Skip to content
Opens in a new window
Listen to this chapter • 3:54

[1] ಕಡೆಯದಾಗಿ, ಸಹೋದರರೇ, ನಾವು ಕರ್ತನಾದ ಯೇಸುವಿನ ಮುಖಾಂತರ ನಿಮಗೆ ಕೊಟ್ಟಿರುವ ಆಜ್ಞೆಗಳನ್ನು ತಿಳಿದಿದ್ದೀರಷ್ಟೆ.

[2] ಅದುದರಿಂದ ನೀವು ಹೇಗೆ ನಡೆದು ದೇವರನ್ನು ಮೆಚ್ಚಿಸಬೇಕಾಗಿದೆಯೋ ಆ ಆಜ್ಞೆಗಳನ್ನು ನಮ್ಮಿಂದ ಕಲಿತುಕೊಂಡು ಅದರಂತೆ ನಡೆಯುತ್ತಲೇ ಇದ್ದಿರಿ. ನೀವು ಹಾಗೆಯೇ ಇನ್ನೂ ಹೆಚ್ಚಾಗಿ ನಡೆಯಬೇಕೆಂದು ನಿಮ್ಮನ್ನು ಯೇಸು ಕರ್ತನಲ್ಲಿ ಬೇಡಿಕೊಳ್ಳುತ್ತೇವೆ ಹಾಗೂ ಪ್ರಬೋಧಿಸುತ್ತೇವೆ.

[3] ದೇವರ ಚಿತ್ತವೇನಂದರೆ ನೀವು ಶುದ್ಧರಾಗಬೇಕೆಂಬುದೇ. ಆದ್ದರಿಂದ ಹಾದರಕ್ಕೆ ದೂರವಾಗಿರಬೇಕು.

[4] ದೇವರನ್ನರಿಯದ ಅನ್ಯಜನರಂತೆ ಕಾಮಾಭಿಲಾಷೆಗಳಿಗೆ ಒಳಗಾಗದೆ, ನಿಮ್ಮಲ್ಲಿ ಪ್ರತಿಯೊಬ್ಬನು ಪವಿತ್ರವಾದ ಮನಸ್ಸಿನಿಂದಲೂ ಘನತೆಯಿಂದಲೂ ಪತ್ನಿಯನ್ನು ಸಂಪಾದಿಸಿಕೊಳ್ಳಲು ತಿಳಿಯಬೇಕು.

[6] ಈ ವಿಷಯದಲ್ಲಿ ಯಾರೂ ತನ್ನ ಸಹೋದರನನ್ನು ವಂಚಿಸಿ ಕೇಡು ಮಾಡಬಾರದು. ನಾವು ಮೊದಲೇ ತಿಳಿಸಿ, ನಿಮಗೆ ಖಂಡಿತವಾಗಿ ಹೇಳಿದ ಪ್ರಕಾರ ಇವೆಲ್ಲವುಗಳ ವಿಷಯದಲ್ಲಿ ಕರ್ತನು ಪ್ರತಿಕಾರ ಮಾಡುವವನಾಗಿದ್ದಾನೆ.

[7] ದೇವರು ನಮ್ಮನ್ನು ಅಶುದ್ಧತೆಗೆ ಕರೆಯದೆ ಶುದ್ಧರಾಗಿರುವುದಕ್ಕೆ ಕರೆದನು.

[8] ಹೀಗಿರಲು ಈ ಮಾತನ್ನು ತಿರಸ್ಕರಿಸುವವನು ಮನುಷ್ಯರನ್ನು ಮಾತ್ರವಲ್ಲದೆ, ನಿಮಗೆ ಪವಿತ್ರಾತ್ಮವರವನ್ನು ದಯಪಾಲಿಸುವ ದೇವರನ್ನೂ ತಿರಸ್ಕರಿಸುವವನಾಗಿದ್ದಾನೆ.

[9] ಸಹೋದರ ಸ್ನೇಹದ ವಿಷಯದಲ್ಲಿ ನಿಮಗೆ ಬರೆಯುವ ಅವಶ್ಯಕತೆಯಿಲ್ಲ, ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಉಪದೇಶವನ್ನು ನೀವೇ ದೇವರಿಂದ ಹೊಂದಿದವರಾಗಿದ್ದೀರಿ.

[10] ಮಕೆದೋನ್ಯದಲ್ಲಿ ವಾಸಿಸುವ ಎಲ್ಲ ಸಹೋದರರನ್ನೂ ಪ್ರೀತಿಸುತ್ತಿರುವುದೇನೋ ನಿಜವೇ. ಆದರೂ ಸಹೋದರರೇ, ನೀವು ಪ್ರೀತಿಯಲ್ಲಿ ಇನ್ನೂ ಹೆಚ್ಚುತ್ತಾ ಬರಬೇಕೆಂದು ನಿಮ್ಮನ್ನು ಉತ್ತೇಜಿಸುತ್ತೇವೆ.

[11] ಇದಲ್ಲದೆ ನಾವು ನಿಮಗೆ ಆಜ್ಞೆ ಕೊಟ್ಟಿರುವ ಪ್ರಕಾರ ನೀವು ಮತ್ತೊಬ್ಬರ ವಿಷಯದಲ್ಲಿ ತಲೆಹಾಕದೆ ಸುಮ್ಮಗಿದ್ದು, ಸ್ವಂತ ಕಾರ್ಯಗಳನ್ನೇ ನೋಡಿಕೊಳ್ಳುತ್ತಾ, ಕೈಯಾರೆ ಕೆಲಸಮಾಡಿ ದುಡಿಯಿರಿ.

[12] ಹೀಗಿದ್ದರೆ ನೀವು ಹೊರಗಿನವರ ದೃಷ್ಟಿಯಲ್ಲಿ ಸಜ್ಜನರಾಗಿರುವುದೇ ಅಲ್ಲದೆ ನಿಮಗೆ ಯಾವುದಕ್ಕೂ ಕೊರತೆಯಿರುವುದಿಲ್ಲ.

[13] ಸಹೋದರರೇ, ನಿದ್ರೆಹೋಗುವವರ ಗತಿ ಏನೆಂದು ನೀವು ತಿಳಿಯದೆ ಇದ್ದು, ನಿರೀಕ್ಷೆಯಿಲ್ಲದವರಾಗಿರುವ ಇತರರಂತೆ ದುಃಖಿಸಬಾರದು ಎಂಬುದೇ ನಮ್ಮ ಬಯಕೆ.

[14] ಯೇಸು ಸತ್ತು ಜೀವಿತನಾಗಿ ಎದ್ದನೆಂದು ನಾವು ನಂಬುತ್ತೇವೆ ಹಾಗೆಯೇ ಯೇಸುವಿನಲ್ಲಿದ್ದು ನಿದ್ರೆಹೋದವರನ್ನು ಸಹ ದೇವರು ಆತನೊಡನೆ ಎಬ್ಬಿಸಿ ಕರೆದುಕೊಂಡು ಬರುವನೆಂದು ನಂಬಬೇಕಲ್ಲವೇ.

[15] ನಾವು ಕರ್ತನ ಮಾತಿನ ಆಧಾರದ ಮೇಲೆ ನಿಮಗೆ ಹೇಳುವುದೇನಂದರೆ, ಕರ್ತನು ಪುನರಾಗಮಿಸುವವರೆಗೆ ಜೀವದಿಂದುಳಿದಿರುವ ನಾವು ಮರಣ ಹೊಂದಿದವರಿಗಿಂತ ಮುಂದಾಗುವುದಿಲ್ಲ.

[16] ಯಾಕೆಂದರೆ ಕರ್ತನು ತಾನೇ ಆಜ್ಞಾಘೋಷದೊಡನೆಯೂ, ಪ್ರಧಾನದೂತನ ಶಬ್ದದೊಡನೆಯೂ, ದೇವರ ತುತ್ತೂರಿ ಧ್ವನಿಯೊಡನೆಯೂ ಆಕಾಶದಿಂದ ಇಳಿದುಬರುವನು. ಆಗ ಕ್ರಿಸ್ತನಲ್ಲಿ ಸತ್ತವರು ಮೊದಲು ಎದ್ದು ಬರುವರು.

[17] ಆ ಮೇಲೆ ಜೀವದಿಂದುಳಿದಿರುವ ನಾವು ಅಂತರಿಕ್ಷದಲ್ಲಿ ಕರ್ತನನ್ನು ಎದುರುಗೊಳ್ಳುವುದಕ್ಕಾಗಿ ಅವರೊಂದಿಗೆ ಮೇಘಗಳಲ್ಲಿ ಫಕ್ಕನೆ ಒಯ್ಯಲ್ಪಡುವೆವು. ಹೀಗಾಗಿ ನಾವು ಸದಾಕಾಲವೂ ಕರ್ತನ ಜೊತೆಯಲ್ಲಿರುವೆವು.

[18] ಆದಕಾರಣ ಈ ಮಾತುಗಳಿಂದ ಒಬ್ಬರನ್ನೊಬ್ಬರು ಸಂತೈಸಿಕೊಳ್ಳಿರಿ.

1 ಥೆಸಲೋನಿಕದವರಿಗೆ — Chapters