ಕೂಳೆಯನ್ನು ದಹಿಸುವ ಬೆಂಕಿಯ ಜ್ವಾಲೆಯ ಶಬ್ದದ ಹಾಗೆಯೂ, ಯುದ್ಧಕ್ಕೆ ಸಿದ್ಧವಾದ ಬಲವುಳ್ಳ ಸೈನ್ಯದ ಹಾಗೆಯೂ ಇವೆ.
[6] ಅವುಗಳ ದೆಸೆಯಿಂದ ರಾಷ್ಟ್ರಗಳಿಗೆ ಪ್ರಾಣ ಸಂಕಟ; ಎಲ್ಲರ ಮುಖಗಳು ಕಳೆಗುಂದುತ್ತವೆ.
[7] ಅವು ಶೂರರಂತೆ ಓಡಾಡುತ್ತವೆ; ಯೋಧರ ಹಾಗೆ ಗೋಡೆ ಏರುತ್ತವೆ;
[8] ನೂಕುನುಗ್ಗಲ್ಲಿಲ್ಲದೆ ತಮ್ಮ ತಮ್ಮ ಸಾಲುಗಳಲ್ಲಿಯೇ ನಡೆಯುತ್ತವೆ; ಆಯುಧಗಳ ನಡುವೆ ನುಗ್ಗುತ್ತವೆ.
[9] ಪಟ್ಟಣದಲ್ಲೆಲ್ಲಾ ತ್ವರೆಪಡುತ್ತವೆ, ಗೋಡೆಯ ಮೇಲೆ ಓಡಾಡುತ್ತವೆ, ಮನೆಗಳನ್ನು ಹತ್ತುತ್ತವೆ, ಕಿಟಕಿಗಳಿಂದ ಕಳ್ಳರಂತೆ ಪ್ರವೇಶಿಸುತ್ತವೆ.
[10] ಅವುಗಳ ಆಗಮನದಿಂದ ಭೂಮಿಯು ಕಂಪಿಸುತ್ತದೆ, ಆಕಾಶಮಂಡಲವು ನಡಗುತ್ತದೆ, ಸೂರ್ಯ ಮತ್ತು ಚಂದ್ರರು ಮಂಕಾಗುತ್ತಾರೆ, ಮತ್ತು ನಕ್ಷತ್ರಗಳು ಕಾಂತಿಗುಂದುತ್ತವೆ.
[11] ಯೆಹೋವನು ತನ್ನ ಸೈನ್ಯದ ಮುಂದೆ ಗುಡುಗಿನಂತೆ ಧ್ವನಿಗೈಯುತ್ತಾನೆ, ಆತನ ಸೈನ್ಯ ಬಹಳ ದೊಡ್ಡದಾಗಿದೆ; ಆತನ ಆಜ್ಞೆಯನ್ನು ಪಾಲಿಸುವವನು ಬಲಿಷ್ಠನಾಗಿದ್ದಾನೆ. ಯೆಹೋವನ ದಿನವು ಮಹತ್ತರವೂ ಮತ್ತು ಅತಿಭಯಂಕರವೂ ಆಗಿದೆ. ಅದನ್ನು ಸಹಿಸಿಕೊಳ್ಳುವವರು ಯಾರು?
[12] ಯೆಹೋವನು ಹೀಗೆ ಹೇಳುತ್ತಾನೆ, “ಈಗಲಾದರೂ, ನೀವು ಪೂರ್ಣಹೃದಯದಿಂದ ನನ್ನ ಕಡೆಗೆ ತಿರುಗಿಕೊಳ್ಳಿರಿ. ಉಪವಾಸಮಾಡಿರಿ, ಅಳಿರಿ, ಗೋಳಾಡಿರಿ.”
[13] ನಿಮ್ಮ ಉಡುಪುಗಳನ್ನಲ್ಲ, ನಿಮ್ಮ ಹೃದಯಗಳನ್ನು ಹರಿದುಕೊಳ್ಳಿರಿ. ನಿಮ್ಮ ದೇವರಾದ ಯೆಹೋವನ ಕಡೆಗೆ ತಿರುಗಿಕೊಳ್ಳಿರಿ. ಆತನು ದಯೆಯೂ, ಕನಿಕರವೂ, ದೀರ್ಘಶಾಂತಿಯೂ, ಮಹಾಪ್ರೀತಿಯೂ ಉಳ್ಳವನಾಗಿ ತಾನು ವಿಧಿಸುವ ಕೇಡಿಗೆ ಮನಮರುಗುವಂಥವನು.
[14] ಆತನು ಒಂದು ವೇಳೆ ಮನಸ್ಸನ್ನು ಬದಲಾಯಿಸಿ, ನಿಮ್ಮ ಕಡೆಗೆ ತಿರುಗಿಕೊಂಡು ನಿಮ್ಮನ್ನು ಆಶೀರ್ವದಿಸಬಹುದು; ನಿಮ್ಮ ದೇವರಾದ ಯೆಹೋವನಿಗೆ ನೀವು ಅರ್ಪಿಸುವ ನೈವೇದ್ಯವನ್ನು ಸ್ವೀಕರಿಸಿ ಸುವರಗಳನ್ನು ದಯಪಾಲಿಸಬಹುದು.
[15] ಚೀಯೋನ್ ಪರ್ವತದ ಮೇಲೆ ನಿಂತು ಕೊಂಬೂದಿರಿ, ಉಪವಾಸ ದಿನವನ್ನು ಗೊತ್ತುಮಾಡಿರಿ, ಪವಿತ್ರ ಸಭೆಯನ್ನು ಕರೆಯಿರಿ.
[16] ಜನರನ್ನು ಒಟ್ಟುಗೂಡಿಸಿರಿ, ಪವಿತ್ರ ಸಭೆಯನ್ನು ಏರ್ಪಡಿಸಿರಿ. ಹಿರಿಯರನ್ನು ಕೂಡಿಸಿರಿ, ಮಕ್ಕಳನ್ನು ಸೇರಿಸಿರಿ, ಮೊಲೆಕೂಸುಗಳನ್ನು ಸೇರಿಸಿರಿ. ಮದುಮಗನು ತನ್ನ ಕೊಠಡಿಯಿಂದ ಹೊರಟುಬರಲಿ, ವಧುವು ತನ್ನ ಕಲ್ಯಾಣಗೃಹದಿಂದ ಹೊರಟುಬರಲಿ.
[17] ಯೆಹೋವನ ಸೇವಕರಾದ ಯಾಜಕರು, ದ್ವಾರಮಂಟಪಕ್ಕೂ, ಯಜ್ಞವೇದಿಯ ನಡುವೆ ಅಳುತ್ತಾ ಹೀಗೆ ಹೇಳಲಿ, “ಯೆಹೋವನೇ, ನಿನ್ನ ಜನರನ್ನು ಕರುಣಿಸು, ಅನ್ಯಜನಾಂಗಗಳು ನಿಂದಿಸುವುದಕ್ಕೆ ನಿನ್ನ ಬಾಧ್ಯತೆಯನ್ನು ದೂಷಣೆಗೆ ಗುರಿಮಾಡಬೇಡ. ‘ಅವರ ದೇವರು ಎಲ್ಲಿ?’ ಎಂದು ಅವರು ಏಕೆ ನಿಂದಿಸಬೇಕು.”
[18] ಆಗ ಯೆಹೋವನು ತನ್ನ ದೇಶಕ್ಕೆ ಅಪಕೀರ್ತಿ ಬರಬಾರದೆಂದು ತನ್ನ ಜನರನ್ನು ಕರುಣಿಸಿ,
[19] ಅವರ ಬಿನ್ನಹವನ್ನು ಯೆಹೋವನು ಲಾಲಿಸಿ ಅವರಿಗೆ ಹೀಗೆ ಹೇಳಿದನು: “ಇಗೋ, ನಾನು ಧಾನ್ಯ, ದ್ರಾಕ್ಷಾರಸ, ತೈಲಗಳನ್ನು ನಿಮಗೆ ಕಳುಹಿಸುತ್ತಿದ್ದೇನೆ. ಅವುಗಳಿಂದ ನಿಮಗೆ ತೃಪ್ತಿಯಾಗುವುದು. ನಿಮ್ಮನ್ನು ಅನ್ಯಜನಾಂಗಗಳ ನಿಂದೆಗೆ ಇನ್ನು ಗುರಿಮಾಡುವುದಿಲ್ಲ.
[20] ನಾನು ಉತ್ತರ ದಿಕ್ಕಿನ ಸೈನ್ಯವನ್ನು ನಿಮ್ಮ ಕಡೆಯಿಂದ ದೂರಮಾಡುವೆನು, ಅದನ್ನು ಹಾಳುಬಿದ್ದ ಬಂಜರು ಭೂಮಿಗೂ ಓಡಿಸುವೆನು. ಅದರ ಮುಂಭಾಗವನ್ನು ಪೂರ್ವದ ಸಮುದ್ರಕ್ಕೂ, ಅದರ ಹಿಂಭಾಗವನ್ನು ಪಶ್ಚಿಮ ಸಮುದ್ರಕ್ಕೂ ತಳ್ಳಿಬಿಡುವೆನು. ಅದರ ದುರ್ವಾಸನೆಯು ಏರುವುದು. ಏಕೆಂದರೆ ಆತನು ಮಹತ್ಕಾರ್ಯಗಳನ್ನು ಮಾಡುತ್ತಾನೆ.
[21] ಭೂಮಿಯೇ, ಹೆದರಬೇಡ, ಹರ್ಷಿಸು, ಉಲ್ಲಾಸಿಸು, ಯೆಹೋವನು ಮಹತ್ಕಾರ್ಯಗಳನ್ನು ಮಾಡಿದ್ದಾನೆ.
[22] ಕಾಡುಮೃಗಗಳೇ ಅಂಜಬೇಡಿರಿ, ಕಾಡುಗಾವಲಲ್ಲಿ ಹುಲ್ಲು ಮೊಳೆಯುವುದು, ಮರವು ಹಣ್ಣು ಬಿಡುವುದು. ಅಂಜೂರದ ಗಿಡವೂ ದ್ರಾಕ್ಷಾಲತೆಯೂ ಸಾರವತ್ತಾಗಿ ಫಲಿಸುವವು.
[23] ಚೀಯೋನಿನ ಜನರೇ ಹರ್ಷಿಸಿರಿ, ನಿಮ್ಮ ದೇವರಾದ ಯೆಹೋವನಲ್ಲಿ ಉಲ್ಲಾಸಿಸಿರಿ. ಆತನು ತನ್ನ ನೀತಿಯಿಂದ ಮುಂಗಾರು ಮಳೆಯನ್ನು ನಿಮಗೆ ಕೊಡುವನು. ಮುಂಗಾರು, ಹಿಂಗಾರು ಮಳೆಗಳನ್ನು ಮೊದಲಿನಂತೆ ನಿಮಗಾಗಿ ಸುರಿಸುವನು.
[24] ಕಣಜಗಳಲ್ಲಿ ಗೋದಿಯು ರಾಶಿರಾಶಿಯಾಗಿರುವುದು, ತೊಟ್ಟಿಗಳಲ್ಲಿ ದ್ರಾಕ್ಷಾರಸವೂ ಎಣ್ಣೆಯೂ ತುಂಬಿತುಳುಕುವವು.
[25] ಗುಂಪು ಮಿಡತೆಗಳು, ಸಣ್ಣ ಮಿಡತೆಗಳು, ದೊಡ್ಡ ಮಿಡತೆಗಳು, ಚೂರಿ ಮಿಡತೆಗಳು, ನಾನು ಕಳುಹಿಸಿದ ಈ ಮಿಡತೆಗಳ ಸೈನ್ಯಗಳು ತಿಂದು ನಷ್ಟಮಾಡಿದ ವರ್ಷಗಳನ್ನು ನಾನು ನಿಮಗೆ ತಿರುಗಿಕೊಡುವೆನು.
[26] ನೀವು ಹೊಟ್ಟೆ ತುಂಬಾ ಊಟಮಾಡಿ ತೃಪ್ತಿಗೊಂಡು, ನಿಮಗಾಗಿ ಅದ್ಭುತಕಾರ್ಯಗಳನ್ನು ಮಾಡಿದ ನಿಮ್ಮ ದೇವರಾದ ಯೆಹೋವನ ನಾಮವನ್ನು ಕೊಂಡಾಡುವಿರಿ. ನನ್ನ ಜನರಿಗೆ ಎಂದಿಗೂ ಆಶಾಭಂಗವಾಗದು.
[27] ನಾನು ಇಸ್ರಾಯೇಲಿನ ಮಧ್ಯದಲ್ಲಿ ನೆಲೆಯಾಗಿ ಇರುವವನು, ನಾನೇ ನಿಮ್ಮ ದೇವರಾದ ಯೆಹೋವನು, ನಾನಲ್ಲದೆ ಬೇರೆ ದೇವರು ನಿಮಗಿಲ್ಲ. ನನ್ನ ಜನರಿಗೆ ಎಂದಿಗೂ ಆಶಾಭಂಗವಾಗದು.
[28] ತರುವಾಯ ನಾನು ಎಲ್ಲಾ ಮನುಷ್ಯರ ಮೇಲೆ ನನ್ನ ಆತ್ಮವನ್ನು ಸುರಿಸುವೆನು. ನಿಮ್ಮ ಪುತ್ರಪುತ್ರಿಯರು ಪ್ರವಾದಿಸುವರು. ನಿಮ್ಮ ಹಿರಿಯರಿಗೆ ಕನಸುಗಳು ಬೀಳುವವು. ನಿಮ್ಮ ಯೌವನಸ್ಥರಿಗೆ ದಿವ್ಯದರ್ಶನಗಳಾಗುವವು.
[29] ಇದಲ್ಲದೆ ಆ ದಿನಗಳಲ್ಲಿ ದಾಸದಾಸಿಯರ ಮೇಲೆಯೂ ನನ್ನ ಆತ್ಮವನ್ನು ಸುರಿಸುವೆನು.
[30] ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಅದ್ಭುತಗಳನ್ನು ಮಾಡುವೆನು. ರಕ್ತ, ಬೆಂಕಿ, ಧೂಮಸ್ತಂಭ ಈ ಉತ್ಪಾತಗಳನ್ನು ಉಂಟುಮಾಡುವೆನು.
[31] ಯೆಹೋವನ ಮಹಾ ಭಯಂಕರವಾದ ದಿನವು ಬರುವುದಕ್ಕಿಂತ ಮೊದಲು, ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗುವನು.
[32] ಆದರೂ ಯೆಹೋವನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವುದು. ಯೆಹೋವನು ತಿಳಿಸಿದಂತೆ ಚೀಯೋನಿನ ಪರ್ವತದಲ್ಲಿಯೂ, ಯೆರೂಸಲೇಮಿನಲ್ಲಿಯೂ ಅನೇಕರು ಉಳಿಯುವರು. ಯೆಹೋವನು ಹೇಳಿದಂತೆಯೇ, ಉಳಿದವರಲ್ಲಿ ಯೆಹೋವನಿಂದ ಕರೆಯಲ್ಪಟ್ಟವರು ಬದುಕುವರು.”