[1] ಪೆತೂವೇಲನ ಮಗನಾದ ಯೋವೇಲನಿಗೆ ಯೆಹೋವನು ದಯಪಾಲಿಸಿದ ವಾಕ್ಯವು.
[2] ವೃದ್ಧರೇ, ಇದನ್ನು ಕೇಳಿರಿ, ದೇಶದ ನಿವಾಸಿಗಳೇ, ನೀವೆಲ್ಲರೂ ಕಿವಿಗೊಡಿರಿ. ಇಂಥ ಬಾಧೆಯು ನಿಮ್ಮ ಕಾಲದಲ್ಲಾಗಲಿ ನಿಮ್ಮ ಪೂರ್ವಿಕರ ಕಾಲದಲ್ಲಿಯಾಗಲಿ ಸಂಭವಿಸಿತ್ತೋ?
[3] ಇದನ್ನು ನಿಮ್ಮ ಮಕ್ಕಳಿಗೆ ತಿಳಿಸಿರಿ, ಅವರು ತಮ್ಮ ಮಕ್ಕಳಿಗೆ ತಿಳಿಸಲಿ ಮತ್ತು ಅವರು ಮುಂದಿನ ತಲೆಮಾರಿನವರಿಗೆ ತಿಳಿಸಲಿ.
[4] ಚೂರಿಮಿಡತೆ ತಿಂದು ಉಳಿದಿದ್ದ ಬೆಳೆಯನ್ನು ಗುಂಪು ಮಿಡತೆ ತಿಂದು ಬಿಟ್ಟಿತು; ಗುಂಪು ಮಿಡತೆ ತಿಂದು ಉಳಿದದ್ದನ್ನು ಕುದರೆ ಮಿಡತೆ ತಿಂದು ಬಿಟ್ಟಿತು; ಕುದರೆ ಮಿಡತೆ ತಿಂದು ಉಳಿದದ್ದನ್ನು ಕಂಬಳಿ ಮಿಡತೆ ತಿಂದುಬಿಟ್ಟಿತು.
[5] ಅಮಲೇರಿದವರೇ, ಎಚ್ಚರಗೊಳ್ಳಿರಿ ಮತ್ತು ಅಳಿರಿ! ದ್ರಾಕ್ಷಾರಸ ಕುಡಿಯುವವರೇ, ಗೋಳಾಡಿರಿ, ಏಕೆಂದರೆ ದ್ರಾಕ್ಷಾರಸದ ಸಿಹಿಯು ನಿಮ್ಮ ಬಾಯಿಗೆ ಸಿಕ್ಕುವುದಿಲ್ಲ.
[6] ನನ್ನ ದೇಶದ ಮೇಲೆ ಬಲಿಷ್ಠವಾದ ಹಾಗೂ ಅಸಂಖ್ಯಾತವಾದ ಒಂದು ಜನಾಂಗವು ಏರಿ ಬಂದಿದೆ; ಅದರ ಹಲ್ಲುಗಳು ಸಿಂಹದ ಹಲ್ಲುಗಳೇ; ಅದರ ಕೋರೆ ಹಲ್ಲುಗಳು ಮೃಗರಾಜನ ಕೋರೆಗಳೇ.
[7] ಅದು ನನ್ನ ದ್ರಾಕ್ಷಾತೋಟವನ್ನು ಹಾಳುಮಾಡಿ, ನನ್ನ ಅಂಜೂರದ ಗಿಡವನ್ನು ಮುರಿದುಹಾಕಿದೆ. ಅವುಗಳನ್ನು ಹಾಳುಮಾಡಿ ದೂರ ಬಿಸಾಡಿಬಿಟ್ಟಿದೆ; ಅದರ ಕೊಂಬೆಗಳು ಬಿಳುಪಾದವು.
[8] ಯೌವನದ ಪತಿಗಾಗಿ ದುಃಖದಿಂದ ಗೋಣಿತಟ್ಟನ್ನು ಧರಿಸಿಕೊಂಡು ಗೋಳಾಡುವ ಕನ್ಯೆಯಂತೆ ಗೋಳಾಡಿರಿ.
[9] ಧಾನ್ಯನೈವೇದ್ಯಗಳು ಮತ್ತು ಪಾನದ್ರವ್ಯಗಳು ಯೆಹೋವನ ಆಲಯದಿಂದ ತೆಗೆಯಲ್ಪಟ್ಟಿದೆ. ಯೆಹೋವನ ಸೇವಕರಾದ ಯಾಜಕರು ಗೋಳಾಡುತ್ತಾರೆ.
[10] ಬೆಳೆ ಬೆಳೆಯುವ ಹೊಲವು ಹಾಳಾಗಿದೆ, ನೆಲವು ದುಃಖದಲ್ಲಿ ಮುಳುಗಿದೆ. ಏಕೆಂದರೆ ಧಾನ್ಯವು ನಾಶವಾಗಿದೆ, ಹೊಸ ದ್ರಾಕ್ಷಾರಸವು ಒಣಗಿದೆ, ಎಣ್ಣೆಯು ಕೆಟ್ಟುಹೋಗಿದೆ.
[11] ರೈತರೇ, ರೋದಿಸಿರಿ, ತೋಟಗಾರರೇ ಗೋಳಾಡಿರಿ, ಗೋದಿಯೂ ಮತ್ತು ಜವೆಗೋದಿಯೂ ಹಾಳಾಗಿವೆ. ಹೊಲದ ಬೆಳೆಯು ನಾಶವಾಗಿದೆ.
[12] ದ್ರಾಕ್ಷಾಲತೆಯು ಒಣಗಿದೆ ಮತ್ತು ಅಂಜೂರದ ಗಿಡವು ಬಾಡಿಹೋಗಿದೆ; ದಾಳಿಂಬೆ, ಖರ್ಜೂರ ಮತ್ತು ಸೇಬು ಮರಗಳು ಹಾಗು ಹೊಲದ ಸಕಲ ವನವೃಕ್ಷಗಳು ಒಣಗಿ ಹೋಗಿವೆ. ಮನುಷ್ಯರು ಸೊರಗಿ ಸಂತೋಷವಿಲ್ಲದೆ ಕಳೆಗುಂದಿದ್ದಾರೆ.
[13] ಯಾಜಕರೇ, ಗೋಣಿತಟ್ಟನ್ನು ಉಟ್ಟುಕೊಂಡು ಗೋಳಾಡಿರಿ! ಯಜ್ಞವೇದಿಯ ಸೇವಕರೇ, ಗೋಳಾಡಿರಿ. ನನ್ನ ದೇವರ ಸೇವಕರೇ, ಬಂದು ಗೋಣಿತಟ್ಟನ್ನು ಸುತ್ತಿಕೊಂಡು ರಾತ್ರಿಯೆಲ್ಲಾ ಬಿದ್ದುಕೊಂಡಿರಿ. ಏಕೆಂದರೆ ಧಾನ್ಯನೈವೇದ್ಯಗಳು ಮತ್ತು ಪಾನದ್ರವ್ಯಗಳು ನಿಮ್ಮ ದೇವರ ಆಲಯಕ್ಕೆ ಬಾರದೆ ನಿಂತುಹೋಗಿದೆ.
[14] ಉಪವಾಸ ಪ್ರಾರ್ಥನೆಯ ದಿನವನ್ನು ಏರ್ಪಡಿಸಿರಿ, ಪವಿತ್ರ ಸಭೆಯನ್ನು ಸೇರಿಸಿರಿ. ಹಿರಿಯರನ್ನೂ ಮತ್ತು ಸಮಸ್ತ ದೇಶದ ನಿವಾಸಿಗಳನ್ನೂ ನಿಮ್ಮ ದೇವರಾದ ಯೆಹೋವನ ಆಲಯಕ್ಕೆ ಬರಮಾಡಿ, ಯೆಹೋವನಿಗೆ ಮೊರೆಯಿಡಿರಿ.
[15] ಯೆಹೋವನು ಬರುವ ದಿನವು ಸಮೀಪಿಸಿತು. ಅದು ಸರ್ವಶಕ್ತನಾದ ಯೆಹೋವನಿಂದ ನಾಶವಾಗುವ ದಿನ.
[16] ನಮ್ಮ ಆಹಾರವು ನಮ್ಮ ಕಣ್ಣೆದುರಿಗೆ ಹಾಳಾಯಿತಲ್ಲಾ, ಸಂತೋಷವೂ ಹಾಗೂ ಉಲ್ಲಾಸವೂ ನಮ್ಮ ದೇವರ ಆಲಯವನ್ನು ಬಿಟ್ಟುಹೋಯಿತ್ತಲ್ಲಾ!
[17] ಬೀಜಗಳು, ಹೆಂಟೆಗಳ ಕೆಳಗೆ ಕೆಟ್ಟುಹೋಗಿವೆ. ಉಗ್ರಾಣಗಳು ಬರಿದಾಗಿವೆ. ಕಣಜಗಳು ಕೆಡವಲ್ಪಟ್ಟಿವೆ, ಏಕೆಂದರೆ ಧಾನ್ಯವು ಒಣಗಿದೆ.
[18] ಅಯ್ಯೋ, ಪಶುಗಳು ಎಷ್ಟೋ ನರಳುತ್ತವೆ! ಮೇವಿಲ್ಲದ ಕಾರಣ ದನದ ಮಂದೆಗಳು ಕಳವಳಗೊಂಡಿವೆ. ಏಕೆಂದರೆ ಅವುಗಳಿಗೆ ಮೇವು ಇಲ್ಲ. ಕುರಿಹಿಂಡುಗಳು ಕಷ್ಟಪಡುತ್ತವೆ.
[19] ಯೆಹೋವನೇ, ನಿನಗೆ ಮೊರೆಯಿಡುತ್ತೇನೆ; ಕಾಡಿನ ಹುಲ್ಲುಗಾವಲನ್ನು ಬೆಂಕಿಯು ನುಂಗಿಬಿಟ್ಟಿದೆ, ವನವೃಕ್ಷಗಳನ್ನೆಲ್ಲಾ ಜ್ವಾಲೆಯು ಸುಟ್ಟುಬಿಟ್ಟಿದೆ.
[20] ಅಡವಿಯ ಮೃಗಗಳು ಸಹ ನಿನ್ನ ಕಡೆಗೆ ತಲೆಯೆತ್ತಿವೆ. ನೀರಿನ ಹೊಳೆಗಳು ಬತ್ತಿಹೋಗಿವೆ. ಕಾಡಿನ ಹುಲ್ಲುಗಾವಲನ್ನು ಬೆಂಕಿಯು ದಹಿಸಿಬಿಟ್ಟಿದೆ.