[1] ಶಿಗ್ಯೋನೋತ್ ಸ್ವರದ ಮೇಲೆ ಪ್ರವಾದಿಯಾದ ಹಬಕ್ಕೂಕನ ಪ್ರಾರ್ಥನೆ.
[2] ಯೆಹೋವನೇ, ನಾನು ನಿನ್ನ ಸುದ್ದಿಯನ್ನು ಕೇಳಿ ಹೆದರಿದ್ದೇನೆ; ಯೆಹೋವನೇ, ಯುಗದ ಮಧ್ಯದಲ್ಲಿ ನಿನ್ನ ರಕ್ಷಣಾಕಾರ್ಯವನ್ನು ಪುನಃ ಮಾಡು, ಯುಗದ ಮಧ್ಯದಲ್ಲಿ ಅದನ್ನು ಪ್ರಸಿದ್ಧಿಪಡಿಸು; ನೀನು ರೋಷಗೊಂಡಿದ್ದರೂ ಕರುಣೆಯನ್ನು ಚಿತ್ತಕ್ಕೆ ತಂದುಕೋ.
[3] ತೇಮಾನಿನಿಂದ ಕರುಣಾಸಾಗರನಾದ ದೇವರು ಬರುತ್ತಿದ್ದಾನೆ, ಸದಮಲಸ್ವಾಮಿಯು ಪಾರಾನ್ ಪರ್ವತದಿಂದ ಬರುತ್ತಾನೆ; ಸೆಲಾ. ಆತನ ಪ್ರಭಾವವು ಆಕಾಶಮಂಡಲವನ್ನೆಲ್ಲಾ ಆವರಿಸಿಕೊಂಡಿದೆ, ಆತನ ಮಹಿಮೆಯು ಭೂಮಂಡಲವನ್ನು ತುಂಬುತ್ತಿದೆ;
[4] ಆತನ ತೇಜಸ್ಸು ಸೂರ್ಯನಂತಿದೆ, ಆತನ ಕೈಗಳಿಂದ ಕಿರಣಗಳು ಹೊರಹೊಮ್ಮುತ್ತಿವೆ, ಆತನು ಶಕ್ತಿ ಸಾಮರ್ಥ್ಯಗಳ ನಿಧಿ.
[5] ರೋಗಗಳು ಆತನಿಂದ ದೂರ ಓಡಿ ಹೋಗಿವೆ, ವ್ಯಾಧಿಯು ಆತನ ಹಿಂದೆ ಅಡಗಿಕೊಂಡಿದೆ.
[6] ಆತನು ನಿಂತುಕೊಳ್ಳಲು ಭೂಮಿಯು ಅಳೆದನು. ಆತನು ದೃಷ್ಟಿಸಲು ಜನಾಂಗಗಳು ಬೆದರುತ್ತವೆ; ಪುರಾತನ ಪರ್ವತಗಳು ಸೀಳಿಹೋಗುತ್ತವೆ; ಸನಾತನ ಗಿರಿಶಿಖರಗಳು ಕುಸಿದು ಬೀಳುತ್ತವೆ; ಆತನ ಆಗಮನವು ಅನಾದಿಯಿಂದ ಹೀಗೆಯೇ ಇರುವುದು.
[7] ಇಗೋ, ಕೂಷಾನಿನ ಗುಡಾರಗಳು ತಳಮಳಗೊಂಡಿವೆ, ಮಿದ್ಯಾನ್ ದೇಶದ ಡೇರೆಗಳು ನಡುಗುತ್ತಿವೆ.
[8] ಯೆಹೋವನೇ, ನಿನಗೆ ನದಿಗಳ ಮೇಲೆ ರೌದ್ರವೋ? ಹೊಳೆಗಳ ಮೇಲೆ ಸಿಟ್ಟುಗೊಂಡಿದ್ದಿಯಾ? ಸಮುದ್ರದ ಮೇಲೆ ಕೋಪವನ್ನು ಪ್ರದರ್ಶಿಸುತ್ತೀಯೋ? ಇಲ್ಲಾ, ನೀನು ಜಯರಥಗಳಲ್ಲಿ ಆಸೀನನಾಗಿ ಮೋಡಗಳ ಮೇಲೆ ರಕ್ಷಣೆಯನ್ನು ಕಳುಹಿಸಿದಾತನು!
[9] ನಿನ್ನ ಬಿಲ್ಲು ಈಚೆಗೆ ತೆಗೆಯಲ್ಪಟ್ಟಿದೆ. ಆಹಾ, ನಿನ್ನ ತೋಳ್ಬಲದಿಂದ ಪ್ರಯೋಗಿಸಿದ ಬಾಣಗಳ ಬಲವು ಜೀವಬುಗ್ಗೆಯನ್ನು ಭೂಮಿಯೊಳಗಿನಿಂದ ಹರಿದು ಬರುವಂತೆ ಮಾಡಿತು. ಸೆಲಾ.
[10] ಬೆಟ್ಟಗಳು ನಿನ್ನನ್ನು ನೋಡಿ ತಳಮಳಗೊಳ್ಳುತ್ತಿವೆ; ಪ್ರವಾಹದೋಪಾದಿಯಲ್ಲಿ ಆಕಾಶವು ಮಳೆಗರೆಯುತ್ತಿದೆ; ಸಾಗರವು ಆರ್ಭಟಿಸಿ ಅಲೆಗಳನ್ನು ಮೇಲಕ್ಕೆ ಎತ್ತುತ್ತದೆ.
[11] ಹಾರಿ ಬರುವ ನಿನ್ನ ಬಾಣಗಳ ಬೆಳಕಿಗೆ, ಮಿಂಚುವ ನಿನ್ನ ಈಟಿಯ ಹೊಳಪಿಗೆ, ಸೂರ್ಯಚಂದ್ರರು ಹೆದರಿ ತಮ್ಮ ಗೂಡಿನಲ್ಲಿ ಅಡಗಿಕೊಳ್ಳುತ್ತಾರೆ.
[12] ನೀನು ಕೋಪ ತಿರಸ್ಕಾರದಿಂದ ಲೋಕವನ್ನು ತುಳಿದುಕೊಂಡು ಹೋಗುತ್ತೀ. ಕೋಪದಿಂದ ಜನಾಂಗಗಳನ್ನು ಇಲ್ಲದಂತೆ ಮಾಡುತ್ತಿ.
[13] ನಿನ್ನ ಅಭಿಷಿಕ್ತನಿಗಾಗಿಯೂ ಮತ್ತು ನಿನ್ನ ಪ್ರಜೆಯ ರಕ್ಷಣೆಗಾಗಿಯೂ ನೀನು ಯಾವಾಗಲೂ ಮುಂದಾಗಿರುತ್ತಿ; ದುಷ್ಟರ ಮನೆಯ ಮುಖ್ಯಸ್ಥರನ್ನು ಸದೆಬಡೆದು ಅವರ ಕುಟುಂಬಗಳನ್ನು ಬುಡಸಮೇತವಾಗಿ ಜನರ ಮುಂದೆ ಬೆತ್ತಲೆಯಾಗಿ ಮಾಡುವಿ. ಸೆಲಾ.
[14] ದಿಕ್ಕಿಲ್ಲದವರನ್ನು ಮರೆಯಲ್ಲಿ ನುಂಗಲು ಹೆಚ್ಚಳಪಡುವವರಾಗಿ ನನ್ನನ್ನು ಚದುರಿಸಬೇಕೆಂದು ನನ್ನ ಮೇಲೆ ಬಿರುಗಾಳಿಯಂತೆ ನುಗ್ಗಿದ ಅವನ ಭಟರ ತಲೆಯನ್ನು ಅವನ ದೊಣ್ಣೆಗಳಿಂದಲೇ ಒಡೆದಿದ್ದೀ
[15] ನಿನ್ನ ಅಶ್ವಗಳನ್ನು ಏರಿದವನಾಗಿ ಸಮುದ್ರವನ್ನು ತುಳಿಯುತ್ತಾ, ಮಹಾಜಲರಾಶಿಗಳನ್ನು ಹಾದುಹೋಗಿದ್ದೀ.
[16] ಅದು ನನಗೆ ಕೇಳಿಸಲು ನನ್ನ ಒಡಲು ನಡುಗಿತು, ಆ ಶಬ್ದಕ್ಕೆ ನನ್ನ ತುಟಿಗಳು ಅದರಿದವು. ಕ್ಷಯವು ನನ್ನ ಎಲುಬುಗಳಲ್ಲಿ ಸೇರಿತು. ನಾನು ನಿಂತ ಹಾಗೆಯೇ ನಡುಗಿದೆನು. ವಿಪತ್ಕಾಲವು ನಮ್ಮನ್ನು ಹಿಂಸಿಸುವ ಜನರನ್ನು ಎದುರಾಯಿಸಿ ಅವರ ಮೇಲೆ ಬೀಳುವವರೆಗೂ ನಾನು ಅದಕ್ಕಾಗಿ ತಾಳ್ಮೆಯಿಂದ ಎದುರುನೋಡುವೆನು.
[17] ಆಹಾ, ಅಂಜೂರವು ಚಿಗುರದಿದ್ದರೂ, ದ್ರಾಕ್ಷಾಲತೆಗಳಲ್ಲಿ ಹಣ್ಣು ಸಿಕ್ಕದಿದ್ದರೂ, ಎಣ್ಣೆ ಮರಗಳ ಉತ್ಪತ್ತಿಯು ಶೂನ್ಯವಾದರೂ, ಹೊಲಗದ್ದೆಗಳು ಆಹಾರ ಧಾನ್ಯಗಳನ್ನು ಉತ್ಪತ್ತಿಮಾಡದಿದ್ದರೂ, ಕುರಿಹಟ್ಟಿಗಳು ಬರಿದಾಗಿ ಹೋದರೂ, ಕೊಟ್ಟಿಗೆಗಳಲ್ಲಿ ದನಕರುಗಳು ಇಲ್ಲವಾದರೂ,
[18] ನಾನು ಯೆಹೋವನಲ್ಲಿ ಉಲ್ಲಾಸಿಸುವೆನು, ನನ್ನ ರಕ್ಷಕನಾದ ದೇವರಲ್ಲಿ ಆನಂದಿಸುವೆನು.
[19] ನನ್ನ ಕರ್ತನಾದ ಯೆಹೋವನೇ ನನ್ನ ಬಲ; ಆತನು ನನ್ನ ಕಾಲನ್ನು ಜಿಂಕೆಯಂತೆ ಚುರುಕುಗೊಳಿಸುತ್ತಾನೆ, ನಾನು ಬೆಟ್ಟ ಗುಡ್ಡಗಳಲ್ಲಿ ಓಡಾಡುವಂತೆ ಮಾಡುತ್ತಾನೆ. ಪ್ರಧಾನ ಗಾಯಕನ ಕೀರ್ತನಸಂಗ್ರಹದಿಂದ ತೆಗೆದದ್ದು; ನನ್ನ ತಂತಿವಾದ್ಯದೊಡನೆ ಹಾಡತಕ್ಕದ್ದು.