Skip to content
Opens in a new window
Listen to this chapter • 4:17

[1] ಸಹೋದರರೇ, ಈ ಸಂಗತಿಗಳು ನಡೆಯಬೇಕಾಗಿರುವ ಕಾಲಗಳನ್ನೂ ಗಳಿಗೆಗಳನ್ನೂ ಕುರಿತು ನಿಮಗೆ ಬರೆಯುವುದು ಅಗತ್ಯವಿಲ್ಲ.

[2] ರಾತ್ರಿ ಕಳ್ಳನು ಹೇಗೆ ಬರುತ್ತಾನೋ ಹಾಗೆಯೇ ಕರ್ತನ ದಿನವು ಬರುವುದೆಂದು ನೀವೇ ಚೆನ್ನಾಗಿ ತಿಳಿದಿದ್ದೀರಲ್ಲಾ.

[3] “ಸಮಾಧಾನವಾಗಿಯೂ ನಿರ್ಭಯವಾಗಿಯೂ ಇರುತ್ತೇವೆಂದು” ಜನರು ಹೇಳುತ್ತಿರುವಾಗಲೇ ನಾಶನವು ಅವರ ಮೇಲೆ ಗರ್ಭಿಣಿಗೆ ಪ್ರಸವವೇದನೆ ಬರುವ ಪ್ರಕಾರ ಬರುವುದು, ಅವರು ಹೇಗೂ ತಪ್ಪಿಸಿಕೊಳ್ಳಲಾರರು.

[4] ಆದರೆ ಸಹೋದರರೇ, ಆ ದಿನವು ಕಳ್ಳನಂತೆ ನಿಮ್ಮ ಮೇಲೆ ಬರತಕ್ಕದ್ದಲ್ಲ, ಯಾಕೆಂದರೆ ನೀವು ಕತ್ತಲೆಯಲ್ಲಿರುವವರಲ್ಲ.

[5] ನೀವೆಲ್ಲರೂ ‘ಬೆಳಕಿನ ಮಕ್ಕಳು’ ಹಾಗೂ ‘ಹಗಲಿನ ಮಕ್ಕಳು’ ಆಗಿದ್ದೀರಷ್ಟೆ, ನಾವು ರಾತ್ರಿಯವರೂ ಅಲ್ಲ, ಕತ್ತಲೆಯವರೂ ಅಲ್ಲ.

[6] ಆದಕಾರಣ ನಾವು ಇತರರಂತೆ ನಿದ್ರೆಮಾಡದೆ ಎಚ್ಚರವಾಗಿರೋಣ, ಸ್ವಸ್ಥಚಿತ್ತರಾಗಿರೋಣ.

[7] ನಿದ್ರೆಮಾಡುವವರು ರಾತ್ರಿಯಲ್ಲಿ ನಿದ್ರೆ ಮಾಡುತ್ತಾರೆ, ಅಮಲೇರುವವರು ರಾತ್ರಿಯಲ್ಲಿ ಅಮಲೇರುತ್ತಾರಷ್ಟೆ.

[8] ನಾವಾದರೋ ಹಗಲಿನವರಾಗಿರಲಾಗಿ ನಂಬಿಕೆ ಪ್ರೀತಿಗಳೆಂಬ ಎದೆಕವಚವನ್ನೂ, ರಕ್ಷಣೆಯ ನಿರೀಕ್ಷೆಯೆಂಬ ಶಿರಸ್ತ್ರಾಣವನ್ನೂ ಧರಿಸಿಕೊಂಡು ಸ್ವಸ್ಥಚಿತ್ತರಾಗಿರೋಣ.

[9] ಯಾಕೆಂದರೆ ದೇವರು ನಮ್ಮನ್ನು ತನ್ನ ಕೋಪಕ್ಕೆ ಗುರಿಯಾಗಬೇಕೆಂದು ನೇಮಿಸದೆ ನಾವು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕವಾಗಿ ರಕ್ಷಣೆಯನ್ನು ಹೊಂದಿಕೊಳ್ಳಬೇಕೆಂದು ನೇಮಿಸಿದನು.

[10] ನಾವು ಎಚ್ಚರವಾಗಿದ್ದರೂ ಸರಿಯೇ ಅಥವಾ ನಿದ್ರೆಯಲ್ಲಿದ್ದರೂ ಸರಿಯೇ, ತನ್ನ ಜೊತೆಯಲ್ಲಿಯೇ ಜೀವಿಸಬೇಕೆಂದು ಯೇಸು ನಮಗೋಸ್ಕರ ತನ್ನ ಪ್ರಾಣವನ್ನು ಕೊಟ್ಟನು.

[11] ಆದ್ದರಿಂದ ನೀವು ಈಗ ಮಾಡುತ್ತಿರುವ ಪ್ರಕಾರವೇ ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಾ ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಪಡಿಸುತ್ತಾ ಇರಿ.

[12] ಸಹೋದರರೇ, ಕರ್ತನ ಕಾರ್ಯಗಳಲ್ಲಿ ನಿಮ್ಮ ಮೇಲೆ ಮುಖ್ಯಸ್ಥರಾಗಿದ್ದು, ಪ್ರಯಾಸಪಡುತ್ತಾ ನಿಮಗೆ ಬುದ್ಧಿ ಹೇಳುತ್ತರೋ,

[13] ಅವರನ್ನು ಲಕ್ಷಿಸಿ ಅವರ ಕೆಲಸದ ನಿಮಿತ್ತ ಅವರನ್ನು ಪ್ರೀತಿಯಿಂದ ಬಹಳವಾಗಿ ಗೌರವಿಸಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇವೆ. ನಿಮ್ಮ ನಿಮ್ಮೊಳಗೆ ಸಮಾಧಾನವಾಗಿರಿ.

[14] ಸಹೋದರರೇ, ಮೈಗಳ್ಳರಿಗೆ ಬುದ್ಧಿಹೇಳಿರಿ, ಮನಗುಂದಿದವರನ್ನು ಧೈರ್ಯಪಡಿಸಿರಿ, ಬಲಹೀನರಿಗೆ ಆಧಾರವಾಗಿರಿ, ಎಲ್ಲರೊಂದಿಗೆ ದೀರ್ಘಶಾಂತಿಯಿಂದಿರಿ ಎಂದು ನಿಮ್ಮನ್ನು ಪ್ರಬೋಧಿಸುತ್ತೇವೆ.

[15] ಯಾರೂ ಅಪಕಾರಕ್ಕೆ ಅಪಕಾರಮಾಡದಂತೆ ನೋಡಿಕೊಳ್ಳಿರಿ, ಯಾವಾಗಲೂ ನೀವು ಒಬ್ಬರಿಗೊಬ್ಬರು ಹಿತವನ್ನು ಮಾಡಿಕೊಂಡಿರುವುದಲ್ಲದೆ ಎಲ್ಲರಿಗೂ ಒಳ್ಳೆಯದನ್ನು ಮಾಡುವವರಾಗಿರಿ.

[16] ಯಾವಾಗಲೂ ಸಂತೋಷಿಸಿರಿ,

[17] ಎಡೆಬಿಡದೆ ಪ್ರಾರ್ಥನೆಮಾಡಿರಿ,

[18] ಎಲ್ಲಾದರಲ್ಲಿಯೂ ಕೃತಜ್ಞತಾಸ್ತುತಿಮಾಡಿರಿ ಇದೇ ನಿಮ್ಮ ವಿಷಯವಾಗಿ ಕ್ರಿಸ್ತ ಯೇಸುವಿನಲ್ಲಿ ತೋರಿಬಂದ ದೇವರ ಚಿತ್ತವಾಗಿದೆ.

[19] ಪವಿತ್ರಾತ್ಮನನ್ನು ನಂದಿಸಬೇಡಿ,

[20] ಪ್ರವಾದನೆಗಳನ್ನು ಹಿನೈಸಬೇಡಿರಿ.

[21] ಆದರೆ ಎಲ್ಲವನ್ನೂ ಪರೀಕ್ಷಿಸಿ ಒಳ್ಳೆಯದನ್ನೇ ಭದ್ರವಾಗಿ ಹಿಡಿದುಕೊಳ್ಳಿರಿ.

[22] ಸಕಲವಿಧವಾದ ಕೆಟ್ಟತನಕ್ಕೆ ದೂರವಾಗಿರಿ.

[23] ಶಾಂತಿದಾಯಕನಾದ ದೇವರು ತಾನೇ ನಿಮ್ಮನ್ನು ಪರಿಪೂರ್ಣವಾಗಿ ಶುದ್ಧೀಕರಿಸಲಿ. ನಮ್ಮ ಕರ್ತನಾದ ಯೇಸು ಕ್ರಿಸ್ತನು ಹಿಂತಿರುಗಿ ಬರುವಾಗ ನಿಮ್ಮ ಆತ್ಮ, ಪ್ರಾಣ ಮತ್ತು ಶರೀರಗಳು ದೋಷವಿಲ್ಲದೆ ಪರಿಪೂರ್ಣವಾಗಿ ಕಾಣಿಸಿಕೊಳ್ಳುವಂತೆ ಕಾಪಾಡಲ್ಪಡಲಿ.

[24] ನಿಮ್ಮನ್ನು ಕರೆದವನು ನಂಬಿಗಸ್ತನು, ಆತನು ತನ್ನ ಕಾರ್ಯವನ್ನು ಸಾಧಿಸುವನು.

[25] ಸಹೋದರರೇ, ನಮಗೋಸ್ಕರ ಪ್ರಾರ್ಥನೆ ಮಾಡಿರಿ.

[26] ಪವಿತ್ರವಾದ ಮುದ್ದಿಟ್ಟು ಸಹೋದರರೆಲ್ಲರನ್ನೂ ವಂದಿಸಿರಿ.

[27] ಈ ಪತ್ರಿಕೆಯನ್ನು ಸಹೋದರರೆಲ್ಲರಿಗೂ ಓದಿ ಹೇಳಬೇಕೆಂದು ನಿಮಗೆ ಕರ್ತನಲ್ಲಿ ಆಜ್ಞಾಪಿಸುತ್ತೇನೆ.

[28] ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೊಂದಿಗಿರಲಿ.

1 ಥೆಸಲೋನಿಕದವರಿಗೆ — Chapters