[1] ನನ್ನ ಕೋವರದಲ್ಲಿ ನಿಂತುಕೊಳ್ಳುವೆನು. ಬುರುಜಿನ ಮೇಲೆ ನೆಲೆಯಾಗಿರುವೆನು. ಯೆಹೋವನು ನನಗೆ ಏನು ಹೇಳುವನೋ ನನ್ನ ಆಕ್ಷೇಪಣೆಯನ್ನು ನಿವಾರಿಸಿಕೊಳ್ಳಲು ಯಾವ ಉತ್ತರ ಕೊಡಬೇಕೋ ಎಂದು ಎದುರುನೋಡುವೆನು ಅಂದುಕೊಂಡನು.
[2] ಆಗ ಯೆಹೋವನು ನನಗೆ ಈ ಉತ್ತರವನ್ನು ದಯಪಾಲಿಸಿದನು, “ನಿನಗಾದ ದರ್ಶನವನ್ನು ಬರೆದಿಡು; ಓದುವವರು ಸುಲಭವಾಗಿ ಶೀಘ್ರವಾಗಿ ಓದಲು ಅನುಕೂಲವಾಗುವಂತೆ ಹಲಿಗೆಗಳ ಮೇಲೆ ಅದನ್ನು ಕೆತ್ತಿಡು!
[3] ಸೂಕ್ತ ಹಾಗು ನಿಯಮಿತ ಕಾಲದಲ್ಲಿ ಆ ದರ್ಶನದಲ್ಲಿ ಕಂಡದ್ದು ನೆರವೇರುವುದು, ಅದರ ಅಂತಿಮ ಪರಿಣಾಮ ಶೀಘ್ರದಲ್ಲೇ ಗೊತ್ತಾಗುವುದು. ತಡವಾದರೂ ಅದಕ್ಕೆ ಕಾದಿರು; ಅದು ಖಂಡಿತವಾಗಿ ಕೈಗೂಡುವುದು.
[4] ಇಗೋ, ದುಷ್ಟನ ಅಂತರಾತ್ಮವು ತನ್ನ ಕ್ರಿಯೆಗಳಿಂದ ಉಬ್ಬಿಹೋಗಿದೆ, ಆದರೆ, ನೀತಿವಂತನು ತನ್ನ ನಂಬಿಕೆಯಿಂದಲೇ ಬದುಕುವನು.
[5] ಅಲ್ಲದೆ ಮದ್ಯಪಾನವು ಮೋಸಕರವಾದ ಕಾರಣ ದುಷ್ಟನನ್ನು ಮದವೇರಿಸುವುದು, ಸ್ವಸ್ಥಳದಲ್ಲಿ ನಿಲ್ಲಲು ಬಿಡುವುದಿಲ್ಲ; ಪಾತಾಳದಷ್ಟು ಅತಿ ಆಶೆಗೆ ಪ್ರೆರೇಪಿಸಿ ಮೃತ್ಯುವಿನಂತೆ ಅತೃಪ್ತನಾಗಿ ಜೀವಿಸುವನು. ಯೆಹೋವನ ಒಡಂಬಡಿಕೆಯ ವಿರುದ್ಧ ಜೀವಿಸುವವರನ್ನು ತನ್ನ ಕಡೆಗೆ ಆಕರ್ಷಿಸುವನು.
[6] “ಆದರೆ ಹೀಗೆ ಅವನ ದುರಾಶೆಯ ಪಾಶಕ್ಕೆ ಗುರಿಯಾದವರು ಅವನ ಬಗ್ಗೆ ತಿಳಿದು ಗೇಲಿ, ಅಪಹಾಸ್ಯದ ಲಾವಣಿ ಗೀತೆಗಳನ್ನು ರಚಿಸಿ ಹಾಡುವರು. ‘ಅನ್ಯರ ವಸ್ತುಗಳನ್ನು ಅಡವಿಟ್ಟುಕೊಂಡು ಐಶ್ವರ್ಯ ಸಂಪಾದಿಸುವವನ ಗತಿಯನ್ನು ಏನೆಂದು ಹೇಳುವುದು, ಅವನು ಎಷ್ಟು ಕಾಲ ಹೀಗೆ ಮಾಡುವನು!’
[7] ನಿನ್ನ ಬಳಿ ಸಾಲಪಡೆದವರೇ ನಿನಗೆ ಎದುರಾಗಿ ನಿಲ್ಲುವರು, ನಿನಗೆ ಬಾಕಿ ಕೊಡಬೇಕಾದವರು ನಿನಗೆ ಬೆದರಿಕೆ ಹಾಕಿ ನಿನ್ನನ್ನು ಕೊಳ್ಳೆ ಹೊಡೆದು ಲೂಟಿಮಾಡುವರು.
[8] ನೀನು ಬಹು ಜನರನ್ನು ಕೊಳ್ಳೆಹೊಡೆದು, ಮನುಷ್ಯರ ರಕ್ತವನ್ನು ಸುರಿಸಿ ದೇಶವನ್ನೂ, ಪಟ್ಟಣವನ್ನೂ, ಅವುಗಳ ನಿವಾಸಿಗಳೆಲ್ಲರನ್ನೂ ಹಿಂಸಿಸಿರುವೆ. ಈ ಕಾರಣದಿಂದ, ಜನಾಂಗಗಳಲ್ಲಿ ಉಳಿದವರೆಲ್ಲರೂ ನಿನ್ನನ್ನು ಕೊಳ್ಳೆ ಹೊಡೆಯುವರು.
[9] ‘ಕೇಡಿನಿಂದ, ತಪ್ಪಿಸಿಕೊಳ್ಳಲು ತನ್ನ ಗೂಡನ್ನು ಎತ್ತರದಲ್ಲಿ ಕಟ್ಟಿ ತಪ್ಪಿಸಿಕೊಳ್ಳಬೇಕೆಂದು, ತನ್ನ ಕುಟುಂಬಕ್ಕೆ ಆಸ್ತಿಯನ್ನು ಅನ್ಯಾಯವಾಗಿ ಮೋಸದಿಂದ ದೋಚಿಕೊಳ್ಳುವವನ ಗತಿಯನ್ನು ಏನು ಹೇಳಲಿ;
[10] ನೀನು ಬಹು ಜನರನ್ನು ನಿರ್ಮೂಲ ಮಾಡಿದ್ದು ನಿನ್ನ ಕುಂಟುಂಬಕ್ಕೆ ಅವಮಾನವನ್ನೇ ತಂದಂತಾಯಿತು, ನಿನಗೇ ನೀನೇ ಕೆಡುಕು ಮಾಡಿಕೊಂಡಿದ್ದೀ.
[11] ಗೋಡೆಯೊಳಗಿಂದ ಕಲ್ಲುಗಳು ನಿನ್ನ ಮೇಲೆ ತಪ್ಪುಹೊರಿಸಿ ಕೂಗುವವು; ಚಾವಣಿಯ ತೊಲೆಗಳು ಸಹ ಅದಕ್ಕೆ ಮಾರ್ದನಿ ಕೊಡುತ್ತವೆ.’
[12] ‘ಅಯ್ಯೋ, ಪಟ್ಟಣವನ್ನು ನರಹತ್ಯದಿಂದ ಕಟ್ಟುವವನೂ, ಊರನ್ನು ಅನ್ಯಾಯದಿಂದ ಸ್ಥಾಪಿಸುವವರ ಗತಿಯನ್ನು ಏನು ಹೇಳಲಿ!
[13] ಜನರು ದುಡಿದದ್ದು ಬೆಂಕಿಗೆ ತುತ್ತಾಗುವುದು, ಈ ರೀತಿಯಾಗಿ ಜನರು ಪಟ್ಟ ಪರಿಶ್ರಮವು ವ್ಯರ್ಥವಾಗುವುದು ಎಂದು ಯೆಹೋವನು ನುಡಿದ್ದರಿಂದಲೇ ಅಲ್ಲವೇ; ಇದೆಲ್ಲ ಸೇನಾಧೀಶ್ವರನ ಚಿತ್ತವಷ್ಟೇ.
[14] ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಮಹಿಮೆಯ ಜ್ಞಾನವು ತುಂಬಿಕೊಂಡಿರುವುದು.’
[15] ‘ನಿನ್ನ ರೋಷವನ್ನು ಪಾನಕಕ್ಕೆ ಬೆರಸಿ ನಿನ್ನ ನೆರೆಯವನಿಗೆ ಕುಡಿಸಿ, ಅವನ ಬೆತ್ತಲೆತನವನ್ನು ನೋಡಬೇಕೆಂದು ಅವರನ್ನು ಅಮಲೇರಿಸಿದವನೇ, ನಿನ್ನ ಗತಿಯನ್ನು ಏನು ಹೇಳಲಿ!
[16] ನೀನು ಮಾನವಂತನಲ್ಲ, ನಿನಗೆ ಸನ್ಮಾನವಲ್ಲಾ ಅವಮಾನ ಕಟ್ಟಿಟ್ಟ ಬುತ್ತಿ. ನೀನು ಕುಡಿ ಕುಡಿದು ನಗ್ನನಾಗು, ಯೆಹೋವನ ಬಲಗೈಯಲ್ಲಿರುವ ನಿನ್ನ ಪಾಪದ ಕೊಡ ತುಂಬಿ ಅವಮಾನವೇ ನಿನಗೆ ಸಲ್ಲುವುದು.
[17] ಲೆಬನೋನಿಗೆ ಆದಂಥ ಹಿಂಸೆಯ ಬಾರವು ನಿನ್ನನ್ನು ಕಾಡುವುದು, ಮೃಗಪಶುಗಳ ನಾಶನವು ನಿನ್ನನ್ನು ಹೆದರಿಸುವುದು; ನೀನು ಮನುಷ್ಯರ ರಕ್ತವನ್ನು ಸುರಿಸಿ ದೇಶವನ್ನೂ, ಪಟ್ಟಣವನ್ನೂ, ಅವುಗಳ ನಿವಾಸಿಗಳೆಲ್ಲರನ್ನೂ ಹಿಂಸಿಸಿರುವೆ. ಹಿಂಸಿಸಿದ ಕಾರಣ ಅದು ನಿನ್ನನ್ನು ಕಾಡುವುದು.
[18] ವಿಗ್ರಹ ಕೆತ್ತುವವನ ವಿಗ್ರಹವಾಗಲಿ ಅಥವಾ ಎರಕದಿಂದ ಮಾಡಿದ ಗೊಂಬೆಗಳಿಂದಾಗಲಿ ಲಾಭವೇನು? ಹಾಗೆ ದೇವರುಗಳನ್ನು ರೂಪಿಸುವವರು ಸುಳ್ಳನ್ನು ಬಿತ್ತುವವರು; ಏಕೆಂದರೆ, ಆ ನಿರ್ಜೀವ ವಿಗ್ರಹವನ್ನು ನಿರ್ಮಿಸಿದವನು ತನ್ನ ಕೈಕೆಲಸದ ಮೇಲೆಯೇ ಭರವಸೆ ಇಟ್ಟಿದ್ದಾನೆ.’
[19] ‘ಮರದ ವಿಗ್ರಹಗಳಿಗೆ ಎಚ್ಚೆತ್ತುಕೋ,’ ಜಡವಾದ ಕಲ್ಲಿನ ವಿಗ್ರಹಗಳಿಗೆ, ‘ಎದ್ದೇಳು’ ಎಂದು ಅಪ್ಪಣೆಕೊಡುವವನು ಬುದ್ಧಿಹೀನನು. ಇಂಥ ಬೊಂಬೆಯು ಬೋಧಿಸೀತೇ? ಇಗೋ, ಆ ವಿಗ್ರಹಗಳಿಗೆ ಬೆಳ್ಳಿಬಂಗಾರವನ್ನು ಹೊದಿಸಿದ್ದಾರೆ ಆದರೂ ಅದರೊಳಗೆ ಜೀವವೇ ಇಲ್ಲ.
[20] ಆದರೆ, ಯೆಹೋವನು ತನ್ನ ಪರಿಶುದ್ಧ ಮಂದಿರದಲ್ಲಿದ್ದಾನೆ; ಭೂಲೋಕವೆಲ್ಲಾ ಆತನ ಮುಂದೆ ಮೌನವಾಗಿರಲಿ.”