[1] ನೀವು ಚೀಯೋನಿನಲ್ಲಿ ಕೊಂಬು ಊದಿರಿ. ನನ್ನ ಪರಿಶುದ್ಧ ಪರ್ವತದಲ್ಲಿ ಆರ್ಭಟಿಸಿರಿ. ದೇಶದ ನಿವಾಸಿಗಳೆಲ್ಲರು ನಡುಗಲಿ. ಏಕೆಂದರೆ ಯೆಹೋವ ದೇವರ ದಿವಸವು ಬರುತ್ತದೆ. ಅದು ಸಮೀಪವಾಗಿದೆ.
[2] ಅದು ಕತ್ತಲೆಯೂ ಮಬ್ಬೂ ಉಳ್ಳ ದಿವಸವೂ, ಮೇಘವೂ ಕಾರ್ಗತ್ತಲು ಉಳ್ಳ ದಿವಸವೂ ಆಗಿದೆ. ಬೆಟ್ಟಗಳ ಮೇಲೆ ಹರಡುವ ಉದಯದ ಹಾಗೆ ದೊಡ್ಡ ಬಲವಾದ ಸ್ಯೆನ್ಯವು ಬರುತ್ತದೆ. ಅದು ಪ್ರಾಚೀನ ಕಾಲದಲ್ಲಿ ಮತ್ತು ಮುಂದಿನ ಯುಗಗಳಲ್ಲಿ ಎಂದಿಗೂ ಇರುವುದಿಲ್ಲ.
[3] ಅವುಗಳ ಮುಂದೆ ಬೆಂಕಿ ದಹಿಸುತ್ತದೆ. ಅವುಗಳ ಹಿಂದೆ ಜ್ವಾಲೆ ಧಗಧಗಿಸುತ್ತದೆ. ಅವುಗಳ ಮುಂದೆ ದೇಶವು ಏದೆನ್ ತೋಟದ ಹಾಗಿದೆ. ಅವುಗಳ ಹಿಂದೆ ಕಾಡು ಹಾಳಾಗಿದೆ. ಯಾವುದೂ ಅವುಗಳಿಂದ ತಪ್ಪಿಸಿಕೊಳ್ಳುವುದಿಲ್ಲ.
[4] ಅವುಗಳ ಆಕಾರವು ಕುದುರೆಗಳ ಆಕಾರದ ಹಾಗಿದೆ. ಸವಾರರ ಹಾಗೆಯೇ ಓಡುತ್ತವೆ.
[5] ರಥಗಳ ಶಬ್ದದಂತೆ ಅವು ಪರ್ವತಗಳ ತುದಿಗಳಲ್ಲಿ ಹಾರುತ್ತವೆ. ಸಿಡಿಯುವ ಬೆಂಕಿಯು ದಹಿಸುವ ಕೋಲಿನಂತೆ, ಯುದ್ಧಕ್ಕೆ ಸಿದ್ಧವಾದ ಬಲವುಳ್ಳ ಸೈನ್ಯದ ಹಾಗೆಯೂ ಇವೆ.
[6] ಅವುಗಳ ಮುಂದೆ ಜನಾಂಗಗಳು ಬಹಳವಾಗಿ ನೊಂದುಕೊಳ್ಳುತ್ತವೆ. ಎಲ್ಲಾ ಮುಖಗಳು ಕಳೆಗುಂದುತ್ತವೆ.
[7] ಶೂರರ ಹಾಗೆ ಓಡುತ್ತವೆ. ಯುದ್ಧಶಾಲಿಗಳ ಹಾಗೆ ಗೋಡೆ ಏರುತ್ತವೆ. ಅವೆಲ್ಲಾ ಸಾಲಾಗಿ ಮುನ್ನಡೆಯುತ್ತವೆ. ತಮ್ಮ ಹಾದಿಗಳನ್ನು ಬದಲು ಮಾಡುವುದಿಲ್ಲ.
[8] ಒಂದು ಇನ್ನೊಂದನ್ನು ನೂಕುವುದಿಲ್ಲ. ಅವುಗಳಲ್ಲಿ ಪ್ರತಿಯೊಂದು ತನ್ನ ತನ್ನ ದಾರಿಯಲ್ಲಿ ಮುನ್ನಡೆಯುತ್ತವೆ. ತಮ್ಮ ಸ್ಥಾನಗಳನ್ನು ಬಿಟ್ಟುಕೊಡದೆ ಯುದ್ಧ ಮಾಡುತ್ತವೆ.
[9] ಪಟ್ಟಣದಲ್ಲಿ ಅತ್ತಿತ್ತ ತಿರುಗಾಡುತ್ತವೆ. ಗೋಡೆಯ ಮೇಲೆ ಓಡುತ್ತವೆ. ಅವು ಮನೆಗಳನ್ನು ಹತ್ತಿ, ಕಳ್ಳನ ಹಾಗೆ ಕಿಟಿಕಿಗಳಿಂದ ಪ್ರವೇಶಿಸುತ್ತವೆ.
[10] ಅವುಗಳ ಮುಂದೆ ಭೂಮಿಯು ನಡುಗುತ್ತದೆ. ಆಕಾಶಗಳು ಅದರುತ್ತವೆ. ಸೂರ್ಯ ಚಂದ್ರರು ಕಪ್ಪಾಗುತ್ತವೆ. ನಕ್ಷತ್ರಗಳು ಇನ್ನು ಮುಂದೆ ಹೊಳೆಯುವುದಿಲ್ಲ.
[11] ಯೆಹೋವ ದೇವರು ತಮ್ಮ ಸೈನ್ಯಕ್ಕೆ ಗುಡುಗಿನಂತೆ ಆಜ್ಞಾಪಿಸುತ್ತಾರೆ. ಅವರ ಸೈನ್ಯ ಬಹು ದೊಡ್ಡದಾಗಿದೆ. ಅವರ ಆಜ್ಞೆಯನ್ನು ಪಾಲಿಸುವವನು ಪರಾಕ್ರಮಿಯು. ಯೆಹೋವ ದೇವರ ದಿವಸವು ದೊಡ್ಡದು, ಮಹಾ ಭಯಂಕರವಾದದ್ದು. ಅದನ್ನು ಸಹಿಸಿಕೊಳ್ಳುವವರು ಯಾರು?
[12] ಯೆಹೋವ ದೇವರು ಹೀಗೆ ಘೋಷಿಸುತ್ತಾರೆ, “ಈಗಲಾದರೂ ಉಪವಾಸದಿಂದಲೂ ಅಳುವಿಕೆಯಿಂದಲೂ ಗೋಳಾಟದಿಂದಲೂ ನಿಮ್ಮ ಪೂರ್ಣಹೃದಯದಿಂದ ನನ್ನ ಕಡೆಗೆ ತಿರುಗಿಕೊಳ್ಳಿರಿ.”
[13] ನಿಮ್ಮ ಬಟ್ಟೆಗಳನ್ನಲ್ಲ, ನಿಮ್ಮ ಹೃದಯಗಳನ್ನು ಹರಿದುಕೊಂಡು, ನಿಮ್ಮ ದೇವರಾದ ಯೆಹೋವ ದೇವರ ಕಡೆಗೆ ತಿರುಗಿಕೊಳ್ಳಿರಿ. ಅವರು ದಯೆಯೂ ಕರುಣೆಯೂ, ದೀರ್ಘಶಾಂತಿಯೂ ಮಹಾ ಪ್ರೀತಿಯೂ ಉಳ್ಳವರಾಗಿ ಮಾಡಬೇಕೆಂದಿರುವ ಕೇಡಿಗೆ ಮನಮರುಗುತ್ತಾರೆ.
[14] ದೇವರು ಒಂದು ವೇಳೆ ತಮ್ಮ ಮನಸ್ಸನ್ನು ಬದಲಾಯಿಸಬಹುದು. ನಿಮ್ಮ ಕಡೆಗೆ ತಿರುಗಿಕೊಂಡು ನಿಮ್ಮನ್ನು ಆಶೀರ್ವದಿಸಬಹುದು. ನಿಮ್ಮ ಯೆಹೋವ ದೇವರಿಗೆ ಅರ್ಪಿಸಲು ಬೇಕಾದ ಧಾನ್ಯ ಸಮರ್ಪಣೆ ಹಾಗು ಪಾನಾರ್ಪಣೆಯನ್ನು ನಿಮಗೆ ಧಾರಾಳವಾಗಿ ಉಳಿಸಬಹುದು, ಯಾರಿಗೆ ಗೊತ್ತು?
[15] ಚೀಯೋನಿನಲ್ಲಿ ಕೊಂಬು ಊದಿರಿ; ಪವಿತ್ರ ಉಪವಾಸವನ್ನು ಸಾರಿರಿ; ಪವಿತ್ರ ಸಭೆಯನ್ನು ಕರೆಯಿರಿ.
[16] ಜನರನ್ನು ಕೂಡಿಸಿರಿ; ಸಭೆಯನ್ನು ಪವಿತ್ರಗೊಳಿಸಿರಿ; ಹಿರಿಯರನ್ನು ಒಟ್ಟುಗೂಡಿಸಿರಿ, ಮಕ್ಕಳನ್ನೂ ಹಸುಗೂಸುಗಳನ್ನೂ ಕೂಡಿಸಿರಿ; ಮದುಮಗನು ತನ್ನ ಕೊಠಡಿಯೊಳಗಿಂದಲೂ ಮದುಮಗಳು ತನ್ನ ಕೊಠಡಿಯೊಳಗಿಂದಲೂ ಹೊರಡಲಿ.
[17] ಯೆಹೋವ ದೇವರ ಸಮ್ಮುಖ ಸೇವಕರಾದ ಯಾಜಕರು, ಅಂಗಳಕ್ಕೂ, ಬಲಿಪೀಠಕ್ಕೂ ನಡುವೆ ಅತ್ತು ಹೀಗೆ ಹೇಳಲಿ, “ಯೆಹೋವ ದೇವರೇ, ನಿನ್ನ ಜನರನ್ನು ಕನಿಕರಿಸು, ಜನಾಂಗಗಳು ನಿಂದಿಸುವುದಕ್ಕೆ ನಿನ್ನ ಬಾಧ್ಯತೆಯನ್ನು ದೂಷಣೆಗೆ ಗುರಿಮಾಡಬೇಡಿರಿ. ‘ಅವರ ದೇವರು ಎಲ್ಲಿ?’ ಎಂದು ಅವರು ಏಕೆ ನಿಂದಿಸಬೇಕು?”
[18] ಆಗ ಯೆಹೋವ ದೇವರು ತಮ್ಮ ದೇಶಕ್ಕೋಸ್ಕರ ಅಭಿಮಾನಗೊಂಡು, ತಮ್ಮ ಜನರನ್ನು ಕನಿಕರಿಸುವರು.
[19] ಯೆಹೋವ ದೇವರು ತನ್ನ ಜನರಿಗೆ ಉತ್ತರಕೊಟ್ಟು, ನಾನು ನಿಮಗೆ ಧಾನ್ಯವನ್ನೂ, ದ್ರಾಕ್ಷಾರಸವನ್ನೂ, ಎಣ್ಣೆಯನ್ನೂ ನಿಮಗೆ ಸಾಕಾಗುವಷ್ಟು ಕಳುಹಿಸಿ, ನಿಮ್ಮನ್ನು ಇನ್ನು ಮೇಲೆ ಜನಾಂಗಗಳಲ್ಲಿ ನಿಂದಿತರಾಗಿ ಇಡುವುದಿಲ್ಲ.
[20] “ಉತ್ತರ ದಿಕ್ಕಿನ ಸೈನ್ಯವನ್ನು ನಿಮ್ಮಿಂದ ದೂರಮಾಡಿ, ಅದನ್ನು ಹಾಳುಬಿದ್ದ ಬಂಜರು ಭೂಮಿಗೂ, ಅದರ ಮುಂಭಾಗವನ್ನು ಪೂರ್ವದ ಉಪ್ಪು ಸಮುದ್ರಕ್ಕೂ ಅದರ ಹಿಂಭಾಗವನ್ನು ಪಶ್ಚಿಮದ ಮೆಡಿಟರೇನಿಯನ್ ಸಮುದ್ರಕ್ಕೂ ಓಡಿಸಿಬಿಡುವೆನು. ಅದರ ದುರ್ವಾಸನೆಯು ಏರುವುದು. ಅದು ಗಬ್ಬು ನಾರುವುದು.” ಏಕೆಂದರೆ, ಆತನು ಮಹಾಕಾರ್ಯಗಳನ್ನು ಮಾಡಿದ್ದಾರೆ.
[21] ಯಹೂದ ದೇಶವೇ, ಭಯಪಡಬೇಡ; ಉಲ್ಲಾಸಿಸಿ, ಸಂತೋಷವಾಗಿರು. ಏಕೆಂದರೆ, ಯೆಹೋವ ದೇವರು ಮಹತ್ತಾದವುಗಳನ್ನು ಮಾಡಿದ್ದಾರೆ.
[22] ಕಾಡುಮೃಗಗಳೇ, ಭಯಪಡಬೇಡಿರಿ. ಏಕೆಂದರೆ, ಅಡವಿಯ ಮೇವಿನ ಸ್ಥಳಗಳು ಮೊಳೆಯುತ್ತವೆ. ಮರಗಳು ತಮ್ಮ ಫಲವನ್ನು ಫಲಿಸುತ್ತವೆ. ಅಂಜೂರದ ಗಿಡವೂ ದ್ರಾಕ್ಷಿ ಬಳ್ಳಿಯೂ ತಮ್ಮ ಫಲವನ್ನು ಕೊಡುತ್ತವೆ.
[23] ಚೀಯೋನಿನ ಜನರೇ, ನಿಮ್ಮ ದೇವರಾದ ಯೆಹೋವ ದೇವರಲ್ಲಿ ಉಲ್ಲಾಸಿಸಿರಿ, ಸಂತೋಷವಾಗಿರಿ. ಏಕೆಂದರೆ ನಿಮಗೆ ಮುಂಗಾರು ಮಳೆಯನ್ನು ಸಾಕಷ್ಟು ಕೊಡುವರು. ಮುಂಗಾರು, ಹಿಂಗಾರು ಮಳೆಗಳನ್ನು ಮೊದಲಿನ ಹಾಗೆ ನಿಮಗೆ ಸುರಿಸುವರು.
[24] ಕಣಗಳು ಧಾನ್ಯದಿಂದ ತುಂಬುವುವು. ತೊಟ್ಟಿಗಳು ದ್ರಾಕ್ಷಾರಸದಿಂದಲೂ ಎಣ್ಣೆಯಿಂದಲೂ ತುಂಬಿ ತುಳುಕುವುವು.
[25] “ನಾನು ನಿಮ್ಮಲ್ಲಿ ಕಳುಹಿಸಿದಂಥ ನನ್ನ ದೊಡ್ಡ ಸೈನ್ಯವಾದ ಮಿಡತೆಗಳು, ಗುಂಪು ಮಿಡತೆಗಳು, ಕಂಬಳಿ ಮಿಡತೆಗಳು, ಚೂರಿ ಮಿಡತೆಗಳು ತಿಂದು ಬಿಟ್ಟ ವರ್ಷಗಳನ್ನು ನಿಮಗೆ ಪುನಃಸ್ಥಾಪಿಸಿ ಕೊಡುವೆನು.
[26] ಸಮೃದ್ಧಿಯಾಗಿ ಉಂಡು, ತೃಪ್ತಿಪಟ್ಟು, ನಿಮ್ಮನ್ನು ಅದ್ಭುತವಾಗಿ ನಡೆಸಿದ ನಿಮ್ಮ ದೇವರಾದ ಯೆಹೋವ ದೇವರ ಹೆಸರನ್ನು ಸ್ತುತಿಸುವಿರಿ. ನನ್ನ ಜನರು ಎಂದೆಂದಿಗೂ ನಾಚಿಕೆಪಡರು.
[27] ನಾನೇ ಇಸ್ರಾಯೇಲಿನ ಮಧ್ಯೆ ನೆಲೆಯಾಗಿ ಇರುವವನು. ನಾನೇ ನಿಮ್ಮ ಯೆಹೋವ ದೇವರು, ನಾನಲ್ಲದೆ ಬೇರೆ ದೇವರು ನಿಮಗಿಲ್ಲ. ನನ್ನ ಜನರು ಎಂದಿಗೂ ನಾಚಿಕೆಪಡರು.
[28] “ಆಮೇಲೆ ನಾನು, ನನ್ನ ಆತ್ಮನನ್ನು ಎಲ್ಲಾ ಮನುಷ್ಯರ ಮೇಲೆ ಸುರಿಸುವೆನು, ನಿಮ್ಮ ಗಂಡು ಹೆಣ್ಣುಮಕ್ಕಳು ಪ್ರವಾದಿಸುವರು. ನಿಮ್ಮ ಹಿರಿಯರಿಗೆ ಕನಸುಗಳು ಬೀಳುವುವು. ನಿಮ್ಮ ಯುವಜನರಿಗೆ ದರ್ಶನಗಳಾಗುವವು.
[29] ಆ ದಿನಗಳಲ್ಲಿ, ನನ್ನ ದಾಸ ದಾಸಿಯರ ಮೇಲೆ, ನನ್ನ ಆತ್ಮವನ್ನು ಸುರಿಸುವೆನು.
[30] ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಅದ್ಭುತಗಳನ್ನು, ರಕ್ತ, ಬೆಂಕಿ, ಹಬೆಯನ್ನು ತೋರಿಸುವೆನು.
[31] ಯೆಹೋವ ದೇವರ ಭಯಂಕರವಾದ ಮಹಾದಿನವು ಬರುವುದಕ್ಕಿಂತ ಮೊದಲು, ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗುವನು.
[32] ಯೆಹೋವ ದೇವರ ಹೆಸರನ್ನು ಕರೆಯುವವರೆಲ್ಲರಿಗೆ ರಕ್ಷಣೆ ಆಗುವುದು. ಏಕೆಂದರೆ ಚೀಯೋನ್ ಪರ್ವತದಲ್ಲಿಯೂ ಯೆರೂಸಲೇಮಿನಲ್ಲಿಯೂ ಅನೇಕರಿಗೆ ಮುಕ್ತಿ ದೊರಕುವುದು. ಯೆಹೋವ ದೇವರು ಹೇಳಿದ ಪ್ರಕಾರ ಯೆಹೋವ ದೇವರ ಕರೆಹೊಂದಿ ಉಳಿದವರಲ್ಲಿಯೂ ಬಿಡುಗಡೆ ಇರುವುದು.